ಶ್ರಾವಣಕ್ಕೆ ಎರಡನೇ ಹುಟ್ಟುಹಬ್ಬದ  ಶುಭಾಶಯಗಳು. ಎರಡು ವರ್ಷಗಳು ಎನ್ನುವುದು ಒಂದು ಮೈಲಿಗಲ್ಲು. ಆದರೆ, ಈ ನಡುವೆ ಕ್ರಮಿಸಿದ ಮಾರ್ಗ, ಅಲ್ಲಿ ಭೇಟಿಯಾದ ಜನರು, ವ್ಯಕ್ತಿತ್ವಗಳು, ಒಡನಾಟ, ಸಂಭ್ರಮ ಇವೆಲ್ಲ ಅತ್ಯಂತ ಬೆಲೆಯುಳ್ಳದ್ದು. ಒಂದು ಬ್ಲಾಗ್‌ನ್ನು ಒಬ್ಬ ವ್ಯಕ್ತಿ, ತನ್ನ ಕೆಲಸ, ಕಾರ್ಯ, ವಯಕ್ತಿಕ ಬದುಕಿನ ಜಂಜಾಟಗಳ ನಡುವೆ ಅತ್ಯಂತ ಯಶಸ್ವಿಯಾಗಿ ನಡೆಸುವುದು ಸುಲಭದ ಮಾತಲ್ಲ. ಹಾಗಾಗಿ ಕೆಲವೊಮ್ಮೆ ಬಂದು ತಲುಪಿದ ಗಮ್ಯಕ್ಕಿಂತ, ಕ್ರಮಿಸಿದ ಮಾರ್ಗದ ಕಥೆಗಳು ಬಹಳ ಸ್ವಾರಸ್ಯಕರ ವಾಗಿಬಿಡುತ್ತವೆ. ಹಾದಿಯಲ್ಲಿ ದೊರೆತ ಸುಖ, ಆಹ್ಲಾದ, ಅನುಭವ, ಪರಿಚಯ, ಒಡನಾಟ, ಕಂಡಂತ ಕಷ್ಟಗಳು,ಅನುಭವಿಸಿದ ನಷ್ಟಗಳು, ವೇದನೆಗಳು ಇವೆಲ್ಲ ಬದುಕಿಗೆ ದೊಡ್ಡ ಕಾಣಿಕೆಗಳಾಗುತ್ತವೆ.  

ಹೀಗೆ ಶ್ರಾವಣ ಬಳಗವನ್ನು ಏಕವ್ಯಕ್ತಿಯಾಗಿ ತನ್ನ ಅದಮ್ಯ ನಂಬಿಕೆ, ಉತ್ಸಾಹ ಮತ್ತು ಶಕ್ತಿಯನ್ನು ಬಳಸಿ ನಡೆಸುತ್ತಿರುವವರು ಶ್ರೀ ರವಿಶಂಕರ ಗಡಿಯಪ್ಪನವರು. ಅವರೊಡನೆ ನಾವೆಲ್ಲರೂ ಶ್ರಾವಣದ ಒಡನಾಟದ ಖುಷಿಯನ್ನು ಅನುಭವಿಸಿದ್ದೇವೆ.ಕಷ್ಟಗಳನ್ನು ಅವರಿಗೇ ಬಿಟ್ಟಿದ್ದೇವೆ. ಆದರೆ, ನಗುಮೊಗದ ಅವರು ಶ್ರಾವಣವನ್ನು ಮೂರನೇ ವರ್ಷಕ್ಕೆ ಮುನ್ನೆಡೆಸಿದ್ದಾರೆ. ಅವರಿಗೆ ಶ್ರಾವಣ ಬಳಗದ ಎಲ್ಲರ ಪರವಾಗಿ ಅಭಿನಂದನೆಗಳು ಮತ್ತು ವಂದನೆಗಳು.

ಈ ಸಂದರ್ಭದಲ್ಲಿ ನಾನು ಇತ್ತೀಚೆಗೆ ಕೈಗೊಂಡ ಸಿಕ್ಕಿಂ ಪ್ರವಾಸದ ಒಂದು ಲೇಖನವನ್ನು ಲಗತ್ತಿಸಿದ್ದೇನೆ. ಕೆಲವೊಮ್ಮೆ ತಲುಪುವ ಮೈಲಿಗಲ್ಲಿಗಿಂತ ಮಾರ್ಗದಲ್ಲಿ ದೊರೆಯುವ ಅನುಭವಗಳು ಹೇಗೆ ಮುಖ್ಯವಾಗಿಬಿಡುತ್ತವೆ ಎಂದು ಮತ್ತೊಮ್ಮೆ ಸಾಭೀತುಗೊಳಿಸುವ ಬರಹವಿದು. ಈ ಅವಕಾಶಕ್ಕಾಗಿ ಶ್ರಾವಣಕ್ಕೆ ಧನ್ಯವಾದಗಳು.

