ಕವಿ ಕೆ.ಎಸ್.ನರಸಿಂಹಸ್ವಾಮಿ ಅವರು ತಮ್ಮ ಕವಿತೆಗಳಲ್ಲಿ ಕವನವನ್ನು ಹಾಗೂ ಕವಿಯನ್ನು ಹೇಗೆ ವರ್ಣಿಸಿದ್ದಾರೆಂದು ತಿಳಿಯುತ್ತಾ ಹೋದಾಗ, ಅವರ “ಎದೆ ತುಂಬಾ ನಕ್ಷತ್ರ” ಕವನ ಸಂಕಲನದ ಮೊಟ್ಟಮೊದಲ ಕವಿತೆ “ಬದುಕು-ಕವಿತೆ” ಗಮನಾರ್ಹವೆಂದೆನಿಸು ತ್ತದೆ.

ಮೂಲವರು ಬದುಕು,ಉತ್ಸವಮೂರ್ತಿ ಕವಿತೆ
ಹೂವು ಆಭರಣಗಳ ಗೊಂದಲವೋ ಗೊಂದಲ
ಬದುಕೇ ಕವಿತೆಯಾಗಿರಬಹುದು ಕವಿತೆಯೇ ಬದುಕೂ ಆಗಿರಬಹುದು. ಆದರೆ ಇಲ್ಲಿ ಕವಿ ಬದುಕು ಮತ್ತು ಕವಿತೆ ಬಣ್ಣಿಸುತ್ತಾ ಹೋಗುತ್ತಾರೆ. ಮೂಲವರು ಅಂದರೆ ಮೂಲದೇವರು ಬದುಕನ್ನು ಪ್ರತಿನಿಧಿಸಿದರೆ, ಉತ್ಸವ ಮೂರ್ತಿ ಕವಿತೆಯ ಪ್ರತೀಕ. ಹೂವು ಆಭರಣಗಳ ಗೊಂದಲವೋ ಗೊಂದಲ. ಜಾತ್ರೆಯ ಸಮಯ ದಲ್ಲಿ ರಾಶಿ ರಾಶಿ ಹೂವು ಆಭರಣಗಳನ್ನು ಮೂಲ ದೇವರಿಗೆ ಇಡುವುದೋ ಅಥವಾ ಉತ್ಸವ ಮೂರ್ತಿಗೆ ಇಡುವುದೋ ಎನ್ನುವುದೇ ಗೊಂದಲ ಎನ್ನುತ್ತಾರೆ ಕವಿ. ಬದುಕು ಸ್ಥಾಯೀ ಭಾವದಲ್ಲಿ ನೇರವಾಗಿ ಒಂದೆಡೆ ಸ್ಥಿರವಾಗಿದ್ದರೆ ಉತ್ಸವ ಮೂರ್ತಿ ಅಂತಹ ಕವಿತೆ ಭಾವಗಳಿಗೆ ಅನುಗುಣವಾಗಿ ಚಂಚಲ ಜಂಗಮ.

