ಬಿಚ್ಚಿಟ್ಟ ಬದುಕು
ಮದುವೆಯಾಗಿ ಹಲ ವರ್ಷಗಳೇ ಕಳೆದರೂ
ಪರಸ್ಪರ ಹೆಸರು ಹೇಳಲು ನಾಚಿಕೆ
ಪ್ರೇಮ ನಿವೇದನೆಯಂತೂ ದೂರದ ಮಾತು
ಅಕ್ಕ ಪಕ್ಕ ಕುಳಿತುಕೊಳ್ಳಲು ಮತ್ತಷ್ಟು ಮುಜುಗರ
ಆದರೂ ಜೊತೆಯಾಗಿ ಬಾಳುವರು
ಹಲವಾರು ವರುಷ
ಕಾರಣವಿಷ್ಟೇ
ಅವರ ಬದುಕು ಹೂರಣದ ಹೋಳಿಗೆ
ತುಸು ಕಣಕದ ಸಂಯಮಿಕೆಯ ಒಳಗೆ
ಅಪಾರ ಪ್ರೀತಿಯ ಸಿಹಿ ಹೂರಣ
ತೋರಿಕೆ ಅವರಲ್ಲಿಲ್ಲ ಕಾರಣ
ಅವರದು ಬಿಚ್ಚಿಟ್ಟ ಬದುಕು
ಪಾಲಿಗಾಗಿ
ಪತಿಯ ಪಿಂಡ ಪ್ರಧಾನ ಕಾರ್ಯ
ನೋಡುತ್ತಿದ್ದ ಪತ್ನಿ ಕಣ್ಣೀರ್ಗರೆಯುತ್ತಿದ್ದಳು
ಮನದ ಮಾತು ಹೊರಗೆ ಬರಲೇ ಇಲ್ಲ ಹದ್ದುಗಳೇ ಕಾಗೆಗಳೆ
ನೀವೇ ಎಷ್ಟೋ ವಾಸಿ
ಸಾಯುವವರೆಗಾದರೂ
ಕಾಯುವಿರಿ
ನಿಮ್ಮ ಪಾಲಿಗಾಗಿ
ಹೊಟ್ಟೆಯ ಮಕ್ಕಳು
ನಿಮಗಿಂತ ಕಡೆ
ಇದ್ದಾಗಲೇ
ಕುಕ್ಕಿ ಸಾಯಿಸುವರು
ತಮ್ಮ ಪಾಲಿಗಾಗಿ
✍️ವೀಣಾ ಹೇಮಂತಗೌಡ ಪಾಟೀಲ್ ಮುಂಡರಗಿ ಜಿ:ಗದಗ
