ಬದುಕೆಂದರೆ ಬರಿಯ ಸವಾಲೆನುವ
ನೂರು ಸಾವಿರ ಜನರಿದ್ದಾರೆ ಇಲ್ಲಿ
ಸೋಲಿಸುವುದೊಂದೇ ಗುರಿಯೆಂಬ
ಭ್ರಮೆಯಲ್ಲಿ ಕಾದಿದ್ದಾರೆ ಇಲ್ಲಿ

ತಾನಿಟ್ಟ ಹೆಜ್ಜೆಗಳ ದೊಡ್ಡ ಮೇಲೆ
ನಿನ್ನ ಹೆಜ್ಜೆಯೂ ಇರಬೇಕೆನುವವರು
ನಿನ್ನ ಪುಟ್ಟ ಪಾದಗಳ ಗುರುತ
ಸಿಗದಂತೆ ಅಳಿಸುವವರಿದ್ದಾರೆ ಇಲ್ಲಿ

ತಾ ನಡೆವ ಹಾದಿಯಲಿ ಹುಲ್ಲೂ ಹುಟ್ಟದ ಸತ್ಯ ಹೃದಯಕ್ಕೆ ತಿಳಿದಿದೆ
ನೀ ಬರುವ ದಾರಿಗೆ ಮುಳ್ಳ ಬೇಲಿಯ
ಹಾಕುವವರು ದೊಡ್ಡವರಿದ್ದಾರೆ ಇಲ್ಲಿ

ತನ್ನ ಕೀರಲು ದನಿ ತನಗೇ ಕೇಳದೆ
ಕೂಗಿ ತನ್ನ ಮೇಲ್ಮೆಯ ಸಾರುವವರು
ನಿನ್ನ ಮಧುರ ಆಲಾಪ ಸುಧಾರಿಸುವ
ಹಿತೈಷಿಯ ಸೋಗಿನವರಿದ್ದಾರೆ ಇಲ್ಲಿ

ತಾ ಮಾಡಿದ ಮಣ್ಣು ಸಹ ಚಿನ್ನವೆನುವ
ಮೋಡಿಗಾರರ ಮಾಯಾ ಲೋಕವಿದು
ನಿನ್ನ ಗುಣಗಳ ನೆನೆವರಾರು “ಕವಿಯೆ”
ಹೃದಯವಂತರು ಕಡಿಮೆಯಿದ್ದಾರೆ ಇಲ್ಲಿ

✍️ಕವಿತಾ ಹೆಗಡೆ ಅಭಯಂ
ಹುಬ್ಭಳ್ಳಿ