ದೀಪ ಎನ್ನುವುದು ಕೇವಲ‌ ಬತ್ತಿ ಹೊತ್ತಿಸಿ ಉರಿವ ಬೆಂಕಿಯ ಬೆಳಕಲ್ಲ. ಇದು ಹಲವು ಅಂಶಗಳ ಸಂಕೇತ. ಅಗ್ನಿ ಮತ್ತು ಸೂರ್ಯನ ಸಂಕೇತ, ಜ್ಞಾನದ ಸಂಕೇತ, ಜೀವದ ಸಂಕೇತ ಮತ್ತು ಭಕ್ತಿಯ ಸಂಕೇತ. ಇನ್ನೂ ಕಾರ್ತಿಕ ಮಾಸದಲ್ಲಂತೂ ದೀಪವನ್ನು ಬೆಳಗಿಸುವ ಮೂಲಕ ದೀಪಾವಳಿ ಹಬ್ಬ ಆಚರಿಸಲಾಗುತ್ತದೆ.

ಪುರಾತನ ಕಾಲದಲ್ಲಿ ಮಾನವನ ಸಂಶೋಧನೆಯಲ್ಲಿ ಅಗ್ನಿಯೂ ಒಂದು ಅಲ್ಲಿ ಬೆಂಕಿಯ ಸೂಡಿ ರಾತ್ರಿ ಹೊತ್ತಿನ ದಾರಿ ತೋರುವ ಮತ್ತು ಪ್ರಾಣಿಗಳ ಕಾಟದಿಂದ ತಪ್ಪಿಸಿ ಕೊಳ್ಳುವ ದೀಪವಾಯ್ತು. ನಂತರ ಕಲ್ಲಿನ ಹಣತೆಗಳು, ದೀಪಸ್ತಂಭ ನಿರ್ಮಾಣವಾಗಿ ಅಲ್ಲಲ್ಲಿ ಬೆಳಕಿನ ಗೋಚರಕ್ಕೆ ಕಾರಣವಾಯ್ತು.‌ಈಗ ಅಲಂಕೃತ ಮಣ್ಣಿನ ಹಣತೆ, ಪ್ಲಾಸ್ಟಿಕ್ ದೀಪ, ಎಲೆಕ್ಟ್ರಾನಿಕ್ ದೀಪ, ಕಲ್ಲಿನ ದೀಪ, ಹೀಗೆ ನಾನಾ ಬಗೆಯ ದೀಪಗಳ ಪ್ರಯೋಗವಾಗಿದೆ.

ಅಗ್ನಿ ಮತ್ತು ಸೂರ್ಯ ಎಂದಾಗ ಉರಿಯುವ ಚಿತ್ರವೊಂದು ನಮ್ಮ ಮನದಲ್ಲಿ ಮೂಡುತ್ತದೆ. ಅದರಂತೆ ದೀಪವೂ ಸಹ ಒಂದು ಬೆಳಕಿನ ಸಂಕೇತ.‌ ಅರಿವಿನ ಧೀವಿಗೆ ಎಂಬ ಮಾತನ್ನೂ ಸಹ ನೀವು ಕೇಳಿರುತ್ತೀರಿ ಅಥವಾ ಜ್ಞಾನ ಜ್ಯೋತಿ ಎಂಬ ಪದವನ್ನು ಹಲವು ಬಾರಿ ಕೇಳಿರುತ್ತೀರಿ ದೀಪವನ್ನು ನಮ್ಮೊಳಗಿನ ಓದು, ಜ್ಞಾನ ಮತ್ತು ಅರಿವಿನ ಸಾಂಕೇತಿಕ ರೂಪವಾಗಿಯೂ ಹೇಳಲಾಗುತ್ತದೆ.

