ಅಂದಿನ ಆಂಧ್ರಪ್ರದೇಶದಲ್ಲಿ ತೆಲುಗು ಕುಟುಂಬ ವೊಂದರಲ್ಲಿ ಜನ್ಮ ತಾಳಿದರೂ ಕನ್ನಡಕ್ಕಾಗಿ, ಕರ್ನಾಟಕಕ್ಕಾಗಿ ಹೋರಾಡಿದವರು ಟೇಕೂರು ಸುಬ್ರಮಣ್ಯಂ. ಇಂದಿನ ಬಳ್ಳಾರಿ ಜಿಲ್ಲೆಯಲ್ಲಿ ಹುಟ್ಟಿದರು. ಪ್ರಧಾನ ರಸ್ತೆಯಲ್ಲಿರುವ ಕರ್ನೋಲ್ ಗೆ ಸುಮರು ೨೦ ಕಿಲೋಮೀಟರ್ ದೂರದಲ್ಲಿರುವ ಒಂದು ಹಳ್ಳಿ ಟೇಕೂರು. ಟೇಕೂರರ ಹಿರಿಯರು ೧೮ನೇ ಶತಮಾನದಲ್ಲಿ ಬಳ್ಳಾರಿ ಪ್ರದೇಶಕ್ಕೆ ವಲಸೆ ಬಂದಿರುವಂತೆ ಕಾಣುತ್ತದೆ. ವಲಸೆ ಬಂದ ಪೂರ್ವಿಕರು ಬಳ್ಳಾರಿಯ ಕೋಟೆ ಪ್ರದೇಶದಲ್ಲಿ ನೆಲೆಸಿದರೆಂತಲೂ ಬ್ರಿಟಿಷ್ ಸಾಮ್ರಾಜ್ಯದ ಸೇನೆ ಬೆಳೆದಂತೆ ಅಲ್ಲಿದ್ದ ಎಲ್ಲ ಸ್ಥಳೀಯರನ್ನೂ ಅಲ್ಲಿಂದ ಸ್ಥಳಾಂತರಿಸಿದ್ದರೆಂಬುದು ಇತಿಹಾಸದಿಂದ ತಿಳಿದು ಬರುತ್ತದೆ. ಶಾಸ್ತ್ರಿಗಳಪರಂಪರೆಗೆ ಸೇರಿದವರು ಟೇಕೂರು ಸುಬ್ರಮ್ಹಣ್ಯಂ ಅವರು.

ನಾರಾಯಣ ಶಾಸ್ತ್ರಿಗಳ ಮಗ ರಾಮಾಶಾಸ್ತ್ರಿಗಳು, ಅವರ ಮಗನೇ ನಮ್ಮ ಇಂದಿನ ಬರಹದ ನಾಯಕ ಟೀಕೂರು ಸುಬ್ರಮಣ್ಯಂ ಅವರು. ತಾಯಿ ಹರಪನಹಳ್ಳಿಯ ಸೀತಮ್ಮ. ಟೇಕೂರು ಸುಬ್ರಮಣ್ಯಂ ೧೯೦೦ ರ ಆಗಸ್ಟ್ ತಿಂಗಳ ೯ರಂದು ಅನಂತಪುರ ಜಿಲ್ಲೆಗೆ ಸೇರಿದ ಉರವ-1 ಕೊಂಡ ಎಂಬ ಹಳ್ಳಿಯಲ್ಲಿ ಹುಟ್ಟಿದರು. ಇವರು ಹುಟ್ಟಿದ ಸಂದರ್ಭ ದಲ್ಲಿ ಟೇಕೂರು ಮದ್ರಾಸ್ ಪ್ರೆಸಿಡೆನ್ಸಿಯ ಅಧಿಕಾರಕ್ಕೆ ಸೇರಿತ್ತು. ಎಲ್ಲ ಬಾಲಕರಂತೆ ಟೇಕೂರರು ಸಾಮಾನ್ಯರಂತೆ ಕಂಡುಬಂದರೂ ಅವರ ತಂದೆ ಸ್ವತಃ ಜ್ಯೋತಿಷಿಯಾಗಿದ್ದುದ ರಿಂದ ಮಗನ ಜಾತಕವನ್ನು ನೋಡಿ ಈತ ಬಹಳ ದೊಡ್ಡ ವ್ಯಕ್ತಿಯಾಗುತಾನೆಂತಲೂ ಕುಟುಂಬಕ್ಕೆ, ಸಮಾಜಕ್ಕೆ ಹುಟ್ಟಿದ ನಾಡಿಗೆ ಕೀರ್ತಿ ತರುವನೆಂದು ಹೇಳಿದರು. ಅದಕ್ಕಾಗಿಯೇ ಮಗುವಿಗೆ ದೈವದ ಆಶೀರ್ವಾದ ಇರಲೆಂದು ಮಗುವಿಗೆ ’ಸುಬ್ರಮ್ಹಣ್ಯ’ ಹೆಸರನ್ನು ಇಡುವಂತೆ ಸೂಚಿಸಿದರು. ಅವರ ಭವಿಷ್ಯ ಸುಳ್ಳಾಗ ಲಿಲ್ಲ. ಮುಂದೆ ಒಂದು ದಿನ ಟೇಕೂರರು ಸ್ವಾತಂತ್ರ ಸಂಗ್ರಾಮದಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸಿದರು.

ಬಾಲ್ಯದಿಂದಲೇ ತಮಗೆ ಶಾಲೆಯಲ್ಲಿ ತೆಲುಗು ಮತ್ತು ಚರಿತ್ರೆಯನ್ನು ಬೋಧಿಸುತ್ತಿದ್ದ ದೇಶಭಕ್ತ ಸಂಜೀವರಾವ್ ಅವರ ಪ್ರಭಾವಕ್ಕೆ ಒಳಗಾದರು. ಹೀಗಾಗಿ ಭಾರತ ದೇಶ ಮತ್ತೊಬ್ಬ ಸ್ವಾತಂತ್ರವೀರ ನನ್ನು ಕಂಡುಕೊಂಡಿತು. ಸ್ವಾತಂತ್ರ ಹೋರಾಟಗಾರ ರಾಗಿ ಟೇಕೂರರು ಬ್ರಿಟೀಷ್ ಸಾಮ್ರಾಜ್ಯದ ವಿರುದ್ಧ ಹಲವಾರು ಬಾರಿ ಭಾರೀ ಹೋರಾಟಕ್ಕಿಳಿದು ಬಳ್ಳಾರಿಯ ’ಅಲ್ಲಿಪುರ’ ಸೆರೆಮನೆಯಲ್ಲಿಯೇ ಅಲ್ಲದೆ ಬಳ್ಳಾರಿಯ ಸೆಂಟ್ರಲ್ ಜೈಲ್, ವೆಲ್ಲೂರಿನ ಸೆಂಟ್ರಲ್ ಜೈಲ್, ಸೆಂಟ್ರಲ್ ಜೈಲ್ ತಂಜಾವೂರು ಇವುಗಳಲ್ಲಿಯೂ ಜೈಲುವಾಸ ಅನುಭವಿಸಿದರು.
