ಕವಿ ಕೆ ಎಸ್ ನರಸಿಂಹಸ್ವಾಮಿ ಅವರು ಕವಿ ಹಾಗೂ ಕವಿತೆಗಳ ಬಗ್ಗೆ ಬರೆದ ಕವನಗಳ ಪರಿಚಯ ಮಾಡಿಕೊಳ್ಳುತ್ತ ಮುಂದಿನ ಭಾಗದಲ್ಲಿ “ಎದೆ ತುಂಬಾ ನಕ್ಷತ್ರ” ಕವನ ಸಂಕಲನದ “ಕಿರಿಯ ಕವಿಗೆ _೧” ಈ ಪದ್ಯದ ಕಡೆ ಗಮನ ಹರಿಸೋಣ ಬನ್ನಿ.

ಹಿರಿಯ ಕವಿವರೇಣ್ಯರು ಹಾಕಿಕೊಟ್ಟ ದಾರಿ ಯಲ್ಲಿ ನಾವು ಈಗ ನಡೆಯುತ್ತಿದ್ದೇವೆ ಎನ್ನುವಾಗ ಅವರು ಹೇಳುವ ಕಿವಿಮಾತು ಗಳನ್ನ ಗಮನಿಸಿ ಅದರಂತೆ ನಡೆದರೆ ಅದರಲ್ಲಿಯೇ ನಮ್ಮ ಒಳಿತು ತಾನೇ? ಹಾಗೆಯೇ ಇಲ್ಲಿ ಕವಿಯು ತಮಗಿಂತ ಕಿರಿಯರಾದ ಮುಂದಿನ ಪೀಳಿಗೆಯ ಕವಿಗಳಿಗೆ ಕವಿತೆಯ ಬಗ್ಗೆ ಹೇಳುವ ವರ್ಣನೆ ಮತ್ತು ಹೇಗೆ ಬರೆಯಬೇಕು ಎನ್ನುವುದರ ಬಗೆಗಿನ ಒಂದು ಬುದ್ಧಿ ಮಾತು ಇದ್ದ ಹಾಗೆ ಇದೆ. ನಿಜವಾಗಿ ಕವಿ ಹೃದಯದ ಭಾವಗಳ ಸುಂದರ ಅನಾವರಣ ಅನುಭವಗಳ ಅನುಭಾವ ಇಲ್ಲಿ ತೆರೆದು- ಕೊಂಡಿದೆ ಎಂದರೆ ತಪ್ಪಾಗಲಾರದು.

ಅನುಭವವೇ ನೆನಪಾಗಿ ಹೆಪ್ಪುಗಟ್ಟುವ ತನಕ ನೀನು ಕವಿತೆಗೆ ಕೈಯ ಹಾಕಬೇಡ
ಮಳೆ ಇರದ ಮೋಡಗಳ ಚೆಲುವ ವರ್ಣಿಸಬೇಡ
ಇಲ್ಲದುದ ಇಹುದೆಂದು ಹಾಡಬೇಡ
ಭಾವ ಬಸಿರಿನ ಪ್ರಸವವೇ ಕವಿತೆ ಎಂಬುದು ಒಂದು ಮಾತು. ಮನದ ಭಾವನೆಗಳು ಕಾದು ಕಾದು ಗಟ್ಟಿಯಾಗಿ ಹೆಪ್ಪುಗಟ್ಟಿದ ಹಾಲಿನಂತೆ ಸಾಂದ್ರಗೊಳ್ಳಬೇಕು. ಆಗ ಮಾತ್ರ ಈ ಅನುಭವದ ಸಾಂದ್ರತೆಯಿಂದ ಹೊರಬಂದ ಪದಗಳು ಸುಂದರ ಕವಿತೆಯಾಗಿ ಮೂಡುತ್ತದೆ. ಅದಕ್ಕೆ ಕವಿಗಳು ಭಾವನೆಗಳು