ನಾಯಕನಾಗಿ ಜನಿಸಿದರೂ ಧನ-ಕನಕ, ರಾಜ್ಯ ಭೂಮಿ ದಾಹಕ್ಕೊಳಗಾಗಲಿಲ್ಲ ಕನಕ/

ವಿನಯದಿಂದ ವ್ಯಾಸ ಗುರುಗಳ ಮನ ಸೂರೆಗೊಂಡ ಕನಕ/

ಸೂರ್ಯ,ಚಂದ್ರರಿಗೆ, ಹರಿವ ನದಿ ಸಮುದ್ರಗಳಿಗೆ, ವಾಯು, ವರುಣರಿಗೆ ಯಾವ ಕುಲ ಎಂದ ಕನಕ/

ದೇವರು ಎಲ್ಲರಿಗೊಂದೇ ಎನುವ ಪರಮ ಸತ್ಯವನು ಅಂದೇ ಸಾರಿದ್ದ ಕನಕ/

ಜಾತಿ,ಪಂಥದ ದಳ್ಳುರಿಯಿಂದ ಹೊರಬಂದವರ ಕಾಣೆವು ಇಲ್ಲೀ ತನಕ,
ನಿಮ್ಮಾತ್ಮ ಕನಲಿದೆಯೇ? ಕನಕ/

ಕನಕ ಸಾಹಿತ್ಯದಲ್ಲಿ ಅಭಿವ್ಯೆಕ್ತವಾಗದ ಜೀವನದ ಸತ್ಯ, ಸಾರಗಳು ಇಲ್ಲವೇ ಇಲ್ಲ ಕನಕ/

ಮೋಕ್ಷದಾಯಕ ಪರಮ ಮಂಗಳ ಮೂರುತಿ ಆದಿಕೇಶವನಿಗೆ ಅತಿಪ್ರಿಯನಾದ ಕನಕ/

ಆದಿಕೇಶವನ ದಾಸ ನಾನೆಂದು ಗರುವದಿಂದಲಿ ಹಾಡಿ ನಲಿದಾಡಿದ ಮಹಾಮಹಿಮ ಕನಕ/

ಗಳಿಸಿದಷ್ಟೂ,ಉಳಿಸಿದಷ್ಟೂ, ಆಯುಷ್ಯ ಇರುವವರೆಗೆ ಗಳಿಸಬೇಕೆನುವ ಅಧಿಕಾರ ಪಿಪಾಸುಗಳಿಗೆ ಮಾದರಿ ಬಾಡವೆಂಬೂರಿನ ಬಾಡದ
ವಿಮಲ ಚರಿತ ಕನಕ

✍️ ಕಮಲಾಭಿತನಯೆ
ಶ್ರೀಮತಿ ರೇಖಾ ನಾಡಿಗೇರ ಹುಬ್ಬಳ್ಳಿ.