ಭಾರತಕ್ಕೆ ಸ್ವಾತಂತ್ಯ ಬಂತು. ಇದರೊಂದಿಗೆ ಸಂಕಷ್ಟಗಳು ಬಳುವಳಿಯಾಗಿ ಬಂದವು.ಅವುಗಳನ್ನು ಎದುರಿಸುವ ಪರಿ ಹೇಗೆ ಎಂಬ ಪ್ರಶ್ನೆ ಒಂದೆಡೆಯಾದರೆ, ಸ್ವಾತಂತ್ರ್ಯದ ಸಂಭ್ರಮ ಅನುಭವಿಸುವ ಮನಸುಗಳು ಮತ್ತೊಂದು ಕಡೆ. ಕಷ್ಟಗಳ ಸರಮಾಲೆಗಳ ಹೊತ್ತವರ ಪಾಲಿಗೆ ಭರವಸೆಯ ಆಶಾಕಿರಣ ಮೂಡುವುದೆಂಬ ಭಾವನೆಯೂ ಚಿಗುರೊಡೆಯಿತು. ಆದರೆ ಎಲ್ಲವೂ ಭ್ರಮೆ ಅನಿಸುವುದಕ್ಕೆ ಕಾಲವೇ ಬೇಕಾಯಿತು.

ದಾಸ್ಯತೆಗೆ ಬಲಿಯಾಗುವಂತೆ ಮಾಡಿದ್ದೇ ಆಸೆಗಳು, ನಾನು ನನ್ನದೆಂಬ ಸ್ವಾರ್ಥ, ವಂಶಪಾರಂಪರೆಯಾಗಿ ಬಂದ ಮನುಷ್ಯಗುಣದಲಿ ಬೆರೆತು ಹೋದ ದರ್ಪದ ಗುಣ ಸ್ವಭಾವ. ಎಲ್ಲರೂ ಎಲ್ಲರೊಂದಿಗೆ ಹೊಂದಿಕೊಂಡು ಹೋಗಬೇಕೆಂಬ ಕನಿಷ್ಟ ಜ್ಞಾನವೇ ಇರದ ಮನಸ್ಥಿತಿ, ಒಬ್ಬರನ್ನೊಬ್ಬರು ತುಳಿದು ಬಾಳುವ ವಿಕೃತ ಮನಸು, ಹೀಗೆ ನೂರಾರು ಕಾರಣಗಳನ್ನು ಪಟ್ಟಿ ಮಾಡಿ ಕೊಡಬಹುದು.

ಇಷ್ಟಾದರೂ ನಾವೇಕೆ ಇಂದೂ ಹೀಗೆ ಇದ್ದೇವೆ? ಸ್ವಾತಂತ್ರ್ಯ ಬಂದಾಗಿದೆ ಜ್ಞಾನ-ವಿಜ್ಞಾನ ಅಗಾಧವಾಗಿ ಬೆಳೆದಿದೆ. ಆದರೂ ಕೆಲವೊಂದು ಮೂಲಭೂತ ಸಮಸ್ಯೆಗಳು ಹಾಗೇ ಬದುಕಿನ ಜೊತೆಯಲ್ಲಿ ಮುಂದೆಮುಂದೆ ಸಾಗುತ ಇಂದೂ ನಮ್ಮನ್ನ ದೇಶವನ್ನ ಕಾಡುತ್ತಿದೆ. ಇಪ್ಪತ್ತೊಂದನೇ ಶತಮಾನಕ್ಕೆ ಬಂದರೂ ಇನ್ನೂ ಅಳಿಸಲಾಗದೆ ಉಳಿದ ಅಸ್ಪ್ರಷ್ಯತೆ, ಜಾತಿ ಉಪಜಾತಿಯ ನಡುವಣ ಕಲಹ, ಧರ್ಮ ಮತಗಳೆಂಬ ಹೊಯ್ದಾಟ, ದೇವರ ಹೆಸರಿನಲ್ಲಿ ಕೆಸರೆರಚಾಟ, ನೆಲಜಲದ ತಿಕ್ಕಾಟ, ಇವು ಒಂದು ರೀತಿ- ಯಲ್ಲಿ ವಾಸಿಯಾಗದ ಹುಣ್ಣುಗಳಾಗಿಯೇ ಉಳಿದಿವೆ. ಇದರೊಂದಿಗೆ ಒಬ್ಬರು ಮತ್ತೊಬ್ಬರನ್ನು ಹಣಿದು ಬಾಳುವ ವಿಕೃತ ಮನೋಭಾವ, ಸಣ್ಣಪುಟ್ಟ ಸಂಗತಿಗಾಗಿ ಕೊಲೆ ಮಾಡುವ ಮಟ್ಟದ ದ್ವೇಷ, ಒಂದೇ ಎರಡೇ ಪ್ರತಿ ದಿನ ಪ್ರತಿಕ್ಷಣ ಹಾದಿ ಬೀದಿಯಲಿ, ಓಣಿ ಗಲ್ಲಿಯಲಿ, ಮನೆ ಮನಸುಗಳಲಿ, ದ್ವೇಷದ ಅಣಬೆಗಳು ಎದ್ದು ರಾರಾಜಿಸು ತ್ತಿವೆ. ಪರಿಣಾಮ ಮತ್ತದೇ ಇತಿಹಾಸದ ಪುನರಾವರ್ತಿತ ಭಾವ ಬೆಳೆಯುತಿದೆ. ದಾಸ್ಯತೆಯ ಮತ್ತೊಂದು ಮುಖದ ಅನಾವರಣ ನಮಗಿಂದು ಪರಿಚಯ ವಾಗುತ್ತಿದೆ. ಭಾರತ ದೇಶ ಮತ್ತೆ ಒಡೆದು ಚೂರಾಗುತ್ತಿದೆಯೇ ಎಂದು ಅನಿಸತೊಡಗಿದೆ.