ಸಿಕ್ಕಿಂ- ಮಾರ್ಗಗಳದ್ದೇ ಮಜಾ

ಪ್ರಯಾಸವಿಲ್ಲದೆ ಪ್ರಯಾಣ ಮಾಡಬಹುದಾದ ಪ್ರವಾಸಗಳಿಗಿಂತ ಧೈರ್ಯವನ್ನು ಬೇಡುವ ಸಾಹಸ ಮಯವಾದ ಪ್ರವಾಸಗಳು ಬಹಳ ಭಿನ್ನವಾದವು.

ಸಾಧಾರಣ ಪ್ರವಾಸದಲ್ಲಿ ಸಾಕಷ್ಟು ಹಿತಕರ ಪ್ರಯಾಣ ಮಾಡುತ್ತ, ಉದ್ದಕ್ಕೂ ನಿದ್ದೆ, ಓದು, ಚಿಂತನೆ ಇಲ್ಲವೇ ಮಾತುಗಳಲ್ಲಿ ದಾರಿ ಸವೆಸಿ ಗಮ್ಯವನ್ನು ತಲುಪುತ್ತೇವೆ. ನಂತರ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ಸುತ್ತುತ್ತೇವೆ. ಆದರೆ ಸಾಹಸಮಯ ಪ್ರವಾಸದಲ್ಲಿ ಗಮ್ಯವನ್ನು ತಲುಪುವ ದಾರಿಯದ್ದೇ ಹೆಚ್ಚು ವಿಶೇಷ. ಕಿರಿದಾದ ಮಣ್ಣು- ಕಲ್ಲಿನ ರಸ್ತೆಗಳು, ಪಕ್ಕದಲ್ಲೇ ಮೃತ್ಯುಕೂಪಗಳಂತೆ ಬಾಯ್ದೆರೆದು ಕೊಳ್ಳುವ ಆಳವಾದ ಪ್ರಪಾತಗಳು, ಹೇರ್‌ ಪಿನ್‌ ತಿರುವು ಗಳು, ನಡುವೆ ದುಡುಮ್ಮನೆ ಉರುಳಿಬಂದು ರಸ್ತೆಗೆ ಬಂದು ಬಿದ್ದಿರುವ ಕಲ್ಲುಬಂಡೆಗಳು, ರಸ್ತೆಯ ಮೇಲಯೇ ಹರಿವ ಜಲಪಾತಗಳು, ಪಕ್ಕದಲ್ಲೇ ಹಿಮವನ್ನು ಹೊತ್ತು ನಿಂತ ಶಿಖರ ಶ್ರೇಣಿಗಳು, ಅಲ್ಲಲ್ಲಿ ಬೆಟ್ಟದ ಬಗಲೇ ಹರಿದು ಬಿದ್ದಂತೆ ಕಾಣುವ ಭೂ ಕುಸಿತಗಳು, ಹೀಗೆ ದಾರಿಯುದ್ದಕ್ಕೂ ಗಂಭೀರ ಭೀಷಣತೆಯಲ್ಲಿ ಕಾಣಸಿಗುವ ದೃಶ್ಯಗಳು ಪ್ರವಾಸಿಗರನ್ನು ಬೇರೊಂದು ಲೋಕಕ್ಕೆ ತಂದು ಬಿಡುತ್ತವೆ. ಮೈಲುಗಟ್ಟಲೆ ರಸ್ತೆಗಳಲ್ಲಿ ನಾಗರಿಕತೆಯ ಲವಲೇಷವೂ ಕಾಣದಂತಾದಾಗ ಪ್ರಕೃತಿಯ ರುದ್ರ ರಮಣೀಯತೆಯ ಮಡಿಲಲ್ಲಿ ಪ್ರವಾಸಿಗರು ಕುಬ್ಜರಾಗು ತ್ತಾರೆ. ಪ್ರಕೃತಿಯ ಅಗಾಧತೆಯ ಮುಂದೆ ಮುಗ್ಧ ಮಕ್ಕಳಾಗಿ ಬಿಡುತ್ತಾರೆ.