ಆಗಿನ ಪರಿಸ್ಥಿತಿಯಲ್ಲಿ ಬ್ರಿಟೀಷರು ನಮ್ಮ ಸ್ವತಂತ್ರ ಹೋರಾಟಗಾರರನ್ನು ನಡೆಸಿಕೊಂಡುದನ್ನು ಓದಿದರೇ ಯಾರಿಗಾದರೂ ರಕ್ತ ಕುದಿಯುವುದು ಸಹಜ.(ಟಿಪ್ಪಣಿ ೧). ಪ್ರತಿಬಾರಿ ಜೈಲುವಾಸವನ್ನು ಅನುಭವಿಸಿ ದಾಗಲೂ ಟೇಕೂರರಿಗೆ ಎಲ್ಲ ರೀತಿಯ ಸಂಪರ್ಕಗಳನ್ನೂ ಕತ್ತರಿಸಲಾಗು ತ್ತಿತ್ತು. ಹೊರಗಿನಿಂದ ಬರುವ ವಾರ್ತಾ ಪತ್ರಿಕೆಗಳಾಗಲೀ, ಆಗಿನ್ನೂ ಬಳಕೆಗೆ ಬಂದಿದ್ದ ಆಕಾಶವಾಣಿಯನ್ನು ಕೇಳುವ ಸೌಲಭ್ಯವಾಗಲಿ ಇರಲಿಲ್ಲ. ಅವರನ್ನು ಸಂದರ್ಶಿಸಲು ಸಹ ಕಟ್ಟುಪಾಡು. ವಾರದಲ್ಲೊಮ್ಮೆ ಒಬ್ಬರು ಬಂದು ಅವರನ್ನು ಮಾತನಾಡಿಸಬಹು ದಿತ್ತು. ಅವರ ಎಲ್ಲ ಚಲನ ವಲನ-ಗಳನ್ನೂ ಕಟ್ಟು ನಿಟ್ಟಾಗಿ ನಿಗಾವಹಿಸಿ ನೋಡುತ್ತಿತ್ತು ಬ್ರಿಟಿಷ್ ಸರಕಾರ. ಇವರ ಬಗ್ಗೆ ಆಗಿನ ಸರ್ಕಾರ ಎಷ್ಟು ಕಠಿಣ ವಾಗಿ ನಡೆಸಿಕೊಳ್ಳುತ್ತಿತ್ತೆಂದರೆ ೧೯೩೧ ರಲ್ಲಿ ಇವರ ಹಿರಿಯ ಮಗ ಸತ್ಯನಾರಾಯಣ ದೈವಾಧೀನನಾದ ಸುದ್ದಿಯನ್ನು ಸಹ ಕೊಡಲಿಲ್ಲ.

೧೯೪೨ರಲ್ಲಿ ಅವರ ತಂದೆ ರಾಮಾಶಾಸ್ತ್ರಿಯವರ ನಿಧನ ವಾದಾಗ ಅವರಿಗೆ ೧೫ ದಿನಗಳ ಕಾಲದ ಬಿಡುಗಡೆಯೊಂದಿಗೆ ಚೇತಾವಣಿ ಕೊಟ್ಟು ಹೊರಕ್ಕೆ ಕಳುಹಿಸಿ ಚೇತಾವಣಿಯ ಅವಧಿ ಮುಗಿದ ಕೂಡಲೆ ಮತ್ತೆ ಸರೆಮನೆಗೆ ಹಾಕಿದರು. ೧೯೪೩ರಲ್ಲಿ ಅವರಿಗೆ ಮಗ ಹುಟ್ಟಿದಾಗ ಮಗುವನ್ನು ನೋಡಲೂ ಸಹ ಅವರಿಗೆ ಅನುಮತಿಕೊಡಲಿಲ್ಲ. (ಟಿಪ್ಪಣಿ೨) ೧೯೪೪ರಲ್ಲಿ ಅವರ ಬಿಡುಗಡೆಯಾದ ಮೇಲೆ ಮಗುವಿನ ಮುಖದರ್ಶನವಾದದ್ದು. ಇದನ್ನು ಮಗುವಿಗೆ ತಂದೆಯ ದರ್ಶನದ ಅದೃಷ್ಟವಿರಲಿಲ್ಲ ಎನ್ನಬೇಕೋ ಅಥವ ತಂದೆಗೆ ತನಗೆ ಹುಟ್ಟಿದ ಮಗುವಿನ, ಹುಟ್ಟಿದ ಕೂಡಲೆ ಮುಖ ನೋಡುವ ಅದೃಷ್ಟವಿರಲಿಲ್ಲವೋ ಅಂತೂ ಅಪ್ಪ ಮಗನನ್ನು ನೋಡಲು ಒಂದು ವರ್ಷ ಕಾದಿರಬೇಕಾಯಿತು.
