ರಾಜ್ಯದ ದೇವಾಲಯಗಳ ನಿರ್ಮಾಣದಲ್ಲಿ ಬಹು ದೊಡ್ಡ ಕೊಡುಗೆ ಕಲ್ಯಾಣ ಚಾಲುಕ್ಯರ ಅರಸರದ್ದು. ಹೊಸ ಸ್ವರೂಪವನ್ನು ನೀಡಿದ ಅವರ ಹಲವು ದೇವಾಲಯಗಳು ಉತ್ತರ ಕರ್ನಾಟಕದಲ್ಲಿದ್ದು, ಉಳಿದ ಅರಸರಿಗೆ ಸಿಕ್ಕಿರುವ ಪ್ರಚಾರ ಅವರ ನಿರ್ಮಾಣದ ದೇವಾಲಯಗಳಿಗೆ ಸಿಗದಿರುವದು ದುರಂತ. ಅಂತಹ ಸುಂದರ ದೇವಾಲಯ ವೊಂದು ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿದೆ. ಇಲ್ಲಿನ ಶಂಭುಲಿಂಗ ದೇವಾಲಯ ಅವರ ಉತ್ತಮ ಕಲಾ ನೈಪುಣ್ಯತೆಗೆ ಉದಾಹರಣೆ. ಇಲ್ಲಿನ ದೇವಾಲಯಗಳ ಬಗ್ಗೆ ಇಲ್ಲಿ ವಿವರ ಇದೆ.
ಇತಿಹಾಸ ಪುಟದಲ್ಲಿ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಪ್ರಮುಖ ಅಗ್ರಹಾರವಾಗಿದ್ದು ಶಾಸನಗಳಲ್ಲಿ ಕುಂದಗೋಳ್ – ಕುಂದಗೋಳ – ಕುಂದಾಗಲ್ಲ ಎಂದೇ ಕರೆಯಲಾಗಿದೆ. ಇಲ್ಲಿ ಸುಮಾರು 12 ಶಾಸನಗಳು ಸಿಕ್ಕಿದ್ದು, ಇದು ಬೆಳ್ವೊಲ–300 ಭಾಗವಾಗಿತ್ತು. ಇಲ್ಲಿನ ಶಾಸನಗಳಲ್ಲಿ ಸ್ವಯಂಭೂ ದೇವ, ಬಾಳಚಂದ್ರೇಶ್ವರ ದೇವಾಲಕ್ಕೆ ದತ್ತಿ ನೀಡಿದ ಉಲ್ಲೇಖಗಳು ಇದೆ. ಕ್ರಿ.ಶ.1044 ರ ಶಾಸನದಲ್ಲಿ ಇಲ್ಲಿನ ಬಾಳಚಂದ್ರೇಶ್ವರ ದೇವರಿಗೆ ದಾನನೀಡಿದ ಉಲ್ಲೇಖವಿದ್ದರೆ ಇನ್ನು ಕ್ರಿ.ಶ.1100ರ ವಿಕ್ರಮಾದಿತ್ಯನ ಶಾಸನದಲ್ಲಿ ಬರ್ಮೋಜನ ಮಗ ಕಾಳೋಜನ ಸ್ವಯಂಭೂ ದೇವರಿಗೆ ದಾನ ನೀಡಿದ ಉಲ್ಲೇಖ ನೋಡಬಹುದು. ಕ್ರಿ.ಶ.1240 ರ ಶಾಸನ ದಲ್ಲಿ ಇಲ್ಲಿನ ದುರ್ಗಾದೇವಿಗೆ ತಳಿಯರ ಮಲ್ಲಯ್ಯ ಭೂದಾನ ಮಾಡಿದ ಉಲ್ಲೇಖವಿದೆ. ಕ್ರಿ.ಶ.1444 ರ ಶಾಸನ ವಲ್ಲಭರಾಜ ಇಲ್ಲಿನ ಆಂಜನೇಯ ದೇವರನ್ನು ಪ್ರತಿಷ್ಠಾಪನೆ ಮಾಡಿದ ಉಲ್ಲೇಖವಿದೆ.