ಈ ರಸ್ತೆಗಳಲ್ಲಿ ಪ್ರಯಾಣ ಮಾಡುವುದೆಂದರೆ ಪ್ರಕೃತಿಯ ಪ್ರತಿ ಅಪಾಯದ ವಾಸನೆಗಳಲ್ಲಿ ಮನವನ್ನು ಅರಳಿಸಿ ಕೊಳ್ಳುವುದು ಎಂದರ್ಥ. ಅಡ್ರಿನಲೀನ್‌ ರಸದ ಹರಿತದ ಉದ್ವೇಗ, ಭಯ ಚಕಿತ ಆನಂದಗಳಲ್ಲಿ ಮಿಂದೇಳುತ್ತ ಬದುಕಿರುವ ಪ್ರತಿ ಘಳಿಗೆಗಳನ್ನು ಆನಂದಿಸುವುದು ಎಂದೇ ಆಗುತ್ತದೆ. ಈ ರೀತಿಯ ಸಾಹಸಮಯ ಪ್ರವಾಸ ಗಳನ್ನು ಹುಡುಕಿ ಹೋಗುವ ಪ್ರವಾಸಿಗರ ಜಾತಿಯೇ ಬೇರೆಯೆನ್ನ ಬಹುದು. ಪ್ರತಿ ತಿರುವು ಬಂದಾಗ ಕೆಳಗಿನ ಕಂದರವನ್ನು ನೋಡಿ ಹೃದಯ ಬಾಯಿಗೆ ಬರುತ್ತದೆ. ಎದುರಿನಿಂದ ವಾಹನ ವೊಂದು ಬಂದು ಜೀಪಿನ ಚಕ್ರಗಳು ರಸ್ತೆಯ ಅಂಚನ್ನು ಆತಿಡಿದು ಇಂಚಿಂಚೇ ಜರುಗುವಾಗ ಉಸಿರಾಡುವುದು ನಿಲ್ಲುತ್ತದೆ.

ಇಪ್ಪತ್ನಾಲ್ಕು ತಾಸು ಧುಮ್ಮಿಕ್ಕಿ ಹರಿವ ಜಲಪಾತದ ಜಬರ್ದಸ್ತಿಗೆ ಮೆತ್ತಗಾಗಿ ಸೋತುನಿಂತ ಮುಂದಿನ ರಸ್ತೆಯನ್ನು ನೋಡಿದಾಗ ಕೂತ ವಾಹನ ಅಲ್ಲೇ ಕುಸಿಯದೆ ಮುಂದಿನ ಭಾಗವನ್ನು ತಲುಪ ಬಲ್ಲದೇ? ಎಂದು ಮನಸ್ಸು ಶಂಕಿಸುತ್ತದೆ. ಆಹಾ… ಬದುಕಿದೆವು ಎಂದು ನಿಟ್ಟುಸಿರು ಬಿಟ್ಟು ಒಂದಿಷ್ಟು ಖುಷಿಪಡುವಾಗಲೇ ಪಕ್ಕದ ಬೆಟ್ಟದಿಂದ ಉರುಳಿ ರಸ್ತೆಯ ಮೇಲಿಂದ ಕೆಳಗಿನ ಕಂದಕದ ಕಲ್ಲಿನ ಮೇಲೆ ಬ್ಯಾಲೆನ್ಸ್‌ ಮಾಡುತ್ತ ನಿಂತ ಮರದಡಿ ನಿಮ್ಮ ಜೀಪು ಹಾದುಹೋಗು ವಾಗ ತಲೆಯನ್ನು ಒಮ್ಮೆ ಹಿಡಿದು ಕೂರ ಬೇಕಾಗುತ್ತದೆ. ರಸ್ತೆಯ ಮಧ್ಯಕ್ಕೆ ಬಂದು ಬಿದ್ದ ಕಲ್ಲಿನ ಎಡಕ್ಕೆ ಹೋಗುವುದೋ, ಬಲಕ್ಕೆ ಹೋದರೆ ಅದು ಎರಡಿಂಚು ದೊಡ್ಡದಿದೆಯೋ ಎಂದು ಎಣಿಸುವಾಗ ಡ್ರೈವರ್‌ ಜೊತೆಗೆ ನೀವೂ ಗಾಡಿಯನ್ನು ಚಲಾಯಿಸ ತೊಡಗಿರುತ್ತೀರಿ.