ಇದನ್ನೆಲ್ಲ ನೋಡಿದಾಗ ಒಂದು ಮಾತಂತೂ ಖಚಿತ ವಾಗುತ್ತದೆ. ಬ್ರಿಟಿಷ್ ಸರಕಾರಕ್ಕೆ ಟೇಕೂರರು ಗಂಡಾಂತರ ಪ್ರಾಯವಾಗಿದ್ದರು. ಇವರ ಮಡದಿ ಮೀನಾಕ್ಷಮ್ಮ ಸಹ ರಾಷ್ಟ್ರೀಯ ಮನೋಭಾವವನ್ನ ಹೊಂದಿದ್ದವಳು. ಗಂಡ ಚಳುವಳಿಗಳಲ್ಲಿ ಭಾಗ ವಹಿಸಿ ಸೆರೆವಾಸವನ್ನು ಅನುಭವಿಸಬೇಕಾಗಿ ಬಂದಾಗ ತಾನೂ ಸಹ ತನ್ನ ಗಂಡನ ಬಿಡುಗಡೆಯಾಗುವವರೆಗೆ ನೆಲದಮೇಲೆ ಮಲಗಲು ತೀರ್ಮಾನಿಸಿದಳು. ವರ್ಷಕ್ಕೆರಡು ಜೊತೆ ಖಾದಿ ವಸ್ತ್ರಗಳನ್ನು ತಯಾರಿಸಿ ಟೇಕೂರರಿಗೆ ಕೊಡುತ್ತಿದ್ದಳು. ಈಕೆಯ ಈ ತ್ಯಾಗವನ್ನು ಕುರಿತು ಟೇಕೂರರು ಸಹ “ಮೀನಾಕ್ಷಮ್ಮನಿಗೆ ತಮಗಿಂತ ಹೆಚ್ಚು ಗೌರವ ದೊರಕಬೇಕು, ಅವಳಿಲ್ಲದೆ ತಾವು ಏನನ್ನೂ ಸಾಧಿಸಲು ಅಸಾಧ್ಯವಾಗುತ್ತಿತ್ತು” ಎಂದು ಒಪ್ಪಿಕೊಂಡಿದ್ದಾರೆ.

ಸ್ವಾತಂತ್ರ ಬರುವುದಕ್ಕೆ ಮೊದಲು ಬಳ್ಳಾರಿ, ಮದ್ರಾಸ್ ಪ್ರಾಂತೀಯ ಸರಕಾರದ ಅಧಿಕಾರಕ್ಕೆ ಒಳಪಟ್ಟಿತ್ತು ಎನ್ನುವ ವಿಷಯವನ್ನು ಈಗಾಗಲೇ ತಿಳಿಸಿದ್ದೇನೆ. ಟೇಕೂರ್ ಸುಬ್ರಮಣ್ಯ ಅವರು ಆಗಿನ ಮದ್ರಾಸ್ ಪ್ರಾಂತದ ಪ್ರಧಾನಿಗಳಾಗಿದ್ದ ರಾಜಾಜಿ ಅವರಿಗೆ ೧೯೩೭ರಿಂದ ೧೯೩೯ ರ ವರೆಗೆ ಆಪ್ತ ಕಾರ್ಯದರ್ಶಿಯಾಗಿದ್ದರು. ೧೯೩೧ರಲ್ಲಿ ಟೇಕೂರರು “ಕರ್ನಾಟಕ ಕೇಸರಿ” ಪತ್ರಿಕೆಯನ್ನು ಆರಂಭ ಮಾಡಿದರಾದರೂ ಅದರ ಕಾರ್ಯವನ್ನು ಗಮನಿಸಿದ ಬ್ರಿಟಿಷ್ ಸರಕಾರ ಆಗಿನ ಕಾಲಕ್ಕೆ ಬಹಳ ದೊಡ್ಡಮೊತ್ತ ಎನ್ನಬಹುದಾದ ೧೦೦೦೦/- ರೂಪಾಯಿಗಳ ಜುಲ್ಮಾನೆ ವಿಧಿಸಿ ಪತ್ರಿಕಾಲಯ ಮುಚ್ಚುವಂತೆ ಒತ್ತಾಯವನ್ನು ಹೇರಿದರು. ಹೀಗಾಗಿ ಆರಂಭವಾದ ಒಂದೇ ವರ್ಷದಲ್ಲಿ “ಕರ್ಣಾಟಕ ಕೇಸರಿ” ನಿಂತು ಹೋಯಿತು.

