ಹೊಯ್ಸಳರ ಕಾಲದ ಮೂಲ ಶಿಲ್ಪಗಳನ್ನ ಉಳಿಸಿ ಕೊಂಡು ನೂತನವಾಗಿ ನಿರ್ಮಿಸಿದ ದೇವಾಲಯ ವೊಂದು ಚಿಕ್ಕಮಗಳೂರು ಕಡೂರು ತಾಲ್ಲೂಕಿನ ಮಚ್ಚೇರಿಯಲ್ಲಿದೆ.

ಇತಿಹಾಸ ಪುಟದಲ್ಲಿ ಮಚ್ಚೇರಿ ಪ್ರಮುಖ ಗ್ರಾಮವಾಗಿ ಅದರಲ್ಲೂ ಹೊಯ್ಸಳರ ಕಾಲದಲ್ಲಿ ಪ್ರಮುಖವಾಗಿ ಗುರುತಿಸಿಲ್ಪಟ್ಟಿತ್ತು. ಇಲ್ಲಿನ ಕ್ರಿ.ಶ.1130 ರ ವಿಷ್ಣುವರ್ಧನನ ಕಾಲದ ಶಾಸನ ದಲ್ಲಿ ಕಲಿದೇವರ ದೇವಾಲಯವನ್ನು ಜೀರ್ಣೋದ್ದಾರ ಮಾಡಿದ ಉಲ್ಲೇಖವಿದೆ. ಇಲ್ಲಿನ ಮತ್ತೊಂದು ಶಾಸನದಲ್ಲಿ ಮಾಚೇಶ್ವರ ಮಾಧವ ದೇವಾಲಯಕ್ಕೆ ದತ್ತಿ ನೀಡಿದ ಉಲ್ಲೇಖವಿದೆ. ಮಾಚೇಶ್ವರನಿಂದಲೇ ಮಚ್ಚೇರಿ ಎಂಬ ಹೆಸರು ಊರಿಗೆ ಬಂದಿರಬಹುದು ಎನ್ನಲಾಗಿದೆ. ಇನ್ನು 13 ನೇ ಶತಮಾನದ ಶಾಸನದಲ್ಲಿ ಇಲ್ಲಿನ ಗೋಪಾಲ ದೇವಾಲಯಕ್ಕೆ ದತ್ತಿ ನೀಡಲು ಆದೇಶಮಾಡಿದ ಉಲ್ಲೇಖವಿದೆ. ಇನ್ನು ಇಲ್ಲಿ ಸಿಕ್ಕ ಪಾರ್ಶ್ವನಾಥನ ಜೈನ ಶಿಲ್ಪ ಇಲ್ಲಿ ಜೈನ ನೆಲೆಯೂ ಇತ್ತು ಎನ್ನುವುದಕ್ಕೆ ಸಾಕ್ಷಿ.
ಇನ್ನು ಸ್ಥಳ ಪುರಾಣದ ಪ್ರಕಾರ ಮಹಾಭಾರತ ಕಲಾದ ವಿರಾಟರಾಜನ ರಾಜಧಾನಿಯಾಗಿದ್ದ ಮತ್ಸ್ಯನಗರಿ ಈ ಗ್ರಾಮವಾಗಿತ್ತು ಎಂಬ ನಂಬಿಕೆ ಇದೆ. ಹತ್ತಿರದಲ್ಲಿ ಹಲವು ಪುರಾವೆ ಗಳಿದ್ದು ಜನರ ನಂಬಿಕೆಯೊಂದಿಗೆ ಬೆಸೆದು ಕೊಂಡಿದೆ.
