ಧುಮಸೋಲ ಅನ್ನಿರೋ ನಮ್ಮ ತುಳಸಿ ಅಮ್ಮನವರಿಗೋ
ಧುಮಸೋಲ ಅನ್ನಿರೋ ನಮ್ಮ ಢಕ್ಕೆ ಧ್ವನಿಗೋ
ಧುಮಸೋಲ ಅನ್ನಿರೋ ನಮ್ಮ ಉರುವ ಜ್ಯೋತಿಗೋ
ಎಂಬ ಹಾಡು ಗೊಂಡರು ಶುಭಕೋರುವ ಸಾಲುಗಳು.
ಕರಾವಳಿ ತೀರ ಹಾಗೂ ಮಲೆನಾಡಿನ ಸೊಬಗನ್ನು ಸವಿಯಲು ಪ್ರವಾಸಿಗರನ್ನು ತನ್ನತ್ತ ಸೆಳೆದ ಮಾಂತ್ರಿಕ ಜಿಲ್ಲೆ ಉತ್ತರ ಕನ್ನಡ ಎಂದರೆ ತಪ್ಪಾಗಲಾರದು. “ಹಲವು ಜನಾಂಗಗಳ ಶಾಂತಿಯ ತೋಟ” ಎಂಬ ಖ್ಯಾತಿಗೆ ಪಾತ್ರವಾ ಗಿದೆ.ಅದರಲ್ಲೂ ವಿಶೇಷವಾಗಿ ನನ್ನ ಜಿಲ್ಲೆಯಲ್ಲಿ ಅನೇಕ ಬುಡಕಟ್ಟು ಜನಾಂಗಗಳು ತಮ್ಮ ಬದುಕನ್ನು ಈ ಕಾನನದಲ್ಲಿ ಕಟ್ಟಿಕೊಂಡು ಆಚಾರ ವಿಚಾರ, ಸಂಸ್ಕೃತಿಯನ್ನು ಬಿತ್ತುತ್ತ ಎಲೆಯ ಮರೆಯ ಕಾಯಿಯಂತೆ, ಹಲಸಿನ ಹಣ್ಣಿನಂತೆ ಅಂದರೆ ಹೊರಗೆ ಒರಟು ಒಳಗೆ ಸಿಹಿ ತೊಳೆ ಗಳಂತೆ ಬಚ್ಚಿಟ್ಟುಕೊಂಡಿದೆ. ಅದರ ಒಳತಿರುವು ಅರಿಯಲು ಪ್ರಯತ್ನಿಸುವವರಿಗೆ ನಿರಾಸೆ ಯಂತೂ ಇಲ್ಲ. ಕಲಿತಷ್ಟೂ, ತಿಳಿದಷ್ಟೂ ಕಡಿಮೆಯೆಂಬ ಭಾವ ನನ್ನಲಿ. ಅಂತಹುದೇ ವಿಶಿಷ್ಟ ಜನಾಂಗಗಳಲ್ಲಿ “ಗೊಂಡ” ಜನಾಂಗವೂ ಒಂದು.

“ಗೊಂಡರು” ಬೆಟ್ಟ-ಗುಡ್ಡಗಳ ಪ್ರದೇಶಗಳಲ್ಲಿ ವಾಸಿಸುವರು,ಸಾಮಾನ್ಯವಾಗಿ ಗುಡಿಸಲು ಗಳನ್ನ ಮರ, ಬಿದಿರು,ಹುಲ್ಲು, ಮಣ್ಣಿನಿಂದ ನಿರ್ಮಿಸಿ ಕೊಳ್ಳುತ್ತಾರೆ, ಆ ಪ್ರದೇಶದಲ್ಲಿನ ಮಣ್ಣಿನ ಫಲವತ್ತತೆ ಮತ್ತು ನೀರಿನ ಸೌಕರ್ಯ ಗಳನ್ನು ಗಮನಿಸಿ ಮನೆಗಳನ್ನು ನಿರ್ಮಿಸಿ-ಕೊಳ್ಳುತ್ತಾರೆ ಎಂಬ ಪ್ರತೀತಿ ಇದೆ. ಗೊಂಡ ಜನಾಂಗದ ಇತಿಹಾಸ ಆಶ್ಚರ್ಯಕರವಾಗಿ ಕಂಡರೂ ಅವರು ಬುಡಕಟ್ಟು ಜನಾಂಗದ ಒಂದು ಭಾಗ ಎಂಬುವ ದನ್ನು ಮರೆಯು ವಂತಿಲ್ಲ. ನನ್ನ ಕೆಲ ಸ್ನೇಹಿತರು ಈ ಜನಾಂಗ ದವರೆಂಬುದು ಹೆಮ್ಮೆ. ಒಂದು ಜನಾಂಗ ಬೆಳೆದು ಬಂದ ಕಥೆಗಳು ರೋಚಕ ತಿರುವು ಗಳಲ್ಲಿ ತಮ್ಮ ತನವನ್ನು ಉಳಿಸಿಕೊಂಡು ಬಂದಿರುವುದು ಮೆಚ್ಚುವಂತಹುದು.
