ಗಜಲ್ ಕಾರರು ಅವರರವರ ಅವ್ವನಿಗೆ ಒಂದೊಂದು ಗಜಲ್ ಪುಷ್ಪಗಳನ್ನು ಪಾದಕ್ಕೆ ಅರ್ಪಿಸಲು ಬಂದಾಗ ಹೆಬಸೂರ ರಂಜಾನ್ ರವರು, ತಮ್ಮ ಸಂಪಾದಕದಾರದಿಂದ ಪೋಣಿಸಿ ಅವ್ವನ ಪಾದದಡಿಯ ಸ್ವರ್ಗದ ಹೊಸ್ತಿಲು ಮೇಲಿಟ್ಟು ರಸಿಕ ಭಾವದ ವಾಚಕರನ್ನು ಹೊಸ ಸ್ವರ್ಗಕ್ಕೆ ಸ್ವಾಗತಿಸಿದ್ದಾರೆ.

ಸ್ವರ್ಗದ ಬಾಗಿಲು ತೆಗೆದೊಡನೆ ಕದ್ರಾದ ಹಸಿರು ಕಾಡಿನಲ್ಲಿ:
ಹಾದಿಯಲಿ ಸಿಕ್ಕ ಹಸುರೆಲೆಗಳ ಮರೆಯಲಿ ನಾನೆ ಅಡಗಿದಂತೆ ಭಾಸ, ನಿನಗೆ ಹಾಗೇನಿಸಿದರೆ ಕಾಲ ಜರೂರಾಗಿ ಒಲವ ಚಿಗುರಿಸಲಿ ಹೇಳು
ಎಂಬ ಅಕ್ಷತಾ ಕೃಷ್ಣಮೂರ್ತಿಯವರ ಗಜಲ್.

ಮೂರು ದಿನದ ಬದುಕಿನಲ್ಲಿ ಬಾಳಲು ಬಂದ ನಮ್ಮೆಲ್ಲರ ಬದುಕಿನ ಮೂಲ ಒಂದೇ
ಎಂದು ಅಭಿಷೇಕ್ ಗಜಲ್ ರೂಪಿಸಿದರೆ
ಈ ಮನೆಯ ಲೆಕ್ಕ ಚುಕ್ತಾ ಮಾಡಿ ಆ ಮನೆಗೆ ಹೊರಟಿದ್ದಾಳೆ ಅರುಣಾ, ನೀ ಹೆಗಲು ಕೊಡಲಿಲ್ಲವೆಂದು ಸೀದಿಗೆಗೆ ಹಾಕಿದ ಹೂ ಅಳುತ್ತಿತ್ತು
ಅಂತಾ ಅರುಣಾ ನರೇಂದ್ರ ಗಜಲ್ ನೋವಿನಿಂದ ಧ್ವನಿಸುತ್ತದೆ.

ಪ್ರೀತಿ ಪ್ರೇಮ ಎಂದು ಕನವರಿಸುವ ಕಾಡಿನಲಿ ಅಲ್ಲಾ ಗಿರಿರಾಜ್:
ನನ್ನ ನೋವಿಗೆ ಮಲಾಮು ಹಚ್ಚುವನು ಈಗ ತಲ್ವಾರ್ ಮಸಿಯುತ್ತಿದ್ದಾನೆ, ಹೇಗೆ ನಂಬಲಿ ಇವನನ್ನು
ಅನ್ನುತ್ತಾ ಲವ್ ಜಿಹಾದ್ ನೆನಪುಗಳನ್ನು ಬೇಡ ವೆಂದರೂ ಹುಟ್ಟಿಸುತ್ತಾರೆ.
ಹೃದಯಗಳ ಸೇತುವೆ ಮುರಿದು ಹೋಗಿದೆ ಒಲವಿನ ದಡ ಸೇರುವದು ಹೇಗೆ, ರಾತ್ರಿಗಳೆಲ್ಲ ನೀರವತೆಯಲಿ ಮುಳುಗಿರುವ ಕನಸುಗಳ ಬೆಸೆಯುವದು ಹೇಗೆ
ಅನ್ನುವದು ಆಸೀಫಾರವರ ಆತಂಕ.

