ನನ್ನಪ್ಪ,ಆಗ ಮುಲ್ಕಿ ಪಾಸಾದ್ದರಿಂದ ಗಾಂವಟಿ ಶಾಲೆಯಲ್ಲಿ ಮಾಸ್ತರಕಿ ಮಾಡುತಿದ್ದ. ಬಹುಶಃ ತದಡಿಯಲ್ಲಿ ಕೆಲ ಕಾಲ ನೌಕರಿ ಮಾಡಿರ- ಬಹುದು.ಒಬ್ಬನೇ ಮಗನಾದ್ದರಿಂದ ದೂರ ದೂರ ಎಲ್ಲಾದರೂ ವರ್ಗಾವಣೆ ಮಾಡ ಬಹುದು ಎಂದು ಹೆದರಿದ ನನ್ನಜ್ಜ-ಅಜ್ಜಿ ಅದರಲ್ಲಿ ಮುಂದುವರಿಸಲು ಮನಸ್ಸು ಮಾಡಲಿಲ್ಲವಂತೆ. ಅದಲ್ಲದೇ ನಾಗರಬೈಲಿ ನಲ್ಲಿದ್ದ ಅಲ್ಪಸ್ವಲ್ಪ ಉಪ್ಪಿನಾಗರವೂ ಪಿತ್ರಾರ್ಜಿತವಾಗಿ ನಿಮಗೆ ಸಿಕ್ಕೇ‌ಸಿಗಬಹುದು ಎಂದು ನಂಬಿಸಿ ಎಲ್ಲವನ್ನೂ ತಮಗೇ ಬರೆಸಿ ಕೊಂಡ ದಾಯಾದಿ ಸಂಬಂಧಿಕರ ಮಾತಿನ ಮರ್ಮ ಮೊದಲೇ ತಿಳಿಯದ್ದರಿಂದ ಅವರನ್ನು ನಂಬಿ ತನ್ನ ಮಾಸ್ತರಕಿ ನೌಕರಿಗೂ ಹಿಂದೆ ಮುಂದೆ ನೋಡದೇ ರಾಜೀನಾಮೆ ಕೊಟ್ಟು ಬಿಟ್ಟನಂತೆ. ಅಲ್ಲಿಂದಲೇ ನನ್ನಪ್ಪನ ಹೋರಾಟದ ಬದುಕು ಪ್ರಾರಂಭವಾಯಿತು.

ಉಪ್ಪಿನಾಗರದಲಿ ಪಾಲು ಸಿಗದಿದ್ದರೇನಾಯ್ತು ಉಪ್ಪಿನ ವ್ಯಾಪಾರದಲಿ ಬಹಳ ಲಾಭವಿದೆ ಎಂದು ನಂಬಿ ಕೆಲಸಮಯ ನಮ್ಮ ಊರಿಂದ ಹುಬ್ಬಳ್ಳಿಗೆ ಟ್ರಕ್ಕುಗಟ್ಟಲೇ ಉಪ್ಪಿನ ಸರಬರಾಜು ಮಾಡುವಾಗ ಯಾವುದೊ ಅಚಾತುರ್ಯದಿಂದಾ ಗಿಯೋ, ಮೋಸದಿಂದಾಗಿಯೋ ಎಲ್ಲವನ್ನೂ ಕಳಕೊಂಡು ಸಾಲಗಾರರ ಕಾಟ ತಾಳಲಾರದೇ ಇದ್ದು ಬಿದ್ದ ನಗನಾಣ್ಯಗಳೆಲ್ಲವನ್ನೂ ಮಾರಿ ನೊಂದು-ಬೆಂದು ಹೋದ. ಕೊನೆಗೆ ಇದ್ದ ಒಂದು ಸೈಕಲ್ಲೂ ಕುಟ್ನಾಚಾರಿಯ ಸಹಾಯ ದಿಂದ ಮಾರಿ ಸೈಕಲ್ ಪಂಪು ಮಾತ್ರ ನನಗೆ ತಿಳುವಳಿಕೆ ಬರೋತನಕ ನಮ್ಮನೆಯಲ್ಲಿ ಇದ್ದದ್ದು; ನಂತರದ ದಿನಗಳಲ್ಲಿ ಪಂಪು ಕೆಟ್ಟುಹೋಗಿ,ಆ ನಳಿಕೆಯಿಂದ ಅಮ್ಮ ಹಸಿ ಕಟ್ಟಿಗೆಯೊಡನೆ ಬೆಂಕಿ ಊದಲು ಹೆಣಗಾಡುತಿದ್ದ ನೆನಪು, ಅಮ್ಮನ ಬೇಗುದಿಯ ಬದುಕು ನನ್ನೆದೆಯಲಿ ದುರಂತದ ನೆನಪಿನಂತೆ ಹೆಪ್ಪುಗಟ್ಟಿನಿಂತು ಬದುಕಿನ ಛಲಕ್ಕೆ ಸಾಕ್ಷಿಯಾ ಯಿತು.

