ಡಾ.ಕೆ.ಶಿವಲಿಂಗಪ್ಪ ಹಂದಿಹಾಳು ಅವರ “ನೋಟ್ ಬುಕ್” ಮಕ್ಕಳ ಎಂಟು ಕಥೆಗಳ ಒಂದು ಗುಚ್ಛ. ಮಕ್ಕಳ ಕಥೆಗಳು ಅಂದಾಗ ಸಹಜವಾಗಿಯೇ ಅನುಕರಿಸುವಂತದ್ದು ಬಾಲ್ಯತನ. ಅದು ನಮ್ಮನ್ನೂ, ನಮ್ಮ ಬಾಲ್ಯತನ ವನ್ನು ಬಿಂಬಿಸುವ ಒಂದು ಪ್ರತಿಬಿಂಬ.ಹಾಗೆನೇ ಇಲ್ಲಿಯ ಎಂಟು ಕಥೆಗಳು ವಿಭಿನ್ನವಾಗಿರುವ ಗ್ರಾಮೀಣ ಸೊಗಡಿನ ಸಾದ್ರಶ್ಯವನ್ನು ಹೇಳುತ್ತವೆ. ಕಥೆಗಳು ಸಹಜವಾದ ಬಾಲ್ಯತನವನ್ನು ಹರಡಿಕೊಂಡಿವೆ. ಕುತೂಹಲ ಹುಟ್ಟಿಸುವ ಸಂಗತಿಗಳಿವೆ. ವಾಸ್ತವದ ಬೇಸರಗಳು, ನೋವು, ಬಡತನ ಇಲ್ಲಿನ ಕಥೆಗಳಲ್ಲಿ ವಿಶೇಷವಾಗಿ ಕಂಡುಬರುತ್ತವೆ.

ಬಳ್ಳಾರಿ ಜಿಲ್ಲೆಯ ಪರಿಸರದಲ್ಲಿನ ವಾಸ್ತವಿಕ ಸಂಗತಿಗಳು,ತಲ್ಲಣಗಳು,ಅವರಲ್ಲಿ ಆವಿರ್ಭವಿ ಸಿದ ಅನುಭವಗಳು ಇಲ್ಲಿಯ ಕಥೆಗಳಲ್ಲಿ ಜೀವ ತುಂಬಿವೆ. ಈ ಕಥಾಪುಸ್ತಕದ ಓದು ಮಕ್ಕಳಿಗೆ ಪಾಲಕರಿಗೆ ಮತ್ತು ಶಿಕ್ಷಕರಿಗೆ ಒಂದು ಪಾಠವಾ ಗದೇ ಅನುಭವದ ಒಂದು ಕನ್ನಡಿಯ ಪ್ರತಿಬಿಂಬದಂತೆ ಗೋಚರವಾಗುತ್ತದೆ. ಮಕ್ಕಳ ಪರಿಸರದಲ್ಲಿ ಕಾಣುವ ಮುಖ್ಯ ಪಾತ್ರಗಳು ಅಂದ್ರೆ ಶಿಕ್ಷಕರು ಮತ್ತು ಸಹಪಾಠಿಗಳು. ಮನೆ ಮತ್ತು ಅಲ್ಲಿಯ ವಾತಾವರಣ. ಎಂಟೂ ಕಥೆ ಗಳಲ್ಲಿ ಎರಡು ಫ್ಯಾಂಟಸಿಕಥೆಗಳಿದ್ದರೆ ಉಳಿದವು ಬಡತನದ ಛಾಯೆಯನ್ನು ಒಳಗೊಂಡ ಅನುಭವ ವೇದ್ಯ ಕಥೆಗಳಾಗಿವೆ.