೧೯೪೨ರಲ್ಲಿ ಗಾಂಧೀಜಿಯವರು “ಕ್ವಿಟ್ ಇಂಡಿಯ” ಚಳುವಳಿಯನ್ನು ಆರಂಭಿಸಿದಾಗ ಟೇಕೂರರು ಕರ್ನಾಟಕ ದಲ್ಲಿ ಅದನ್ನು ಬಹಳ ಬಿರುಸಾಗಿ ನಡೆಸಿ ಕೊನೆಗೆ ಜೈಲು ಖಾನೆಯನ್ನು ಸೇರಿದರು. ಈ ಹಿಂದೆಯೇ ತಿಳಿಸಿದಂತೆ ಆ ಸಮಯ ದಲ್ಲಿ ಹುಟ್ಟಿದ ಮಗುವಿನ ಮುಖವನ್ನು ನೋಡಲೂ ಅವಕಾಶ ಸಿಗದೆ ಹೋಯಿತು.೧೯೪೭ರಲ್ಲಿ ದೇಶವು ಸ್ವಾತಂತ್ರ ವನ್ನು ಪಡೆದಾಗ ಮದ್ರಾಸ್ ಸರಕಾರ, ಟೇಕೂರ್ ಸುಬ್ರಮಣ್ಯ ಅವರಿಗೆ ರಾಷ್ಟ್ರೀಯ ಧ್ವಜವನ್ನು ಬಳ್ಳಾರಿಯ ಸಾಂಬಮೂರ್ತಿ ಮೈದಾನ ದಲ್ಲಿ ರಾತ್ರೆ ೧೨ ಗಂಟೆ ಹೊಡೆದಾಗ ಹಾರಿಸಲು ಅಧಿಕಾರಯುಕ್ತ ವಾಗಿ ಅನುಮತಿ ಕೊಟ್ಟಿದ್ದರು.

ಸ್ವಾತಂತ್ರ ಸಿಕ್ಕ ಮೇಲೆ ಟೇಕೂರ್ ಸುಬ್ರಮಣ್ಯ ಅವರು ಬಳ್ಳಾರಿ ಪ್ರಾಂತವು ೧೯೫೩ರಲ್ಲಿ ಮೈಸೂರು ಪ್ರಾಂತಕ್ಕೆ ಸೇರುವ ಕಾರ್ಯಕ್ರಮದಲ್ಲಿ ಬಹಳ ಪ್ರಮುಖ ಪಾತ್ರವಹಿಸಿ ಯಶಸ್ವಿಯಾದರು. ಅಲ್ಲೂ ಅವರು ತಮ್ಮದೇ ಜನಗಳಿಂದ ತೀವ್ರವಾದ ಪ್ರತಿಭಟನೆಯನ್ನು ಎದುರಿಸಬೇಕಾಯಿತು. ಆದರೂ ಹಿಡಿದ ಹಟವನ್ನು ಬಿಡದೇ ಗೆದ್ದರು. ಅಲ್ಲಿಂದ ಮುಂದೆ ಅವರು ಒಬ್ಬ ನಾಯಕರಾಗಿ ಮಹಾತ್ಮಾ ಗಾಂಧೀಜಿ, ಜವಹರಲಾಲ್ ನೆಹರು, ರಾಜಾಜಿ ಇವರೆಲ್ಲರೊಡನೆ ನೇರವಾದ ಸಂಪರ್ಕವನ್ನು ಹೊಂದಿದ್ದರು.

