ಸಂಜೆಯ ಮಾತಿಗೆ
ತುಸುವೇ ಸಿಕ್ಕು
ಇನ್ನೂ ಮಾತುಗಳು
ತುಟಿಯಲ್ಲೇ ಉಳಿದಿರಲು
ಕೈ ಬೀಸಿ ಮರೆಯಾದಾಗ,
ಹಸಿದವನು ಇನ್ನೂ ಹಸಿವಿದೆ ಎನುವಾಗಲೇ
ತಟ್ಟೆಯನ್ನು ಕಸಿದುಕೊಂಡ ಭಾವ

‘ನಾನಿಂದು ಭೇಟಿಗೆ ಸಿಗಲಾರೆ’ ಅಂದಾಗ
ನಿನ್ನ ಗದ್ಗದಿತ ದನಿಕೇಳಿ,
ಸಾವಿರ ಅಪರಾಧ ಮಾಡಿದ ಭಾವ

ನೀನು ಇಲ್ಲೇ ಎಲ್ಲೋ
ನನಗಾಗಿ ಹಂಬಲಿಸಿ
ಅಲೆಯುವಾಗ,
ಸಾವಿರ ಆಸೆಯಿದ್ದರೂ
ಕೆಲಸದಲ್ಲೇ ಮುಳುಗಬೇಕಾದ
ಅನಿವಾರ್ಯತೆಯಲ್ಲೂ
ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದೇನೇನೋ
ಎನ್ನುವ ಕಳ್ಳ ಭಾವ

ಭರಪೂರ ಮಾತಿನ ಹರಿವು
ಒಂದು ಕರೆಗೆ ತುಂಡರಿಸಿದಾಗ,
ಕೈ ಕೈ ಹಿಸುಕಿಕೊಳ್ಳುವ
ಅಸಹಾಯಕತೆಯ ಭಾವ

ಪ್ರೀತಿಯ ಮಾತು ಬೆಳೆದು
ಅನುರಾಗದ ಕಟ್ಟೆಯೊಡೆಯುವ ವೇಳೆ,
ಕೈಹಿಡಿದು ಯಾರೋ
ಎಳೆದುಕೊಂಡು ಹೋದ ಭಾವ

ನೀನಿಲ್ಲದ ವೇಳೆ
ನಿನ್ನಿರುವನ್ನು ಬಯಸಿ
ತಿನ್ನುವ ಹಣ್ಣಿಗೂ ವಿರಹ,
ಅಗುಳಿಗೂ ನೀನಿಲ್ಲದ
ಅನಾಥ ಭಾವ

ನೋವಲ್ಲೂ ಸುಖ
ಮರೆವಲ್ಲೂ ನೆನಪು
ಹಸಿವಲ್ಲೂ ತೃಪ್ತಿ
ನಿನ್ನದೊಂದು ನೆನಪು; ನಿನ್ನದೊಂದು ದನಿ

✍️ಸೌಮ್ಯ ದಯಾನಂದ 
ಡಾವಣಗೆರೆ