ಸರಿದ ಪ್ರೀತಿಯ
ಮುರಿದ ಬಂಧಕ್ಕೆ
ಮರುಜನ್ಮದ ಮಾತು
ಭ್ರಮೆಯೇ ಸರಿ!
ತುಸುನಕ್ಕಿತು ತುಟಿಯಂಚು
ನಿಟ್ಟುಸಿರಲಿ ಸಿಕ್ಕು
ಅವೇ, ಸತ್ತ ಸಂಬಂಧಗಳ
ನೆನಪುಗಳಲ್ಲಿ ಹೊಕ್ಕು
ಮುದುಡಿದ ಬಾಂಧವ್ಯಕ್ಕೆ
ಮತ್ತೆ ಮತ್ತೆ ಬಂಧದ
ಬಲೆಯ ಬಾಹುಬಂಧನವೇ?!
ಬಿರಿದಷ್ಟು ಮಾಸಲು
ಹೊದ್ದಷ್ಟು ಜಾಳು ಜಾಳು
ಹಸಿರೆಲೆ ಹಣ್ಣೆಲೆಯಾಗಿ
ತರಗಲೆಯಂತೆ ತೂರಿ
ಹಾರುವ ಸಮಯದಿ
ಉದುರಿ ಉರುಳಿದ
ಮರಕ್ಕೆ ತರುಲತೆಯ
ತನುವ ಕೂಡಿಸಿ ಈಡುನೋಡುವ
ಮಹದಾಸೆಯೇ!?
ಸ್ವಾತಿಯ ಮಳೆಹನಿ
ವಿದಾಯವೇಳುವ ಸಮಯದಿ
ಚಿಪ್ಪಿನ ಅದರಗಳು ಮುತ್ತಿಗಾಗಿ
ಬಾಯ್ತೆರೆದಂತೆ..
ಸರಿಗಟ್ಟಿದ್ದ ನಂಟು
ಸಮಯೋಚಿತವಲ್ಲದ ಹೊತ್ತಿಗೆ
ನಿಷ್ಪಲ.
ಬೆರಳೆಣಿಕೆಯ ನಾಳೆಗಳೆಂಬ
ಕನಸುಗಳಿಗಾದರು ಸಿಹಿಯ
ಉಣಿಸುವ ಕಹಿಯ ಬೇವಿನ
ಹಿಂದೆ ಸವಿಯ ಬೆಲ್ಲದಂತೆ
ಮರೆಯಾದದ್ದು ಮರಳಿ
ಬರಲೆಂಬ ಆಸೆಯಗಣ್ಣು ಬತ್ತಿರಲಿ
ಆಗ ನೋವಿನ ನೊಗವ
ಹೊತ್ತ ಈ ಹೃದಯ ಹಗುರಾದಿತೇನೋ!?
ನಿರಾಸೆಯ ಬರಡೇ
ಎದೆಗೊತ್ತಿರಲಿ ಅದೇ
ಬದುಕೆಂದು ಮುನ್ನಡೆ
ಛಲವೆಂಬ ಆತ್ಮಬಲವ ಹೊತ್ತು
ಆಗ ಬೇಗುದಿಯ ಮನವೇ
ನಿರಾಳವಾದಿತೇನೋ!!!

✍️ಶಿವಮೊಗ್ಗ ಎಂ.ಸುಮಿತ್ರ
