ತೆರೆಮರೆಗೆ ಸರಿದಿವೆ ತುಸು ನೆನಪುಗಳು
ಕವಿತೆ ಸಾಲಲಿ ಉಳಿದಿವೆ ನಮ್ಮ ಮಾತುಗಳು
ಮೌನಕೆ ಮುದುಡಿವೆ ಸ್ಪರ್ಶ ಕುಸುಮಗಳು
ನಾನೇನ ಹೇಳಿ ರಮಿಸಲಿ.. ಎವೆ ಇಕ್ಕದೆ ನೋಡುವ ನಿನ್ನ ಕಂಗಳ…

ಭಾವ ಬಗೆದು ಅಗೆದಗೆದು ತೆಗೆಯುತಿಹೆ
ಹಳೆ ನೆನಪುಗಳ, ಅದ ನಾ ಮರೆತಿಹೆ
ನೀ ಮುದುಡಿಸಿಕೊಂಡ ತುಟಿ ಕುಸುಮಗಳ,
ನಾನೇನ್ ಹೇಳಿ, ಅರಳಿಸಲಿ ನಿನ್ನ ಅದರಗಳ…..

ಅಂದಾಡಿದ ಮಾತೆಲ್ಲವೂ ಹೂ ಮಳೆ ನಿನಗೆ
ಇಂದಾಡಿದರೆ ಅದೇ ಮಾತು, ಹೊಲದ ಕಳೆ ನಿನಗೆ
ಒಲವಿನಕ್ಷರಗಳ ಕೇಳಿಸಿಕೊಳ್ಳದ ನಿನ್ನ ಕಿವಿಗೆ
ನಾನೇನ್ ಹೇಳಿ, ಕೇಳಿಸಲಿ ನಿನ್ನ ಕರ್ಣಗಳಿಗೆ

ಸಿಟ್ಟಿನೊಳಗಾಡಿದ ಮಾತು ಪ್ರೀತಿಗಲ್ಲವೇ
ಸಿಟ್ಟಿನಿಂದ್ ಮುನಿಸಿಕೊಂಡ ಮೇಲಲ್ಲವೇ
ಮತ್ತೆ ಪ್ರೀತಿ ಹುಟ್ಟೋದಲ್ಲವೇ..
ತುಸು ಮೌನ ಮುರಿದು, ತುಸು ನಕ್ಕುಬಿಡು
ಮನಸು ಹಗುರಾಗುವಂತೆ.. ನೀ ಮಗುವಾಗುಂತೆ.

 ✍️ರೇವಣಸಿದ್ದಯ್ಯ ಶಿವಪ್ಪಯ್ಯನಮಠ
ಹೂಲಿ, ತಾ:ಸವದತ್ತಿ