ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನಪ್ರಿಯ ವಾಗುತ್ತಿರುವ ಕನ್ನಡ ಸಾಹಿತ್ಯ ಪ್ರಕಾರದ ಕವಿತೆ ಕಾವ್ಯ ಕ್ಷೇತ್ರದಲ್ಲಿ “ಗಜಲ್” ತುಂಬ ವಿಶಿಷ್ಟ ವಾದುದು. ಸಾಹಿತ್ಯ ಕ್ಷೇತ್ರದಲ್ಲಿ ಉತ್ತರ ಭಾರತ, ಹೈದ್ರಾಬಾದ್ ಕರ್ನಾಟಕದ ಜನ ಮಾನಸದಲ್ಲಿ ಹಿಂದೂಸ್ತಾನಿ ಸಂಗೀತ ಸಾಹಿತ್ಯದ ಜಂಟಿ ಕ್ಷೇತ್ರದಲ್ಲಿ ನೋವು-ನಲಿವುಗಳ ಹಿನ್ನೆಲೆಯಲ್ಲಿ ಹೊಸ ಸಾಂಸ್ಕೃತಿಕ ಬದಲಾವಣೆಯಲ್ಲಿ ಕಸಿಯಾದ ಸಾಹಿತ್ಯ ಇನ್ನೂ ಬಿಸಿ ಹಸಿಯಾಗಿ ರುಚಿಯಾದ ಮನಸ್ಸು ಹೃದಯಗಳಲ್ಲಿ ಲಗ್ಗೆ ಇಡುತ್ತಿದೆ ಗಜಲ್. ಸುಲಭ, ಸರಳ ಹೃದಯದ ತಂತಿ ಮೀಟುವ, ಜುಮ್ಮ ಅನಿಸುವ, ರೋಮಾಂಚನ ಹುಟ್ಟಿಸುವ ಸಾಮರ್ಥ್ಯ ಗಜಲ್ ಗಳಿಗೆ ಇವೆ.“ದರ್ದಿಗೆ ದಾಖಲೆಗಳಿಲ್ಲ” ಗಜಲ್ ಪುಸ್ತಕದಲ್ಲಿ 52ಗಜಲ್ ಗಳನ್ನು ಕವಿತಾ ಸಾಲಿಮಠ ದರ್ದುಗಳಿಗೆ ಅಕ್ಷರ ರೂಪದಲ್ಲಿ ದಾಖಲಿಸಿ ದಾಖಲೆ ಮಾಡಿಬಿಟ್ಟಿದ್ದಾರೆ.

“ಅವನ ಬೆವರ ಘಮದಲ್ಲಿ ಪುರುಷತ್ವದ ಪುರಾವೆ ಇತ್ತು, ಅವಳ ಕಣ್ಣೀರ ಕಥೆ ಆ ದಿಂಬಿಗೆ ಮಾತ್ರ ಗೊತ್ತಿತ್ತು”
ಒಂದು ಕಥೆಯ ವ್ಯಥೆ ಹೇಳುತ್ತಾ ಕೊನೆಗೆ ಬಂದರೂ ತನ್ನ ಛಾಫು ಮನಸ್ಸಿನ ಮೇಲೆ ಒತ್ತುತ್ತದೆ.

ಹೀಗೆ ಗಜಲ್ ದಲ್ಲಿ ಬರುವ ಒಂದೊಂದು ಸಾಲು ಹಲವು ಭಾವ ಹೋಲಿಕೆ ತೋರಿಸುತ್ತಾ ಹೃದಯ ಪ್ರವೇಶಿಸದೆ ಇರುವದೆಯಿಲ್ಲ. ಹಾಡಿನ ರೂಪ ದಲ್ಲಿ, ಸಂಗೀತ ದೊಂದಿಗೆ ಅಥವಾ ಸರಳ ಓದುವಿಕೆ ಆದರೂ ಹೃದಯ ಪ್ರವೇಶ ಮಾಡದೇ ಬಿಡುವದಿಲ್ಲ ಅನ್ನೋದನ್ನ ಇಲ್ಲಿರುವ ಗಜಲ್ ಗಳು ಪ್ರತಿಧ್ವನಿಸುತ್ತವೆ ಪ್ರತಿ ಗಜಲ್ ಗಳು ಬಿಜಾಪುರದಲ್ಲಿರುವ ಗೋಲ್ ಗುಮ್ಮಟದ ಹಾಗೆ ಹಲವಾರು ಭಾವಗಳನ್ನು ಪ್ರತಿಫಲಿಸುತ್ತೀವೆ.
“ಅಜ್ಞಾನ ಸುಡುವ ಅಕ್ಷರ ಆಗಿರುವೆ ಸಾವಿಲ್ಲದ ಸತ್ಯಕ್ಕೆ ಸಾಕ್ಷಿ ಆಗಿರುವೆ”
ಮಾತು ವರ್ಗ ಸಂಘರ್ಷಗಳ ಮೇರೆ ಮೀರಿದ ಪ್ರೇಮ ಧ್ವನಿಯಾಗುತ್ತದೆ.
“ಅದೆಷ್ಟೋ ನಿಟ್ಟುಸಿರಗಳು ಮೈಯೊಡ್ಡಿವೆ ನಿಗೂಢಗಳಿಗೆ ನಿಂತ ನೆರಳನ್ನು ಕತ್ತಲು ನೆಕ್ಕುತ್ತಿರುವದನ್ನು ನೋಡುತ್ತಿದ್ದೇನೆ ”
ಗುಪ್ತಗಾಮಿನಿ ಪ್ರೇಮದ ಪ್ರವಾಹದಲ್ಲಿ ಇಸಲಾರದೇ ಸೋತು ಹೋದ ಹತಾಶೆಗಳ ಮಧ್ಯೆ ನೆರಳುಗಳು ಅಸ್ತಿತ್ವ ಕಳೆದುಕೊಳ್ಳುವ ಕತ್ತಲೆ ಅನಾವರಣಗೊಳ್ಳುವದರ ಕಥೆ ಇದೆ. ಮೋಹಕವಾಗಿ ಇದ್ದಂತೆ ಒಮ್ಮೆಲೇ..
“ಕಲ್ಲು ಮುಳ್ಳಿನ ಹಾದ್ಯಾಗ ನಡೀಬೇಕ್ರಿ ಎದ್ಯಾಗಿನ ಗುರಿ ಸಾಧಿಸ್ಯಾಕ ಛಲ ಬೇಕ್ರಿ”
ಅನ್ನೋದು ಜರ್ಕನ ಅನುಭವ ನೀಡುತ್ತದೆ.