ಈ ನಡುವೆ ಬರುವ ನೂರಾರು ಸೇತುವೆಗಳು ಗಢ-ಗಢ ಎಂದು ನಿಮ್ಮ ಕರ್ಣಗಳನ್ನು ತುಂಬಿ, ಉದರದಲ್ಲಿರುವ ಎಲ್ಲವನ್ನೂ ಕುಲು-ಕುಲು ಕುಕ್ಕಿ ಇಡೀ ಮೈಯನ್ನು ಅದುರಿಸುತ್ತವೆ. ಇಂತಹ ಸೇತುವೆಯನ್ನು ಈಗಾಗಲೇ ಹೊಕ್ಕ ನಂತರ ಸೇತುವೆಯ ಇನ್ನೊಂದು ಭಾಗ ರಿಪೇರಿ ಯಲ್ಲಿದ್ದು, ಅವರು ಕಬ್ಬಿಣದ ಮಣೆಯೊಂದನ್ನು ಹಾಸಿ ಇದರ ಮೇಲೆ ನಿಧಾನವಾಗಿ ನಿಮ್ಮ ಎಡ ಚಕ್ರವನ್ನು ಬಳಸಿ ಚಲಿಸಿ ಎನ್ನುವಾಗ ಮೈನಸ್‌ ತಾಪಮಾನದಲ್ಲಿ ರಭಸವಾಗಿ ಹರಿವ ಕೆಳಗಿನ ನೀರಿನ ತಂಪು ಹೇಗೋ ಹತ್ತಿರವಾಗಿ ಮೈ ನಡುಗಿಸುತ್ತದೆ.

ಇಲ್ಲಿ ನೆಟ್ವರ್ಕ್‌ ಇರುವುದೇ ಪುಣ್ಯ ಎಂದು ಖುಷಿಪಡು ವಾಗಲೇ, ಈ ರಸ್ತೆಯಲ್ಲಿ ಏನಾದರೂ ಅವಘಡಗಳಾದರೆ ಇಲ್ಲಿಗೆ ಸಹಾಯ ತಲುಪುತ್ತದೆ ಎನ್ನುವುದು ಕಾಗದದ ಮೇಲಿನ ಮರೀಚಿಕೆಯಷ್ಟೆ ಎಂಬ ಪ್ರಜ್ಞೆ ಒಮ್ಮೆ ಚುರಕ್ಕನೆ ಜಾಗೃತವಾಗುತ್ತದೆ. ಇಂತಹ ಪ್ರವಾಸಗಳಲ್ಲಿ ಗಮ್ಯವನ್ನು ತಲುಪಿದ್ದೇ ಹೆಗ್ಗಳಿಕೆ. ಇಲ್ಲಿ ಕೇಕ್‌ ದೇ ದೊಡ್ಡಪಾಲು. ಗಮ್ಯವನ್ನು ತಲುಪಿ ಆಸ್ವಾದಿಸುವುದು ಕೇಕ್‌ ನ ಮೇಲಿಟ್ಟ ಚೆರ್ರಿ ಹಣ್ಣಿನ ಪ್ರಮಾಣದ್ದು.

ಭಾರತದ ಕೆಲವು ಭಾಗಗಳು ಅವುಗಳ ದುರ್ಗಮ ಭೂಪ್ರದೇಶಗಳಿಗೆಂದೇ ಪ್ರಸಿದ್ಧ ವಾದವು, ಉತ್ತರ ಪೂರ್ವ ರಾಜ್ಯಗಳಾದ ಅರುಣಾಚಲ ಪ್ರದೇಶ, ಮಿಜೋರಾಂ, ಅಸ್ಸಾಂ, ಮೇಘಾಲಯ,ತ್ರಿಪುರ, ಮಣಿಪುರ, ನಾಗಾಲ್ಯಾಂಡ್‌ ಗಳಲ್ಲಿ ಇಂತಹ  ರುದ್ರ ರಮಣೀಯ ಪ್ರದೇಶಗಳಿವೆ. ಈ ಏಳು ರಾಜ್ಯ ಗಳನ್ನು ಒತ್ತಟ್ಟಿಗೆ ‘ಏಳು ಸಹೋದರಿಯರು‘  ಎಂದು ಕರೆಯುತ್ತಾರೆ. ಇವುಗಳ ಜೊತೆಗೆ ಬರುವ ಸಿಕ್ಕಿಂ ರಾಜ್ಯವನ್ನು ಮಾತ್ರ ‘ಸಹೋದರ ರಾಜ್ಯʼ ವೆಂದು ಕರೆಯುತ್ತಾರೆ. ಸಿಕ್ಕಿಂ ಇತರೆ ರಾಜ್ಯ ಗಳಿಗಿಂತ ಬಹಳ ದೂರವಿರುವುದು ಇದಕ್ಕೆ ಮುಖ್ಯ ಕಾರಣ. ಮಿಕ್ಕ ರಾಜ್ಯಗಳ ಗಡಿರೇಖೆಗಳು ಒಂದಕ್ಕೊಂದು ತಾಗಿದರೆ, ಸಿಕ್ಕಿಂ ರಾಜ್ಯ ಟಿಬೆಟ್‌, ಚೀನಾ, ಭೂತಾನ್‌ ದೇಶಗಳು ಮತ್ತು ಪಶ್ಚಿಮ ಬಂಗಾಳ ರಾಜ್ಯದ ಜೊತೆ ತನ್ನ ಗಡಿಯನ್ನು ಗುರುತಿಸಿ ಕೊಂಡಿದೆ. ಹಾಗಾಗಿ ಇಲ್ಲಿನ ಚಟುವಟಿಕೆಗಳೇ ಬೇರೆ. ರಾಜ್ಯದ ತುಂಬಾ ಮಿಲಿಟರಿ ಕಾರ್ಯಾಚರಣೆಗಳು, ಕ್ಯಾಂಪ್‌ ಗಳು, ಚೆಕ್‌ ಪೋಸ್ಟ್‌ ಗಳು ಹರಡಿಕೊಂಡಿವೆ. ಏಪ್ರಿಲ್‌ ನಿಂದ ಜೂನ್‌ ವರೆಗೆ ನಂತರ ಅಕ್ಟೋಬರ್‌ ನಿಂದ ಡಿಸೆಂಬರಿನವರೆಗೆ ಮಾತ್ರ ಇದು ಪ್ರವಾಸ ಮಾಡಲು ಸೂಕ್ತ ಸ್ಥಳ. ನಡುವೆ ನಡೆವ ಪ್ರಾಕೃತಿಕ ಅವಘಡಗಳನ್ನು ಸರಿಪಡಿಸುವ ಕಾರ್ಯ ಇಡೀ ವರ್ಷ ಇಲ್ಲಿ ನಡೆಯುತ್ತಿರುತ್ತದೆ. ಇಂತಹ ದುರ್ಗಮ ಪ್ರದೇಶ ಇತ್ತೀಚೆಗೆ ಹೆಚ್ಚು -ಹೆಚ್ಚು ಪ್ರವಾಸಿಗರಿಗೆ ತೆರೆದುಕೊಳ್ಳುತ್ತಿದೆ.

