ಅಜ್ಞಾನ ತಿಮಿರವನು ನುಂಗೆ ಬಂದ
ಜ್ಯೋತಿ ವಿರಾಟ್ ರೂಪ ದರ್ಶನ
ಮನೆಮನಗಳಲ್ಲಿ ಚಿಮ್ಮುತ ಆನಂದ
ಪ್ರೀತಿ ಪ್ರೇಮ ಹರ್ಷ ಸಿಂಚನ

ಜಲಪೂರಣದ ಶುಭಗಳಿಗೆಯಲಿ
ಸಿಹಿಯುಂಡು ಗಂಗೆಯ ಪೂಜಿಸಿ ತೈಲಾಭ್ಯಂಜನಕೆ ನಸುಕಿನಲಿ
ಅಣಿಯಾಗಿ ಪದ್ಧತಿಯ ಪೂರೈಸಿ

ಹೊಸ ಬಟ್ಟೆ ಷಡ್ರಸ ಭೋಜನದ ಸವಿ
ಸಂಜೆ ಜಗಮಗಿಸುವ ದೀಪಗಳ ಛವಿ
ಬಲಿ ನರಕರ ನೆನೆಸಿ ಲಕ್ಷ್ಮಿಯ ಪೂಜಿಸುವ
ಹಬ್ಬವಿದು ಜಗದ ಜನಕೆ ಹೊಸ ಪರುವ

ಹೃದಯದಲಿಹ ತಾಮಸದ ಅಸುರರ ಮಾಡಲಿಬೇಕು ನಿರುತದೆ ಸಂಹಾರ
ಸಾತ್ವಿಕತೆಯ ದಿವ್ಯ ಸಂಚಯನದೆ
ಆಚರಿಸೆ ಇಹ ಪರಕೂ ಮಾರ್ಗವಿದೆ

✍️ಸುಜಾತಾ ರವೀಶ್
ಮೈಸೂರು