ನನ್ನಪ್ಪನ ನಿಜವಾದ ಉದ್ಯೋಗ ಪರ್ವ ಪ್ರಾರಂಭವಾದುದೇ ಯಲ್ಲಾಪುರದಲ್ಲಿ. ಊರಿ ನಲ್ಲಿ “ಬಾಬು” ಆಗಿದ್ದ ನನ್ನಪ್ಪ ನಾಗೇಶ ನಾರಾಯಣ ಶೆಟ್ಟಿ ಯಲ್ಲಾಪೂರದಲ್ಲಿ “ಬಾಬೂರಾವ್” ಆಗಿ ತನ್ನ ಬದುಕಿನ ಅತೀ ಮಹತ್ವದ ಸಮಯವನ್ನು ಈ ಊರಲ್ಲೇ ಕಳೆದನು. ಈ ಕಟ್ಟಿಗೆ ಮಿಲ್ಲಿನ ಕೆಲಸ ಅಪ್ಪನ ಬೆವರಿನ, ರಕ್ತ-ಮಾಂಸದ ಹಸಿ-ಹಸಿ ನೂರೊಂದು ಕಥೆಗಳಾಗಿದೆ.

ಸುಮಾರು ಕಾಲು ಶತಮಾನಗಳ ಕಾಲ
ಒಡೆಯನಿಗೆ
ಪ್ರಾಮಾಣಿಕ – ನಿಷ್ಟನಾಗಿ
ನನ್ನಪ್ಪ ಗಾಣ ಎಳೆದಿದ್ದ.
ಕೊಟ್ಟದ್ದೇ ಅಮೃತವೆಂದು
ನಂಬಿ
ಕೊನೆಗೊಂದು ದಿನ
ಮುದಿ ಗಾಣದೆತ್ತಾದ.

ಆಗ ನಮ್ಮದು ಒಂಬತ್ತು ಜನರ ತುಂಬು ಸಂಸಾರ. ಅಕ್ಷರಶಃ ನಾವು ಬೀದಿಗೆ ಬಿದ್ದಂತಾ ದೆವು ; ಇಷ್ಟಾದರೂ ಅಪ್ಪ ದೃತಿಗೆಡಲಿಲ್ಲ. ಕಾರಣ ತನ್ನೆಲ್ಲಾ ನೋವು-ನಲಿವಿನ ನಡುವೆಯೂ ಅನ್ನದೊಡನೆ ನಮ್ಮೆಲ್ಲರಿಗೂ ಅಕ್ಷರಗಳನ್ನೂ ಉಣಬಡಿಸಿದ. ಅಪ್ಪ ಮಹಾ ಕರ್ಮಚಾರಿ.

ಗಾಣದೆತ್ತಾಗಿ ದುಡಿದುಡಿದು
ತಾನು ಆಗಾಗ
ಅವಲಕ್ಕಿ ನೀರೇ ಕುಡಿದು
ಭವಿಷ್ಯತ್ತಿಗೆ ತಂಗುನೆಟ್ಟು
ಕೊಡುವದೆಲ್ಲಾ ನಮಗೆ ಕೊಟ್ಟ.