ಶ್ರೀ ಯೋಗನರಸಿಂಹ ದೇವಾಲಯ

ಮೂಲತಹ ಈ ದೇವಾಲಯ ನಿರ್ಮಾಣವಾದ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಹೊಯ್ಸಳರ ಕಾಲದಲ್ಲಿ ಊರಿನ ಮಧ್ಯದಲ್ಲಿ ನಿರ್ಮಾಣವಾದ ದೇವಾಲಯದಲ್ಲಿ ಯೋಗ ನರಸಿಂಹನ ಶಿಲ್ಪವಿತ್ತು. ಆದರೆ ದಿನ ಕಳೆದಂತೆ ವಿನಾಶದತ್ತ ಸಾಗಿದ್ದ ಈ ದೇವಾಲಯದ ಮೂರ್ತಿಯನ್ನು ಕಡೂರಿಗೆ ಸ್ಥಳಾಂತರ ಮಾಡ ಲಾಗಿತ್ತು. ಕಾರಣಾಂತರಗಳಿಂದ ಹಲವು ಕಡೆ ಸ್ಥಳಾಂತರ ವಾದರೂ ನಂತರ ಮಚ್ಚೇರಿಯ ಆಂಜನೇಯ ದೇವಾಲಯದಲ್ಲಿ ಇರಿಸಲಾ ಗಿತ್ತು. ಈಗ ಸಂಪೂರ್ಣವಾಗಿ ನವೀಕರಣ ಗೊಂಡಿರುವ ದೇವಾಲಯದಲ್ಲಿ 2022 ರ ಜೂನ್ ನಲ್ಲಿ ಪುನರ್ ಸ್ಥಾಪಿಸಲಾಗಿದೆ.
ಗರ್ಭಗುಡಿಯಲ್ಲಿ ಗರುಡ ಪೀಠದ ಮೇಲೆ ಸುಂದರವಾದ ಹೊಯ್ಸಳರ ಕಾಲದ ಸುಮಾರು ನಾಲ್ಕು ಅಡಿ ಎತ್ತರದ ಯೋಗ ನರಸಿಂಹನ ಶಿಲ್ಪವಿದ್ದು, ಮೇಲಿನ ಕೈಯಲ್ಲಿ ಶಂಖ ಹಾಗು ಚಕ್ರ ಇದೆ. ಶಿಲ್ಪವು ಯೋಗ ಭಂಗಿಯಲ್ಲಿದ್ದು, ಉಳಿದ ಎರಡು ಕೈಗಳು ಕಾಲಿನ ಮೇಲೆ ಇದೆ. ಪ್ರಭಾವಳಿಯಲ್ಲಿ ದಶಾವತಾರಗಳ ಕೆತ್ತನೆ ಇದ್ದು, ಎರಡು ಬದಿಯಲ್ಲಿ ದೇವಿಯರ ಶಿಲ್ಪಗಳ ಕೆತ್ತನೆ ಇದೆ.
ನೂತನ ದೇವಾಲಯವನ್ನು ಊರಿನವರೇ ನಿರ್ಮಾಣ ಮಾಡಿದ್ದು, ನೂತನ ದೇವಾಲಯ ದಲ್ಲಿನ ಕೋಷ್ಟಕಗಳಲ್ಲಿ ದಶಾವತಾರ, ಅಷ್ಟ ಲಕ್ಷ್ಮೀಯರ ಕೆತ್ತನೆ ಗಮನ ಸೆಳೆಯುತ್ತದೆ. ಇನ್ನು ಸ್ಥಪತಿ ಮೋಹನಾಚಾರ್ ವಿಮಾನ ಗೋಪುರದ ರೂವಾರಿ.