ಈ ಬಾರಿ ನಾವುಗಳು ಆರಿಸಿಕೊಂಡದ್ದು ಇಂತವೇ ಕೆಲವು ಪ್ರವಾಸೀ ಸ್ಥಳಗಳನ್ನು. ಅಲ್ಲಿನ ಕೆಲವು ದುರ್ಗಮ ಗಮ್ಯ ಗಳನ್ನು. ಗಮ್ಯವನ್ನು ತಲುಪಲು ಇರುವ ರುದ್ರರಮಣೀಯ ಮಾರ್ಗಗಳನ್ನು. ಸಿಕ್ಕಿಂನಲ್ಲಿ ಸಮತಟ್ಟಾದ ಜಾಗಕ್ಕೆ ಕೊರತೆಯಿದೆ. ಹಾಗಾಗಿ ಇಲ್ಲಿ ಮಟ್ಟಸ ನೆಲಕ್ಕೆ ಅಪಾರ ಬೇಡಿಕೆಯಿದೆ. ಖರೀದಿಸಲು ಇವು ಅತ್ಯಂತ ದುಬಾರಿ ಕೆಲವೊಂದು ಮನೆಗಳ ನೆಲದ ಹಂತವನ್ನು ತಲುಪಲು ಮೂವತ್ತು ಮೆಟ್ಟಿಲು ಹತ್ತಿ ಹೋಗುವುದು ಅತ್ಯಂತ ಸಾಮಾನ್ಯ. ಮನುಷ್ಯ ವಸತಿಯ ಸುತ್ತಲಿರುವ ಪ್ರಕೃತಿ ಎನ್ನುವುದಕ್ಕಿಂತ ಪ್ರಕೃತಿಯ ಮಡಿಲನ್ನೇ ತೊಟ್ಟಿಲಾಗಿಸಿ ಕೊಳ್ಳಲು ಮನುಷ್ಯ ಇಲ್ಲಿ ಅದನ್ನು ಕೆತ್ತಿ, ಕೆತ್ತಿ ವಿಕೃತವಾಗಿಸಿ ದ್ದಾನೆ ಎನ್ನಬಹುದು. ಇದು ರಾಜಧಾನಿ ಗ್ಯಾಂಗ್ಟಕ್‌ ನಿಂದ ಹಿಡಿದು, ಸಿಕ್ಕಿಂನ ಗಡಿರೇಖೆ ಯವರೆಗೆ ಕಾಣಸಿಗುವ ಸಾಮಾನ್ಯ ದೃಶ್ಯ. ಸಿಕ್ಕಿಂ ನಲ್ಲಿ ಕಾಣಸಿಗುವ ವಿಶಾಲವಾದ ಸಮತಟ್ಟು ಜಾಗಗಳೆಂದರೆ ಅವು ಕಣಿವೆಯ ಹಾಸುಗಳು.

