ಭೋರ್ಗರೆಯುವ ಶರಧಿಯ ಅಲೆಗಳಂತೆ
ಬದುಕಿನಲ್ಲಿ ಅನಿರೀಕ್ಷಿತ ತಿರುವುಗಳು
ಬಂದಪ್ಪಳಿಸಿದಾಗ ಎದೆಗುಂದಬೇಡ…
ಬದುಕಿನ ವಾಸ್ತವಿಕತೆಯ ನೆನೆದು
ಎಲ್ಲವನ್ನೂ ಕಳೆದುಕೊಂಡೆನೆಂದು
ನಿರಾಸೆಯಲಿ ನೊಂದುಕೊಳ್ಳಬೇಡ..
ಮನದ ಮೂಲೆಯಲಿ ಮತ್ತೆ
ಚಿಗುರೊಡೆಯಲಿ ಭರವಸೆಯ ಆಶಾಕಿರಣ….
ಬದುಕು ,ಹುಟ್ಟು ಸಾವುಗಳ ನಡುವಿನ
ಸುಂದರ ಪಯಣ…
ಸಾವು-ನೋವಿಲ್ಲದ ಬದುಕಿಲ್ಲ..
ಆರಂಭವನು ಹೊಂದಿರುವ
ಪ್ರತಿಯೊಂದಕೂ ಅಂತ್ಯವಿದೆ..
ಈ ಕ್ಷಣವೂ ಮರೆಯಾಗುತ್ತದೆ..
ಜೀವನದಲ್ಲಿ ಏನೇ ನಡೆದರೂ
ಅದು ದೈವ ನಿಶ್ಚಿತವೆಂಬ ದೃಢ ವಿಶ್ವಾಸವಿರಲಿ….
ನೋವಿರಲಿ- ನಲಿವಿರಲಿ
ಸುಖ- ದುಃಖಗಳಲಿ ಸಮಚಿತ್ತವಿರಲಿ..
ಮತ್ತೆ ಬದುಕು ಕಟ್ಟುವೆನೆಂಬ
ಉತ್ಸಾಹವಿರಲಿ…ಛಲವಿರಲಿ…
ಎಂಥ ಸಂದಿಗ್ಧ ಪರಿಸ್ಥಿತಿಯಲೂ
ಆತ್ಮಸ್ಥೈರ್ಯ ಕುಗ್ಗದಿರಲಿ….
ಉತ್ತಮ ಆಲೋಚನೆಗಳೊಂದಿಗೆ
ಆದರ್ಶತತ್ವಗಳ ಮೈಗೂಡಿಸಿಕೊಂಡು
ಕಷ್ಟ ಕಾರ್ಪಣ್ಯಗಳಿಗೆ ಧೃತಿಗೆಡದೆ
ಸಾಧನೆಯ ಹಾದಿಯಲಿ
ಸವಾಲುಗಳ ಎದುರಿಸಿ
ಆತ್ಮವಿಶ್ವಾಸದಿ ದಿಟ್ಟ ಹೆಜ್ಜೆಯನ್ನಿಟ್ಟು
ಗುರಿಯತ್ತ ಸಾಗುತಿರು…
ಭರವಸೆಯ ಹೊಂಬೆಳಕು
ಬಾಳು ಬೆಳಗಲಿ…
ಸ್ಫೂರ್ತಿಯ ಚಿಲುಮೆಯಾಗಿ
ಕನಸುಗಳಿಗೆ ಚೈತನ್ಯ ತುಂಬಲಿ..
ಭರವಸೆಯೇ ಬೆಳಕಾಗಲಿ..
ಭರವಸೆಯೇ ಬದುಕಾಗಲಿ….
✍️ಸುಮಿತ್ರಾ ಕೋಳೂರು
ಧಾರವಾಡ