ಇಂತಹ ಎಷ್ಟೋ ಮಹನೀಯರುಗಳು ಎಲೆಮರೆ ಕಾಯಿಯಂತೆ ದೇಶಕ್ಕಾಗಿ ದುಡಿದು ತಮ್ಮ ಆತ್ಮ ಸಮರ್ಪಣೆ ಮಾಡಿದ್ದಾರೆ. ದೇಶದ ಸ್ವಾತಂತ್ರಕ್ಕಾಗಿ ತಮ್ಮ ಸಂಸಾರ, ಮಕ್ಕಳು ಇವುಗಳನ್ನು ಗೌಣವಾಗಿಸಿ ದೇಶಕ್ಕೆ ಜೀವವನ್ನೇ ಮುಡಿಪಾಗಿಟ್ಟು ಹೋರಾಡಿ ಹೋಗಿದ್ದಾರೆ. ಇಂತಹವರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಇತ್ತೀಚೆಗೆ ಟೇಕೂರು ಸುಬ್ರಮಣ್ಯಂರವರ ನೂರನೆಯ ಹುಟ್ಟು ಹಬ್ಬದ ಸ್ಮರಣಾರ್ಥ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ಅವರ ಜೀವನವನ್ನು ದರ್ಶಿಸುವ ಪುಸ್ತಕವನ್ನು ಪ್ರಕಟಿಸಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿ. ತೋಟದಲ್ಲಿ ಹಲವಾರು ಹೂಗಳು ಅರಳುತ್ತವೆ, ಬಾಡುತ್ತವೆ. ಆದರೆ ಕೆಲವು ಮಾತ್ರ ತಮ್ಮ ಸುಗಂಧವನ್ನು ಗಾವುದ ಗಾವುದ ಚೆಲ್ಲುತ್ತವೆ. ಸ್ವಾತಂತ್ರ ತೋಟದ ಅಂತಹುದೇ ಒಂದು ಕುಸುಮ ಟೇಕೂರು ಸುಬ್ರಮ್ಹಣ್ಯಂ ಎಂದರೆ ತಪ್ಪಾಗಲಾರದು. ಒಬ್ಬ ವಕೀಲರಾಗಿ, ಸ್ವಾತಂತ್ರ ಯೋಧರಾಗಿ, ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ತಮ್ಮನ್ನು ಅರ್ಪಿಸಿ ಕೊಂಡ ಧೀರ ಟೇಕೂರು ಸುಬ್ರಮ್ಹಣ್ಯಂ ಅವರು.

ಇವರ ಅಣ್ಣ ಟೇಕೂರು ನಾರಾಯಣ ಶಾಸ್ತ್ರಿ ಸಹ ಸ್ವಾತಂತ್ರಯೋಧರಾಗಿದ್ದು ಭಾರತದ ಸ್ವಾತಂತ್ರಕ್ಕಾಗಿ ಹೋರಾಟ ನಡೆಸಿದರು. ಬಹಳ ಚಿಕ್ಕ ವಯಸ್ಸಿ ನಲ್ಲಿಯೇ ಸ್ವಾತಂತ್ರ ಸಮರದಲ್ಲಿ ಧುಮ್ಮಿಕ್ಕಿದ ಇವರು ಭಾರತವನ್ನು ಬ್ರಿಟಿಷರಿಂದ ಆದಷ್ಟು ಬೇಗ ಬಿಡಿಸುವ ಹಂಬಲವುಳ್ಳವ ರಾಗಿದ್ದರು. ಬಾಲಗಂಗಾಧರ ತಿಲಕರಂತಹ ನೇತಾರರ ಸಂಪರ್ಕ ದಲ್ಲಿದ್ದ ಇವರು ಸಾಧ್ಯವಾದಷ್ಟೂ ಬೇಗ ಸ್ವಾತಂತ್ರ ವನ್ನು ಗಳಿಸುವ ಹಂಬಲವುಳ್ಳವರಾಗಿದ್ದರು. ಆದರೆ ಇವರ ಅಕಾಲ ಮರಣದಿಂದ ಇವರ ಹಂಬಲ ಇವರಿದ್ದಾಗ ಕೈಗೂಡಲಿಲ್ಲ.