ತಗ್ಗೆಂದಮೇಲೆ ಸುತ್ತಲಿನ ಶಿಖರ ಶ್ರೇಣಿಯಿಂದ ಗಂಗೆ ಇಳಿಯುತ್ತಾಳೆ. ಈ ಕಣಿವೆಯ ಗರ್ಭದಲ್ಲೇ ನದಿಗಳು ಹರಿಯುತ್ತವೆ. ಹಾಗಾಗಿ ಕಣಿವೆಗಳು ಮನೆ ಮಾಡಿಕೊಂಡು ಬದುಕಲು ಇರುವ ಜಾಗಗಳಲ್ಲ. ಈ ಕಾರಣ ಮರ- ಬೆಟ್ಟ ಗಳನ್ನು ಕಡಿದು ಮೆಟ್ಟಿಲುಗಳನ್ನು ಹಾಕಿ ಒಂದಷ್ಟು ಸಮನಾದ ಜಾಗಗಳನ್ನು ಸೃಷ್ಟಿಸುತ್ತಾರೆ. ಪ್ರತಿದಿನ ಬೆಟ್ಟ- ಗುಡ್ಡಗಳನ್ನು ಹತ್ತುವ ಕಸುವಿನ ಜನರಾದ ಕಾರಣ ದಿನಕ್ಕೆ ಹತ್ತಾರು ಬಾರಿ ತಮ್ಮ ಮನೆಗಳಿಗೆ ಹತ್ತಿ-ಇಳಿದು ಮಾಡುತ್ತಾರೆ. ಶಾಲೆಗೋ, ಆಸ್ಪತ್ರೆಗೋ ಹೋಗ ಬೇಕೆಂದರೆ ಗುಡ್ಡ ಹತ್ತಿ ಬೆಟ್ಟ ಮಾಡದೆ, ಬೆಟ್ಟಗಳನ್ನೇ ಹತ್ತಿಳಿದು, ಇದಿಲ್ಲಿ ಸಾಮಾನ್ಯ ಎನ್ನುತ್ತಾರೆ.

ವಾಹನಗಳು ಸ್ಥಳಗಳಿಗೆ ತಲುಪಲು ಬೆಟ್ಟಗಳ ತುಂಬ ರಸ್ತೆಗಳನ್ನು ಕೊರೆದಿದ್ದಾರೆ. ಹಾವಿನಂತೆ ಬೆಟ್ಟಗಳ ಸುತ್ತನ್ನೆಲ್ಲ ತಬ್ಬಿ ಹರಿವ ಈ ರಸ್ತೆಗಳು ಸದಾ ಸಂಕಷ್ಟಕ್ಕೆ ಬೀಳುತ್ತವೆ. ಯಾವ ಬೇಗುದಿ ಯಲ್ಲೋ ಬೆಟ್ಟದ ಬದಿಯೊಂದು ನಿಟ್ಟುಸಿರು ಬಿಟ್ಟು ಕುಸಿಯಿತೆಂದರೆ ರಸ್ತೆಯ ಹರಿವು ಕೊನೆಯಾಗಿಬಿಡುತ್ತದೆ.

ತೇಲುವ ಮುಗಿಲುಗಳನ್ನು ಶಿಖರ ಶೃಂಗಗಳು ತಡೆದು ಸವರಿದವೋ, ನಸು ನಾಚಿ ಹರ್ಷಧ್ವನಿ ಯೊರಡಿಸಿ ಧಾರಾಕಾರವಾಗಿ ಮಳೆ ಸುರಿದು ಬಿಡುತ್ತದೆ. ಒಡಲನ್ನು ಹೊಕ್ಕು ಹರಿವ ಜೀವ ರಸಕ್ಕೆ ಭೂಮಿ ತಣಿದು ಕೊಂಚ ಮೆತ್ತಗಾದರೂ, ಗಢಚಿಕ್ಕುವ ಶಬ್ಧದೊಂದಿಗೆ ಕಲ್ಲು ಬಂಡೆಗಳು ಉರುಳಿ, ಮನುಷ್ಯನು ತೆವಳುವ ಮಾರ್ಗಕ್ಕೆ ಗಿಡ-ಮರಗಳ ಸಮೇತ ತಡೆಹಾಕಿ ತಮಾಷೆ ನೋಡುತ್ತವೆ. ಸಾಧ್ಯವಾದರೆ ನನ್ನನ್ನು ತಡೆದು ನಿಲ್ಲಿಸು ಎನ್ನುವ ಸೊಕ್ಕಿನ ಹೊಸ ಹರೆಯದ ಜಲಪಾತಗಳು’ನಾನು ಇಲ್ಲಿಯೇ ಧುಮ್ಮಿಕ್ಕುತ್ತೇನೆʼ ಎಂದು ನಿರ್ಧರಿಸಿದ ದಿನ ಮನುಷ್ಯನು ಹರಸಾಹಸ ಮಾಡಿ ನಿರ್ಮಿಸಿದ ಈ ರಸ್ತೆಗಳು ಛಿದ್ರವಾಗಿ ಒಳಗಿನ ಕಬ್ಬಿಣ, ಗಾರೆಯ ಶಿಥಿಲ ಹಂದರವನ್ನು ನಗ್ನವಾಗಿ ತೆರೆದಿಟ್ಟು ಕೈ ಚೆಲ್ಲಿ ಬಿಡುತ್ತವೆ.