ಭಾರತ ಸತ್ವಶಾಲಿಯಾದ ಜ್ಞಾನಬಲದ ಮಂದಿರ. ಇಲ್ಲಿ ಹುಟ್ಟಿದವರು ಭಾಗ್ಯವಂತರು ಎಂಬ ಭಾವವಿದೆ. ಈ ನೆಲದಲ್ಲಿ ಅನೇಕ ಪುಣ್ಯ ಪುರುಷರು ಹುಟ್ಟಿದ್ದಾರೆ. ಅಪಾರ ವಿಚಾರಧಾರೆಯನ್ನು ಬಿತ್ತಿ ಹೋಗಿದ್ದಾರೆ. ಈ ನೆಲ ಪರಮ ಶೇಷ್ಠತೆಗಳ ಸರಮಾಲೆಯ ಹೊತ್ತು ಮಿನುಗುತಿತ್ತು. ಆದರೆ ಇಂದು ಕಾಲದ ಹೊಡೆತದಲಿ ಸತ್ವಶಾಲಿ ಗುಣಸಾರವನು ಕಳೆದುಕೊಂಡು ಮಂಕಾಗಿದೆ. ಸ್ವಾರ್ಥವೆಂಬ ಭಾವವಿಕಾರ ರತಿಸುಂದರಿಯೋ ಅನ್ನುವಷ್ಟರ ಮಟ್ಟಿಗೆ ವೈಭವದಿಂದ ಸರ್ವರಿಗೂ ಹಿತವೆನಿಸತೊಡಗಿದೆ. ಈ ದುರಂತವೆಂದರೆ ಭಾರತವನ್ನು ಭವಿಷ್ಯದಲ್ಲಿ ಮತ್ತೆ ಅಂಧಕಾರದ ಜೊತೆಗೆ ದಾಸ್ಯತೆಯ ಕಡೆಗೆ ಕರೆದೊಯ್ಯುತ್ತಿದೆ.

ಸ್ವಾತಂತ್ಯ ಭಾರತಕ್ಕೆ ಅಂದು ಎಂತಹ ಶಿಕ್ಷಣ ಬೇಕಾಗಿತ್ತು ಎಂಬುದು ಅಂದಿನ ದೇಶಭಕ್ತರಿಗೆ ಗೊತ್ತಾಗಲಿಲ್ಲವೇಕೆ? ಗೊತ್ತಿದ್ದವರು ಸಲಹೆ ಸೂಚನೆ ಕೊಡದೆ ಸ್ವಾರ್ಥಿಗಳಾಗಿ ಉಳಿದರೆ? ಅಥವಾ ಕೊಟ್ಟ ಸಲಹೆಗಳ ಬಗ್ಗೆ ಆಳವಾಗಿ ವಿಚಾರ ಮಾಡದೆ ಸಂಕುಚಿತ ಮನದವರಾಗಿ ಆಳುವವರು ಉಳಿದರೆ? ಕೆದಕಿದರೆ ಎಲ್ಲವೂ ಯಕ್ಷ ಪ್ರಶ್ನೆಗಳೆ ಸರಿ ಇಂದಿಗೆ. ಹಾಗಾದರೆ ಈ ಎಳೆಗಳ ಹಿಡಿದು ಭೂತಕಾಲವನು ಟೀಕಿಸಬೇಕಾ? ಇಲ್ಲ ಭವಿಷ್ಯಕ್ಕೇನು ಬೇಕೆಂದು ಪಾಠ ಮಾಡಬೇಕಾ? ಆಳುವವರಿಗೆ ಈಗಲೂ ಒಮ್ಮತದ ಸಲಹೆ ಸೂಚನೆಯ ಅವಶ್ಯಕತೆ ಬೇಕಾಗಿಲ್ಲವೋ! ಕೊಟ್ಟ ಸಲಹೆ ಸೂಚನೆ ದಿಕ್ಕರಿಸಿ ನಡೆವ ಧೋರಣೆ ಮುಂದುವರಿಸು ವುದಾ? ಕೊಟ್ಟು ಪಡೆವ ಸಂಸ್ಕಾರದ ಇತಿಹಾಸ ಮುಂದು ವರಿಸದೆ ಇರುವುದಾ? ಇಲ್ಲ ರಾಜಪರಂಪರೆಯ ಕಿತ್ತಾಟ ವನ್ನು ಇಂದಿನ ರಾಜ್ಯಾಡಳಿತದಲ್ಲೂ ಬೆರೆಸಿ ವಿಷ ಕಾರುತ್ತ ದ್ವೇಷ ಅಸೂಯೆ ಬಿತ್ತುತ್ತ ಕಾಲನೂಕುವುದಾ?

