ದಿನವು ಎದೆಯ ಭಾವ ಬತ್ತಿಗೆ
ಒಡಲ ಭಾಷ್ಯದ ತೈಲ ಸುರಿದು
ಹಚ್ಚುತಿಹೆನು ಪ್ರತಿನಿತ್ಯವೂ
ನಿಮ್ಮೆದುರಲಿ ಕಾವ್ಯಪ್ರಣತೆ.!
ಅಕ್ಷರ-ಅಕ್ಷರವು ಜ್ಯೋತಿಯಾಗಿ
ಪದ-ಪದವು ಬೆಳಗುತ ಮಿನುಗಿ
ಮನಮನದಿ ಬೆಳಕಾಗಿ ಪಸರಿಸುತ
ಪ್ರಜ್ವಲಿಸುತಿಹುದು ಭಾವದೊರತೆ.!
ಭವ್ಯ ಬೆಳಕಿನ ಹಬ್ಬದಲಿಂದು
ಜೀವ-ಭಾವಗಳು ಇನ್ನಷ್ಟು ಬೆಸೆದು
ಮತ್ತಷ್ಟು ಬಿಗಿಯಾಗಲಿ ಅಕ್ಷರಬಂಧ
ಚಿರವಾಗಲಿ ಈ ಅನುಬಂಧ ಆನಂದ.!
ಬದುಕಿನ ಸ್ವಾರ್ಥ ಹಗೆಮತ್ಸರಗಳ
ನರಕನ ಚಿರಂತನ ಸಂಹಾರವಾಗಲಿ
ಬಾಳ ಸ್ನೇಹ ಪ್ರೀತಿ ಮಮಕಾರಗಳ
ಬೆಳಕು ಮೋಹನ ಮುರಳಿಯಾಗಲಿ.!
ಒಳಗಣ ಅಹಮಿಕೆ ಬಲಿಯಳಿದು
ಅರಿವಿನ ತ್ರಿವಿಕ್ರಮ ಬೆಳೆಯುತ
ಪ್ರತಿದಿನ ಪ್ರೇಮ ಪಾಡ್ಯಮಿಯಾಗಲಿ
ಪ್ರೀತಿಶಾಂತಿಯ ರಂಗಪಂಚಮಿಯಾಗಲಿ.!
ಅನುದಿನ ಅಕ್ಷರ ದೀಪೋತ್ಸವವಾಗಲಿ
ಅನುಕ್ಷಣ ಕಾವ್ಯ ಬೆಳಕೋತ್ಸವವಾಗಲಿ
ಬೆಳಗುತಿರಲಿ ಸಾಲು ಸಾಹಿತ್ಯದೀಪ
ಅರಿವು ಅಂತಃಕರಣಗಳ ದಿವ್ಯಸ್ತೂಪ.!
ಭಾವಬಂಧುಗಳೇ ಇದೋ ನಮನ
ಹಣತೆಹಬ್ಬಕೆ ಹರ್ಷದ ಶುಭಕಾಮನ
ಚಿರವಿರಲಿ ಭಾವಸಂವೇದನ ಯಾನ
ನಿರಂತರವಿರಲಿ ಅಕ್ಕರೆಯ ಅಕ್ಷರಧ್ಯಾನ.!

✍️ಎ.ಎನ್.ರಮೇಶ್ ಗುಬ್ಬಿ