ದರ್ದಿಗೆ ದವಾ ಹುಡುಕುತ್ತ ಹೊರತಟಾಗ ದರ್ದಿನ ಇತಿಹಾಸ ಒಂದೇ ಆದರೂ ದಾಖಲೆ ಗಳಿಲ್ಲದೆ ಪ್ರತಿಯೊಂದು ಸ್ವತಂತ್ರವಾಗಿ ಬಿಡುತ್ತದೆ. ಹೀಗಾಗಿ ಪ್ರತಿಯೊಂದು ದರ್ದಿನ ಅನುಭವವೂ ವೈಶಿಷ್ಟ ಪೂರ್ಣವಾದುದು. ಶ್ರೀಮತಿ ಕವಿತಾ ಸಾಲಿಮಠ್ ರ ಈ ಗಜಲ್ ಪುಸ್ತಕ ಗಜಲ್ ಸಾಹಿತ್ಯದ ಸಾಲಿಯೂ, ಹಾಗೆ ಹತಾಶೆ, ವೈರಾಗ್ಯ ಮತ್ತು ಕಾಣದ ದೈವ ನಂಬಿದ ಮಠವೂ ಆಗಿದೆ.
ಒಟ್ಟಿನಲ್ಲಿ ಈ 52 ಗಜಲ್ ಗಳು ಓದಲಿಕ್ಕೆ ಅದರಲ್ಲೂ ಮತ್ತೆ ಮತ್ತೆ ಓದುತ್ತಾ, ಮೆಲಕು ಹಾಕುತ್ತ, ಸಂಗೀತ ಧ್ವನಿ ಸಂಯೋಜನೆ ಮೂಲಕ ಚಹಾ, ಕಾಫಿ ಸವಿಯುತ್ತ ಇದ್ದರೆ ಗುಂಪಿನಲ್ಲಿ ಗೋವಿಂದ ಆಗದೆ ಒಂದು ವಿಶಿಷ್ಟ ಸ್ಥಾನ ಹಾಡಿದವರಿಗೆ, ಓದಿದವರಿಗೆ ನೀಡುತ್ತದೆ ಅನ್ನುವದರಲ್ಲಿ ಸಂಶಯ ಇಲ್ಲಾ.

ದರ್ದಿಗೆ ದಾಖಲೆಗಳಿಲ್ಲ ಗಜಲ್ ಕೃತಿಗೆ ಗದಗದ ಪಂ.ಪುಟ್ಟರಾಜ ಸೇವಾ ಸಮಿತಿಯವರು ಕೊಡಮಾಡುವ ವರ್ಷದ ಕೃತಿ ರತ್ನ ಪ್ರಶಸ್ತಿ ಲಭಿಸಿದ್ದು ಕವಿತಾ ಸಾಲಿಮಠರ ಪ್ರತಿಭೆ ಹಾಗೂ ಪರಿಶ್ರಮಕ್ಕೆ ಸಂದ ಗೌರವವಾಗಿದೆ. ಕವಿತಾರವರ ಲೇಖನಿಯಿಂದ ಇನ್ನಷ್ಟು ಮತ್ತಷ್ಟು ಅರ್ಥಪೂರ್ಣ, ಭಾವಪೂರ್ಣ ಗಜಲ್ ಗಳು ಹರಿದುಬರಲಿ ಎಂದು ಹಾರೈಸೋಣ.
✍️ ಅರವಿಂದ ಕುಲಕರ್ಣಿ
ಧಾರವಾಡ