ಅರ್ಧ ಕತ್ತಲೆಯಲ್ಲಿ ಮೂಲವರಿಗಭಿಷೇಕ
ದೇವಾಲಯದ ಹಿಂದೆ ಹರಿಯುವುದು ತುಂಬ ಹೊಳೆ
ಗೋಪುರದ ಮೇಲೆ ತಂಗುವುದು ಬಗೆ ಬಗೆ ಹಕ್ಕಿ
ದೈವಸ್ಥಾನವೆಂದರೆ ಹಾಗೆ ನಿಗೂಢ ರಹಸ್ಯಮಯ ದೈವಿಕ ಹಾಗೂ ಪವಿತ್ರ. ಅಲ್ಲಿ ಕತ್ತಲೆಯದೇ ಹೆಚ್ಚಿನ ರಾಜ್ಯಭಾರ. ಮಂಗಳಾರತಿ ಹಾಗೂ ನಂದಾದೀಪಗಳ ಬೆಳಕಿನಲ್ಲಿ ಮೂರ್ತಿಗಳಿಗೆ ಮತ್ತಷ್ಟು ಹೆಚ್ಚಿನ ಗಾಂಭೀರ್ಯ. ಭಕ್ತಿ ಭಾವವು ಉದ್ಧೀಪನ- ಗೊಳ್ಳುವುದೂ ಇಂತಹ ವಾತಾವರಣದಲ್ಲೇ. ಹಾಗೆಯೇ ಬದುಕು ಈ ರೀತಿ ನಿಗೂಢ ಗಂಭೀರ. ಆದರೆ ಕವಿ ನಿರ್ಮಿಸುವ ಕವಿತೆಗಳು ಹಾಗಲ್ಲ ಅವು ನಿತ್ಯ ಸಂಚಾರಿ. ದೇವಾಲಯದ ಹಿಂದೆ ಹರಿಯುವ ಹೊಳೆ ದೇವಾಲಯದ ಗೋಪುರದ ಮೇಲೆ ಇರುವ ಬಗೆ ಬಗೆ ಹಕ್ಕಿಹೀಗೆ ಎಲ್ಲಾ ರೀತಿಯ ಪ್ರಕೃತಿ ಚರಾಚರ ಗಳು ಕವಿತೆಗೆ ಸ್ಪೂರ್ತಿ ಅವೇ ಕವಿತೆಯ ಶಕ್ತಿಯೂ ಸಹ.

ರಾಜಬೀದಿಗಳಲ್ಲಿ ಮೆರವಣಿಗೆ ಹೊರಡುವುದು,
ತಿಳಿದವರ ಜೊತೆ ತಿಳಿಯದ ಮಂದಿ ಸೇರುವರು
‘ದಾರಿ ಬಿಡಿ ದಾರಿ ಬಿಡಿ’ ಎಂದು ಕೂಗಾಡುವರು
ನಿಜ ಜಾತ್ರೆ ಎಂದರೆ ಊರವರಷ್ಟೇ ಅಲ್ಲದೆ ಹೊರಗಿನ ಭಕ್ತರು ತಿಳಿದವರು ತಿಳಿಯದವರು ಎಲ್ಲರೂ ಬಂದು ಸೇರುತ್ತಾರೆ.ತೇರು ಎಳೆಯಲು ಕೈಜೋಡಿಸುತ್ತಾರೆ ದಾರಿ ಬಿಡಿ ಎಂದು ಹೇಳಿಯೂ ಹೇಳುತ್ತಾರೆ. ಹಾಗೆ ಉತ್ಸವ ಮೂರ್ತಿಯಾದ ಕವಿತೆ ಎಲ್ಲರ ದರ್ಶನಕ್ಕೂ ಸಿಗುತ್ತದೆ ಎಲ್ಲರ ಆಕರ್ಷಣೆಯ ಬಿಂದುವೂ ಆಗುತ್ತದೆ.

ದೇವರನು ತೇರಿನಿಂದಿಳಿಸಿ ಕೈ ಮುಗಿಯುವರು
ಮೂಲವರು ಉತ್ಸವರು ಗುಡಿಯೊಳಗೆ ಸೇರುವರು
ಕರ್ಪೂರದಾರತಿಯ ಬೆಳಗುವರು ಪುರೋಹಿತರು
ಜಾತ್ರೆ ಸಂಭ್ರಮ ಮುಗಿದ ನಂತರ ಮೂಲ ದೇವರ ಬಳಿಗೆ ಮತ್ತೆ ಉತ್ಸವ ಮೂರ್ತಿ ಸೇರುತ್ತದೆ. ಆದರೆ ಅಲ್ಲಿಯವರೆಗೂ ಮೂಲ ದೇವರ ಪ್ರತಿನಿಧಿಯಾದ ಕವಿತೆಗೆ ಎಲ್ಲ ರೀತಿಯ ವೈಭವದ ಉಪಚಾರ. ಹಾಗೆಯೇ ಬದುಕು ಸಹ. ಕಡೆಗೆ ಬದುಕು ಕವಿತೆ ಒಂದೇ ಆಗುತ್ತದೆ ಎಂಬುವ ಭಾವ ಇಲ್ಲಿ.