ಶಂಭುಲಿಂಗೇಶ್ವರ ದೇವಾಲಯ

ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದ ಈ ಸುಂದರ ದೇವಾಲಯ ಗರ್ಭಗುಡಿ, ಅಂತರಾಳ ಹಾಗು ವಿಶಾಲವಾದ ಸಭಾಮಂಟಪವನ್ನು ಹೊಂದಿದೆ. ಗರ್ಭಗುಡಿ ಯಲ್ಲಿ ಶಂಭುಲಿಂಗೇಶ್ವರ ಎಂದು ಕರೆಯುವ ಸ್ವಯಂಭೂ ಶಿವಲಿಂಗವಿದ್ದು, ಶಾಸನಗಳಲ್ಲಿ ಸ್ವಯಂಭೂಲಿಂಗ ಎಂದೇ ಕರೆಯ ಲಾಗಿದೆ. ಗರ್ಭಗುಡಿಯಲ್ಲಿನ ಹೊಸದಾಗಿ ಶಿವಲಿಂಗ ಸ್ಥಾಪಿಸಲಾಗಿದ್ದು ಇನ್ನು ಶಿವನು ಎದುರಾಗಿ ನಂದಿ ಸಹ ಅಧುನಿಕ ಸೇರ್ಪಡೆ. ದೇವಾಲಯದ ಸಭಾ ಮಂಟಪದಲ್ಲಿ ಪುರಾತನ ಶಿವಲಿಂಗದ ಭಾಗಗಳನ್ನು ಇದ್ದು ಸಪ್ತಮಾತೃಕೆ ಶಿಲ್ಪಗಳಿವೆ. ಗರ್ಭಗುಡಿಯ ಬಾಗಿಲುವಾಡ ಪಂಚಶಾಖೆ ಯಿಂದ ಅಲಂಕೃತ- ಗೊಂಡಿದ್ದು ಲಲಾಟದಲ್ಲಿ ಗಜಲಕ್ಷ್ಮೀ ಹಾಗು ಮೇಲಿನ ಭಾಗದಲ್ಲಿ ಶಿಖರ ಮಾದರಿ ಇದೆ.

ಇಲ್ಲಿನ ಅಂತರಾಳದಲ್ಲಿ ಗಣಪತಿ ಹಾಗು ಲಕ್ಷ್ಮೀಯ ಶಿಲ್ಪಗಳಿದ್ದು, ಇಲ್ಲಿನ ಬಾಗಿಲುವಾಡ ಚತುರ್ ಶಾಖೆ ಯಿಂದ ಕೂಡಿದ್ದು ಪಕ್ಕದಲ್ಲಿ ಜಾಲಂದ್ರಗಳಿವೆ. ಇನ್ನು ಮಕರತೋರಣ ದಲ್ಲಿ ರಾಮ, ಲಕ್ಷ್ಮಣ ಹಾಗು ಸೀತೆಯ ಬಿಡಿ ಶಿಲ್ಪವಿದೆ. ವಿತಾನದಲ್ಲಿ ಕಮಲದ ಕೆತ್ತನೆ ಇದೆ. ಸಭಾಮಂಟಪದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ಹಲವು ಕಂಭಗಳಿದ್ದು ಕಕ್ಷಾಸನ ಹೊಂದಿದೆ. ಇನ್ನು ವಿತಾನದ ಅಲಂಕರಣ ಕಲಾತ್ಮಕವಾಗಿದ್ದು, ಅಷ್ಟದಿಕ್ಪಾಲಕರು ಹಾಗು ಮಧ್ಯದಲ್ಲಿ ನರ್ತಿಸುತ್ತಿ ರುವ ನಟರಾಜನ ಕೆತ್ತನೆ ಇದೆ. ಇಲ್ಲಿನ ಅಂಕಣಗಳ ವಿತಾನದಲ್ಲಿನ ಕಮಲದ ಅಲಂಕರಣ ಅತ್ಯಂತ ಕಲಾತ್ಮಕವಾಗಿದೆ. ಇನ್ನು ಜಮಖಂಡಿ ಸಂಸ್ಥಾನಿಕರು ನಿರ್ಮಿಸಿದ ಉಪ್ಪರಿಗೆಯಿಂದ ಕೂಡಿದ ಪ್ರವೇಶ ದ್ವಾರ ಇದೆ.