ಗೊಂಡ ಅಥವಾ ಕೊಂಡ ಪದದಿಂದ ಪ್ರಾರಂಭ ವಾಗುವ ೨೬೮ ಗ್ರಾಮಗಳು ಕರ್ನಾಟಕದ ಲ್ಲಿವೆ. ಉದಾಹರಣೆಗಳು: ಕೊಂಡಗುಲಾ, ಕೊಂಡಜ್ಜಿ, ಕೊಂಡರಹಳ್ಳಿ, ಕೊಂಡಲಗಿ, ಕೊಂಡವಾಡಿ, ಕೊಂಡಸಕೊಪ್ಪ, ಕೊಂಡಸಂದ್ರ, ಗೊಂಡನಹಳ್ಳಿ, ಗೊಂಡಗಾವಿ, ಗೊಂಡೇನೂರು ಇತ್ಯಾದಿ. ಮಹಾ ರಾಷ್ಟ್ರದಲ್ಲಿ ಆಗಿ ಹೋದ ಪ್ರಸಿದ್ಧ ಸಂತ ಬ್ರಹ್ಮಚೈತನ್ಯ ಮಹಾರಾಜರ ಊರ ಹೆಸರು ‘ಗೋಂದಾವಲಿ’. ಇದು ‘ಗೊಂಡಾವಳಿ’ಯ ರೂಪಾಂತರ. ಯಾವ ರೀತಿಯಲ್ಲಿ ‘ಮಲ್ಲಪ್ರಭೆ’ ಯು ‘ಮಲಪ್ರಭೆ’ ಯಾಯಿತೊ, ಅದೇ ರೀತಿ ‘ಗೊಂಡಾವರಿ’ ನದಿ ಸಹ ‘ಗೋದಾವರಿ’ ನದಿ ಯಾಗಿದೆ. ಅತ್ಯಂತ ದಟ್ಟವಾದ ಅಡವಿಯಲ್ಲಿ ಈ ಗೊಂಡರು ವಾಸಿಸುತ್ತಿದ್ದ ರಿಂದಲೇ, ದಟ್ಟಡವಿಗೆ ‘ಗೊಂಡಾರಣ್ಯ’ವೆಂದು ಕರೆಯುವ ಪರಿಪಾಠ ವಾಯಿತು. ಇವರು ಯಾವ ನದಿಯ ಎಡಬಲ ದಲ್ಲಿ ತಮ್ಮ ನೆಲೆಯನ್ನು ರೂಪಿಸಿಕೊಂಡಿ ದ್ದರೊ, ಆ ನದಿ ಗೊಂಡಾವರಿ ನದಿಯಾಗಿ, ಬಳಿಕ ಗೋದಾವರಿ ಎಂದು ಆರ್ಯೀಕರಣ ಗೊಂಡಿತು. ಈ ವಿಶಾಲ ದೇಶ ಭಾಗವು ‘ಗೊಂಡವನ’ ವೆಂದೇ ನಿರ್ದೇಶಿಸಲ್ಪಟ್ಟಿದೆ. ಒಂದು ಕಾಲದಲ್ಲಿ, ಎಲ್ಲ ಖಂಡಗಳೂ ಒಂದೇ ಭೂಪ್ರದೇಶವಾಗಿದ್ದು, ಬಳಿಕ ಒಡೆದು ಹೋಗಿ ಬೇರೆಬೇರೆ ಖಂಡಗಳಾದ ವಷ್ಟೆ. ಈ ಮೂಲ ಭೂಪ್ರದೇಶಕ್ಕೆ ವಿಜ್ಞಾನಿಗಳು ಕೊಟ್ಟ ಹೆಸರು ‘ಗೊಂಡವನಖಂಡ’.
