ಉರಿವ ಬಿಸಿಲಿಗೆ ಬೆವರ ಹನಿಗಳ ತೆತ್ತು ಬೆಳದಿಂಗಳ ಕೊಳ್ಳುವ ಗಿರಾಕಿ ನಾನು
ಮಳೆಯ ಒಂದು ಹನಿಗಾಗಿ ಮುಗಿಲನೇ ಖರೀದಿಸುವ ಗಿರಾಕಿ ನಾನು

ನನ್ನ ಹೆಸರು ಗುರುತುಗಳ ಬರೆದಿಟ್ಟುಕೊಂಡು ಕಾಯುತ್ತಿದ್ದಾರೆ ಜಗದ ವ್ಯಾಪಾರಿಗಳು
ವ್ಯಾಪಾರಿಗಳ ಖಜಾನೆಗೆ ಬರಿ ಶೂನ್ಯ ತುಂಬಿರುವ ಗಿರಾಕಿ ನಾನು

ನಮೂದಿಸಲಾಗಿದೆ ಬದುಕಿನ ಒಂದೊಂದು ಸರಕಿಗೆ ಒಂದೊಂದು ದರವನ್ನು
ದರದ ನಿರ್ಣಯಕ್ಕೆ ಕರುಣೆ ಪ್ರೀತಿ ನೀಡುತ ನಡೆವ ಗಿರಾಕಿ ನಾನು

ವ್ಯಾಪಾರದರಿವಿರದೆ ಬಂದು ನಿಂತಿರುವೆ ಬರಿಗೈಯಲ್ಲಿ ಜಾತ್ರೆಗೆ
ನೋಟುಗಳ ಬಣ್ಣ ಸದ್ದು ಆಸೆ ಕನಸುಗಳ ಕಳೆದುಕೊಂಡಿರುವ ಗಿರಾಕಿ ನಾನು

ದರವಿಲ್ಲದೆ ದೊರಕುವುದಾದರೆ ಒಂದು ಮುಗುಳು ನಗುವಾದರೂ ಸಾಕು
ಯಾರದು ನಗುವಿನಲ್ಲಿ ನೋವು ನಿರಾಸೆಗಳ ಮರೆಯುವ ಗಿರಾಕಿ ನಾನು

ಹರಿದ ಜೇಬುಗಳೊಳಗೆ ತುಂಬಿಕೊಂಡಿವೆ ಹರಿಯದ ಕನಸ ಚೂರುಗಳು
ಉಕ್ಕುಕ್ಕಿ ಹರಿವ ನದಿಗಳಿಗೆ ಹನಿಸಲೆಂದೇ ಹನಿ ಒಲವ ತಂದಿರುವ ಗಿರಾಕಿ ನಾನು!

 ಗಣೇಶ  ಹೊಸ್ಮನೆ
ಜಾನ್ಮನೆ ಶಿರಸಿ,(ಉ.ಕ)