ಕರ್ಪೂರದಾರತಿಯ ಬೆಳಗುವರು ಪುರೋಹಿತರು
ಚಪ್ಪಾಳೆ ತಟ್ಟುವರು, ಮೂಲವರ ಮುಟ್ಟುವುದು
ಪುಟ್ಟಮೊಗು ನಗುನಗುತ, ಇದು ಬದುಕು
ಮತ್ತೆ ಮೊದಲಿನಂತೆಯೇ ಕರ್ಪೂರದಾರತಿ ಮೂಲ ದೇವರ ಜೊತೆಗೆ ಉತ್ಸವಮೂರ್ತಿಗೆ. ಮಡಿ ಮೈಲಿಗೆಯ ಸೋಂಕಿಲ್ಲದ ಪುಟ್ಟ ಮಗುವಿನಂತೆ ಬದುಕು ಬದುಕಾಗಿ ಮುಂದುವರೆಯುತ್ತದೆ.
ಪ್ರತಿವರ್ಷ ನಡೆಯುವುದು ಇಂತಹ ಉತ್ಸವ ಇಲ್ಲಿ
ಹೊಸ ಹುರುಪು ಹುಟ್ಟುವುದು ಊರ ಬೀದಿಗಳಲ್ಲಿ
ಹಾಗೆಯೇ ಈ ಉತ್ಸವ ಜಾತ್ರೆಗಳು ಪ್ರತಿವರ್ಷ ನಡೆಯುತ್ತಾ ಜೀವನದ ಏಕತಾನತೆಗೆ ಒಂದು ಬದಲಾವಣೆಯನ್ನು ತರುತ್ತದೆ ಹೊಸ ಹುರುಪನ್ನು ತರುತ್ತದೆ. ಹಾಗೆ ನೀರಸವೆನ್ನುವ ಬದುಕಿನಲ್ಲಿ ಕವಿತೆಗಳು ಸಹ ಹೊಸ ಭರವಸೆ ಉತ್ಸಾಹವನ್ನು ತರುತ್ತದೆ ಎಂಬುದು ಕವಿಯ ಅಭಿಮತ.
ಮೂಲ ಭಾವನೆಗಳಿಗೆ ಕವಿತೆ ತಲೆಬಾಗುವುದು
ಮೌನದಲಿ ಹರಡಿಕೊಳ್ಳುವುದು ಸಂತಸ ಚೆಲುವು
ಮನಸ್ಸಿನ ಭಾವಗಳ ಅಭಿವ್ಯಕ್ತಿ ಕವಿತೆ ಹಾಗಾಗಿ ಭಾವನೆಗಳ ರೂಪ ಪದಗಳಲ್ಲಿ ಆದರೆ ಭಾವಗಳು ಸಂತಸ ಚೆಲುವು ಇವೆಲ್ಲಾ ಶಬ್ದಗಳಿಗಿಂತ ಮೌನದಲ್ಲೇ ಹರಡಿಕೊಳ್ಳುವುದ ರಿಂದ ಕವಿತೆ ನೈಜ ಭಾವಗಳಿಗೆ ತಲೆಬಾಗುತ್ತದೆ.
ನೋವು ಕಂಬನಿ: ಬದುಕು ಕರವಸ್ತ್ರ ಕವಿತೆ
ಕವಿತೆ ಬದುಕಿಗೆ ಸಮಾಧಾನ ಹೇಳುವುದು.