ಕಟ್ಟಿಗೆ ಮಿಲ್ಲಿನ ಸಾಹುಕಾರ ತಾನು ನಂಬಿದ ದೇವರು, ದೆವ್ವ, ‘ಮಂಡ’ಗಳ ಆಣತಿಯಂತೆ ಮತ್ತು ಬದುಕಿನ ಶ್ರೀಮಂತಿಕೆಯ ದರ್ಪ- ದುರಂತದಿಂದ ಅದನ್ನು ಬಂದ್ ಮಾಡಿದ ನಂತರವೂ ದೃತಿಗೆಡದ ನನ್ನಪ್ಪ ಅದೇ ಮಿಲ್ಲಿ ನಲ್ಲೇ ಸಣ್ಣಪುಟ್ಟ ವ್ಯವಹಾರ ನಡೆಸುತಿದ್ದವ ನೊಬ್ಬನೊಡನೆ ಕೆಲಸಕ್ಕಿದ್ದ ಪ್ರಸಂಗ ನನ್ನಪ್ಪನ ಬದುಕಿನಲ್ಲಿಯೇ ಕಪ್ಪು ಚುಕ್ಕಿ ಎಂದು ಅಪ್ಪ ಆಗಾಗ ನನ್ನೊಡನೆ ಹಂಚಿಕೊಳ್ಳುವಾಗಿನ ಅವನ ಮುಖದಮೇಲಿನ ಕಪ್ಪುಗೆರೆ ಸದಾ ನನ್ನೆದೆ ಯನ್ನು ಇರಿಯುತಿತ್ತು.ಅವನ ಸಣ್ಣ ಪುಟ್ಟ ಗುತ್ತಿಗೆಗಾರಿಕೆಗೆ ಅಪ್ಪ ಅಸಹಾಯಕ ತೆಯಲ್ಲಿ ಸಹಾಯಕನಾಗಿ ರಾತ್ರಿಯೆಲ್ಲಾ “ಮಾಗೋಡಿನ” ಆ ದಟ್ಟವಾದ ಕಾಡಿನಲ್ಲಿ ಕಳೆಯುವಾಗ ಅದೆಷ್ಟೋ ದಿನ ಚಳಿಯಲ್ಲಿ ಗಡಗಡನೆ ನಡುಗಿದ; ಅನ್ನವಿಲ್ಲದೇ ನರಳಿದ. ಎಂದೂ ಸರಾಯಿಯ ವಾಸನೆಯನ್ನೂ ಕಂಡರಿಯದ ನನ್ನಪ್ಪ, ಸದಾ ಕುಡಿತದ ಚಟವಿದ್ದ ಆ ಮನುಷ್ಯನು ಕೋರ್ಟಿಗೆ ಹಾಜರಾಗುವ ದೂರದಲ್ಲಿ ನಿಂತಿರುತ್ತಿದ್ದ ನನ್ನಪ್ಪನು ಅವನು ಕುಡಿಯುವ ಕ್ವಾರ್ಟರ್ ಬಾಟಲಿ ತನ್ನ ಬಳಿ ಇಟ್ಟು ಕೊಂಡು ಅವನು ಬಂದಾಗಲೆಲ್ಲಾ ತೆಗೆ ತೆಗೆದು ಕೊಡುವಾಗಿನ ಸಂಕಟದ ಕುರಿತು ಅಪ್ಪ ಅಂದು ನನಗೆ ಹೇಳುತ್ತಿದ್ದುದು ಇಂದಿಗೂ ನನ್ನೆದೆಯಲ್ಲಿ ಹೆಪ್ಪು ಗಟ್ಟಿದ ನೋವಾಗಿ ಅಪ್ಪನ ನೆನಪಾದಾಗಲೆಲ್ಲಾ ಅವನ ಆ ಮೂಕವೇದನೆ ನನ್ನೆದೆಯಲ್ಲಿ ಕೊಳ್ಳಿ ಇರಿತದಂತೆ ಕಾಡುವದು.