ಭವಿಷ್ಯದ ಕರಾಳ ಕಾಲ ಪಕ್ಷೀ ಯಾರನ್ನು ಬಿಟ್ಟಿಲ್ಲ, ಬಿಡುವುದೂ ಇಲ್ಲ. ಆದರೂ ಮನುಷ್ಯ ಹೆಂಡ ಕುಡಿದ ಕೋತಿಯಂತೆ ಆಡುವುದನ್ನು ಬಿಡುತ್ತಿಲ್ಲ. ಕಾಲಕ್ಕೆ ತಕ್ಕಂತೆ ಬಾಳುವ, ಬದುಕಿನ ಪಾಠಬೇಕು. ಬದುಕನ್ನು ಕಟ್ಟಿಕೊಡು ವಂತಹ ಶಿಕ್ಷಣ ಬರಬೇಕು. ಕೂಡಿಬಾಳುವಂತೆ ಮಾಡುವ ಆದರ್ಶ ಕಲಿಸಬೇಕು. ಶಿಕ್ಷಣವು ಜ್ಞಾನ, ತಿಳಿವಳಿಕೆ, ಪ್ರಜ್ಞೆ, ಅರಿವು ಒಡಮೂಡಿಸಬೇಕು. ಇಲ್ಲದೆ ಹೋದರೆ ಮಾಡಿದ ಎಲ್ಲ ಪ್ರಯತ್ನವೂ ಹೊಳೆಯಲಿ ಹುಳಿಹಿಂಡಿ ರುಚಿ ನೋಡಿ ದಂತೆ ಸರಿ. ಹುಳಿಯ ರುಚಿಯೂ ಸಿಗದೂ ಹುಳುಕು ಉಳಿಯದು ಇದು ಇಂದಿನ ಭಾರತೀಯರ ಪಾಡು.

ಕಟ್ಟ ಕಡೆಯದಾಗಿ ಕಾಡುವ ಪ್ರಶ್ನೆಯಿದು ನಾವೇಕೆ ಇಂದೂ ಹೀಗೆ? ಎಲ್ಲವನ್ನೂ ಕಾಲವೇ ನಿರ್ಧಾರ ಮಾಡುತ್ತದೆ. ಭರವಸೆಗಳು, ಕನಸುಗಳು ಕೆಲಸ ಮಾಡಲು ಕಾರಣವಾಗು ತ್ತವೆ. ಹಾಗಾಗಿ ಸಲಹೆ ಕೊಡಬೇಕು. ಪಡೆಯುವುದು- ಬಿಡುವುದು ಅವರವರ ಭಾವಕ್ಕೆ ಬಿಡೋಣ.ಏನೇ ಆದರೂ ಪ್ರಯತ್ನ ಬಿಡಬಾರದು ಅಷ್ಟೆ.

✍️ಡಾ.ನವೀನ್ ಕುಮಾರ್ ಎ.ಜಿ
ಶಿಕ್ಷಕರು ಮತ್ತು ಸಾಹಿತಿಗಳು
ವಿಶ್ವದರ್ಶನ ಪ್ರೌಢಶಾಲೆ, ಇಡಗುಂದಿ
ತಾ:ಯಲ್ಲಾಪುರ ಜಿ: ಉತ್ತರ ಕನ್ನಡ

ಸರ್ ಸೂಪರ್ ಆಗಿದೆ ಈ ಆರ್ಟಿಕಲ್ ಯಾಕ್ ನಮ್ಮ ದೇಶ ಇನ್ನೂ ಅಭಿವೃದ್ಧಿ ಹೊಂದಿದ ದೇಶ ಆಗಿಲ್ಲ ಅಂತ ತಿಳಿಸತ್ತೆ ನಿಜ ನಾವ್ ನಮ್ಮ ಸ್ವಾರ್ಥ ಬಿಟ್ಟಿದ್ರೆ ಯಾವಾಗ್ಲೋ ನಮ್ಮ ದೇಶ ಅಭಿವೃದ್ಧಿ ಹೊಂದಿದ ದೇಶ ಆಗ್ತಿತ್ತು. ನಾವ್ ಹೇಳ್ತಿವಿ ನಮ್ಮ ನಾಯಕರು ಸರಿಯಾಗಿ ಕೆಲಸ ಮಾಡ್ತಿಲ್ಲ ಅಂತ ಆದ್ರೆ ಆ ನಾಯಕರಿಗೆ ನಾವ್ ಸರಿಯಾಗಿ ಸಹಕಾರ ಕೊಡ್ತಿದಿವ ಅಂತ ನಮ್ಮನ್ ಪ್ರಶ್ನೆ ಮಾಡಿ ನೋಡಿದ್ರೆ ಪ್ರತಿ ಒಬ್ಬನು ಸುಮ್ನಾಗ್ತಾನೆ.
LikeLike