“ಗೊಂಡಿ” ಎಂಬುದು ಗೊಂಡರು ಜನಾಂಗದ ಭಾಷೆಯಾಗಿದೆ.ಗೊಂಡರು ಭಾರತದ ಬುಡಕಟ್ಟು ಜನರಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದಾರೆ. ೧೯೯೯ ರ ಜನಗಣತಿಯ ಪ್ರಕಾರ ಗೊಂಡರು ೯,೩೧,೯೦೦೦ ಜನ ಸಂಖ್ಯೆಯನ್ನು ಹೊಂದಿರುವುದನ್ನು ನಾವು ಕಾಣಬಹುದು. ಈ ಜನಾಂಗ ಗಣನೀಯವಾಗಿ ಮಹಾರಾಷ್ಟ್ರ, ಛತ್ತೀಸ್ ಗಡ, ಗುಜರಾತ್ , ಆಂದ್ರಪ್ರದೇಶ, ಒರಿಸ್ಸಾ, ಪಶ್ಚಿಮ ಬಂಗಾಳ, ಕರ್ನಾಟಕದ ಉತ್ತರದಲ್ಲಿ ಕಾಣಸಿಗುತ್ತಾರೆ. ಈ ಎಲ್ಲಾ ಕಡೆ ಯಲ್ಲೂ ಗೊಂಡಿ ಭಾಷೆಯು ಹೇರಳವಾಗಿ ಬಳಕೆ ಯಲ್ಲಿದೆ. ಗೊಂಡಿ ಭಾಷೆ ದ್ರಾವಿಡ ಭಾಷಾ ಗುಂಪಿಗೆ ಸೇರಿದ್ದಾಗಿದೆ. ಈ ಭಾಷೆಯು ತೆಲುಗು ಹಾಗೂ ತಮಿಳು ಭಾಷೆಗೆ ತುಂಬಾ ಹೋಲುವ ಭಾಷೆಯಾಗಿದೆ. ಕ್ರಿ.ಶ ೩೫೮ರಲ್ಲಿ ಗೊಂಡಿ ಸಮುದಾಯದ ಅರಸರು ಕರ್ನಾಟಕದ ಉತ್ತರ ಪ್ರದೇಶವನ್ನು ಆಳ್ವಿಕೆ ನಡೆಸಿದ್ದರು ಎಂದು ಶಾಸನ ಗಳ ಮೂಲಕ ತಿಳಿದುಬರುತ್ತದೆ. ನಾಲ್ಕು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಗೊಂಡಿ ಭಾಷೆ ತನ್ನದೇ ಆದ ಪರಂಪರೆ ಹೊಂದಿದೆ. ಈ ಭಾಷೆಗೆ ರಾಷ್ಟ್ರೀಯ ಮಾನ್ಯತೆ ದೊರಕಿಸ ಬೇಕಾದ ಅರ್ಹತೆಯೂ ಇದೆ. ಈ ಭಾಷೆಯ ಬಗ್ಗೆ ಅನೇಕ ಭಾಷಾತಜ್ಞರು ಸಂಶೋಧನೆ ನಡೆಸಿದ್ದಾರೆ. ಗೊಂಡರ ಭಾಷೆ ತನ್ನ ವೈಶಿಷ್ಟ್ಯತೆ ಯನ್ನ ಇಂದಿಗೂ ಉಳಿಸಿಕೊಂಡಿದೆ.

