‘ನದಿ ಹರಿಯುವ ಕಡೆ ಶುಭ್ರ ಆಹ್ಲಾದಕರ ವಾತಾವರಣ ಇರುತ್ತದೆ. ನದಿಯಂತೆ ಮುದ ನೀಡುವ ಸಾಹಿತ್ಯ ಸಂಘಟನೆಗಳ ಸಂಖ್ಯೆ ಹುಬ್ಬಳ್ಳಿಯಲ್ಲಿ ಹೆಚ್ಚಬೇಕು. ಸಾಹಿತ್ಯದ ಚರ್ಚೆ ನಿರಾತಂಕವಾಗಿ ನಡೆಯಬೇಕು’ ಎಂದು ಹಿರಿಯ ಬರಹಗಾರ್ತಿ ಪ್ರೊ.ಮಾಲತಿ ಪಟ್ಟಣಶೆಟ್ಟಿ ಆಶಿಸಿದರು.

ದಿ:26/06/2023 ರಂದು ಹುಬ್ಬಳ್ಳಿ ನಗರದ ಕಿಮ್ಸ್ ಆಸ್ಪತ್ರೆಯ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಅಕ್ಷರಸಾಹಿತ್ಯ ವೇದಿಕೆ, ಹುಬ್ಬಳ್ಳಿ ಹಾಗೂ ಕಿಮ್ಸ್, ಹುಬ್ಬಳ್ಳಿ ಇವರು ಆಯೋಜಿಸಿದ್ದ ‘ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಪ್ರಶಸ್ತಿ ಪ್ರದಾನ ಸಮಾರಂಭ‘ ದಲ್ಲಿ ಅವರು ಮಾತನಾಡಿದರು.
‘ಅನುಭವ ತುಂಬಿಕೊಂಡಾಗ, ಹೃದಯ ವತ್ತಾಯಿಸಿದಾಗ ಬರಹ ರೂಪುಗೊಳ್ಳುತ್ತದೆ, ಬರಹಗಾರನಿಗೆ ಪಕ್ವತೆ ಸಹೃದಯ ಗುಣ ಮನಸ್ಸಿನ ಮಾತು ಕೇಳಬೇಕೆನ್ನುವ ತುಡಿತ ಇರಬೇಕು. ಬರಹಕ್ಕೊಂದು ಸ್ವರೂಪ ಭಾಷಾ ಶೈಲಿ ನಿರೂಪಣಾ ಕೌಶಲ್ಯ, ಹೃದಯ ಸ್ಪರ್ಶಿಸುವ ಅಂಶಗಳತ್ತ ಗಮನಹರಿಸಬೇಕು, ಯುವ ಬರಹಗಾರರು ಹಳೆಯ ಹಾಗೂ ಹೊಸ ತಲೆಮಾರಿನ ಲೇಖಕರ ಸಾಹಿತ್ಯ ಓದಬೇಕು, ಸಾಹಿತಿ ಗಳೊಂದಿಗೆ ಒಡನಾಟ ಇಟ್ಟುಕೊಂಡಿರ ಬೇಕು, ಬರೆದದ್ದನ್ನು ಇನ್ನೊಬ್ಬರಿಗೆ ತೋರಿಸಿ ಬರಹಗಳನ್ನು ಗಟ್ಡಿಗೊಳಿಸಬೇಕು’ ಎಂದು ಸಲಹೆ ನೀಡಿದರು.

‘ವಿನಯ ಗುಂಟೆಯವರ ‘ಅಪ್ಪನ ಚಪ್ಪಲಿ‘ ಕಥೆಯಲ್ಲಿ ಸ್ವಅನುಭವದ ನಿರೂಪಣೆ ಗ್ರಾಮೀಣ ಭಾಗದ ಸ್ವಾಭಾವಿಕ ಚಿತ್ರಣ ಮತ್ತು ಕಲಾತ್ಮಕತೆ ಇದೆ. ಸಮಾನತೆ ಪ್ರತಿಪಾದಿಸುವ ದಲಿತ ಸಂವೇದನೆಯ ಈಕಥೆ ಎಲ್ಲರಲ್ಲೂ ಮಾನವೀಯ ಗುಣ ಬೆಳೆಸಬೇಕೆಂಬ ಆಶಯ ವನ್ನು ಸಾರುತ್ತದೆ’ ಎಂದು ವಿವರಿಸಿದರು.
ಪ್ರಶಸ್ತಿ ವಿಜೇತ ಕಥೆ ಕುರಿತು ಮಾತನಾಡಿದ ಕವಿ ಪ್ರಕಾಶ ಕಡಮೆ ‘ತಲೆಮಾರುಗಳಿಂದ ಚಪ್ಪಲಿ ಹೊಲಿಯುವ ಕಾಯಕ ಮಾಡುವವರು ಹೊಸ ಚಪ್ಪಲಿ ತೊಡಲೂ ಸಹ ಜಾತಿ ವ್ಯವಸ್ಥೆ ನಿರ್ಬಂಧ ವಿಧಿಸಿದೆ, ಇದನ್ನೇ ಕೇಂದ್ರವಾಗಿಟ್ಟು ಕೊಂಡು ಅಪ್ಪನ ಚಪ್ಪಲಿ ಕಥೆ ಮನಮುಟ್ಟುತ್ತದೆ’ ಎಂದರು.

