ಸುಲಿದ ಬಾಳೆಯ ಹಣ್ಣಿನಂದದಿ ಸುಲಲಿತವು ಸುಲಭವು ನನ್ನ ಕನ್ನಡ.
ಸಹೃದಯರು,ಕನ್ನಡಿಗರು ಸಕಲರ ಲೇಸ ಬಯಸುವರು ನೋಡ.
ಮಾತು -ಮನಸು, ಭಾಷೆ ಸೊಗಸು ಸವಿಯದು ಜೇನ ಸೊಗಡ.
ಗುಡಿ ಗೋಪುರಗಳು, ಶಿಲ್ಪಕಲಾ ವೈಭವದ ಬೇಲೂರು,ಹಳೇಬೀಡ.
ಭಾರತಿಯ ಅಭಿಮಾನದ ಕುವರಿ ಈ ನನ್ನ ನಾಡು ಕರ್ನಾಟಕ.
ಧಾರವಾಡದ ಪೇಡಾ,ಕುಂದಾ, ಕರದಂಟು, ಪ್ರಸಿದ್ಧವದು ಮೈಸೂರುಪಾಕ.
ಕಲೆ, ವಿಜ್ಞಾನ, ತಂತ್ರಜ್ಞಾನ, ಕೃಷಿ, ಕೈಗಾರಿಕೆಯಿಂ ಕೋರೈಸುತ ಬೆಳಗಿಹುದು ವಧಿ೯ಸುತಿದೆ ಕೀತಿ೯ಯ ತೂಕ.
ಪಂಪ, ರನ್ನ,ಪೊನ್ನ ,ಬೇಂದ್ರೆ, ಕುವೆಂಪು ಮಾಸ್ತಿ,ಕಾರಂತ,ಕಂಬಾರ ಮೊದಲಾದ ಕವಿರತ್ನಗಳ ಪದಕ.
ಅರಿಷಿಣ- ಕುಂಕುಮ ವಣ೯ದಿ
ಶೋಭಿಸಿಹುದು ಕನ್ನಡಾಂಬೆಯ ಪತಾಕ.
ಭಾಷೆ ಒಂದೆ, ಭಿನ್ನ ಪ್ರಾಂತದಿ,
ಭಿನ್ನ ಪ್ರಯೋಗ ಅದ್ಬುತವು ಅನುಭವಕ.
ಜಯ ಕರ್ನಾಟಕ, ಜಯ ಕನ್ನಡ,
ಜಯ ಭುವನೇಶ್ವರಿ, ಜಯ ಜಯವು ಕನ್ನಡಾಂಬೆಗೆ,
ಜಯ ಜಯವು ಭಾರತಿಯ ತನುಜೆಗೆ.
✍️ ಕಮಲಾಭಿತನಯೆ
(ಶ್ರೀಮತಿ ರೇಖಾ ನಾಡಿಗೇರ) ಹುಬ್ಬಳ್ಳಿ.