ಅಪ್ಪ ಕೊನೆಯತನಕ ಬೆವರಿಗೆ ತನ್ನನ್ನು ತಾನೇ ಒಡ್ಡಿಕೊಂಡ. ತನಗಾದಂತೆ ತನ್ನ ಯಾವ ಮಕ್ಕಳಿಗೂ ಆಗದಿರಲೆಂಬ ಎಚ್ಚರಿಕೆಯಿಂದ ಅವರವರ ಯೋಗ್ಯತೆಗೆ ತಕ್ಕಂತೆ ತನ್ನ ಹರಿಯುವ ಬೆವರಿನ-ರಕ್ತ ಮಾಂಸಗಳ ನಡುವೆಯೇ ಶಿಕ್ಷಣ ನೀಡಿದ. ಆದರೂ ನಮ್ಮ ದುರಹಂಕಾರದ ನಡುವೆ ಅಪ್ಪನನ್ನು ನಾವೇ “ನಿರುದ್ಯೋಗಿ” ಎಂದಾಗ ಅದನ್ನೂ ಮೌನವಾಗಿ ಸಹಿಸಿಕೊಂಡ. ಅಪ್ಪ ಮೌಲ್ಯ ವನ್ನು ತೊರೆಯದೇ ಕಠಿಣವಾದ ಬದುಕನ್ನು ನಡೆಸಿದ. ನಾವು “ಬಲಿತ”ಮೇಲೂ ಹೇಗಾದರೂ ಬದುಕಲು ಎಂದಿಗೂ ಆಸ್ಪದ ಕೊಟ್ಟಿಲ್ಲ. ಅಪ್ಪ ನಮ್ಮನ್ನಗಲಿ ಇಂದಿಗೆ ಎರಡು
ದಶಕಗಳು ದಾಟಿದರೂ ಇಂದಿಗೂ ಏನಾದರೂ ಸಣ್ಣ ಪುಟ್ಟ ‘ಕಿರಿಕ್ ‘ ಮಾಡುವಾಗ “ಅಪ್ಪ ಬೈಯ್ ಬಹುದು” ಎಂಬ ಭಾವನೆ ನಮ್ಮಲ್ಲಿಂದೂ ಮನೆ ಮಾಡಿದೆ. ಅಂದಿನ ದಿನಗಳಲ್ಲಿ ನನ್ನಪ್ಪನಿಗೆ ಯಾವುದೇ ಕೆಲಸ ಮಾಡಲೂ ಯಾರೂ ಸಪೋರ್ಟ ಮಾಡದೇ ಇದ್ದುದರಿಂದ ಅನಾಥ ಪ್ರಜ್ಞೆ ಕಾಡುತ್ತಿದ್ದ ರಿಂದಲೇ, ನಂತರದ ಅವನಿದ್ದ ಆ ಅಂದಿನ ಆ ದಿನಗಳಲಿ ನಾವು ಏನೇ ಹೊಸ ಕೆಲಸ ಮಾಡುವಾಗಲೂ “ವಿಚಾರಮಾಡಿ ಮಾಡು” ಎಂದು ಮೌನವಾಗಿರುವದಕ್ಕೆ, ಅಂದಿನ ದಿನಗಳಲ್ಲಿ ಮನೆಗೆ ಹೊಸದಾಗಿ ಫೋನ್ ತೆಗೆದು ಕೊಳ್ಳುವಾಗ ಆತಂಕಕ್ಕೆ ಒಳಗಾಗಿದ್ದೇ ಸಾಕ್ಷಿ.

ಅಪ್ಪಾ
ನೀನೊಂದು ಸುಂದರ ಕಾವ್ಯ
ಅಕ್ಷರ – ಶಬ್ದಗಳು ನಿನ್ನಲಿದ್ದರೂ
ಬರೆದೂ – ಬರೆಯದವನಂತೆ
ತಿಳಿದೂ – ತಿಳಿಯದವನಂತೆ
ಮೂಕ ವೇದನೆಯ
ಮೌನ ಕವಿತೆಯ ಸಾಲಾದೆ.