ಗೊಂಡ ಜನಾಂಗದ ವಿಶೇಷತೆಗಳಲ್ಲಿ ಅವರು ಆಚರಿಸಿಕೊಂಡು ಬಂದ ಸಂಪ್ರದಾಯಗಳು ನಿಜಕ್ಕೂ ಅನುಕರಣೀಯ. ಅದರಲ್ಲಿ ಸೈಕಲ್ ಹತ್ತುವಂತಿಲ್ಲ,ಸಿಂಧಿಸಾರಾಯಿಯನ್ನು ಕುಡಿಯು ವಂತಿಲ್ಲ, ತಲೆಗೂದಲು ಕ್ರಾಪ್ ಬಿಡುವಂತಿಲ್ಲ, ಬೇರೆಯವರ ಮನೆಯಲ್ಲಿ ಕೆಲಸ, ಊಟ ಮಾಡುವಂತಿಲ್ಲ.ತಮ್ಮದೇ ಮನೆಯ ಗೊಬ್ಬರ ವನ್ನಾಗಲಿ,ಹಂಚನ್ನಾಗಲಿ ಹೊರುವಂತಿಲ್ಲ.ಹೀಗೂ ಆಚರಣೆಗಳು ಇರುತ್ತವೆ ಎಂಬುದೇ ಆಶ್ಚರ್ಯ. ಇದು ‘ಗೊಂಡ’ ಎಂಬ ಸಮುದಾಯ ದಲ್ಲಿ ಬಹು ವರ್ಷಗಳ ಹಿಂದೆ ಜಾರಿಯಲ್ಲಿದ್ದ ಕಟ್ಟಳೆಗಳು. ಹಿರಿಯರು ಏನೇ ರೀತಿ ರಿವಾಜು ಗಳನ್ನು ಜಾರಿಗೆ ತಂದಿದ್ದರೂ ಅದರ ಹಿಂದೆ ಒಂದು ಅರ್ಥ ಇತ್ತು. ಅದರಲ್ಲಿ ವೈಜ್ಞಾನಿಕ ಕಾರಣಗಳು ಅಡಗಿರುತ್ತಿದ್ದವು ಎಂಬುದು ಸುಳ್ಳಲ್ಲ. ನಾಗರಿಕತೆ ಬೆಳೆದಂತೆ ಕಟ್ಟಳೆಗಳು ಬಿಟ್ಟು ಹೋಗುತ್ತಿವೆ. ಆಚಾರ, ವಿಚಾರಗಳು ಉದಾ: ಗೊಂಡ ಸಮುದಾಯದ ಯಾವ ಕಟ್ಟಳೆಗಳೂ ಸಮಾಜಕ್ಕೆ ಮಾರಕ ಆಗಿರಲಿಲ್ಲ. ಸಮುದಾಯ ವನ್ನು ಎಚ್ಚರಿಸುವ ಸಂದೇಶಗಳೂ ಆದರಲ್ಲಿತ್ತು ಎಂಬುದು ಸುಳ್ಳಲ್ಲ. ಅಂದಹಾಗೆ ಈ ಗೊಂಡ ಸಮುದಾಯದ ಜನ ಎಲ್ಲಿಯವರು, ಅವರ ಆಚಾರ ವಿಚಾರಗಳೇನು? ಸಮುದಾಯದ ಮುಖಂಡರ ಪ್ರಕಾರ ಗೊಂಡರು ಮೂಲತ: ನೂರಾರು ವರ್ಷಗಳ ಹಿಂದೆ ಮಧ್ಯ ಪ್ರದೇಶ ದಿಂದ ಕರ್ನಾಟಕಕ್ಕೆ ವಲಸೆ ಬಂದಿರುವ ಸಾಧ್ಯತೆ ಇದೆ. ಇಲ್ಲಿಂದ ಅವರು ಆಂಧ್ರ ಮತ್ತಿತರ ನೆರೆಯ ರಾಜ್ಯಗಳಿಗೂ ಹೋಗಿ ನೆಲೆ ಕಂಡು ಕೊಂಡಿರ ಬಹುದು.