ಈ ಕವಿತೆಯ ಕಡೆಯ ಸಾಲುಗಳು ಕವಿಯ ಮನಸ್ಸಿನ ಕನ್ನಡಿಯಾಗಿ ಪ್ರತಿಬಿಂಬಿತವಾಗು ತ್ತದೆ. ಬದುಕು ಎನ್ನುವುದು ಬರಿ ನೋವು ಕಂಬನಿಗಳಾಗಿ ದುಃಖ ದುಮ್ಮಾನಗಳೇ ತುಂಬಿಕೊಂಡಿರುವಾಗ ಕವಿತೆಗಳು ಅವುಗಳನ್ನು ಒರಸುವ ಕರ ವಸ್ತ್ರಗಳಾಗಿ ಸಾಂತ್ವನ ಗೈಯುತ್ತವೆ. ದೈನಂದಿನ ದುಃಖ ಸಂಕಟಗಳಿಗೆ ಕವಿತೆ ಪರಿಹಾರ ಆಗದಿದ್ದರೂ ಆಯಾ ಕ್ಷಣದ ದುಃಖದ ಕಣ್ಣೀರನ್ನು ಒರೆಸುವ ಕರ ವಸ್ತ್ರವಾಗಿ ನೋವು ಶಮನಗೊಳಿಸುತ್ತದೆ. ಅದಕ್ಕೆ ಕವಿತೆ ಬದುಕೆಂಬ ಬದುಕಿನ ಪ್ರತಿನಿಧಿಯಾದ ಉತ್ಸವ ಮೂರ್ತಿ. ಮೂಲ ದೇವರು ಕೈಗೆಟುಕದೆ ನಿಗೂಢ ವಾಗಿ ಗರ್ಭಗುಡಿ ಸೇರಿರುವಾಗ ಕಣ್ಣಿಗೆ ಕಾಣುವ ಸ್ಪರ್ಶಕ್ಕೆ ಸಿಗುವ ಉತ್ಸವ ಮೂರ್ತಿ ಕವಿತೆಗಳು, ಅವುಗಳೊಡನಿನ ಒಡನಾಟ ಎಂದಿಗೂ ಸ್ಪೂರ್ತಿದಾಯಕ ಚೇತೋಹಾರಿ ಉತ್ಸವ ಮೂರ್ತಿಯಂತೆ. ಅವು ಕ್ಷಣಕಾಲ ಮಾತ್ರ ಪ್ರಾಮುಖ್ಯತೆ ಪಡೆದರೂ ಜೀವನದ ಜಂಜಾಟ ಗಳಲ್ಲಿ ಮರುಭೂಮಿಯ ಓಯಯಸ್ಸಿನಂತೆ ಕವಿತೆಯ ರಚನೆ ಓದು.

ಬಾಳಿನಲ್ಲಿ ಕವಿ ಕಂಡು ಕೇಳುವ ಅನುಭವಗಳು ಭಾವಗಳ ಅನುಭಾವಗಳು ಪದಗಳಾಗಿ ಅಭಿವ್ಯಕ್ತ. ಕವಿಯ ಬದುಕು ಗರ್ಭಗುಡಿಯ ಮೂಲದೇವರಾಗಿದ್ದರೆ ಜಾತ ಕವನಗಳು ಉತ್ಸವಮೂರ್ತಿಗಳಾಗಿ ಓದುಗನ ಹೃದಯಕ್ಕೆ ಮೆರವಣಿಗೆ ಹೊರಡುತ್ತವೆ, ಆರಾಧಿಸಲ್ಪಡುತ್ತವೆ. ಕೆಲವೊಮ್ಮೆ ಮೂಲದೇವರನ್ನು ದರ್ಶಿಸಲಾಗ ದಿದ್ದರೂ ಉತ್ಸವಮೂರ್ತಿಯ ಅಲಂಕೃತ ರೂಪ ಹೃನ್ಮನಗಳನ್ನು ತುಂಬಿಬಿಟ್ಟಿರುತ್ತದೆ.
✍️ಸುಜಾತಾ ರವೀಶ್
ಮೈಸೂರು
