‘ಕನ್ನಡ ಸಾಹಿತ್ಯದಲ್ಲಿ ಮಹಿಳಾ ಕಥೆಗಳ ಹರಿವು ದೊಡ್ಡದು, ವೀಣಾ ಶಾಂತೇಶ್ವರ ಅವರ ನಂತರ ಅನೇಕ ಕಥೆಗಾರ್ತಿಯರು ಕಥನ ಲೋಕವನ್ನು ವಿಸ್ತರಿಸಿದ್ದಾರೆ, ಅದರಲ್ಲಿ ಸುನಂದಾ ಕಡಮೆ ತಮ್ಮದೇ ಆದ ವಿಶಿಷ್ಟ ವಸ್ತು,ಆಶಯ,ಸೂಕ್ಷ್ಮತೆ ಮತ್ತು ಸಮಚಿತ್ತದ ನಿರೂಪಣೆಗಳಿಂದ ಹೆಸರು ಮಾಡಿದ್ದಾರೆ, ರಭಸವಿಲ್ಲದೇ ಸಮಾಧಾನ ಚಿತ್ತ ದಿಂದ ನಿರಂತರವಾಗಿ ಬರೆಯುತ್ತಿರುವ ಅವರ ಬರವಣಿಗೆ ಪರಿಣಾಮಕಾರಿಯಾಗಿದೆ, ಹಾಗಾಗಿ ನಾನು ಮತ್ತು ಎಚ್.ಎನ್.ಮುರುಳೀಧರ ಇಬ್ಬರೂ ಚರ್ಚಿಸಿ, ಕಥೆಗಾರ್ತಿ ಸುನಂದಾ ಕಡಮೆ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆವು’ ಎಂದು ಸಾವಿತ್ರಮ್ಮ- ಪ್ರೊ.ಎಂ.ವೀ. ಸೀತಾರಾಮಯ್ಯ ಪುರಸ್ಕಾರದ ಆಯ್ಕೆ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಡಾ.ಎಚ್. ಎಲ್. ಪುಷ್ಪಾರವರು ಮಾತನಾಡಿದರು.

ಈ ಪ್ರಶಸ್ತಿಯು ರೂ. 30.000 /- ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಕಾರ್ಯಕ್ರಮವು ದಿ: 09/09/2023ರಂದು ಬೆಂಗಳೂರಿನ ಎನ್.ಆರ್ ಕಾಲನಿಯಲ್ಲಿರುವ ಬಿ.ಎಂ.ಶ್ರೀ ಪ್ರತಿಷ್ಠಾನ ಮತ್ತು ಪ್ರೊ.ಎಂ.ವಿ. ಸೀತಾರಾಮಯ್ಯ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ನೆರವೇರಿತು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಪ್ರೊ.ಪಿ.ವಿ.ನಾರಾಯಣ ಅವರು ‘ಇದು ಸೃಜನಶೀಲ ಸಾಹಿತ್ಯಕ್ಕೆ ಕೊಡ ಮಾಡುವ ಪ್ರಶಸ್ತಿ, ಕಡಮೆಯವರು ನಮ್ಮದೇ ಪ್ರತಿಷ್ಠಾನದಿಂದ ಈ ಮೊದಲು ಡಾ.ವಿಜಯಾ ಸುಬ್ಬರಾಜ್ ಪ್ರಶಸ್ತಿ ಯನ್ನು ಪಡೆದಿದ್ದರು, ಆಗಲೂ ನಾನು ಅವರ ಸಾಹಿತ್ಯ ಸೃಷ್ಟಿಯನ್ನು ಗಮನಿಸಿದ್ದೆ, ಈ ಆಯ್ಕೆ ನಮಗೆ ಸಮಾಧಾನ ತಂದಿದೆ’ ಎಂದರು.