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ವಾಸವಿರುವ ಗೊಂಡರು ಶಿವರಾತ್ರಿ ಹಬ್ಬವನ್ನು ಆಚರಿಸುವ ವಿಧಾನ ಭಿನ್ನವಾಗಿದೆ. ಶಿವರಾತ್ರಿ ಹಬ್ವದ ತಯಾರಿ ಹದಿನೈದು ದಿನದಿಂದ ಪ್ರಾರಂಭಿ ಸುತ್ತಾರೆ. ಮನೆಯ ಮುಂದೆ ಕಣ. ಆ ಕಣದ ಒಂದು ಬದಿಯಲ್ಲಿ ತುಳಸಿಕಟ್ಟೆ, ಮತ್ತೊಂದು ಬದಿಯಲ್ಲಿ ಬತ್ತದ ಮುಡಿ. ಗೊಂಡರ ಪ್ರತಿಮನೆ ಯು ಮೇಟಿ ಕಂಬ ಹೊಂದಿರುತ್ತದೆ. ಅಂಗಳಕ್ಕೆ ಸಗಣಿ ಹಾಕೋದು. ಢಕ್ಕೆಯ ಮುಚ್ಚನ್ನು ಢಕ್ಕೆ ಬಳೆಗೆ ಹಚ್ಚುವುದು.ತಲೆಗೆ ಕಟ್ಟುವ ರುಮಾಲು, ಗೋಣಿ ದಟ್ಟಿಯನ್ಬು ಖರೀದಿಸುವುದು. ಕಾಲ್ಗೆಜ್ಜೆ, ಸೊಂಟದ ಪಟ್ಟಿ, ನವಳೆ, ಪೆಟ್ಟಿಗೆಯಲ್ಲಿ ಹಬ್ಬಕ್ಕೆಂದು ಸಂಗ್ರಹಿಸಿದ ಆಭರಣಗಳು. ಮನೆಯ ಯಜಮಾನ ದೇವರ ಪೂಜೆ ಮಾಡುವರು, ಗಂಡಸರು ಹಬ್ಬದ ದಿನ ಉಪವಾಸ ಮಾಡುವರು. ಬದಲಿಗೆ ದೋಸೆ ಜೊತೆ ಬಾಳೆಹಣ್ಣಿನ ಪಾಯಸ ತಿನ್ನುವರು. ಹೋಳಿ ಹಬ್ಬದ ಸಡಗರ ವಿಭಿನ್ನ ಸಂಜೆ ಐದರ ಹೊತ್ತಿಗೆ ಢಕ್ಕೆ, ಹೆಗಲುದಂಡೆ, ಬೆಳ್ಳಿ ಆಭರಣ, ಅಬ್ಬಲಿ ಹೂವಿನ ಮಾಲೆಯೊಂದಿಗೆ ಊರ ಮುಖಂಡನ ಮನೆಯ ಛಾವಡಿ ಮೊದಲೇ ಸಿದ್ದ ವಾಗಿರುತ್ತದೆ. ಸಭೆಗೆ ನಮಸ್ಕರಿಸಿ ಮನೆಯ ಒಳಕ್ಕೆ ಹೋಗಬೇಕು.ಮೂರು ದಿನ ಅವರು ಧರಿಸುವ ವೇಷಭೂಷಣಗಳು ಇವರನ್ನು ಹೋಳಿ ಮಕ್ಕಳೆಂದು ಕರೆಯುವುದು ವಾಡಿಕೆ. ದಾನವಾಗಿ ದೊರೆತ ನಗದು ಮುಖಂಡನ ಮುಂದಿಡುತ್ತಾರೆ. ಅವಲಕ್ಕಿ ಬೆಲ್ಲದ ಸಿಹಿತಿಂದು ನಗದನ್ನು ಸಮುದಾಯದ ಒಳಿತಿಗೆ ಮೀಸಲಿಡುತ್ತಾರೆ.

ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಗೊಂಡ, ರಾಜಗೊಂಡ, ರಾಜಕೊಂಡ ಹೆಸರಲ್ಲಿ ಈ ಸಮುದಾಯದವರು ನೆಲೆಸಿದ್ದಾರೆ. ಕರಾವಳಿ ಅಂದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ “ಗೊಂಡರು” ಹೆಚ್ಚಾಗಿ ಕಂಡು ಬರುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಜನಾಂಗ ಗಳಲ್ಲಿ ಗೊಂಡರು ನವ ನಾಗರಿಕತೆಯ ಯಾವ ಸೋಂಕೂ ಇಲ್ಲದೆ ಸಹ್ಯಾದ್ರಿ ಶ್ರೇಣಿಗಳ ತಪ್ಪಲಿನಲ್ಲಿ ವಾಸವಾಗಿ ದ್ದಾರೆ. ಗುಡ್ಡ-ಬೆಟ್ಟಗಳು ಹಾಗೂ ದಟ್ಟ ಕಾಡುಗಳ ಅಂಚಿನಲ್ಲಿ ಇವರ ಬಿಡಾರ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಲ್ಯಾಣಿ, ಮಾರು ಕೇರಿ, ಕುಂಟವಾಣಿ, ಕೋಟಗುಂಡ, ಹಿದ್ಲು, ಮೂಡ್ಲುಕೇರಿ, ಸಬ್ಬತ್ತಿ, ತಲಂದ, ತಲಗೋಡು, ಜಾಲಿ, ಕಿತ್ತರಿ, ತೆಂಗಿನ ಗುಂಡಿ, ಹೆಗ್ಗು ಗುಳಿಮೆ , ಹದ್ಲೂರು, ಹೇರೂರು, ಬೆಳಕೆ ಅಡಿಬಾರು, ಓಣಿಬಾಗಿಲು, ಕ್ಯಾರತೂರು, ಕೊಪ್ಪ, ಶಿರಾಲಿ ಮತ್ತಿತರ ಗ್ರಾಮಗಳಲ್ಲಿ ಹೆಚ್ಚಾಗಿ ವಾಸವಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನಾಗದಳ್ಳಿ, ಅರ್ಕಳ, ಹೆಗ್ಗಿನಮಕ್ಕಿ, ದೇವಗಾರು, ತೋಟ, ಸುಂಕದಮನೆಗಳಲ್ಲೂ ನೆಲೆಸಿದ್ದಾರೆ. ಹೊನ್ನಾವರ, ಕುಮಟಾ ತಾಲೂಕಿನ ಕೆಲವು ಗ್ರಾಮಗಳಲ್ಲಿ ನೆಲೆಸಿದ್ದಾರೆ.

ಇವರು ಧರಿಸುವ ಬಟ್ಟೆಬರೆಯನ್ನು ಆಧರಿಸಿ ಗೊಂಡರನ್ನು ಗುರುತಿಸಬಹುದು. ಪುರುಷರು ಮೊಳಕಾಲವರೆಗೆ ಪಂಚೆ, ತಲೆಗೆ ಮುಂಡಾಸು, ನಿಲುವಂಗಿ, ಕಪ್ಪುಬಣ್ಣದ ಕೋಟು, ಕಿವಿಗೆ ಓಲೆ, ಕೈಗೆ ಬೆಳ್ಳಿ ಬಳೆ ಹಾಕುತ್ತಾರೆ. ಸ್ತ್ರೀಯರು ಸೀರೆ, ಮಣಿಸರ, ಗಾಜಿನ ಬಳೆ, ದೊಡ್ಡಗಾತ್ರದ ಓಲೆ ಹಾಕುತ್ತಾರೆ. ರವಿಕೆ ಧರಿಸದೆ ಸೀರೆಯನ್ನು ಸರಕ್ಕೆ ಸಿಕ್ಕಿಸಿಕೊಳ್ಳು ವುದು ಇವರ ಮತ್ತೊಂದು ವೈಶಿಷ್ಟ್ಯ.

