ನಾರಾಯಣ ಶ್ರೀನಿವಾಸ ರಾಜಪುರೋಹಿತ್’ ನಾಡಿಗಾಗಿ ದೇಶಕ್ಕಾಗಿ ಸ್ವಾತಂತ್ರ್ಯ ಚಳುವಳಿ ಯಲ್ಲಿ ಭಾಗವಹಿಸುವುದರ ಜೊತೆಗೆ ಸಂಶೋಧನಾ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿದ ಮಹನೀಯರು. ಮರೆತುಹೋದ ಮಹನೀಯರ ಬಗ್ಗೆ ತಿಳಿದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಇವರನ್ನು ಕುರಿತು ತಿಳಿಯುವುದು ಒಂದು ಸುಯೋಗ.
ಹಾವೇರಿ ಸಮೀಪದ ಅಗಡಿಯಲ್ಲಿ ೧೮೮೭ರಲ್ಲಿ ಹುಟ್ಟಿದ ರಾಜಪುರೋಹಿತ್ ಹೆಸರಿಗೆ ತಕ್ಕಂತೆ ರಾಜನಾಗದೆ ಕಡುಬಡವರ ಮಗನಾಗಿ ಹುಟ್ಟಿದರು. ಇವರು ಯಾವ ಶಾಲೆಯಲ್ಲೂ ಕಲಿಯುವ ಅದೃಷ್ಟವನ್ನು ಪಡೆದುಬಂದಿರಲಿಲ್ಲ. ಹೀಗಾಗಿ ತಮ್ಮಷ್ಟಕ್ಕೆ ತಾವೇ ಕಲಿತು ಅಂದಿನ ಮುಲ್ಕಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮರಾಗಿ ಉತ್ತೀರ್ಣರಾದರು. ಅದೇ ರೀತಿಯಲ್ಲಿ ತಮ್ಮ ಶಿಕ್ಷಕರ ತರಬೇತಿ ಯನ್ನೂ ಮುಗಿಸಿ ೧೯೦೫ರಲ್ಲಿ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿ ಸೇರಿಕೊಂಡರು.

ಆದರೆ ಬ್ರಿಟಿಷರ ವಿರುದ್ಧ ನಡೆಯುತ್ತಿದ್ದ ಚಳುವಳಿ ಬಹಳ ಗಂಭೀರವಾಗಿ ದ್ದದ್ದರಿಂದ ಅದರಲ್ಲಿ ತಾವೂ ಪಾತ್ರವಹಿಸುವ ಮನಸ್ಸು ಮಾಡಿದರು.ಅವರು ಚಳುವಳಿಯಲ್ಲಿ ಭಾಗವಹಿಸಿದರೆಂಬ ಕಾರಣದಿಂದ ಬ್ರಿಟಿಷ್ ಸರಕಾರ ಅವನನ್ನು ಕೆಲಸದಿಂದ ತೆಗೆದುಹಾಕಿ ಜನ್ಮಪೂರ್ತಿ ಬೋಧಿಸಲು ಸಾಧ್ಯವಾಗದಂತೆ ಮಾಡಿತು. ಆದರೆ ಅದೇ ವೇಳೆಗೆ ಆಲೂರು ವೆಂಕಟರಾಯರು ಕಾನೂನು ಪದವಿಯನ್ನು ಪಡೆದುಕೊಂಡು ಧಾರವಾಡಕ್ಕೆ ಬಂದರು. ಅವರು ೧೯೦೮ರಲ್ಲಿ ಧಾರವಾಡದಲ್ಲಿ ರಾಷ್ಟ್ರೀಯ ಶಾಲೆಯೊಂದನ್ನು ಸ್ಥಾಪಿಸಿದರು. ಆ ಶಾಲೆಯಲ್ಲಿ ರಾಜಪುರೋಹಿತರು ಶಿಕ್ಷಕರಾಗಿ ಸೇರಿಕೊಂಡರು. ಇದೆಲ್ಲ ಒಂದು ರೀತಿಯಲ್ಲಿ ಯೋಗಾನುಯೋಗವೆಂದೇ ಹೇಳಬೇಕು.