ಚೆನ್ನಾಗಿ ಮಾಗುವ ತನಕ ಬರೆಯುವ ಕೆಲಸಕ್ಕೆ ತೊಡಗ ಬೇಡ ಎಂದು ಹೇಳುತ್ತಾರೆ. ಅಲ್ಲದೆ ರವಿ ಕಾಣ ದನ್ನು ಕವಿ ಕಾಣಬಹುದಾದರೂ ಇಲ್ಲದುದನ್ನು ಇಹುದು ಎಂದು ಹೇಳುವ ವ್ಯರ್ಥ ಪ್ರಯಾಸವೂ ಬೇಡ ಅನ್ನುವ ಕವಿಗಳು ಮಳೆ ಇರದ ಮೋಡಗಳು ಹೇಗೆ ಭಾರವಿಲ್ಲದೆ ಖಾಲಿ ಖಾಲಿ ಎನ್ನಿಸುತ್ತವೋ ಹಾಗೆ ಭಾವವಿಲ್ಲದ ಕವಿತೆ ಬೋಳು ಬೋಳು ನೀರಸ ಎಂಬ ಭಾವನೆ ವ್ಯಕ್ತಪಡಿಸುತ್ತಾರೆ.

ಬೆಟ್ಟಗಳ ಹತ್ತಿ ಬಾ ನದಿಗಳನ್ನು ದಾಟಿ ಬಾ ಆಗುವ ಆಯಾಸಕ್ಕೆ ಹೆದರಬೇಡ
ಅಗ್ಗಿಷ್ಟಿಕೆಯ ಕೆಂಡ ಹೊತ್ತಿಕೊಳ್ಳುವ ತನಕ ಒಲೆಯ ಮೇಲ್ಗಡೆ ಪಾತ್ರೆ ಇರಿಸಬೇಡ
ಕವಿತೆ ಬರೆಯುವುದೆಂದರೆ ಅದು ಪರಿಶ್ರಮದ ಕೆಲಸವೇ ಸರಿ. ಭಾವಕ್ಕೆ ಚಿಂತನಕ್ಕೆ ಮಂಥನಕ್ಕೆ ಕೆಲಸ ಕೊಡಬೇಕು. ಅದನ್ನೇ ಬೆಟ್ಟ ಹತ್ತಿ ನದಿ ದಾಟಿ ಬರುವ ಪ್ರಯಾಣಕ್ಕೆ ಹೋಲಿಸುತ್ತಾರೆ ಕವಿಗಳು. ಈ ರೀತಿ ಆಗುವ ಆಯಾಸಕ್ಕೆ ಹೆದರಿದರೆ ಕವನರಚನೆಯ ಸುಖ ದಕ್ಕುವು ದಿಲ್ಲ. ಹಾಗೆಯೇ ಅಗ್ಗಿಷ್ಟಿಕೆಯಲ್ಲಿ ಇದ್ದಿಲಿಗೆ ಸಮಾನ ವಾದ ಕಾವು ಬಂದು ನಿಗಿನಿಗಿ ಕೆಂಡವಾಗಿ ಉರಿದಾಗ ಮಾತ್ರ ಪಾತ್ರೆಗೆ ಬೇಕಾದ ಶಾಖ ದೊರೆತು ಕಾಯುತ್ತದೆ. ಇಲ್ಲದಿದ್ದಲ್ಲಿ ಪಾತ್ರೆ ಬರೀ ಮಸಿ. ಇದನ್ನೇ ಪರಿಪಕ್ವವಾಗುವ ತನಕ ಮುಂದಡಿ ಇಡಬೇಡ. ಕಾದು ನಂತರ ಕೆಲಸ ಮಾಡಬೇಕು ಎನ್ನುವ ತತ್ವವನ್ನು ಕವಿತೆ ಬರೆಯುವ ವಿಷಯಕ್ಕೂ ಅನ್ವಯಿಸುತ್ತಾರೆ ಕವಿಗಳು.
