ಕನಕನ ಜ್ಞಾನದ ಕಿಂಡಿಯ ಕಂಡಿರಾ?
ಕಾಗೆ ನೆಲೆಯಲಿ (ಬಾಡದಲಿ) ಜನಿಸಿ           
ಹಾಲು ಮತದವನೆನಿಸಿ ಮಾಗಿ,
ಭಕ್ತಿಯ ಭರಿಸಿ, ಹಾಲನೇ ಜಗ ಕುಣಿಸಿ
ತ್ಯಾಗಿಸಿದ ತಾನಾಗೇ ಭವ ಸಾಗರ ನೀಗಿಸಿ
ಯೋಗಕೇಶವನಾಗಿ, ಆದಿ ಕೇಶವನೆನಿಸಿ
ಹರಿನಾಮಸ್ಮರಿಸಿ

ಕಂಡಿರಾ ಕನಕನ ಕಂಡಿರಾ ಕಿಂಡಿಯ ಕಂಡೀರಾ, 
ಶ್ರೀಕೃಷ್ಣ ತಾ ಒಲಿದ, ಕನಕ ಸಾಹಿತ್ಯವ
ತಾರತಮ್ಯವ ತೊರೆದು, ಜ್ಞಾನ ಭಾವವ ಮೆರೆದು
ವೇದ ಶಾಸ್ತ್ರವ ತಿಳಿದ, ಗುರು ವ್ಯಾಸರಾಜರ ನೆನೆದು

ಭಕ್ತಿ ಪಂಥದಿ ತನ್ನ, ತನ್ನ ತನವೇ ಮೆರೆದು
ಕೃಷ್ಣ ದರುಶನ ಪಡೆದ  ನಮ್ಮ ಕನಕನಂದು
ಜನಕಾದ ಭಕ್ತಿ ಮಾರ್ಗದ ಸಾಹಿತ್ಯ ಸಿಂಧು
ದಾಸವರೇಣ್ಯರಲಿ ಅಗ್ರನಾದ ಆದಿ ಕೇಶವನೆಂದು
ವಿಪ್ರರಾ ಸಭೆಯಲ್ಲಿ ಸಪ್ಪಗಿರದೇ ತಾನು

ಬಾಳಿ ಹಣ್ಣನು ತೊರೆದು ಜ್ಞಾನವನು ಮೆರೆದು
“ದೇವನಿಹ ಎಲ್ಲೆಲ್ಲೂ “ಕಾಣುತಿಹ ಎಲ್ಲೆಡೆಯೆಂದು
ಉಡುಪಿಯಲಿ ಶ್ರೀ ಕೃಷ್ಣನೇ ಒಲಿದ ದಾಸ ಭಾವಕೆ ಅಂದು
ವಂದಿಸುತ ಕನಕನ, ಸವಿಯುತ ನಾಮಮೃತವನ
ಧನ್ಯ ನೆನುವ “ಪ್ರಹ್ಲಾದನಜ್ಜ” ಸ್ಮರಿಸಿ ಕಾಗಿನೆಲೆಯಾದಿ ಕೇಶವನ

✍️ ಶ್ರೀ ಆರ್.ಪಿ.ಕುಲಕರ್ಣಿ
ಪುಣೆ