ಅವರು ಬಾಲ್ಯದಿಂದಲೇ ಶಿಲಾ ಶಾಸನಗಳು, ತಾಳೆಗರಿಯ ಹಸ್ತಪ್ರತಿಗಳು ಹಾಗೂ ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಅಭ್ಯಾಸ ಮಾಡುವುದರಲ್ಲಿ ಬಹಳ ಆಸಕ್ತಿ ಯನ್ನು ಹೊಂದಿದ್ದರು. ಪುರಾತತ್ವಶಾಸ್ತ್ರ ಆಗಿನ್ನೂ ನಮ್ಮ ದೇಶದಲ್ಲಿ ಉಗಮಾವಸ್ಥೆ ಯಲ್ಲಿದ್ದ ಕಾಲ. ಯಾವುದೇ ಸಂಪನ್ಮೂಲಗಳ ಅನುಕೂಲವಿಲ್ಲ ದಿದ್ದರೂ ಹಳ್ಳಿಯಿಂದ ಹಳ್ಳಿಗೆ ಪ್ರಯಾಣ ಮಾಡಿ ಸಿಕ್ಕಸಿಕ್ಕಲ್ಲಿ ಹಲವಾರು ಶಾಸನಗಳನ್ನೂ, ಉಪಯುಕ್ತವಾದ ಮಾಹಿತಿಗಳನ್ನೊಳಗೊಂಡ ದಾಖಲೆಗಳನ್ನು ಪರಿಶೀಲಿಸಿ, ಅಭ್ಯಾಸ ಮಾಡಿ ಕರ್ನಾಟಕದ ಸಾಂಸ್ಕೃತಿಕ, ಐತಿಹಾಸಿಕ, ಸಾಂಪ್ರ ದಾಯಿಕ ಪರಂಪರೆಯನ್ನು ದೂರದೂರದ ವರೆಗೆ ಹರಡಲು ನೆರವಾದರು. ಹಳತಾದ ಬಟ್ಟೆಗಳನ್ನ ಉಟ್ಟು, ಒಂದು ಕರಿಟೋಪಿಯನ್ನು ತಲೆಯ ಮೇಲಿಟ್ಟುಕೊಂಡು ಬರಿಗಾಲಿನಲ್ಲಿ ನಡೆಯುತ್ತಿ ದ್ದರು ನಾರಾಯಣ್ ರಾಜಪುರೋಹಿತ್. ಕರ್ನಾಟಕದಲ್ಲಿ ನಡೆದುಬಂದ ಸಾಂಸ್ಕೃತಿಕ ಪರಂಪರೆಯಲ್ಲಿ ತೋರಿದ ಸಣ್ಣಸಣ್ಣ ವ್ಯತ್ಯಾಸ ಗಳನ್ನೂ ಸಹ ಹಾದಿಯಲ್ಲಿ ಬಂದ ಯಾವುದೇ ನೋವನ್ನೂ, ಅಡೆತಡೆಯನ್ನೂ ಲೆಕ್ಕಿಸದೆ ಒಟ್ಟುಗೂಡಿಸಿ ಕರ್ನಾಟಕದ ಚರಿತ್ರೆಯನ್ನು ಶ್ರೀಮಂತಗೊಳಿಸಿದರು.