ಮುಂದೆ ಕೇಳಿದ ಅನುಭವಗಳನ್ನು ದಕ್ಕಿಸಿ ಕೊಂಡು ನಂತರ ಅದನ್ನು ಪದವ ಹೆಣೆದು ಕವಿಯಾಗಿ ಕವಿತೆಯಾಗಿಸಬೇಕೆ ವಿನಹ: ಕೇಳಿದ್ದು ಕಂಡಿದ್ದು ಎಲ್ಲವನ್ನು ವರ್ಣಿಸಿ ಕವಿತೆ ಮಾಡುವುದು ಸರಿಯಲ್ಲ ಎನ್ನುತ್ತಾರೆ. ಭಾಷೆ ಒದಗಿ ಬಂದು ಅದಕ್ಕೆ ಸೂಕ್ತ ಹೊಳಪು ದೊರಕಿ ದಾಗ ಮಾತ್ರ ಸುಂದರ ಕವನ ಜನನ ವಾಗುವುದು. ಹಾಗೆಯೆ ಬೆಂಕಿ ಕಲ್ಮಶಗಳನ್ನು ಸುಟ್ಟುಬಿಡು ವಂತಹ ಪದಗಳು ಭಾವಗೀತೆ ಯಾದ ಆದರೂ ಅವು ಸಂಕೀರ್ಣವಾಗಿರ ಬೇಕು ಎನ್ನುವ ಸಲಹೆ ನೀಡುತ್ತಾರೆ. ಪದ ಪದಗಳ ಜೋಡಣೆ ಹೇಗಿರಬೇಕೆಂದರೆ ಹಸೆಯ ಮೇಲಿನ ಹೊಸ ದಂಪತಿಗಳು ಪರಸ್ಪರ ಆಡುವ ಮಾತುಗಳಂತೆ ಹೊಂದಿಕೊಳ್ಳಬೇಕು ಎನ್ನುವ ಉದಾಹರಣೆ ನೀಡುತ್ತಾರೆ.

ಒಂದೊಂದು ಪದ್ಯವೂ ಒಂದು ಮೆರವಣಿಗೆ ಕಣಾ
ಅಂಕಗಣಿತದ ಹಾಗೆ ಹಾಕು ತಾಳ
ಭಾವದಿಬ್ಬಣವೇ ಕವಿತೆ ಎಂದು ಹೇಳುವ ಮಾತಿದೆ. ಹಾಗೆ ಒಂದೊಂದು ಪದ್ಯವೂ ಮೆರವಣಿಗೆಯ ಒಂದೊಂದು ಅಂಗವಾಗುವ ಹಾಗೆ ಕವಿತೆಯಲ್ಲಿ ಗಾಂಭೀರ್ಯ ಇರಬೇಕು. ಹಾಗೆ ಲಯಬದ್ಧವಾಗಿ ಹೊರಡುವ ಈ ದಿಬ್ಬಣಕ್ಕೆ ಅಂಕಗಣಿತದಷ್ಟು ಕರಾರುವಕ್ಕು ನಿಖರವಾದ ತಾಳ ಇರಬೇಕು ಎನ್ನುವ ಕವಿಗಳು ಮುಂದೆ ಕವಿತೆಯಿಂದ ಏನಾಗಬೇಕು ಎನ್ನುವುದನ್ನು ಹೇಳಲು ಹೀಗೆನ್ನುತ್ತಾರೆ:
ಹಸಿದ ಒಡಲಿಗೆ ಬೇಕು ಅನ್ನ ಬರಿ ಹಾಡಲ್ಲ
ಬಾಯಾರಿಕೆಗೆ ಬೇಕು ತಂಪು ನೀರು
ಚಳಿಗಾಲ ಕಳೆಯುತ್ತ ಜೀವ ನಡೆದಿದೆ ಮುಂದೆ
ಒಂದು ಶಾಲೇ ಅದರ ಚಳಿಗೆ ಸಾಕು

