ಅಧಿಕ ಮಾಸದಲಿ ಶ್ರಾವಣದ ವಾತಾವರಣ ಈ ವರುಷ (2023)
ಪುರುಷೋತ್ತಮನ ಪೂಜೆಯಲ್ಲಿ ಜನಮನ ವ್ಯಸ್ತ/

ಕರಿಮೋಡಗಳ ತೆಕ್ಕೆಯಿಂದ ಹೊರಬಂದಿಹ ಅರುಣ.
ಆಗಾಗ ತೇಲುವ ಕಾಮೋ೯ಡಗಳ ಸುಳಿವಲ್ಲಿ ಬಂದಿದೆ ಶ್ರಾವಣ/

ನಾಗ ಚತುರ್ಥಿ,ಪಂಚಮಿ ಉತ್ತರ ಕನಾ೯ಟಕದ ಹೆಂಗಳೆಯರಲಿ ಸಂಭ್ರಮ/
ಮನೆ ಮನೆಯಲ್ಲಿ ತಂಬಿಟ್ಟು, ಶೇಂಗಾ ಚಿಗಳೆಳ್ಳು ಉಂಡೆಗಳ ಘಮ/

ಮಣ್ಣಿಂದಾದ ಕಾಯಕ್ಕೆ ಮಣ್ಣೇ ಆಧಾರ.
ಮಣ್ಣು ಆಹಾರ ಧಾನ್ಯ,ತರಕಾರಿ ಹಣ್ಣುಗಳಿಗೆ ಮೂಲಾಧಾರ/

ಅದನರಿತು ಆಚರಣೆಗೆ ಬಂತು ಮಣ್ಣಿಗೆ ವಿಧ ವಿಧ ದೇವರ ರೂಪ ನೀಡಿ ಪೂಜಿಸುವ ಕ್ರಮ/
ಮಣ್ಣು ಸೃಷ್ಟಿಯ ಕಣ್ಣು ಆದಿ -ಅನಾದಿಯಲೂ ಮಣ್ಣಿನದೇ ವಿಕ್ರಮ/

ಹುತ್ತ ಮಣ್ಣಿನ ರೂಪವೆಂದು ಹುಡು ಹುಡುಕಿ ಹೋಗಿ ಹಾಲನೆರೆವರು ಹಲವರು/
ಮನೆ ಮನೆಗಳಲ್ಲೇ ಮಣ್ಣ ನಾಗನ ಮಾಡಿ ಪೂಜಿಸುವರು ಬಹುಜನರು/

ಹಾಲೆರೆಯುವ ಸಮಯದೊಳು ದಿಟದ ನಾಗರಾಜ ಹೊರಬಂದು ಭುಸ್ಸೆಂದರೆ ಪೂಜಾತಟ್ಟೆಯನಿಟ್ಟು ಓಡುವರು.
ಹರನ ಹಾರನ ಆಹಾರ ಕೇವಲ ವಾಯುವೆಂದರಿಯದ ಜನರು/

ಹಬ್ಬದ ದಿನಗಳಲ್ಲಷ್ಟೇ ಸಿಹಿತಿನಿಸು ಇರುತಿತ್ತು ವಾಣಿಜ್ಯೀಕರಣದ ಮೊದಲು.
ಆಗ ಋತುಮಾನಕ್ಕೆ ಅನುಸಾರವಾಗಿ ಆಹಾರ ಆಚರಣೆ ಕಾತುರ,ಸಡಗರ ಯಾವಾಗಲೂ/

ಕಂಡ ಕಂಡಲ್ಲಿ ಆಹಾರ ಮಳಿಗೆಗಳು, ಬಗೆ ಬಗೆ ತಿನಿಸುಗಳು.
ಈಗ ಆದೇಶ ಹೋದೊಡನೆ ತಿನಿಸುಗಳು ಮನೆ ಬಾಗಿಲೊಳು/

ಋತುಮಾನಗಳೂ ಏರುಪೇರಾಗುತ್ತಿವೆ.
ಜೀವನ ವಿಧಾನ ಪಲ್ಲಟವಾದರೂ; ಬೇರಿನಾಳದಲ್ಲಿ ತುಸು ತತ್ವ-ಸತ್ವ ಉಳಿದಿವೆ/

ಹಾಗಾಗಿಯೇ ಹಬ್ಬಗಳಿಗೆ ಇನ್ನೂ ಉಳಿದಿದೆ ಜೀವ ಕಳೆ.
ಮಲೆ ಅಳಿದು ಕಡಿಮೆ ಆಗುತ್ತಿದ್ದರೂ ವರುಷ ವರುಷ ಮಳೆ/

✍️ ಕಮಲಾಭಿತನಯೆ
ಶ್ರೀಮತಿ ರೇಖಾ ನಾಡಿಗೇರ ಹುಬ್ಬಳ್ಳಿ