ಇದು ಜೀವದ ಸಂಕೇತವೂ ಹೌದು ಯಾವುದೇ ಶುಭ ಕಾರ್ಯ ನಡೆಯುವಾಗಲೂ ಮೊದಲು ದೀಪ ಹೊತ್ತಿಸುವ ರೂಢಿ ಇದೆ. ಇನ್ನು ಯಾರೊಬ್ಬರು ತೀರಿಕೊಂಡಾಗಲೂ ದೀಪ ಹೊತ್ತಿಸುತ್ತಾರೆ‌. ಹೀಗೆ ಇದು ಶುಭ ಹಾಗೂ ಅಶುಭದ ಸಂಕೇತವೂ ಆಗಿದೆ.

ಭಕ್ತಿಯ ಸಂಕೇತವಾಗಿ ದೀಪವನ್ನು ಹೆಚ್ಚಿನದಾಗಿ ಬಳಸ ಲಾಗುತ್ತದೆ. ಯಾವುದೇ ದೈವಿಕ ಕಾರ್ಯಗಳಿದ್ದರು ಪ್ರಥಮ ವಾಗಿ ದೀಪ ಹೊತ್ತಿಸಿ, ನಮಸ್ಕರಿಸಿ ಮುಂದಿನ ಕಾರ್ಯ ಆರಂಭವಾಗುತ್ತದೆ. ಸ್ನಾನಮಾಡಿ ಮಡಿ ಮಾಡಿಕೊಂಡು ದೇವರಿಗೆ ದೀಪ ಹೊತ್ತಿಸುವುದು ಒಂದು ಸಾಂಪ್ರದಾಯಿಕ ಪರಂಪರೆಯ ಸಂಕೇತ. ಯಾವುದೇ ಸಭಾ ಕಾರ್ಯಕ್ರಮ ಇದ್ದರೂ ಸಹ ದೀಪ ಬೆಳಗುವುದರ ಮೂಲಕವೇ ಶುಭಾರಂಭಗೊಳ್ಳುವುದು.

ದೀಪಗಳಲ್ಲಾದರೂ ಅದೆಷ್ಟು ಬಗೆ. ನಿಮಗೆ ತಿಳಿದಿರುವ ಹಾಗೆ‌, ಪ್ರಾರ್ಥನೆಗಾಗಿ ಉಪಯೋಗಿಸುವ ದೀಪವೇ ಆರತಿದೀಪ. ದೇವರ ಮುಂದೆ ಶಾಶ್ವತವಾದ ಬೆಳಗುವ ದೀಪವೇ ನಂದಾದೀಪ. ಸರಪಳಿಗಳಿಂದ ತೂಗುಹಾಕಿದ ದೀಪ ತೂಗುದೀಪವಾದರೆ, ಪುಟ್ಟಸ್ತಂಭದಂಥ ಪೀಠದ ಮೇಲಿರುವ ದೀಪವೇ ಕಾಲುದೀಪ. ಇವೆಲ್ಲವುಗಳ ರಚನೆ, ವಿನ್ಯಾಸ ಮಾದರಿಗಳಲ್ಲಿ ನಾನಾ ನಮೂನೆಗಳೂ ಕಲಾ ಕುಸುರಿಗಳೂ ಕಂಡುಬರುತ್ತವೆ. ಚಿತ್ರ ವಿಚಿತ್ರವಾದ ಅಲಂಕರಣೆಗಳೂ ಇರುತ್ತವೆ. ಈ ದೀಪಗಳಿಂದಲೇ ವಿಶೇಷ ವಾಗಿ ಆಚರಿಸುವವ ಹಬ್ಬವೇ ದೀಪಾವಳಿ. ಚಳಿಗಾಲದ ಆರಂಭಿಕ ಹಂತದಲ್ಲಿ ಚರ್ಮದ ರಕ್ಷಣೆಗಾಗಿ ಎಣ್ಣೆ ಸ್ನಾನ ಮತ್ತು ದೀಪದಹಬ್ಬವನ್ನು ಆಚರಿಸಲಾಗುತ್ತದೆ.

✍️ಸುಮಾ.ಕಂಚೀಪಾಲ್
ಬೆಂಗಳೂರು