ಮಕ್ಕಳು ಶಿಕ್ಷಕರನ್ನು ಎಷ್ಟೊಂದು ಹಚ್ಚಿಕೊಂಡಿ ರುತ್ತವೆ ಅನ್ನುವುದಕ್ಕೆ ಮೊದಲ ಕಥೆ “ಶಿವಣ್ಣ ಮೇಷ್ಟ್ರು ಮತ್ತು ಕಾಮನ ಬಿಲ್ಲು” ಬೆಳಕು ಚೆಲ್ಲುತ್ತದೆ. ನನಗೆ “ಅಮ್ಮನ ಬೂಷ್ಟಗಿಂತ, ಅಪ್ಪನ ಫಾರಿನ್ ರಿಸ್ಟವಾಚ್ ಗಿಂತ, ಶಿವಣ್ಣ ಮೇಷ್ಟ್ರೇ ದಿ ಬೆಸ್ಟು” ಅನ್ನುವ ಮೂಲಕ ಮಕ್ಕಳು ತಾವು ಹಚ್ಚಿಕೊಂಡ ಶಿಕ್ಷಕರನ್ನು ಸದಾ ಸ್ಮರಿಸು ತ್ತವೆ. ಇಲ್ಲಿ ಬರುವ ಪಾತ್ರಗಳಲ್ಲಿ ರೋಷಿಣಿ ಕಾಣುವ ಕನಸೇ ಮುಖ್ಯ ಜೀವಾಳವಾಗಿದೆ. ಶಿವಣ್ಣ ಮೇಷ್ಟ್ರು ತರಗತಿ ನಡೆಸುವ ಸಂದರ್ಭ ದಲ್ಲಿ, ಆಕಸ್ಮಿಕವಾಗಿ ಬರುವ ಮಳೆ, ಎಲ್ಲ ಸಹಪಾಠಿಗಳು ಪಾಠ ಬಿಟ್ಟು ಮಳೆಯಲ್ಲಿ ಕುಣಿದಾಡುವ ದೃಶ್ಯ, ಶಿವಣ್ಣ ಮೇಷ್ಟ್ರು ಪಾಲ್ಗೊಳ್ಳುವಿಕೆ, ಬಿಸಿಲು ಮಳೆಯಲ್ಲಿ ಕಾಮನ ಬಿಲ್ಲು,ಅದು ಸೃಷ್ಟಿಸುವ ವಿಭಿನ್ನ ಚಿತ್ರಗಳ ನೋಟವೆಲ್ಲ ಹಗಲುಗನಸು ಅಂತಾ ಗೊತ್ತಾದಾಗ ಆ ಮಗುವಿನಲ್ಲಿ ಕಂಡು ಬರುವ ಸಹಜ ತಲ್ಲಣ ಗಳ ಉಣಬಡಿಸುವಿಕೆ ಚೆನ್ನಾಗಿ ಮೂಡಿ ಬಂದಿದೆ.

“ನಾನು ಶಾಲೆಗೆ ಸೇರಿದೆ” ಸಹಜವಾಗಿ ನಮ್ಮ ಸುತ್ತಲೂ ಕಂಡುಬರುವ ವಿದ್ಯಮಾನಗಳ ಕಥೆ ಯಾಗಿದೆ. ತಂದೆ ತಾಯಿಯನ್ನು ಕಾಣದ ಮಕ್ಕಳು ಅನುಭವಿಸುವ ಕಷ್ಟಗಳು, ಪರಿಸ್ಥಿತಿಯ ಒತ್ತಡದಿಂದ ಶಿಕ್ಷಣದಿಂದ ವಂಚಿತನಾಗುವ ತಿಮ್ಮರಾಜು ಪಾತ್ರದ ಮೂಲಕ ಆ ಕಷ್ಟಗಳನ್ನು ಮೀರಿ ನಿಲ್ಲುವ, ಎದೆಗಾರಿಕೆಯ ಕಥೆ ಓದುಗನ ಮನತಟ್ಟುತ್ತದೆ. “ಎದೆ ಝಲ್ “ಎನಿಸುವ ತಿಮ್ಮರಾಜುವಿನ ಕಷ್ಟಗಳು ಸಮಾಜದಲ್ಲಿ ನಡೆಯುವ ನಿತ್ಯ ಸತ್ಯವನ್ನು ಪ್ರತಿಬಿಂಬಿಸುತ್ತದೆ. ತಿಮ್ಮರಾಜು ‘ನಾನೂ ಶಾಲೆಗೆ ಸೇರಿದೆ ಓ ಹೊಯ್’ ಎನ್ನುವ ಮೂಲಕ ಕಥೆ ಗಾಢವಾದ ಅನುಭವವನ್ನು ತಂದು ಕೊಡುತ್ತದೆ. ‘ಕೂಸು ಮೋಡ’ ಎನ್ನುವ ಕತೆಯೂ ಸಹ ಇದೇ ತೆರನಾದ ಚೆಂದದ ಅನುಭವ ನೀಡುತ್ತದೆ.