ವಿಜಯನಗರ ಸಾಮ್ರಾಜ್ಯದ ಅವನತಿಗೆ ಕಾರಣ ವಾದ ರಕ್ಕಸತಂಗಡಿಯ ನೆಲೆಯನ್ನು ಗುರುತಿಸಿದ ಹೆಮ್ಮೆ ರಾಜಪುರೋಹಿತ್ ಅವರದ್ದು. ಬಿಜಾಪುರ ಬಳಿ ಇರುವ ರಕ್ಕಸ ತಂಗಡಿಗೆ ಒಬ್ಬಂಟಿಗನಾಗಿ ರಸ್ತೆಯನ್ನು ಅಗೆದು ವಿಜಯನಗರದ ವೈಭವದ ಅಂತ್ಯವನ್ನು ಕಾಣಿಸಿದ ರಕ್ಕಸ ತಂಗಡಿ ಯುದ್ಧದ ಮೈದಾನ ವನ್ನು ಪ್ರಕಾಶಕ್ಕೆ ತಂದರು. (೧೫೬೫ ರಲ್ಲಿ ಮಂತ್ರಿ ರಾಮರಾಯನ ನೇತೃತ್ವದಲ್ಲಿ ನಡೆದ ಈ ಯುದ್ಧದಲ್ಲಿ ದಕ್ಷಿಣದ ಮುಸ್ಲಿಂ ರಾಜ್ಯಗಳೆಲ್ಲ ವನ್ನೂ ರಕ್ಕಸತಂಗಡಿಯಲ್ಲಿ ಎದುರಿಸಬೇಕಾಗಿ ಬಂದು ಕೊನೆಗೆ ವಿಜಯನಗರವು ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು).

ಇಡೀ ಯುದ್ಧ ಭೂಮಿಯು ಮನುಷ್ಯರ, ಕುದುರೆಗಳ, ಹಣದ, ಯುದ್ಧದಲ್ಲಿ ಬಳಸಿದ ತೋಪುಗಳ ಪಳೆಯುಳಿಕೆಗಳನ್ನು ಹೊಂದಿತ್ತು. ಅದುವರೆಗೂ ತಾಳಿಕೋಟೆಯೇ ಯುದ್ಧ ಮೈದಾನವಾಗಿತ್ತೆಂದು ಸಂಶೋಧಕರು ನಂಬಿದ್ದರು. ಈ ಅನಾವರಣದ ನಂತರ ರಕ್ಕಸ ತಂಗಡಿಯೇ ಯುದ್ಧದ ಮೈದಾನವಾಗಿತ್ತು ಎಂಬುದು ತಿಳಿದು ಬರುತ್ತದೆ. ಇದನ್ನು ಇತರ ಸಂಶೋಧಕರು ಸಹ ಒಪ್ಪಿಕೊಂಡಿರುತ್ತಾರೆ. ಅದಕ್ಕೇ ಈಗ ಯುದ್ಧ ಮೈದಾನದ ಹೆಸರು ರಕ್ಕಸ ತಂಗಡಿ ಎಂದೇ ಪ್ರಯೋಗವಾಗುತ್ತದೆ.

ನಾರಾಯಣ್ ಪುರೋಹಿತರ ಸಂಶೋಧನೆ ಗಳಲ್ಲಿ ಇನ್ನೊಂದು ಮಹತ್ವಪೂರ್ಣ ಸಂಶೋಧನೆ ಎಂದರೆ ಮಹಾರಾಷ್ಟ್ರದಲ್ಲಿ ಬಹಳ ಪ್ರಚಲಿತ ವಾಗಿರುವ ‘ವಿಠ್ಠಲಮೂರ್ತಿ‘ ಯ ಆರಾಧನೆ ಕರ್ನಾಟಕದಿಂದ ಬಂದದ್ದು ಎಂಬುದು. ಮೊದ ಮೊದಲು ಮಹಾರಾಷ್ಟಕ್ಕೆ ಸೇರಿದುದೆಂದು ತಿಳಿದಿದ್ದ ಸಂಶೋಧಕರು ಪುರೋಹಿತರ ಈ ಸಂಶೋಧನೆಯನ್ನು ಸರಿಎಂದು ಒಪ್ಪಿಕೊಂಡರು.

