ಏನೆಂದು ಪೊಗಳಲೇ ಗೋಪಿ
ಮುದ್ದುಕೃಷ್ಣನ ಬಾಲಲೀಲೆಗಳನು ॥ಪ॥
ನಂದನ ಕಂದ ಈ ಗೋವಿಂದನ
ವಿಶ್ವವಂದ್ಯನ ದೈವಲೀಲೆಗಳನು ॥ಅ.ಪ॥

ಹುಟ್ಟಿದೊಡನೆಯೇ ಭಟರಿಗೆ ಮತ್ತು ತಂದ
ಭೋರ್ಗರೆವ ಯಮುನೆಯಲಿ ದಾರಿ ತೋರ್ದ
ವಿಷವೂಡಲು ಬಂದ ಪೂತನಿಯ ಕೊಂದ
ನಂಜಿನ ಕಾಳಿಂಗನನ ಅಂಜದೆ ಮರ್ಧಿಸಿದ ॥೧॥

ವೃಕ್ಷ ರೂಪಿ ರಾಕ್ಷಸರನು ಬಿಡದೆ ತರಿದಿರಲು
ದುರುಳ ಶಕಟಾಸುರನನು ಶಿಕ್ಷಿಸಿರಲು
ಕಾಡಿನಲಿ ತೋರಿದ ಬೆಂಕಿಯ ನುಂಗಿರಲು
ಅತಿವೃಷ್ಟಿಯಲಿ ಗೋವರ್ಧನ ಗಿರಿ ಎತ್ತಿರಲು॥೨॥

ಹಾಲು ಮಾರಲು ಹೊರಟ ಗೋಪಿಯರ
ಮಡಿಕೆ ಕುಡಿಕೆಗಳ ಅವನೇ ಒಡೆದನಮ್ಮ
ಜಳಕ ಮಾಡುತ್ತಿರುವ ಮುಗ್ಧ ಹೆಂಗೆಳೆಯರ
ವಸ್ತ್ರಗಳ ಕದ್ದು ಮುಚ್ಚಿಟ್ಟು ಕಾಡಿದನಮ್ಮ ॥೩॥

ಮನೆ ಮನೆಗೆ ಹೋಗಿ ಬೆಣ್ಣೆ ಕದ್ದನಮ್ಮ
ತಾಯಿಗೆ ಬಾಯಲಿ ಜಗವ ತೋರಿದನಮ್ಮ
ಏನು ಮಾಡಿದರೂ ನಮಗಿವ ಪ್ರಿಯನಮ್ಮ
ಮನೆ ಮನೆಯಲ್ಲೂ ಆನಂದ ಹರಿಸಿಹನಮ್ಮ॥೪॥

✍️ಸುಜಾತಾ ರವೀಶ್ 
ಮೈಸೂರು