ಶ್ವೇತ ಸುಂದರಿಯ ಮುಸುಕು ಹೊದ್ದ ಹಿಮಾವೃತ ರಸ್ತೆಯ ಬದಿಗಳಂತೂ ಪ್ರವಾಸಿಗರನ್ನು ಆಯಾಸ್ಕಾಂತದಂತೆ ಕರೆಯುತ್ತವೆ. ತಾವು ಸಾಗುತ್ತಿದ್ದ ವಾಹನಗಳನ್ನು ನಿಲ್ಲಿಸಿ, ಹೀಗೆ ಸುರಿದು ನಿಂತ ಸ್ನಿಗ್ಧ ಹಿಮ ಸುಂದರಿಯ ಜೊತೆ ಸುಖಿಸೋಣವೆಂದು ಪ್ರಯತ್ನಿಸಿದ ಏಳು ಜನ ಪ್ರವಾಸಿಗರು ಇದೇ ಏಪ್ರಿಲ್‌ ನಲ್ಲಿ ಸರ್ರನೆ ಜಾರಿ, ರಸ್ತೆಯ ಆಚೆ ಬದಿಯಿದ್ದ ಕಣಿವೆಗೆ ಬಿದ್ದು ಪ್ರಕೃತಿಯಲ್ಲಿ ಒಂದಾಗಿ ಹೋದದ್ದು ಈಗ ಇತಿಹಾಸ. ಸಿಕ್ಕಿಂನ ಪ್ರವಾಸಕ್ಕೆ ಏಪ್ರಿಲ್‌ ಮತ್ತು ಮೇ ತಿಂಗಳುಗಳು ಅತ್ಯಂತ ಸೂಕ್ತವಾದರೂ, ಇದೇ ಮೇ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಯ ಕಾರಣ ೨೨೦ ಜನ ಪ್ರವಾಸಿಗರು ಮುಚ್ಚಿಹೋದ ರಸ್ತೆಯ ನಡುವೆಯೇ ಸಿಲುಕಿ ಅವರನ್ನು ಭಾರತದ ಸೇನೆ ರಕ್ಷಿಸಿ, ಸುರಕ್ಷಿತ ಸ್ಥಳಗಳಿಗೆ ಸಾಗಿಸಬೇಕಾಯಿತು. ಇಡೀ ಪ್ರಪಂಚ ದಲ್ಲಿ ಆಗುತ್ತಿರುವ ಪ್ರಾಕೃತಿಕ ಏರುಪೇರುಗಳ ಕಾರಣ ಯಾವ ತಿಂಗಳ ಹವಾಮಾನ ಸಿಕ್ಕಿಂನ ದುರ್ಗಮ ರಸ್ತೆಗಳನ್ನು ಕ್ರಮಿಸಲು ಸೂಕ್ತ ಎಂದು ಹೇಳುವುದು ದುಸ್ತರ ವಾಗುತ್ತಿದೆ. ಆದರೆ, ಅಲ್ಲಿನ ಜನರು ಇವೆಲ್ಲಕ್ಕೂ ಬದುಕನ್ನು ಹೊಂದಿಸಿ ಕೊಂಡು ಸಾಗಿದ್ದಾರೆ. ಇಲ್ಲಿ ಸಾಮಾನ್ಯ ಜನರ ಬದುಕು ಅತ್ಯಂತ ಕಷ್ಟಕರ ವಾದದ್ದು. ಮಕ್ಕಳು, ಹಿರಿಯರು, ಬಲಹೀನರಿಗೆ ಇದು ವಾಸಸ್ಥಳವಲ್ಲ. ಅರಣ್ಯ ನೀತಿಗಳೇ ಇಲ್ಲಿನ ಜನಜೀವನವನ್ನೂ ಆಳುತ್ತವೆ. ಹಾಗಾಗಿ ಈ ಎರಡರ ನಡುವೆ ಆಗಾಗ ಸಂಘರ್ಷಣೆಗಳು ನಡೆಯುತ್ತಲೇ ಇರುತ್ತವೆ.