‘ಖುಷಿ‘ ಕತೆಯೂ ಸಹ ಅಷ್ಟೆ! ಹೆಸರಿಗೆ ಮಾತ್ರ ಖುಷಿ ಎಂದು ತಿಳಿಸುವುದರ ಮೂಲಕ, ಖುಷಿ ಅರಸುವ ಹಂಬಲ ತೀರದೇ ಹೋಗುವುದು ಈ ಕಥೆಯ ವಿಶೇಷ. ಎಲ್ಲಿ ಶಿವಣ್ಣ ಮೇಷ್ಟ್ರು ತನ್ನನ್ನು ನೋಡಿ ಶಾಲೆಗೆ ಕರೆದಾರು ? ಎಂಬ ಭಯದಿಂದ ಮರೆಮಾಚುವ ಹುಡುಗಿ. ಬಡತನದ ಬೇಗೆ ಒಂದು ಕಡೆ ಸುಡುತಿದ್ದರೆ ಚಿಕ್ಕ ಮಗುವಿನ ಪಾಲನೆಗಾಗಿ ತಾನು ಮನೆಯಲ್ಲಿ ಉಳಿದು ತಾಯಿಯ ಕೆಲಸಕ್ಕೆ ಸಹಕಾರ ನೀಡುವಲ್ಲಿ ವಾಸ್ತವಿಕ ಹಳ್ಳಿಗಳ ಚಿತ್ರಣವನ್ನು ಲೇಖಕರು ತೆರೆದಿಟ್ಟಿದ್ದಾರೆ. ತನ್ನ ಸಹಪಾಟಿಗಳು ಹಬ್ಬಕ್ಕಾಗಿ ಒಂದೇ ತೆರನಾದ ಬಟ್ಟೆ ಪಡೆಯುವಲ್ಲಿಯೂ ಸಫಲತೆ ಕಾಣದ ಬಡತನದ ಛಾಯೆ ಎದ್ದು ಕಾಣುತ್ತದೆ.
‘ಐಸ್ ಕ್ರೀಂ’ ಕಥೆಯೂ ಸಹ ನಮ್ಮ ಮಧ್ಯೆ ಕಂಡು ಬರುವ ಸ್ವಾಭಾವಿಕ ಕಥೆಯಾಗಿದೆ. ಐಸ್ ಕ್ರೀಮ್ ಗಾಗಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಹುಡುಗ ತಿಂಗಳವರೆಗೂ ದುಡಿದು, ತನ್ನಿಷ್ಟದ ಐಸ್ ಕ್ರೀಮ್ ತಿನ್ನಲು ಹಂಬಲಿಸುವ ನಾಗೇಶ, ತನ್ನ ಗೆಳೆಯ ಕಿಶನ್ ಖಾಸಗಿ ಶಾಲೆಯಲ್ಲಿ ಕೊಡುವ ಸವಲತ್ತುಗಳು ಮತ್ತು ಶ್ರಮವಿಲ್ಲದೇ ದಿನಂಪ್ರತಿ ದೊರೆಯುವ ಐಸ್ ಕ್ರೀಮ್ ಬಗ್ಗೆ ಆಸಕ್ತಿ ಹೊಂದಿ ಹಠಮಾಡುವು ದರ ಮೂಲಕ ತಾನೂ ಸಹ ಸೇರುತ್ತಾನೆ. ಅನಿರಿಕ್ಷಿತದ ಈ ಬೆಳವಣಿಗೆ ಖಾಸಗಿ ಶಾಲಾಡಳಿತದಿಂದ ನಾಗೇಶ ಮತ್ತು ಆತನ ತಾಯಿ ಅನುಭವಿಸುವ ಕಷ್ಟ ಗಳಿಂದ ಹೊರಬರುವ ಕಥೆ ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತೆ ಕಂಡು ಬರುತ್ತದೆ.