ಭೌತಿಕ ಅವಶ್ಯಕತೆಗಳು ತೀರಿದ ನಂತರವಷ್ಟೇ ಮಾನಸಿಕ ತೃಪ್ತಿ ನೀಡುವ ಕವಿತೆಯ ಕಡೆಗೆ ಮನುಜನ ಅನಿವಾರ್ಯತೆ ಅವಶ್ಯಕತೆ. ಅದನ್ನೇ ಹೀಗೆ ಹೇಳುತ್ತಾರೆ: ಹಸಿದಿರುವ ಹೊಟ್ಟೆಗೆ ಅನ್ನ ಬಾಯಾರಿಕೆಗೆ ನೀರು ಬೇಕೆ ವಿನಃ ಹಾಡು ಈ ಅವಶ್ಯಕತೆಗಳನ್ನು ಪೂರೈಸ ಲಾಗದು. ಇನ್ನು ಚಳಿ ಇದ್ದಾಗ ಕವಿತೆ ಕೇಳಿ ಅದನ್ನು ಕಡಿಮೆ ಮಾಡಿ ಕೊಳ್ಳಲಾಗದು ಬೆಚ್ಚಗಿನ ಶಾಲು ಬೇಕಾಗುತ್ತದೆ.
ಮಾತಿಗೂ ಮೌನಕೂ ಇರುವ ಅಂತರದಲ್ಲಿ
ಮೂಡುವುದು ಬಾನಾಡಿಯಂತೆ ಭಾವ
ನೊಂದ ಬದುಕಿಗೆ ಬೇಕು ಸಾವಿರ ಸಮಾಧಾನ
ಅದರ ಜೊತೆಗೆ ಬರಲಿ ನಿನ್ನ ಕವನ

ಅಂದರೆ ಕವನ ನಮ್ಮ ದುಃಖಗಳಿಗೆ ಕಷ್ಟಗಳಿಗೆ ಸಂವೇದಿಯಾಗಿ ಅದನ್ನು ಪರಿಹರಿಸಲಾಗದಿ ದ್ದರೂ ಕೇಳುವ ಕಿವಿಯಂತೆ ಕೆಲಸ ನಿರ್ವಹಿಸ ಬೇಕು. ಮಾತು ಹಾಗೂ ಮೌನ ಎರಡರ ಮಧ್ಯದ ಅಂತರದಲ್ಲಿ ಇರುವ ಕವನ ಮಾತು ಮತ್ತು ಮೌನ ಎರಡರ ಕರ್ತವ್ಯವನ್ನು ನಿರ್ವಹಿಸುವಂತೆ ಮೂಡಬೇಕು.
ನಿನ್ನ ಅಹಂಕಾರಕ್ಕೂ ಒಂದು ಮಿತಿ ಇರಬೇಕು
ಸ್ಥಿತಿಗತಿಗಳಿರಬೇಕು ನಿನ್ನ ಕೃತಿಗೆ
ಕವನವೇ ಒಂದು ನಂದಾದೀಪ, ನುಡಿಯಲ್ಲಿ
ಮೂಡಲೇಬೇಕು ಆನಂದ ಲಹರಿ
ಕವಿತೆ ಬರೆದು ಏನನ್ನಾದರೂ ಸಾಧಿಸುತ್ತೇನೆ ಎನ್ನುವ ಅಹಂಕಾರ ಕವಿಗೆ ಸಲ್ಲದು. ತನ್ನ ಇತಿ ಮಿತಿಗಳನ್ನು ಅರಿತುಕೊಂಡ ಕೃತಿಗಳು ಸರ್ವ ಮಾನ್ಯ. ಕವನವನ್ನು ಒಂದು ನಂದಾದೀಪ ಎನ್ನುವುದಾದರೆ ಅದರ ಅನುಭವ ಒಂದು ಸುಂದರ ಜ್ಯೋತಿ ಲಹರಿ ಆಗಿ ಆನಂದವನ್ನು ಹರಡುವಂತಿರಬೇಕು.

