ಹೊದ್ದ ಸೆರಗಿಗಷ್ಟೇ ಗೊತ್ತು
ಅವಳೆದೆಯ ತಳಮಳ
ಅದೆಂದೂ ಅವಳ
ಕೈಬಿಟ್ಟಿಲ್ಲ.!
ಎಲ್ಲರೂ ಕೈಕೊಟ್ಟಾಗ
ಬೆವರೊರೆಸಿ,
ಕಣ್ಣೀರೊರೆಸಿ
ಸಮಾಧಾನ ಮಾಡಿದ್ದು
ಅದೇ ಅಲ್ಲವೇ..?!
ಅವಳ
ಎದೆಬಡಿತದ
ಪ್ರತಿ ಶೃತಿಗೆ ಸ್ಪಂದಿಸಿ,
ಬಿಸಿ ಕಂಬನಿಯ
ಉಪ್ಪುಂಡಿದೆ!
ಎರಡು ಬಗೆಯದು…
ರಮಿಸಿದೆ, ನೇವರಿಸಿದೆ,
ಬೆವರ ಹನಿಯಲ್ಲಿ
ಬಸಿದುಬಂದ
ಕನಸಿನ ರಂಗನ್ನು
ಕಾಪಾಡಿಕೊಂಡು
ಬಂದಿದೆ!
ಅವಳ
ಏದುಸಿರು;
ಬಿಸಿಯುಸಿರು;
ನಿಟ್ಟುಸಿರುಗಳನ್ನು
ಅಳೆದು ತೂಗಿದೆ..!
ನೀರವದಲ್ಲಿ
ಅಳುವ ದನಿಗದೇ
ಕೇಳುವ ಕಿವಿ..
ಕೆಟ್ಟದೃಷ್ಟಿಗೆ ಕಾವಲು!
ಮುಖಕೆ ಮುದ್ದಿಟ್ಟು
ಸೌಂದರ್ಯ ಸವಿದ
ತೃಪ್ತಿಯೊಂದಿಗೆ
ಒರೆಸಿಹಾಕಿದ
ನೋವಿನ ಕಲೆಯೂ
ಇದೆ ನೋಡು ಅದಕೆ..!
ಬೆಚ್ಚನೆಯ ನೆನಪೀಗ
ನೆನಪು ಮಾತ್ರ!
ಕಂದನ ಹಾಲ್ದುಟಿ
ಒರೆಸಿದ ತೃಪ್ತಿ ಅದಕೆ..
ಗುಮ್ಮ ಬಂದಾಗ
ಬಚ್ಚಿಟ್ಟುಕೊಂಡು
ಸಲಹಿದೆ…
ಬಿಡದೆ ಬಿಗಿದಪ್ಪಿ
ಕಾಯುವ ಕಾಯಕ
ಅದರದ್ದು..!
ಎದೆಯ ಖುಷಿ
ಸೋರದಂತೆ ಹೀರಿ
ಹಿಗ್ಗುವ ಹಿಗ್ಗು ಅದಕ್ಕೆ..!
ಅವ್ವನ ಸೆರಗಿದು
ಹೊಂಗೆಯ ನೆರಳು..!

✍️ಸೌಮ್ಯ ದಯಾನಂದ
ಡಾವಣಗೆರೆ