ಗೊಂಡರ ಮೂಲ ಕಸುಬು ವ್ಯವಸಾಯ ತಾವೇ ಬೇಸಾಯ ಮಾಡುವುದರ ಜೊತೆಗೆ ಬೇರೆಯ ವರ ಹೊಲ, ಗದ್ದೆಗಳಲ್ಲಿಯೂ ಕೂಲಿ ಕೆಲಸ ಮಾಡುತ್ತಾರೆ. ಈ ಹಿಂದೆ ಗೊಂಡರು ದಿನಗೂಲಿ ರೂಪದಲ್ಲಿ ಬೇಳೆಕಾಳುಗಳನ್ನು ಪಡೆದುಕೊಳ್ಳು ತ್ತಿದ್ದರಂತೆ.ಗೊಂಡರು ಈ ಹಿಂದೆ ಯುದ್ಧದಲ್ಲಿ ಕೂಡ ಭಾಗಿಯಾಗಿದ್ದಿರ ಬಹುದು ಎನ್ನುತ್ತಾರೆ ಹಿರಿಯರು. ಏಕೆಂದರೆ, ಅವರು ಕತ್ತಿ, ಈಟಿಗಳನ್ನ ಹೆಚ್ಚಾಗಿ ಬಳಸುತ್ತಿದ್ದರಂತೆ. ಬಂದೂಕು ಬರುವ ವರೆಗೆ ಆ ಆಯುಧಗಳನ್ನೇ ಬಳಸಿ ಬೇಟೆಗೂ ಹೋಗುತ್ತಿದ್ದರು. ಬಂದೂಕಿನ ಬಳಕೆ ಆರಂಭ ವಾದ ಮೇಲೆ ಆಯುಧಗಳು ನೇಪಥ್ಯಕ್ಕೆ ಸರಿಯಿತು ಎಂಬ ಮಾತಿದೆ.

ಗೊಂಡರು ಗುಂಪು ಗುಂಪಾಗಿ ಕಾಡಿನೊಳಗೆ ಹೋಗಿ ಅವರು ಬೇಟೆಗೆ ಕಾಯುತ್ತಿದ್ದರು. ಒಬ್ಬರಿ ಗೊಬ್ಬರು ಅಂತರ ಕಾಯ್ದುಕೊಂಡು, ಬಂದೂಕು ಹಿಡಿದು ಅರಣ್ಯದಲ್ಲಿ ಕೂರುತ್ತಾರೆ. ಕೆಲವರು ಕಿರುಚಾಡಿಕೊಂಡು ಓಡೋಡಿ ಬರುತ್ತಾರೆ. ಪ್ರಾಣಿ ಗಳನ್ನು ಅವು ಇರುವ ಸ್ಥಳದಿಂದ ಎಬ್ಬಿಸಿ ಓಡಿಸು ವುದು ಇದರ ಉದ್ದೇಶ. ಕಿರುಚಾಟಕ್ಕೆ ಹೆದರಿ ಪ್ರಾಣಿಗಳು ಪೊದೆಗಳ ಮಧ್ಯೆಯಿಂದ ಹೊರಕ್ಕೆ ಓಡಿ ಬರುತ್ತವೆ. ಆಗ ಬೇಟೆಗಾರರು ಅವುಗಳಿಗೆ ಗುಂಡಿಕ್ಕುತ್ತಾರೆ. ಗೊಂಡರು ಸಾಲಿನಲ್ಲಿ ಬಂದೂಕು ಹಿಡಿದು ಕೂರುತ್ತಿದ್ದುದರಿಂದ ಬೇಟೆ ತಪ್ಪಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಏಕೆಂದರೆ ಒಬ್ಬರ ಗುಂಡೇಟು ತಪ್ಪಿದರೂ ಮತ್ತೊಬ್ಬರ ಗುಂಡೇಟಿಗೆ ಬಲಿ ಆಗುತ್ತಿತ್ತು. ಕಾಡುಕೋಳಿ, ಕಾಡುಕುರಿ, ಕಾಡುಬೆಕ್ಕು, ಕಡ, ಮಿಕ, ಬರ್ಕ, ಮುಳ್ಳುಹಂದಿ ಮತ್ತಿತರ ಪ್ರಾಣಿಗಳನ್ನು ಗೊಂಡರು ಬೇಟೆಯಾಡುತ್ತಿದ್ದರು. ಇವರು ಬೇಟೆಗೆ ಹೊರಡುವ ಮುನ್ನ ದೇವರಿಗೆ ಹರಕೆ ಹೊರುವ ಸಂಪ್ರದಾಯವೂ ಇತ್ತು. ಒಂದು ವೇಳೆ ಹರಕೆ ಹೊತ್ತು ಹೋದಾಗ ಯಾವುದಾದರೂ ಪ್ರಾಣಿ ಸಿಕ್ಕರೆ ಅದರ ಮಾಂಸವನ್ನು ದೇವರಿಗೆ ನೈವೇದ್ಯವಾಗಿ ಇಡುತ್ತಿದ್ದರಂತೆ. ಬೇಟೆ ವಿಚಾರ ದಲ್ಲಿ ಗೊಂಡರಲ್ಲಿ ಒಂದು ನಿರ್ಬಂಧ ಇತ್ತಂತೆ ಅದೇನೆಂದರೆ, ಅವರು ಬಲೆ ಅಥವಾ ಗಾಳ ಹಾಕಿ ಮೀನು ಹಿಡಿಯುತ್ತಿರಲಿಲ್ಲ. ಆದರೆ ಇವರು ಮೀನು ತಿನ್ನದೇ ಇರುತ್ತಿರಲಿಲ್ಲ.
