ಬೆಳಗುತಲಿದೆ ಕನ್ನಡದ ದಿವ್ಯದೀಪ
ಮಣಿಸುತಲಿ ಕತ್ತಲೆಯ ಪ್ರತಾಪ
ಮಂಗಳದ ಸುಪ್ರಭೆಯ ಹರಿಸುತೆ
ಹೊಂಬೆಳಕ ಸುರಭಿಯ ಸುರಿಸುತೆ

ಪಂಪ ರನ್ನ ಜನ್ನ ಹರಿಹರಾದಿಯರು
ಕವಿರಾಜಮಾರ್ಗದಾ ಹಣತೆಯಲಿ
ಕಾವ್ಯದೆಳೆಯ ಬತ್ತಿಯ ಹೊಸೆದಿಹರು
ಭಾಷಾಪ್ರೀತಿಯ ತೈಲವನೆರೆಯುತಲಿ

ಶರಣಶರಣೆಯರ ಅನುಭಾವದ ಬೆಳಕು ವಚನಗಳದೇ ನೋಡಿಲ್ಲಿ ದಿವ್ಯ ರವಳಿ
ದಾಸವರೇಣ್ಯರ ಅನುಭವದ ಹೊಳಪು
ತಂದಿಹುದು ಕಾಣಿಲ್ಲಿ ಭವ್ಯ ದೀಪಾವಳಿ

ನವ್ಯ ಸಾಹಿತ್ಯ ಇದೇ ನಿತ್ಯನವ ದೀಪಿಕೆ
ಅನುವಾದಿತ ಕೃತಿಗಳ ಶಶಿ ಚಂದ್ರಿಕೆ
ಕನ್ನಡಮ್ಮನ ಕೀರ್ತಿ ಹರಡಿದೆ ಅಪಾರ
ಮಕ್ಕಳು ತೊಡಿಸಿರೆ ಸಾಹಿತ್ಯ ಮಣಿಹಾರ

ಕನ್ನಡಮ್ಮನಿಲ್ಲಿ ನವೋನ್ಮೇಷ ಶಾಲಿನಿ ನಿತ್ಯಹರಿದ್ವರ್ಣದಲಿ ಭಾವಾನ್ವೇಷಿಣಿ
ಹೆಮ್ಮೆಯ ಕಂದರು ರಚಿಸುತಿರಲು ಕಬ್ಬ
ಕರುನಾಡಲಿ ನಡೆದಿದೆ ದಿನದಿನವೂ ಹಬ್ಬ

✍️ಸುಜಾತಾ ರವೀಶ್
ಮೈಸೂರು