ಪ್ರಶಸ್ತಿ ಸ್ವೀಕರಿಸಿದ ಕಥೆಗಾರ್ತಿ ಸುನಂದಾ ಕಡಮೆ ಮಾತನಾಡಿ ‘ಹಾವು ಪೊರೆ ಕಳಚಿದಂತೆ ನಮ್ಮ ಈ ಬರವಣಿಗೆ, ಅಂತರಂಗದ ದಿಗಿಲು, ದುಗುಡ, ದುಮ್ಮಾನಗಳ ಸಂಘರ್ಷವನ್ನು ಹೊರ ಚರ್ಮಕ್ಕೆ ತಂದು ಸಂಕಟದಿಂದ ಬಿಡುಗಡೆ ಹೊಂದುವ ಪ್ರಕ್ರಿಯೆ ಇದು. ಪೊರೆ ಕಳಚಿ ಕೊಳ್ಳದ ಹಾವು ಸಾವಿಗೆ ಹತ್ತಿರವಾಗು ತ್ತದೆ, ಲೇಖಕಿಯರೂ ಅಷ್ಟೇ, ಪೊರೆಕಳಚಿ ಹೊಸ ಜೀವ ಪಡೆದು ಮುನ್ನಡೆಯುವ ಸಲುವಾಗಿ ನಾನು ತೀವ್ರವಾದ ಬರವಣಿಗೆಗೆ ತೊಡಗಿ ಕೊಳ್ಳುತ್ತೇನೆ‘ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮತ್ತು ಪ್ರತಿಷ್ಠಾನದ ಅಧ್ಯಕ್ಷರೂ ಆಗಿರುವ ಡಾ.ಬೈರಮಂಗಲ ರಾಮೇಗೌಡ ಅವರು ಮಾತನಾಡಿ ‘ನಮ್ಮ ಪ್ರತಿಷ್ಠಾನ ಹಲವು ಲೇಖಕರಿಗೆ ಈ ತರಹದ ಪುರಸ್ಕಾರಗಳನ್ನು ನೀಡುತ್ತ ಪ್ರೋತ್ಸಾಹಿಸುತ್ತ ಬಂದಿದೆ, ಈ ಪ್ರಶಸ್ತಿಯು ಒಂದು ವರ್ಷ ಸಂಶೋಧನೆಯಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು, ಇನ್ನೊಂದು ವರ್ಷ ನಾಡು ನುಡಿಗಾಗಿ ಹೋರಾಟ ನಡೆಸುವವರನ್ನು, ಮಗದೊಂದು ವರ್ಷ ಸೃಜನಶೀಲ ಸಾಹಿತಿಗಳನ್ನ ಹುಡುಕಿ, ಆಯ್ಕೆ ಸಮಿತಿ ರಚಿಸಿ, ಸಮರ್ಥರಿಗೆ ಪುರಸ್ಕಾರ ನೀಡುತ್ತ ಬಂದಿದೆ. ಪ್ರೊ.ಎಂ.ವಿ.ಸೀ ಕುಟುಂಬದವರು ಸುಮಾರು ಏಳೂವರೆ ಲಕ್ಷ ರೂಪಾಯಿಗಳಷ್ಟು ದತ್ತಿಯನ್ನು ನಮ್ಮ ಪ್ರತಿಷ್ಠಾನ ದಲ್ಲಿ ಇರಿಸಿದ್ದು, ಅದರಿಂದ ಬಂದ ಬಡ್ಡಿಯ ಮೊತ್ತವನ್ನು ಪುರಸ್ಕೃತರಿಗೆ ನೀಡುತ್ತಿದ್ದೇವೆ’ ಎಂದು ವಿವರಿಸಿದರು.

ವಿಜಯಾ ಸುಬ್ಬರಾವ್, ರಾಮಪ್ರಸಾದ್, ರಾಧಾಕೃಷ್ಣ, ಭಾಸ್ಕರ ಎಂ.ವಿ, ಪ್ರಕಾಶ ಕಡಮೆ, ಗಜಾನನ ಶೆಟ್ಟಿ, ಪ್ರಜ್ವಲ ಜೆಕೆ, ಮುಂತಾದವರು ಉಪ್ಥಿತರಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ಪ್ರೊ.ಶಾಂತರಾಜು ಸ್ವಾಗತಿಸಿದರು, ರವಿಂದ್ರನಾಥ್ ಕಾರ್ಯಕ್ರಮ ನಿರೂಪಿಸಿದರು.