ಲೋಕಮಾನ್ಯ ತಿಲಕರು ಹೊರಡಿಸುತ್ತಿದ್ದ ಕರ್ನಾಟಕದ ಚರಿತ್ರೆಯನ್ನು ನಿರೂಪಿಸುವ ಬರಹಗಳನ್ನೊಳ ಗೊಂಡ ಕೇಸರಿ ಪತ್ರಿಕೆಗೆ ಹಲವಾರು ಬರಹಗಳನ್ನು ಬರೆಯುತ್ತಿದ್ದ ಪುರೋಹಿತರಿಗೆ ಮರಾಠಿ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಅಗಾಧವಾದ ಪಾಂಡಿತ್ಯವಿತ್ತೆಂದು ತಿಳಿದು ಬರುತ್ತದೆ. ಅಷ್ಟೇ ಅಲ್ಲ ಈ ಪತ್ರಿಕೆಯಲ್ಲಿ ಬರೆದ ಲೇಖನ ಪುರೋಹಿತರಿಗೆ ಒಂದು ದೊಡ್ಡ ಅವಕಾಶವನ್ನೇ ಒದಗಿಸಿತು. ಅವರು ಕೇಸರಿ ಯಲ್ಲಿ ೧೯೧೨ ರಿಂದ ೧೯೧೪ ರವರೆಗೆ ಸುಮಾರು ಆರು ಮಹತ್ವದ ಸಂಶೋಧನಾ ಲೇಖನಗಳನ್ನು ಬರೆದರು.

೧೯೩೫ರಲ್ಲಿ ಮುಂಬಯಿಯಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಶೋಧನಾ ಗೋಷ್ಠಿಯ ಅಧ್ಯಕ್ಷರಾಗಿ ಮಾಡಿದ ಭಾಷಣ ರಾಜಪುರೋಹಿತರಂತಹ ಬುದ್ಧಿವಂತ, ನಿರಂತರವಾಗಿ ಶ್ರಮಿಸುವ ಕನ್ನಡಸಂಶೋಧನ ಕಾರರು ಮತ್ತೊಬ್ಬರಿಲ್ಲ ಎಂಬುದನ್ನು ತಿಳಿಸುತ್ತದೆ. ಇವರ ಒತ್ತಾಯದಿಂದ ಆಲೂರರು ’ಕರ್ಣಾಟಕ ಇತಿಹಾಸ ಸಂಶೋಧನ ಮಂಡಳಿ’ಯನ್ನು ಸ್ಥಾಪಿಸಿದರು.