ಕಲ್ಲೇಶ್ವರ ದೇವಾಲಯ
ಗ್ರಾಮದ ಪುರಾತನ ದೇವಾಲಯವಾದ ಈ ದೇವಾಲಯಕ್ಕೆ ಕ್ರಿ.ಶ.1130 ರಲ್ಲಿ ಹೊಯ್ಸಳ ರಾಜ ವಿಷ್ಣುವರ್ಧನನ ಕಾಲದಲ್ಲಿ ದತ್ತಿ ನೀಡಿದ ಉಲ್ಲೇಖವಿರುವ ಕಾರಣ ಈ ದೇವಾಲಯ ಹೊಯ್ಸಳರ ಪೂರ್ವದಲ್ಲಿಯೇ ಇತ್ತು ಎನ್ನ ಬಹುದು. ಸಮೀಪದ ಆಸಂದಿ ಗಂಗರು ಅಥವಾ ಇತರ ಅರಸರ ನಿರ್ಮಾಣದ ಸಾಧ್ಯತೆ ಇದೆ. ಹೊಯ್ಸಳರ ಕಾಲದ ಕಂಭಗಳಿರುವ ಕಾರಣ ಹೊಯ್ಸಳರ ಕಾಲದಲ್ಲಿ ನವೀಕರಣ ಗೊಂಡಿರ ಬಹುದು.
ಮೂರು ಗರ್ಭಗುಡಿಯನ್ನ ಹೊಂದಿದ ತ್ರಿಕುಟಾಚಲ ದೇವಾಲಯವಾದ ಇದು ಗರ್ಭಗುಡಿ, ಸುಖನಾಸಿ ಹಾಗು ನವರಂಗ ಹೊಂದಿದ್ದು ಗರ್ಭಗುಡಿಯಲ್ಲಿ ಕಲ್ಲೇಶ್ವರ ಎಂದು ಕರೆಯುವ ಸುಮಾರು 3 ಅಡಿ ಎತ್ತರದ ಶಿವ ಲಿಂಗವಿದ್ದು, ಉಳಿದ ಗರ್ಭಗುಡಿಯಲ್ಲಿ ಗಣಪತಿ ಹಾಗು ಕಾರ್ತಿಕೇಯನ ಶಿಲ್ಪ ಇರಿಸಲಾಗಿದೆ. ದೇವಾಲಯ ವಿನಾಶದತ್ತ ಸಾಗಿದ್ದು ನಿತ್ಯ ಪೂಜೆ ಇದ್ದರೂ ನೂತನ ದೇವಾಲಯದ ಬದಲು ಪುರಾತನ ದೇವಾಲಯ ನವೀಕರಣಗೊಂಡಲ್ಲಿ ಇತಿಹಾಸದ ಕೊಂಡಿ ಉಳಿದಂತಾಗುತ್ತದೆ.
ಆಂಜನೇಯ ದೇವಾಲಯ

ನಂತರ ಕಾಲದ ಆಂಜನೇಯ ದೇವಾಲಯ ವಿದ್ದು ಗರ್ಭಗುಡಿಯಲ್ಲಿನ ಸುಂದರ ಆಂಜನೇಯ ಶಿಲ್ಪ ಗಮನ ಸೆಳೆಯುತ್ತದೆ. ಪಾರ್ಶ್ವ ಭಂಗಿಯಲ್ಲಿರುವ ಈ ಶಿಲ್ಪ ಒಂದು ಕೈ ಮೇಲೆ ಹಿಡಿದಿದ್ದು ಇನ್ನೊಂದು ಕೈಯಲ್ಲಿ ಮಾವಿನ ಗೊಂಚಲು ಇದೆ. ಕೆಳ ಭಾಗದಲ್ಲಿ ಅಕ್ಷಯ ಕುಮಾರನ ಕೆತ್ತನೆ ಇದೆ.
ತಲುಪವ ಬಗ್ಗೆ : ಕಡೂರಿನಿಂದ ಕೇವಲ ನಾಲ್ಕು ಕಿ ಮೀ ದೂರದಲ್ಲಿದ್ದು ಮಲ್ಲೇಶ್ವರದ ಸ್ವರಣಾಂಭ ದೇವಾಲಯವನ್ನು ನೋಡಿ ಹೋಗಬಹುದು.
✍️ಶ್ರೀನಿವಾಸ ಮೂರ್ತಿ ಎನ್. ಎಸ್.
ಬೆಂಗಳೂರು
