ಸುಖಿಗಳಿಗೆ ನೀನೊಂದು
ಹುಣ್ಣಿಮೆಯ ಬೆಳದಿಂಗಳು
ಅದೇ…ದುಃಖಿಗಳಿಗಾದರೆ ನೀನು
ಅಮವಾಸ್ಯೆಯ ಕಗ್ಗತ್ತಲು

ಶುಭಸಂಭ್ರಮಕ್ಕೆ ನೀನೊಂದು
ಪ್ರಜ್ವಲ ಶೋಭೆ
ಅದೇ..ಸಾವಿನಮನೆಗಾದರೆ ನೀನು
ಸೂತಕದ ಛಾಯೆ

ನಿನನ್ನರಸಿ ಬಂದವರಿಗೆ
ನೀನೊಂದು ಅನುಗಾಲದ ಆತ್ಮಸಖಿ
ಅದೇ..ನಿನ್ನನ್ನು ನಿರ್ಲಕ್ಷಿಸಿ ಕಡೆಗಣಿಸಿದವರಿಗೆ ನೀನು
ಉತ್ತರವೇಯಿರದ ನಿಗೂಢ ಪ್ರಶ್ನೆ

ದೇವರ ಸನ್ನಿದಿಯಲ್ಲಿ ನೀನೊಂದು
ಹೊಂಬೆಳಕಿನ ನೀಲಾಂಜನ
ಅದೇ….ಸಮಾದಿ ಗೂಡಲ್ಲಾದರೆ
ಪುಟ್ಟ ಮಣ್ಣಿನ ಹಣತೆ

ಸಿರಿವಂತನ ಮಹಲಿನಲಿ
ನೀನೊಂದು ಝಗಮಗಿಸುವ
ಅಲಂಕಾರ ರೂಪ
ಅದೇ…ಬಡವನ ಗುಡಿಸಲಿನಲ್ಲಾದರೆ ನೀನು ಮಂದಬೆಳಕಿನ ಚಿಮಣಿದೀಪ

ತನ್ನ ಗೂಡನ್ನು ಸೇರಲು
ಬಯಸುವವರಿಗೆ ನೀನೊಂದು
ದಾರಿಹೋಕ ಮಿಂಚುಹುಳ
ಅದೇ…ಇಹಲೋಕ ತ್ಯಜಿಸಿ
ಹೊರಟವರಿಗೆ ನೀನು
ಚಿತೆಯಾಗಿ ದಹಿಸುವ ಉರುವಲು ಕಟ್ಟಿಗೆ

ನಿರ್ಮಲ ಹೃದಯಕ್ಕೆ ನೀನೊಂದು
ಹೊಳೆವ ಬಂಗಾರದ ಮಣಿ
ಅದೇ…ಕದಡಿದ ಮನಸ್ಸುಗಳಿಗಾದರೆ ನೀನು
ಹೊತ್ತಿ ಉರಿಯುವ ದ್ವೇಷದ ಕಿಡಿ

ಮಂದಿರ ಮಸೀದಿ ಇಗರ್ಜಿಗಳಲ್ಲು ನಿನಗಿಹುದು ಭಿನ್ನ ಸ್ವರೂಪದ ತೇಜಸ್ಸಿನ ಅಸ್ತಿತ್ವ
ಅದುವೆ…ಸರ್ವಧರ್ಮದಲ್ಲು ನೀನು
ಏಕತೆಯ ಸಾರುವ ಸಮಾನತೆಯ
ಸಂಕೇತ

ಅದೇ…ನೀನು ಬೆಳಕು…ನೀನು ಬೆಳಕು…ನಿನಗಿಲ್ಲ ಶುಭ-ಅಶುಭವೆಂಬ ಭೇದ
ನಿನಗೊತ್ತಷ್ಟೆ ಅಲ್ಲಿಯೂ- ಇಲ್ಲಿಯೂ ಎಲ್ಲೆಲ್ಲಿಯೂ ಒಂದಾಗಿರುವೆನೆಂಬ ಸೌಹಾರ್ದ.

✍️ಶಿವಮೊಗ್ಗ ಎಂ ಸುಮಿತ್ರ