ಸಧ್ಯಕ್ಕೆ ಇಲ್ಲಿ ಪ್ರಕೃತಿಯದೇ ಮೇಲುಗೈ. ಇದು ಜನ ಸಂಖ್ಯೆ ಯನ್ನು ಹತೋಟಿಯಲ್ಲಿಟ್ಟಿದೆ. ಆದರೆ, ಭೇಟಿ ನೀಡುವ ನಮ್ಮಂತಹ ಪ್ರವಾಸಿಗರ ಸಂಖ್ಯೆ ಬೆಳೆಯುತ್ತಿದೆ. ಈ ಹೊಸತನ್ನು ಒಂದಿಷ್ಟು ಕಹಿಯ ಜೊತೆಯೇ ಇಲ್ಲಿನ ಜನರು ಸ್ವಾಗತಿಸುತ್ತಾರೆ. ಹಾಗೇನಾದರೂ ಜನಸಂಖ್ಯಾ ಸ್ಫೋಟ ವಾದಲ್ಲಿ ಸಿಕ್ಕಿಂ ಪ್ರವಾಸೀ ಸ್ಥಳವಾಗಿ ಉಳಿಯುವುದಿಲ್ಲ. ಅದಕ್ಕೆಂದೇ ಇಲ್ಲಿನ ಸರ್ಕಾರ ಇಲ್ಲಿಯದೇ ಬುಡಕಟ್ಟು ಜನರನ್ನು ಬಿಟ್ಟು ಬೇರೆಯವರು ಇಲ್ಲಿ ಭೂಮಿಯನ್ನು ಕೊಳ್ಳುವಂತಿಲ್ಲ ಎಂಬ ಶಾಸನವನ್ನು ಹೊರಡಿಸಿದೆ. ಆದರೆ, ಕೊಂಡವರು ಬೇರೆಯವರಿಗೆ ಗುತ್ತಿಗೆ ಕೊಡುವ ಪರಿಪಾಠ ಬೆಳೆದು ಇಲ್ಲಿ ಸಾಕಷ್ಟು ಸಂಖ್ಯೆಯ ಹೋಟೆಲುಗಳು, ರೆಸ್ಟುರಾಂಟ್‌ ಗಳು ಹುಟ್ಟಿಕೊಂಡುಬೆಳೆಯುತ್ತಿವೆ.

ಸಿಕ್ಕಿಂನಲ್ಲಿ ಮುಖ್ಯವಾಗಿ ನೋಡಬಹುದಾದ ಜಾಗಗಳೆಂದರೆ, ಗ್ಯಾಂಗ್ಟಕ್‌, ಪೆಲ್ಲಿಂಗ್‌,17,700 ಅಡಿ ಎತ್ತರದಲ್ಲಿರುವ ಗುರುದಂಗ್ಮಾರ್‌ ಸರೋವರ, ೧೫,೩೦೦ ಅಡಿ ಎತ್ತರದಲ್ಲಿರುವ ಝೀರೋ ಪಾಯಿಂಟ್‌, ನಥುಲಾ ಪಾಸ್‌, ಕಾಂಚನ್ ಝೊಂಗ ರಾಷ್ಟ್ರೀಯ ಉದ್ಯಾನವನ, ಯುಮ್‌ ತಾಂಗ್‌ ವ್ಯಾಲಿ, ಚಂಗು ಲೇಕ್‌, ಲಾಚುಂಗ್‌, ಲಾಚೆನ್‌, ರುಮ್ಟೆಕ್‌ ಮೊನಾಸ್ಟೆರಿ ಚಾರಣಿಗರಿಗಾಗಿ ಕಾಂಚನ್ ಝೊಂಗ ಬೇಸ್‌ ಕ್ಯಾಂಪ್‌, ಸಿಂಗಲಿಲ ರಿಡ್ಜ್‌ , ಗೊಚಾಲ ಹೀಗೆ ಹಲವಾರು ಜಾಗಗಳಿವೆ. ಇವನ್ನೆಲ್ಲ ನೋಡಲು ಮನಸ್ಸಿದ್ದರೆ ದುರ್ಗಮ ಮಾರ್ಗಗಳೂ ನವಿರೇಳಿಸಬಲ್ಲವಾಗುತ್ತವೆ.

✍️ಡಾ.ಪ್ರೇಮಲತಾ ಬಿ.
ಲಂಡನ್, ಇಂಗ್ಲೆಂಡ್