ಲೆಕ್ಕವಿರದ ಕಂಬನಿ ಇಂಗಿಸಿ ಒಂದನು ನಿನಗೆಂದು ಕಾಯ್ದಿರಿಸಿರುವೆ
ನಯನ ಚಿಪ್ಪಿನೊಳಗೆ ಹನಿ ಘನಿಯಾಗಿ ಮುತ್ತಾಗಲೆಂದು ಕಾಯ್ದಿರಿಸಿರುವೆ

ಮುಂಗಾರು ಸಿಂಚನಕೆ ಇಳೆಗೆ ಇಳಿದವು ಹನಿಗಳು ಕಾಳಿಗೆ ಬೇರಾಗಿಸಲು
ತನು ಸವರಿದ ಹನಿ ನಿನ್ನ ಬೆರಳು ತಾಕಿ ಹೊನಲಾಗಲೆಂದು ಕಾಯ್ದಿರಿಸಿರುವೆ

ಮಾಗಿ ಮತ್ತೇ ಹಸಿಯಾಗುವ ಎದೆಯ ಗಾಯಗಳು ಕಾಲನ ಜೊತೆಗೂಡಿವೆ
ಚಿಮ್ಮಿದ ನೆತ್ತರು ಉದ್ಘರಿಸಿದ ಹೆಸರನು ಅಮರವಾಗಲೆಂದು ಕಾಯ್ದಿರಿಸಿರುವೆ

ಕಣ್ಣ ಕಾರಂಜಿಯಲಿ ಪುಟಿಯುವ ಜಲಕೆ ಚಿಮ್ಮುವ ಬಯಕೆ ಅನವರತವೂ
ರುಮಾಲಲಿ ಸುತ್ತಿದ ಹಸಿ ನೆನಪನು ನಾಳೆ ಜೊತೆಗಿರಲೆಂದು ಕಾಯ್ದಿರಿಸಿರುವೆ

ಬೆರಳ ಚಿತ್ತಾರದಲಿ ಮೀಟಿ ಬಿಡಿಸಿದ ನಿನ್ನದೇ ಚಿತ್ರ ಎದೆ ಭಿತ್ತಿ ಮೇಲಿದೆ
ಅನುರಾಗ ಆಲಾಪಿಸಿದ ಮೋಹ ಗೀತೆ ನಿನ್ನ ತಲುಪಲೆಂದು ಕಾಯ್ದರಿಸಿರುವೆ

✍️ಶ್ರೀಮತಿ ಅನಸೂಯ ಜಹಗೀರದಾರ
ಕೊಪ್ಪಳ