ಅವಳು ಬರಲಿದ್ದಾಳೆ ಇಂದು ಎಂದರಿವಿತ್ತು ಈ ಹೃದಯಕೆ/
ನಸುಕು ಹರಿದಾಗ ಇದೇ ಆ ದಿನ ಅನಿಸಿತ್ತು ಈ ಹೃದಯಕೆ/

ಹಕ್ಕಿ ಚಿಲಿಪಿಲಿಯಲ್ಲಿ ಇಂದೇಕೋ ಉಕ್ಕಿ ಹರಿವಷ್ಟು ಮಾರ್ದವತೆ!
ಮೂಡಣದ ಕೆಂಪು ಅತಿಶಯ ಗಾಢವೆನಿಸಿತ್ತು ಈ ಹೃದಯಕೆ/

ಎಲೆ ಹಸಿರ ಬಳ್ಳಿಯಲಿ ಅರಳಿಹುದಲ್ಲವೇ ಹೊಸ ಉಮೇದಿ?
ಬೆಳಕ ಕೋಲಲೂ ಮುಗುಳುನಗೆ ಕಂಡಿತ್ತು ಈ ಹೃದಯಕೆ/

ದಶಕ ದಶಕಗಳು ನಿಂತರೂ ನಮ್ಮ ನಡುವೆ ನಾವೆಲ್ಲಿ ದೂರವಿದ್ದೆವು?
ಹಾದಿ ಹೊಸೆದಿರೆ ನಮ್ಮೊಲವಿಗೆ ಅನುರಾಗ ಹರಿದಿತ್ತು ಈ ಹೃದಯಕೆ/

ಇನ್ನೂ ಹೊಕ್ಕಳು ಬಳ್ಳಿ ಕತ್ತರಿಸದ ಕಂದನ ಅಳುವಲ್ಲೂ ಅವಳದೇ ಹೆಸರು!
ಜೇನಂತ ಪ್ರೀತಿಯ ಅಧರ ಸವಿದಿರಲು ಬೇರೇನು ಬೇಕಿತ್ತು ಈ ಹೃದಯಕೆ?

ಸುರಗಿಯ ಸೌರಭವ ಹನಿಸಿ ಎದೆ ಬಟ್ಟಲಿಗೆ
ಮತ್ತಳಾಗಿಸಿಹಳು ಅವಳು!
ಕಣ್ಣಂಚುಗಳ ಮಿಂಚು ಮಧುಶಾಲೆಯ ನೆನಪಿಸಿತ್ತು ಈ ಹೃದಯಕೆ/

ದೀವಳಿಗೆ ಸಂಜೆಯಲಿ ಕಾವ್ಯ ಕನ್ನಿಕೆಯಾಗಿ ಬಂದಿಹಳು ಅವಳು..
ಹಚ್ಚಿಟ್ಟ ಹಣತೆಯೂ ಬಯಕೆಯ ಕಿಡಿಯೊಂದ ಸೋಕಿಸಿತ್ತು ಈ ಹೃದಯಕೆ!

✍️ಡಾ.ಸೌಮ್ಯ ಕೆ.ವಿ.
ಯಲ್ಲಾಪುರ ಜಿ: ಉತ್ತರ ಕನ್ನಡ