ನನ್ನ ಕವಿತೆಗಳಿಗೆಲ್ಲಾ ಸ್ಪೂರ್ತಿ ನನ್ನಪ್ಪನ ಮೌನ. ಈ ಮೌನ ಒಮ್ಮೊಮ್ಮೆ ಕರುಳು ಕಿತ್ತು ಬರುವಂತಿತ್ತು. ಒಮ್ಮೆ ಸುನಂದಾಳೊಡನೆ ಸಣ್ಣ ಮುಖಮಾಡಿದ ನನ್ನಪ್ಪ ” ಈ ಸಲವಾದರೂ ಇವನು ಇಲಾಖಾ ಪರೀಕ್ಷೆ ಮುಗಿಸಿ ಪದೋನ್ನತಿ ಹೊಂದಲಿ, ಪರೀಕ್ಷೆ ಮುಗಿಸಿಕೊಳ್ಳಲು ಹೇಳು ” ಎಂಬ ಮಾತನ್ನೂ ಅಸಹಾಯಕತೆಯ ಮೌನ ದಲ್ಲಿ ಹೇಳುತ್ತಿದ್ದ ನನ್ನಪ್ಪನನ್ನು ನಾವು ಸರಿಯಾಗಿ ಅರ್ಥಮಾಡಿ ಕೊಂಡಿಲ್ಲವಲ್ಲ ಎಂದು ಈಗ ಮರುಗಿದರೇನು ಪ್ರಯೋಜನ.

ಹಳಿಯಾಳದಲ್ಲಿ ನೌಕರಿಮಾಡುತಿದ್ದಾಗ ಅಪ್ಪ ತಿಂಗಳಿಗೊಮ್ಮೆ ನಾವಿದ್ದಲ್ಲಿಗೆ ಬರುತ್ತಿದ್ದ ; ಬರುತ್ತಿದ್ದಂತೆಯೇ ಹೋಗುವ ಬಸ್ಸಿನ ವೇಳಾ ಪತ್ರಿಕೆಯನ್ನೂ ನೋಡಿಕೊಂಡು! ಆಗ ಹೊಸತಾಗಿ ನಾನು ನೌಕರಿ ಸೇರಿದ್ದರಿಂದ, ಕಡಿಮೆ ಪಗಾರದಿಂದಾಗಿ ಮನೆ ಖರ್ಚಿಗೆಂದು ನಾಲ್ಕು ನೂರು ರೂಪಾಯಿ ಕೊಡಲೂ ‘ಹಿಂದೆ ಮುಂದೆ’ ನೋಡುತ್ತಿದ್ದೆ. ನಾನು ಎಷ್ಟೋ ಸಲ ಯೋಚಿಸುತ್ತಿದ್ದೆ, ಅಪ್ಪ ಬಂದಾಗ ಒಮ್ಮೆಯಾದರೂ ಕೈ ತುಂಬಾ ನೋಟುಗಳನ್ನ ಬೊಗಸೆಯಲ್ಲಿಟ್ಟು ಖುಷಿಪಡಿಸಬೇಕೆಂದು ; ಆದರೇನುಮಾಡಲಿ? ದುಡ್ಡು ಓಡಾಡುವ ಈ ಸಮಯದಲ್ಲಿ ನನ್ನಪ್ಪ ಹೊತ್ತು ಗೊತ್ತಿಲ್ಲದೇ ಎದ್ದು ಹೋಗಿಬಿಟ್ಟ.

