ನಿನ್ನ ಅಂತರಾತ್ಮದ ಸಾಕ್ಷಿಗೆ ಒಪ್ಪದ ಮಾತು ಆಡಬೇಡ
ಸುಮ್ಮನೇ ಬೆಂಕಿ ಎಂದೂ ಸುಡುವುದಿಲ್ಲ ನಂಬಿಸಬೇಡ

ಮೇಣದ ಬತ್ತಿಗಳೂ ಉರಿಯುತ್ತವೆ ಮೈಕರಗುವವರೆಗೆ
ಹೃದಯದಲಿ ಗೂಡು ಕಟ್ಟಿದ ಹಕ್ಕಿಗಳನು ಹಾರಿಸಬೇಡ

ಕತ್ತಲನು ಓಡಿಸಲೆಂದೋ ಸೋಲಿಸಲೆಂದೋ ಹಠವಲ್ಲ
ಮುಸುಕು ಹೊದಿಸುವ ಭ್ರಮೆಯನು ಮೆಚ್ಚಿಕೊಳ್ಳಬೇಡ

ಆರಿಹೋಗುವ ದೀಪಗಳಾದರೂ ಸುಳ್ಳು ಹೇಳುವುದಿಲ್ಲ
ದಿಲ್ಲಿ ದರ್ಬಾರು ಯಾವತ್ತಿಗೂ ನೀ ಶಾಶ್ವತ ಎನಬೇಡ

ಒಂದೊಂದು ನುಡಿಯ ಗುಂಟ ಪಾವಿತ್ರ್ಯತೆಯ ಕಾವಲು
ಜಾಲಿ ಎಚ್ಚರವಿಲ್ಲದೆ ನಾಲಿಗೆಯನೆಂದೂ ನುಡಿಸಬೇಡ

✍️ವೇಣು ಜಾಲಿಬೆಂಚಿ
ರಾಯಚೂರು.