ಬಡತನವಾಗಲೀ, ಸಂಪನ್ಮೂಲಗಳ ಕೊರತೆ ಯಾಗಲೀ ಯಾವುದೂ ಪುರೋಹಿತರ ಸಂಶೋಧನಾ ಕಾರ್ಯಕ್ಕೆ ಅಡ್ದಿಬರಲಿಲ್ಲ. ಅಲೂರು ವೆಂಕಟರಾಯರು, ದ.ರಾ.ಬೇಂದ್ರೆ ಮೊದಲಾದ ಸ್ವಾತಂತ್ರ್ಯ ಹೋರಾಟಗಾರರು ನಾರಾಯಣ್ ಪುರೋಹಿತರನ್ನು ಬಹಳ ಚೆನ್ನಾಗಿ ಬಲ್ಲವರಾಗಿದ್ದರು.ಸಾಹಿತಿ ಆರ್.ಎಸ್. ಮುಗಳಿ ಯವರು ಪುರೋಹಿತರ ಸಂಶೋಧನಾ ವಿಧಾನ ವನ್ನು ಬಹಳ ಹೊಗಳಿದರು.೧೯೫೩ರಲ್ಲಿ ಪುರೋಹಿತರ ಮರಣವಾದಾಗ ಇವರೆಲ್ಲರೂ ಅವರಿಗೆ ಶ್ರದ್ಧಾಂಜಲಿಯನ್ನೂ ಅರ್ಪಿಸಿದರು. ಗೋಕಾಕರಂತೂ ಅವರ ವ್ಯಕ್ತಿತ್ವವನ್ನು ನಿರೂಪಿಸುವಂತಹ ಕವನವನ್ನು ಬರೆದರು.
ನಾರಾಯಣ್ ರಾಜಪುರೋಹಿತರು ಚರಿತ್ರೆ, ಪುರಾತತ್ವ ಶಾಸ್ತ್ರ,ಸಾಂಸ್ಕೃತಿಕ ಪರಂಪರೆಗಳ ಕುರಿತು ತಿಳಿಸುವ 525ಕ್ಕಿಂತಲೂ ಹೆಚ್ಚು ಲೇಖನ ಗಳನ್ನು ಬರೆದಿದ್ದು, ಅದರ ಮುದ್ರಿತ ಪ್ರತಿಯನ್ನು ಪುರೋಹಿತರ ಮಗಳಾದ ಶ್ರೀಮತಿ.ಸರೋಜಿನಿ ಕುಲಕರ್ಣಿಯವರು ಹೊರತಂದಿದ್ದಾರೆ. ಇದರ ಹೆಸರು’ಶುಕ್ಲ ಯಜುರ್ವೇದ ಮಹಾತ್ಮರು’. ಈ ಪುಸ್ತಕವು ರಾಜಪುರೋಹಿತರು ಸಮಾಜಕ್ಕೆ ಕೊಟ್ಟ ಅಸಂಖ್ಯ ಕೊಡುಗೆಯನ್ನೂ, ಅದು ನಿರ್ಲಕ್ಷ್ಯಗೊಂಡ ರೀತಿಯನ್ನೂ ತಿಳಿಸುತ್ತದೆ. ಇವರು ಬರೆದಿಟ್ಟಿರುವ ಇನ್ನೂ ಹಲವು ಸಂತರ ಹಾಗೂ ಸಮಾಜ ಸುಧಾರಕರ ಜೀವನ ಚರಿತ್ರೆ ಗಳು ಮುದ್ರಣವನ್ನೇ ಕಾಣದೆ ಹೋಗಿವೆ. ರಾಜಪುರೋಹಿತರು ತಮ್ಮ ದಿನಚರಿಯಲ್ಲಿ ಪ್ರತಿದಿನದ ಚಟುವಟಿಕೆಗಳನ್ನು ಬರೆದಿಡುತ್ತಿದ್ದ ರಿಂದ ಅದರಲ್ಲಿ ಕೆಲವು ಸೂಚನೆಗಳು ದೊರಕುತ್ತವೆ. ಅದು ಬಿಟ್ಟರೆ ಇಂತಹ ಮಹಾನ್ ವ್ಯಕ್ತಿಯ ಯಾವೊಂದು ಕೃತಿಯೂ ಇಲ್ಲ ಎನ್ನುವುದು ತುಂಬ ದುಃಖ ತರುವ ವಿಚಾರ.

ವಿದ್ಯಾಭ್ಯಾಸದ ಶುಲ್ಕಕ್ಕೆ ಹಣವಿಲ್ಲದೆ, ತಾವೇ ಸ್ವತಃ ಅಭ್ಯಾಸ ಮಾಡಿ ತಮ್ಮ ಬಲದಿಂದಲೇ ದೊರಕಿಸಿಕೊಂಡ ಉದ್ಯೋಗವನ್ನು ಬ್ರಿಟಿಷರ ವಿರುದ್ಧ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಕಳೆದುಕೊಂಡರೂ ಎದೆಗೆಡದೆ ವಿಭಿನ್ನವಾದ ದಿಸೆಯಲ್ಲಿ ಅಭ್ಯಸಿಸಿ, ಕರ್ಣಾಟಕದ ಇತಿಹಾಸ ಶೋಧನೆಯಲ್ಲಿ ತೊಡಗಿದ ಇಂತಹ ಮಹಾನ್ ವ್ಯಕ್ತಿಯನ್ನು ಸ್ಮರಿಸುವುದು ಹೆಮ್ಮೆಯ ಸಂಗತಿ.
ನಮ್ಮ ಹಿರಿಯರು ನಮಗಾಗಿ ಏನನ್ನು ಮಾಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು ನಮ್ಮಯುವ ಜನಾಂಗ ತಮ್ಮ ಆಯಸ್ಸಿನ ಸ್ವಲ್ಪ ಭಾಗವನ್ನಾದರೂ ಮೀಸಲಿಡಲಿ ಎಂದು ಆಶಿಸುತ್ತೇನೆ.
✍️ಡಾ.ಸತ್ಯವತಿ ಮೂರ್ತಿ
ಮ್ಯಾಂಚೆಸ್ಟರ್, ಇಂಗ್ಲೆಂಡ್