ನನ್ನ ಏಳನೇ ತರಗತಿಯ ಫಲಿತಾಂಶ ಕಂಡು ಖುಷಿಪಟ್ಟ ನನ್ನಪ್ಪ ಅತೀ ಸಂಭ್ರಮದಿಂದ ಕಾರವಾರದಲ್ಲಿ ನಡೆದ ಮೆರಿಟ್ ಸ್ಕಾಲರ್ ಶಿಪ್ ಪರೀಕ್ಷೆಗೆ ಹೋಗಲು ಜೊತೆಯಾದ. ಕಾರವಾರವೆಂದರೆ ನನಗೋ ಕಂಡರಿಯದ ದೊಡ್ಡ ಊರು. ಸವಿತಾ ಹೋಟೆಲ್ಲಿಗೆ ಬಂದು ಎದುರು ಬದರು ಕುಳಿತೇ ನನಗೊಬ್ಬನಿಗೇ ಮಸಾಲೆ ದೋಸೆ ತಿನ್ನಿಸಿ, ತಾನು ಬರೀ ನೀರು ಕುಡಿದ ನನ್ನಪ್ಪ ಈಗ ಮಸಾಲೆ ದೋಸೆ ಕಂಡಾಗ ಲೆಲ್ಲಾ ನನ್ನೆದೆಯಲ್ಲಿ ಮತ್ತೆ ಮತ್ತೆ ಮೌನದ ಮಾತಾಗುವನು.

ಈಗ ಹೊಸಬಟ್ಟೆಗಳ ಕಂಡಾಗಲೆಲ್ಲಾ ನನ್ನಪ್ಪನ ಹರಿದ ಬನಿಯನ್ನಿನ ನೆನಪಾಗುವದು. ತಾನು, ತನಗಾಗಿ ಏನೂ ಯೋಚಿಸದ ನನ್ನಪ್ಪ, ತನ್ನ ಗತಿ ಇವರಾರಿಗೂ ಬರದಿರಲಿ ಎಂದು ತನ್ನ ಇತಿಮಿತಿ ಯೊಳಗೇ ನಮ್ಮೆಲ್ಲರ ಬದುಕಿನ ನೆಲಗಟ್ಟಿಗೆ ರಕ್ತ – ಬೆವರಿನ ಬುನಾದಿ ಹಾಕಿ ತಾನು ಮಹಾ ಮೌನ ದಲಿ ಮಾಯವಾಗಿಬಿಟ್ಟ .

ಸಂಜೆಯಾದೊಡನೆ
ಆತುರ ಕಾತರದಿ
ದಣಪೆಯ ಬದಿಯಲ್ಲಿ ನಿಂತು
‘ಇಷ್ಟೊತ್ತಿಗೇಕೆ ಬಂದೆ, ಈಗ್ಯಾವ ಗಾಡಿ,
ಟ್ರಕ್ಕಿಗಂತೂ ನೀ ಹತ್ತಲೇ ಬೇಡ
ಕತ್ತಲಾಗುವ ಮೊದಲೇ ಮನೆ ಸೇರಿಬಿಡು’
ಎನ್ನುವ ನನ್ನಪ್ಪ,
ಹಾಡೇ ಹಗಲು, ನಮಗೆಲ್ಲಾ ದಿಗಿಲು
ತನಗನಿಸಿದರೂ ತಿಳಿಸದೇ
ದಣಪೆಯ ಖಾಲಿ ಮಾಡಿದ.

ಇಲ್ಲ, ಅಪ್ಪ ದಣಪೆಯ ಖಾಲಿ ಮಾಡಿಲ್ಲ. ಪ್ರತೀ ಸಲ ನನ್ನ ಕಡಮೆಗೆ ನಾವೆಲ್ಲಾ ಬಂದಾಗ ಮತ್ತು ಅಲ್ಲಿಂದ ಹಿಂತಿರುಗಿ ಬರುವಾಗ ಅಮ್ಮ ನೊಡನೆ ನಿಂತು ನಮ್ಮೆಲ್ಲರ ಬದುಕಿನ ದಾರಿಗೆ ಶುಭ ಹಾರೈಸುತ್ತಿರುವದೇ ಇಂದಿನ ನಮ್ಮ ನೆಮ್ಮದಿಗೆ ಮೂಲ ಮಂತ್ರವಾಗಿದೆ.

✍️ಪ್ರಕಾಶ ಕಡಮೆ
ನಾಗಸುಧೆ, ಹುಬ್ಬಳ್ಳಿ