ಬೆಂಗಳೂರು ವಿ.ವಿ ಸಂಶೋಧನಾ ವಿದ್ಯಾರ್ಥಿ ಯಾದ ಕಥೆಗಾರ ವಿನಯ ಗುಂಟೆ ಮಾತನಾಡಿ ‘ಅಸ್ಪೃಶ್ಯತೆಯ ಪ್ರತಿರೋಧ ಈ ಕಥೆ ಎನ್ನುತ್ತ, ನನ್ನ ಅಪ್ಪನ ಜೀವನದಲ್ಲಿ ನಡೆದ ದಾರುಣ ಘಟನೆಯನ್ನೇ ಕಥೆಯಾಗಿಸಿದ್ದೇನೆ, ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳಾದರೂ ಅಸ್ಪ್ರಶ್ಯತೆಯ ಕ್ರೌರ್ಯ ತೊಲಗಿಲ್ಲ, ದಲಿತರು ಹೊಸಬಟ್ಟೆ ಧರಿಸಿದರೆ, ದಿಬ್ಬಣ ಹೊರಟರೆ, ಬೈಕ್ ಖರೀದಿಸಿ ದರೂ ದಾಳಿ ನಡೆಸುವ ಮನಸ್ಥಿತಿ ಹಲವರಲ್ಲಿದೆ. ದಲಿತ ಮಹಿಳೆಯರ ಮೇಲೆ ಅತ್ಯಾಚಾರ, ಶೋಷಣೆ, ದೌರ್ಜನ್ಯ ಮುಂದುವರೆದಿದೆ, ಇದಕ್ಕೆ ಪ್ರತಿರೋಧವಾಗಿ ಕಥೆರೂಪಗೊಂಡಿದೆ ಎಂದರು. ಬರಹಗಾರ ಸಿ.ಎಂ ಮುನಿಸ್ವಾಮಿಯವರು ಡಾ.ಪ್ರಹ್ಲಾದ ಸಮಗ್ರ ಕಥೆಗಳನ್ನು ಸಂಕ್ಷಿಪ್ತವಾಗಿ ವಿಶ್ಲೇಷಿಸಿ ದರು. ಶ್ರೀಮತಿ ವಿಜಯಾ ಅಗಸನಕಟ್ಟೆ ಮತ್ತು ಮಕ್ಕಳು ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ಉಪಸ್ಥಿತರಿದ್ದ ಈ ಕಾರ್ಯಕ್ರಮದಲ್ಲಿ ಎಂ.ಬಿ ಅಡ್ನೂರ ಅಧ್ಯಕ್ಷತೆ ವಹಿಸಿದ್ದರು, ಡಾ. ಸಿದ್ದೇಶ್ರರ ಕಟ್ಕೋಳ ಸ್ವಾಗತಿಸಿದರು. ಮಹಾಂತಪ್ಪ ನಂದೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನಂದಾ ಕಡಮೆ ಅತಿಥಿಗಳನ್ನು ಪರಿಚಯಿಸಿದರು.

ವಿರುಪಾಕ್ಷ ಕಟ್ಟಿಮನಿ ನಿರ್ವಹಿಸಿದ ಈ ಕಾರ್ಯಕ್ರಮದಲ್ಲಿ ಕುಮಾರ ಬೇಂದ್ರೆ, ಚನ್ನಪ್ಪ ಅಂಗಡಿ, ಬಸು ಬೇವಿನಗಿಡದ, ರವಿಶಂಕರ ಗಡಿಯಪ್ಪನವರ, ಲಿಂಗರಾಜ ಅಂಗಡಿ, ನಿರ್ಮಲಾ ಶೆಟ್ಟರ್, ರೂಪಾ ಜೋಷಿ, ಭಾರತಿ ಹಿರೇಮಠ, ಸಿ.ಎಂ ಚನ್ನಬಸಪ್ಪ, ಸರೋಜಾ ಮೇಟಿ, ಎಸ್.ಆರ್ ಆಶಿ, ಬಸು ಸುಳಿಭಾವಿ, ಅರುಣಕುಮಾರ ಹಬ್ಬು, ಶ್ಯಾಮಸುಂದರ ಬಿದರಕುಂದಿ, ಡಾ.ಸುಭಾಸ ಬಬ್ರುವಾಡ, ವೀರಣ್ಣ ಬಡಿಗೇರ, ಸೋಮಶೇಖರ ಇಟಗಿ ಮತ್ತಿತರು ಹಾಜರಿದ್ದರು. ಗಾಯತ್ರಿ ರವಿ ವಂದಿಸಿದರು.

✍️ಸುನಂದಾ ಕಡಮೆ ಹುಬ್ಬಳ್ಳಿ