ದೇವಾಲಯದ ಹೊರಭಿತ್ತಿಯಲ್ಲಿ ಕಿರುಶಿಖರಗಳ ಮಾದರಿಯ ಕೆತ್ತನೆ ಇದ್ದು, ಮೇಲಿನ ಕೋಷ್ಟಕಗಳಲ್ಲಿ ಹಲವು ದೇವರ ಶಿಲ್ಪಗಳ ಕೆತ್ತನೆ ನೋಡಬಹುದು. ಇಲ್ಲಿ ದಶಾವತಾರ, ಮಹಿಷಮರ್ದಿನಿ, ಗಣಪತಿ, ಬ್ರಹ್ಮ, ಗಣಪತಿ ಹಾಗು ಶಿವನ ಹಲವು ರೂಪದ ಸುಂದರ ಶಿಲ್ಪಗಳಿವೆ.ದೇವಾಲಯದ ಶಿಖರದ ಭಾಗ ನೂತನ ಸೇರ್ಪಡೆ.ಇನ್ನು ಕ್ರಿ.ಶ.1867 ರಲ್ಲಿ ಮರಾಠಿ ಶಾಸನದ ಪ್ರಕಾರ ದೇವಾಲಯವನ್ನು ಜೀರ್ಣೋದ್ದಾರ ಮಾಡಿದ ಕಾರಣ ಶಿಖರದ ಭಾಗದಲ್ಲಿ ಅದರ ಪ್ರಭಾವವನ್ನು ನೋಡಬಹುದು.
ದುರ್ಗಾ ದೇವಿ ದೇವಾಲಯ

ಸುಮಾರು 13 ನೇ ಶತಮಾನದ ಈ ದೇವಾಲಯ ಈಗ ಸಂಪೂರ್ಣವಾಗಿ ನವೀಕರಣಗೊಂಡಿದೆ. ಎತ್ತರವಾದ ಜಾಗ ದಲ್ಲಿ ಹೊಸದಾಗಿ ನಿರ್ಮಾಣ ಗೊಂಡ ಈ ದೇವಾಲಯದ ಗರ್ಭಗುಡಿಯಲ್ಲಿ ದುರ್ಗಾದೇವಿಯ ಶಿಲ್ಪವಿದೆ. ಸೇವುಣರ ಕಾಲದ ಶಾಸನದಲ್ಲಿ ಈ ದೇವಾಲಯದ ಉಲ್ಲೇಖವಿರುವ ಕಾರಣ ಹಳೆಯ ದೇವಾಲಯವಾಗಿತ್ತು ಎನ್ನುವುದರಲ್ಲಿ ಸಂಶಯವಿಲ್ಲ. ಈ ದೇವಾಲಯದ ಆವಶೇಷಗಳು ಇಲ್ಲಿನ ಶಾಲೆಯ ಭಾಗಗಳಾಗಿದ್ದು ಪುರಾತನ ಮಹಾವೀರ ಶಿಲ್ಪಗಳನ್ನ ಶಾಲೆಯಲ್ಲಿ ಇಡಲಾಗಿದೆ.
