ಒಲವಿನ ಒಲವೇ
ಒಲವಿನ ಹಾದಿಯಲಿ
ನೀ ಇರಲು ಜೊತೆಯಲಿ
ಬಾಳೆಲ್ಲಾ ಸಂತಸದ ಹೊನಲು,
ಜಗದಿ ಬಾಳಲು,ಬಾಳು ಬೆಳಗಲು…
ಭಾವಗಳಿಗೊಡೆಯನಾದ ನೀನು
ಅಂತರಂಗದ ಭಾವಗಳಿಗೆ ಜೀವ ತುಂಬಿ
ಬಾಳಿಗೊಂದು ಅರ್ಥ ನೀಡಿ,
ನೀ ಬರೆದೆ ಎನ್ನ
ಬದುಕಿಗೆ ಮುನ್ನುಡಿ…
ಕತ್ತಲೆಯಿಂದ ಬೆಳಕಿನೆಡೆಗೆ
ಎನ್ನ ಮುನ್ನಡೆಸುತ್ತಿರುವ ಒಲವೇ
ನೀನಾದೆ ನನ್ನ ಬದುಕಿಗೆ
ಭರವಸೆಯ ಆಶಾಕಿರಣ….
ಎನ್ನಲಿ ಆತ್ಮ ಸ್ಥೈರ್ಯ ತುಂಬಿಹ
ಸ್ಫೂರ್ತಿಯ ಹೊಂಗಿರಣ….
ಹೃದಯದ ಪ್ರತಿ ಮಿಡಿತವೂ
ತುಡಿಯುತಿಹುದು ನಿನಗಾಗಿ…
ನಿನ್ನೊಲುಮೆಯೊಂದೇ ಸಾಕೆನಗೆ..
ಬೇಕಿಲ್ಲ ಬೇರೇನೂ ಎನಗೆ..
ಎನ್ನೊಲವೇ ನೀನೇ ಉಸಿರೆನಗೆ…
ಎಂದೂ ಬತ್ತದಿರಲಿ ಒಲವಿನ ಸೆಲೆ..
ಅದುವೇ ಪ್ರೀತಿಯ ನೆಲೆ..
ಪ್ರಿತಿಯಲಿ ಒಂದಾದ
ಹೃದಯದಿ ಬೆಸೆದ
ಒಲವಿನ ಭಾವ ಅಮರವಾಗಲಿ….
ಒಲವಲಿ ನೀ ಬೆಸೆದೆ
ಪ್ರತಿಜನ್ಮದಲೂ ಜೊತೆಗೆ ಬಾಳುವ
ಬೇರ್ಪಡದ ಅನುಬಂಧ..
ಬದುಕಿನ ಪ್ರತಿ ತಿರುವಿನಲೂ
ನಿನ್ನ ಒಲವ ಧಾರೆಯಲಿ
ಎಮ್ಮೊಲವಿನ ನೌಕೆ ಸಾಗುತಿರಲಿ
ಉತ್ಸಾಹದ ಅಲೆಯಲಿ….
ಜೊತೆ ಜೊತೆಯಲಿ….
✍️ಸುಮಿತ್ರಾ ಪ ಕೋಳೂರು
ಶಿಕ್ಷಕಿ, ಧಾರವಾಡ