ಟೇಕೂರು ಸುಬ್ರಮ್ಹಣ್ಯಂ ಅವರನಾಲ್ಕು ಮಕ್ಕಳ ಪೈಕಿ ಈಗ ಬದುಕಿರುವವರು ಮೂರುಜನ.ಅವರಲ್ಲಿ ಮೊದಲ ಮಗ ಟೇಕೂರು ವೆಂಕಟೇಶ್ವರಲು ಒಬ್ಬ ಇಂಜನೀಯರ್, ಸಣ್ಣ ವಯಸ್ಸಿನಲ್ಲಿಯೇ ಮರಣ ಹೊಂದಿದರು. ಎರಡನೇ ಮಗ ಡಾ. ರಾಮನಾಥನ್ ಅವರು ಬಳ್ಳಾರಿ ಮೆಡಿಕಲ್ ಕಾಲೇಜ ಪ್ರಾಂಶುಪಾಲ ರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತ ಜೀವನವನ್ನು ನಡೆಸುತ್ತಿದ್ದಾರೆ. ತಮ್ಮ ತಂದೆಯವರ ಜೀವನದ ಬಗೆಗೆ, ಅವರು ದೇಶಕ್ಕಾಗಿ ಮಾಡಿದ ತ್ಯಾಗದ ಬಗೆಗೆ ಹೆಮ್ಮೆಯಿಂದ ಮಾತನಾಡುತ್ತಾರೆ. ೮ ದಶಕಗಳ ಜೀವನವನ್ನು ನೋಡಿರುವ ರಾಮನಾಥ್ ಅವರು ತಮ್ಮ ತಂದೆಯ ಬಗೆಗೆ ಬಹಳ ಗೌರವವನ್ನು ಇಟ್ಟಿರುವುದು ಅವರ ಮಾತುಗಳಿಂದ ಗೋಚರ ವಾಗುತ್ತದೆ. ಅವರ ಇಬ್ಬರು ಹೆಣ್ಣು ಮಕ್ಕಳಲ್ಲಿ ಸೀತಮ್ಮನವರು ತಮ್ಮ ಸಂತಾನದೊಂದಿಗೆ ಅಮೆರಿಕೆಯಲ್ಲಿ ನೆಲೆಸಿದ್ದರೆ ಶಾಂತಮ್ಮ ತನ್ನ ಗಂಡನೊಡನೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಟಿಪ್ಪಣಿಗಳು:
ಟಿಪ್ಪಣಿ೧): ಮುದ್ರಣದ ಅಂತಿಮ ಹಂತದಲ್ಲಿರುವ ನನ್ನ ಇತ್ತೀಚಿನ ಪುಸ್ತಕ ಬಿಳಿಯರ ಜೀವನದಲ್ಲೂ ಈ ವಿಷಯವನ್ನು ಕುರಿತು ಬರೆದಿದ್ದೇನೆ. ಕಾರಣ ಈಗ ಅಲ್ಲಿರುವ ಜೈಲುವಾಸ ಯಾವ ಅನುಕೂಲಸ್ಥರ ಮನೆಗೂ ಕಡಿಮೆಯಿಲ್ಲ. ಹೊರಗಡೆ ಹೋಗುವುದು ಸಾಧ್ಯವಿಲ್ಲ ಎನ್ನುವುದನ್ನು ಬಿಟ್ಟರೆ ಬೇರೆಲ್ಲ ರೀತಿಯ ಸ್ವಾತಂತ್ರವನ್ನೂ ಕೈದಿಗಳು ಹೊಂದಿರುತ್ತಾರೆ.
ಟಿಪ್ಪಣಿ೨): ಈಗ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ರಾಮನಾಥ್.
✍️ಡಾ.ಸತ್ಯವತಿಮೂರ್ತಿ
ಮ್ಯಾಂಚೆಸ್ಟರ್, ಇಂಗ್ಲೆಂಡ್