ಇನ್ನೆರಡು ಕಥೆಗಳು ಫ್ಯಾಂಟಸಿ ಲೋಕವನ್ನು ತೆರೆದಿಡುತ್ತವೆ. ಅವು ಲೈಟುಕಂಬ ಮತ್ತು ನೋಟ್ ಬುಕ್. ಲೇಖಕರು‘ಲೈಟುಕಂಬ‘ ದ ಕೆಳಗೆ ಹದಿನೈದು ಇಪ್ಪತ್ತು ಅಡಿ ಜಾಗದಲ್ಲಿ ವಾಸವಿದ್ದ ಬಡ್ಯೆಗನೆಂಬ ಏಳನೇಯ ತರಗತಿ ಯಲ್ಲಿ ಓದುತ್ತಿರುವ ಬಾಲಕನ ಕತೆ ಅಸಹಜ ಭಾವಗಳಿಗೆ ಹಿಡಿದ ಕೈಗನ್ನಡಿ. ಈ ವೀರ ಬಾಲಕ ನಮ್ಮ ಊರಿನ ಆಸ್ತಿ ಅವನು ಈಗ ನಮ್ಮ ಊರಿನ ಹೆಮ್ಮೆಯ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಹುಡುಗ ಎಂದು ಹೇಳುತ್ತಲೇ ‘ಬಡ್ಯೇಗ ಶಾಲೆಗೆ ಹೋಗೋದು ಅಮಾವಾಸ್ಯೆ ಹುಣ್ಣಿಮೆಗಳು ಬಂದಂಗೆ ‘ ಅಂತಾ ಹೇಳುವುದರ ಮೂಲಕ ವಾಸ್ತವಿಕ ಕೆಲವು ಸಂಗತಿಗಳನ್ನು ನೆನಪಿಸದೇ ಇರಲಾರದು. ಬಡ್ಯೇಗನಿಗೆ ಜೀವನದಲ್ಲಿ ತುಂಬಾ ದೊಡ್ಡ ಕನಸುಗಳೇನು ಇರಲಿಲ್ಲ. ಬಡವರು ದೊಡ್ಡ ದೊಡ್ಡ ಕನಸು ಕಾಣಬಾರದು ಎಂದು ಅಮ್ಮ ಆಗಾಗ ಹೇಳುತ್ತಿದ್ದರಂತೆ. ಆದರೂ ಕನಸಿಗೆ ಕೊರೆ ಹಾಕುವವರು ಯಾರು ಹೇಳಿ? ಯಾರು ಯಾವ ಕನಸಾದರೂ ಕಾಣ ಬಹುದಲ್ಲವೇ? ಹಾಗೆ ಆ ಸಂಭ್ರಮದ ಜಾತ್ರೆಯಲ್ಲಿ ವಿಮಾನವನ್ನು ಕೊಂಡುಕೊಳ್ಳುವ ಆಸೆ. ಕೈಗೆಟುಕದ 750/- ರೂಪಾಯಿ ಬೆಲೆಬಾಳುವ, ಅದನ್ನು ಕೊಳ್ಳುವಲ್ಲಿ ಆ ಬಾಲಕನ ಪ್ರಯತ್ನ ಫಲ ನೀಡದೇ ಇರುವುದು. ಕೈಚೆಲ್ಲಿ ಕುಳಿತವನಿಗೆ ತಾನು ವಾಸಿಸುವ ಲೈಟುಕಂಬವೇ ಅವನಲ್ಲಿ ಸ್ಪೂರ್ತಿ ತುಂಬುವ ಸಂಗತಿ ಮಕ್ಕಳಲ್ಲಿ ಕುತೂಹಲ ಮೂಡಿಸುತ್ತದೆ. ಆ ಮೂಲಕ ಆತನಲ್ಲಿ ಹುದುಗಿರುವ ಸೂಪ್ತವಾದ ಪ್ರತಿಭೆಯನ್ನು ಹೊರಗೆ ಹಾಕುವಲ್ಲಿ ಯಶಸ್ಸು ಕಂಡಿದೆ. ಗ್ರಾಮೀಣ ಪ್ರತಿಭೆಗಳ ತಲ್ಲನಗಳನ್ನು ತಿಳಿಸುವ ಈ ಕತೆ ಪ್ರತಿಯೊಬ್ಬರಿಗೂ ಹಿಡಿಸದೇ ಇರಲಾರದು.