ಹರಿಹರೇಶ್ವರ ದೇವಾಲಯ

ಕುಂದಗೋಳದ ಎತ್ತರವಾದ ಪ್ರದೇಶದಲ್ಲಿ ಇರುವ ಈ ದೇವಾಲಯ ಸಂಪೂರ್ಣವಾಗಿ ಹೊಸದಾಗಿ ನಿರ್ಮಾಣ ಗೊಂಡ ದೇವಾಲಯದಲ್ಲಿ ಪುರಾತನ ಶಿಲ್ಪಗಳಿವೆ ಗರ್ಭಗುಡಿ ಮತ್ತು ಸಭಾಮಂಟಪವನ್ನು ಹೊಂದಿದ್ದು, ನೆಲದಿಂದ ಕೆಳಮಟ್ಟದಲ್ಲಿರುವ ಗರ್ಭ ಗುಡಿಯಲ್ಲಿ ಪ್ರಾಚೀನವಾದ ಶಿವಲಿಂಗವಿದ್ದು, ಗರ್ಭಗುಡಿಯ ಬಾಗಿಲುವಾಡದ ಲಲಾಟದಲ್ಲಿ ಗಣಪತಿಯ ಶಿಲ್ಪವಿದೆ. ಪಕ್ಕದ ದೇವಕೋಷ್ಟಕ ದಲ್ಲಿ ವಿಷ್ಣುವಿನ ಶಿಲ್ಪವಿದೆ. ನಂದಿ, ನಾಗ ಶಿಲ್ಪಗಳು ಇದ್ದು ಇಲ್ಲಿನ ಭೈರವಿ ಶಿಲ್ಪ ಸುಂದರವಾಗಿದೆ. ಪಾಶಾಂಕುಶ, ಡಮರು, ಖಡ್ಗ ಮಾತು ಬಟ್ಟಲನ್ನು ಹಿಡಿದಿದ್ದು, ಎರಡೂ ಬದಿಯಲ್ಲಿ ಪರಿಚಾರಿಕೆಯರ ಶಿಲ್ಪಗಳಿದೆ. ದೇವಾಲಯದ ಮುಂದೆ ಬೃಹತ್ ಕಲ್ಯಾಣಿ ಇದ್ದು ಈಗ ಬಹುತೇಕ ಮಲಿನ ನೀರು ತುಂಬಿಕೊಂಡಿದೆ.
ಆಂಜನೇಯ ದೇವಾಲಯ
ಸುಮಾರು ಕ್ರಿ.ಶ.1444 ರಲ್ಲಿ ವಿಜಯನರ ಅರಸ ಎರಡನೆಯ ದೇವರಾಯನ ಕಾಲದಲ್ಲಿ ಸೂರ್ಯ ವಂಶದ ವಲ್ಲಭರಾಜ ಆಂಜನೇಯನ ಶಿಲ್ಪವನ್ನು ಸ್ಥಾಪಿಸಿದ ಉಲ್ಲೇಖವಿದೆ. ಸಂಪೂರ್ಣವಾಗಿ ಹೊಸದಾಗಿ ನಿರ್ಮಾಣ ಗೊಂಡ ದೇವಾಲಯ ಗರ್ಭಗುಡಿ ಮತ್ತು ಸಭಾಮಂಟಪ ಹೊಂದಿದ್ದು, ಗರ್ಭಗುಡಿಯಲ್ಲಿ ಸುಮಾರು 8 ಅಡಿ ಎತ್ತರದ ಪುರಾತನವಾದ ಆಂಜನೇಯನ ಶಿಲ್ಪವಿದೆ.
ಗಂಗಾಧರೇಶ್ವರ ದೇವಾಲಯ

ಕುಂದಗೋಳದ ಪುರಾತನ ದೇವಾಲಯ ಸುಮಾರು 11 ನೇ ಶತಮಾನಕ್ಕೆ ಸೇರಿದ್ದು, ದೇವಾಲಯವು ಗರ್ಭಗುಡಿ ಮತ್ತು ಹೊಸದಾಗಿ ಸೇರ್ಪಡೆಗೊಂಡ ಮಂಟಪವನ್ನು ಹೊಂದಿದ್ದು, ಗರ್ಭಗುಡಿಯಲ್ಲಿ ಪುರಾತನವಾದ ಗಂಗಾಧರೇಶ್ವರ ಎಂಬ ಶಿವಲಿಂಗ ವಿದೆ. ಶಿವನಿಗೆ ಅಭಿಮುಖವಾಗಿ ನಂದಿ ಇದ್ದು, ಆವರಣದಲ್ಲಿ ಭೈರವಿ ಮತ್ತು ನಾಗನ ಶಿಲ್ಪಗಳಿದೆ. ಈ ದೇವಾಲಯಕ್ಕೆ ಕಲ್ಯಾಣ ಚಾಲುಕ್ಯ ತ್ರಿಭುವನ ಮಲ್ಲನ ಕಾಲದಲ್ಲಿ ದತ್ತಿ ನೀಡಿದ ಉಲ್ಲೇಖವಿದೆ.
✍️ಶ್ರೀನಿವಾಸಮೂರ್ತಿ ಎನ್.ಎಸ್.
ಬೆಂಗಳೂರು
