ಗೆಳತಿ ಹೃದಯದ
ಭಾಷ್ಯವೇ ಅರ್ಥವಾಗುವಾಗ
ನಯನಗಳ ಭಾಷೆ
ಅರ್ಥವಾಗದಿರುವುದೆ.?

ಎದೆಯಾಳದಿ ಬಚ್ಚಿಟ್ಟ
ಕನಸುಗಳೇ ಅರಿವಾಗುವಾಗ
ಕಣ್ಣಂಚಲಿ ಬಿಚ್ಚಿಟ್ಟ
ಕನಸುಗಳು ಅರಿವಾಗದಿರುವುದೆ.?

ಜೀವ-ಜೀವ ಮೇಳೈಸುತ
ನಡೆ ನುಡಿಗಳು ಐಕ್ಯವಾಗಿ
ಸಮ್ಮಿಲನವಾಗಿರುವಾಗ
ಸೂಚ್ಯ ಸೂಚಕಗಳ ಗುಂಗೇಕೆ.?

ಭಾವ-ಭಾವ ಬೆರೆಯುತ
ಸಂವೇದನೆಗಳೆಲ್ಲ ಏಕವಾಗಿ
ಸಮೀಕರಿಸಿರುವಾಗ
ಪದ ಶಬ್ಧಗಳ ಹಂಗೇಕೆ.?

ಮೌನದೊಳಗಣ ಮಾತುಗಳೂ
ನನ್ನೆದುರು ತಂತಾನೆ ವೇದ್ಯ
ಉಸಿರುಸಿರೊಳಗಿನ ಸ್ವರಗಳೂ
ನನಗೆ ಪ್ರತಿಕ್ಷಣವೂ ಶ್ರವ್ಯ.!

ಅನುರಾಗದ ಅಂತಃಚಕ್ಷುವಿಗೆ
ಸಕಲವೂ ಸಾದೃಶ್ಯ
ಆಂತರ್ಯದ ಅಂತಃಕರಣದೊಲವಿಗೆ
ಸಮಸ್ತವೂ ವಾಚ್ಯ.!

✍️ಎ.ಎನ್.ರಮೇಶ್. ಗುಬ್ಬಿ.