ಬರೀ ಕವಿತೆ ಬರೆದು ಪದಗಳ ಜೋಡಣೆ ಮಾಡುವುದಷ್ಟೇ ಕವಿಯ ಕೆಲಸವಲ್ಲ ಅದನ್ನು ತನ್ನ ಬದುಕಿನ ರೀತಿಯ ಮೂಲಕ ತೋರ್ಪಡಿಸಿ ಕೊಳ್ಳಬೇಕು ಬದುಕು ಒಂದು ಕವಿತೆಯಾಗಬೇಕು ಒಂದು ಹಾಡಾಗಬೇಕು ಬರಿ ಪದಗಳ ಅಲಂಕಾರ ಕವಿತೆಯಲ್ಲ ಹಾಗಾಗಿ ವ್ಯರ್ಥ ಪದ ಜೋಡಣೆ ಯನ್ನು ಬಿಟ್ಟು ಬೆಳಕು ಬೀರುವಂತಹ ಹಣತೆ ಯಂತೆ ಸಾರ್ಥಕ ಜೀವನವನ್ನು ಕವಿ ಬಾಳಬೇಕು ಎನ್ನುವ ಉತ್ತಮ ನುಡಿಗಳನ್ನು ಈ ಸಾಲುಗಳಲ್ಲಿ ಕವಿ ಹೇಳುತ್ತಾರೆ:
ಕೊಡು ಅದನ್ನು ಜನಕ್ಕೆ ಕೈ ಬಿಡು ವ್ಯರ್ಥ ಪದಗಳನು
ಕೇವಲ ಅಲಂಕಾರ ಕವಿತೆಯಲ್ಲ
ಬರಿ ಮಾತ ಮಿಂಚುಗಳು ಬಂದು ಹೋಗಲಿ ಬಳಿಕ
ನಿನ್ನ ಬದುಕೇ ಒಂದು ಹಾಡಾಗಲಿ

ನಿಜಕ್ಕೂ ಹಿರಿಯ ಕವಿಗಳ ಈ ನುಡಿಗಳನ್ನು ಅಳವಡಿಸಿಕೊಂಡರೆ ಪ್ರತಿಯೊಬ್ಬ ಕವಿಯ ಜೀವನವೂ ಸಾರ್ಥಕವೇ. ಕವಿತೆ ಬರೆದು ಹಾಡಾಗುವುದಕ್ಕಿಂತ ಒಳ್ಳೆಯ ಬದುಕು ಬದುಕಿ ಹಾಡಾಗುವುದು ಎಷ್ಟು ಒಳ್ಳೆಯ ಕೆಲಸವಲ್ಲವೇ? ಹಾಗೆಯೇ ನುಡಿದಂತೆ ಬರೆದಂತೆ ಬದುಕಬೇಕು. ಬರೆಯುವುದೇ ಒಂದು ಬದುಕುವುದೇ ಒಂದು ತರಹವಾದರೆ ಅವರಿಗೆ ಗೌರವ ಉಂಟೇ? ಸಾಹಿತ್ಯದ ಹರಿಕಾರರಾದ ಸರಸ್ವತಿ ಪುತ್ರರು ತಮ್ಮ ವ್ಯಕ್ತಿತ್ವವನ್ನು ಚೆನ್ನಾಗಿ ರೂಪಿಸಿಕೊಳ್ಳುವಲ್ಲಿ ಈ ಅನುಭವ ನುಡಿಗಳು ಖಂಡಿತ ದಾರಿದೀಪ ವಾಗುತ್ತದೆ.
✍️ಸುಜಾತಾ ರವೀಶ್
ಮೈಸೂರು