ಪುಸ್ತಕದ ಟೈಟಲ್ ಕತೆ ‘ನೋಟ್ ಬುಕ್ ‘ ಸಹ ಅಷ್ಟೇ ಮಾರ್ಮಿಕವಾದದ್ದು. ಇಲ್ಲಿ ಬರುವ ಸುಮಾ ಎನ್ನುವ ಬಾಲಕಿ ಸೈಕಲ್ ಏರುವ ಕನಸು ಭಗ್ನವಾದಾಗ, ನೋಟ್ ಬುಕ್ಕಿನಲ್ಲೇ ಸೈಕಲ್ ಚಿತ್ರ ಬಿಡಿಸಿ ತೃಪ್ತಿಪಟ್ಟು ಕೊಂಡವಳು. ಹೀಗೆ ಬಿಡಿಸಿದ ಚಿತ್ರವೇ ಅವಳು ಕಷ್ಟದಲ್ಲಿ ಸಿಲುಕಿದಾಗಲೊಮ್ಮೆ ಚಮಾತ್ಕಾರವನ್ನುಂಟು ಮಾಡುತ್ತ ಅವಳಿಗೆ ನ್ಯಾಯ ಸಿಗುವಂತೆ ಮಾಡುವ ಫ್ಯಾಂಟಸಿಯ ಈ ಕತೆಗೆ ಲೇಖಕರು ಸಹಜ ಸುಂದರವಾದ ಕತೆ ಹೆಣೆದಿದ್ದಾರೆ. ಅಸಾಧ್ಯವೆಂದು ಹೇಳುವ ಬಾಲಕರಿಗೆ ಆಶಾವಾದದ ಅಸ್ಮಿತೆಯ ಬಾಗಿಲು ತೆರೆದು ಕೊಳ್ಳುವಲ್ಲಿ ಇಲ್ಲಿನ ಕಥೆಗಳು ಉತ್ಕೃಷ್ಟ ವಾಗಿವೆ.
ಓದುವಿಕೆಯ ಗತ್ತು ಹೆಚ್ಚಿಸಿಕೊಳ್ಳಲು ಪ್ರಭಾವ ಬೀರುವ ಈ ಪುಸ್ತಕ ಮಕ್ಕಳು ಶಿಕ್ಷಕರು ಹಾಗೂ ಪಾಲಕರು ಓದಲೇಬೇಕಾದ ಆಕರ್ಷಕ ಕೈಪಿಡಿ. ನಾವು ಏನಾದರೂ ಸಾಧಿಸುವುದಿದ್ದರೆ ಅದು ಮಕ್ಕಳ ಕೇಂದ್ರಿತವಾಗಿಯೇ ಇರುತ್ತದೆ ಎಂಬುವ, ವಾಸ್ತವಸತ್ಯದ ಅಡಿಯಲ್ಲಿ ಈ ಪುಸ್ತಕ ಗುಣ ಮಟ್ಟದ ಹಾಳೆ, ಕಲರ್ ಫುಲ್ ಒಳಪುಟದ ಪೇಂಟಿಂಗ್ ಚಿತ್ರಗಳು, ಕವರ್ ಪೇಜ್. ಓದುವಿಕೆಗೆ ಉತ್ತೇಜನ ನೀಡುತ್ತದೆ.

✍️ಶ್ರೀಧರ ಗಸ್ತಿ
ಧಾರವಾಡ