ಇಮಾಮ್ ನ ನಸಿಬದಲ್ಲಿ ನಿನ್ನ ಒಲವು ಬರೆದಿತ್ತು. ಕಣ್ಣ ಹನಿ ಜಾರಿದಾ ಘಳಿಗೆ ಮಡಿಲೊಂದು ತೊಯದಿರಬಹುದು ಸಖಿ
ಅನ್ನುತ್ತಾ ಇಮಾಮ್ ಗೋಡಕಾರ ಗಜಲ್ ಮೆಲಕು ಹಾಕಿದಾಗ
ಬೆಂಕಿ ಹಚ್ಚುವರ ನಡುವೆ ಇಲ್ಲೊಬ್ಬ ದೀಪ ಹಚ್ಚುತ್ತಿದ್ದಾನೆ
ಅಂತಾ ಇಮಾಮ್ ಹಡಗಲಿ ಪರಿತಪಿಸಿದಾಗ
ಮಸಲತ್ತುಗಾರರಿಗೆ ಮುಂದೊಂದು ದಿನ ತಕ್ಕ ಶಾಸ್ತಿ ಕಾದಿದೆ ನೋಡು ಮಾಡಿದ ಪಾಪಕ್ಕೆ ತಕ್ಕ ಶಿಕ್ಷೆ ಅನುಭವಿಸಬೇಕು ನೋಡು
ಎಂದು ಈರಣ್ಣ ಬೆಂಗಾಲಿ ಹೇಳುತ್ತಾರೆ.

ಶಬ್ದಗಳೇ ಬರುವದೇ ಇಲ್ಲಾ ಮನಸುಗಳು ಮುರಿಯುವಾಗ ಏಕೆ ಕಿವಿಗಳೇ ಕಿವುಡಾಗಿರಬಹುದು ಈ ಕಣ್ಣುಗಳು ಅಳುವಾಗ
ಎಂದು ಉಮರ್ ದೇವರಮನಿ ಹೇಳುತ್ತಾರೆ.
ಅಂಗಾಲಿಗೆ ಮುತ್ತಿಕ್ಕಿದ ಮಣ್ಣು ಹಿಮ್ಮಡಿಯಲಿ ಹಿಂಮೇಳ ಹಾಕಿವೆ ಸಾಕಿ
ಎ. ಎಸ್.ಮಕಾನದಾರ ಗಜಲಿಸುತ್ತಾರೆ.
ಈ ಗಜಲ್ ಗಳನ್ನು ಮಾತ್ರ ಯಾಕೆ, ಹೇಗೆ ಸಂಪಾದಕರು ಆಯ್ಕೆ ಮಾಡಿದರು? ಪ್ರತಿ ಗಜಲ್ ವಾಚನ ಒಂದು ವಿಶಿಷ್ಟ ಅನುಭವ ನೀಡುತ್ತಾ, ಓದಿಸಿಕೊಂಡು ಕೇಳಿಸುತ್ತಾ ಮುದ ನೀಡುವ, ಭಾವನೆಗಳಿಗೆ ಉದ್ದಿಪನ ಮಾಡುವ ಪರಿ ಮೆಚ್ಚು ವಂತಹದ್ದು. ಹೀಗಾಗಿ ಸಂಪಾದಕ ರಂಜಾನ್ ಅವರ ಗಜಲ್ ನೇಕಾರಿಕೆ ಪ್ರಶಂಸನೀಯ.

ಅವ್ವನ ಪಾದದಡಿಯ ಸ್ವರ್ಗ ಗಜಲ್ ಸಂಕಲನ ಒಂದು ಅಗೋಚರ, ಅಲೌಕಿಕ, ಅತೀತ, ಅನಾಮಧೇಯ ನಾಯಕ -ನಾಯಕಿ ಯರ ಭಾವನೆಗಳ ಕಾರಂಜಿ ಎಬ್ಬಿಸುತ್ತ ನೈಸರ್ಗಿಕವಾದ ಬೃಂದಾವನ ಹುಟ್ಟಿಸುತ್ತದೆ.
ಶಬ್ದಗಳು ಮುಗಿದು ಹೋದವು. ಅರ್ಥ ಮಾತ್ರ ಹೊಳೆಯಲಿಲ್ಲ, ಅಗೋಚರವೇ ಉಳಿವೆ ನೀನು ಯಾಕೆ ಎಂದು ಎಂದಿಗೂ ತಿಳಿಯಲಿಲ್ಲ
ಅನ್ನುವ ಬಸು ಬೇವಿನ ಗಿಡದರವರ ಗಜಲ್ ಇಡೀ ಗಜಲ್ ಸಾಮ್ರಾಜ್ಯವನ್ನೇ ಒಂದು ಅಗೋಚರ ರೋಮಾಂಚನದೊಂದಿಗೆ ಅದರ ಚಿದಂಬರ ರಹಸ್ಯ ವ್ಯಾಪ್ತಿಯನ್ನು ಅನಾವರಣ ಗೊಳಿಸುತ್ತದೆ.
✍️ಅರವಿಂದ ಕುಲಕರ್ಣಿ
ಧಾರವಾಡ