ಮದುವೆ ವಿಚಾರದಲ್ಲಿಯೂ ಸಂಪ್ರದಾಯ ಪಾಲನೆಯಲ್ಲಿತ್ತು. ಇನ್ನು ವಿವಾಹ ಸಂಬಂಧ ಬೆಳೆಸುವಾಗ ಇವರದೇ ಸಮುದಾಯದ ‘ತೋಳ’ ಬೆಡಗಿನವರಿಗೆ ಬೇರೆ ಬೆಡಗಿನವರು ಹೆಣ್ಣು ಕೊಡುವಂತಿರಲಿಲ್ಲ. ಕೊಟ್ಟರೆ ಸಂತತಿಯೇ ತೊಳೆದು ಹೋಗುತ್ತದೆ ಎಂಬ ನಂಬಿಕೆಯೂ ಗೊಂಡರಲ್ಲಿ ಇತ್ತು. ಗೊಂಡರಲ್ಲಿ ವಿಶೇಷವಾದ ಸಂಪ್ರದಾಯ ಅದೆನೆಂದರೆ, ಹೆಣ್ಣಿನ ಕಡೆಯವರು ಗಂಡು ಹುಡುಕುವಂತಿ ರಲಿಲ್ಲ. ವರನ ಕಡೆಯವರೇ ವಧು ಹುಡುಕ ಬೇಕು. ವಿವಾಹ ನಿಶ್ಚಯವಾದರೂ ಆದಕ್ಕೆ ಸಮುದಾಯದ ಮುಖಂಡನ ಒಪ್ಪಿಗೆ ಬೇಕಿತ್ತು. ಕನ್ಯೆ ನೋಡುವ ಕಾರ್ಯಕ್ರಮಕ್ಕೂ ಆತನದ್ದೇ ಸಾರಥ್ಯ. ಈ ಮೊದಲು ಹೆಣ್ಣು ಮಗಳಿಗೆ12 ವರ್ಷ ವಯಸ್ಸು ಆಗುತ್ತಿದ್ದಂತೆ ಮದುವೆ ಮಾಡಿ ಬಿಡುತ್ತಿದ್ದರು. ವಿವಾಹ ಕಾರ್ಯಕ್ರಮ ಗಳು ಹೆಚ್ಚಾಗಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯುತ್ತಿತ್ತಂತೆ. ಈಗ ಸಮಯ ಬದಲಾಗಿದೆ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದರಿಂದ ಮದುವೆಯ ವಯಸ್ಸು ಕೂಡ ಬದಲಾಗಿದೆ ಎಂದರೆ ಶಿಕ್ಷಣ ಎಷ್ಟು ಮುಖ್ಯ ಎಂಬುದನ್ನು ಬಲ್ಲರಾಗುತ್ತಿರುವುದು ಅಭಿನಂದನಾರ್ಹ.

ಗೊಂಡರಲ್ಲಿ ಯಾರಾದರೂ ತಿರುಪತಿಗೆ ಹೋಗಿ ಬಂದರೆ ಅವರಿಗೆ ಹೆಚ್ಚು ಮರ್ಯಾದೆ. ಹೋಗುವಾಗ ಬೀಳ್ಕೊಡುಗೆ ಕಾರ್ಯಕ್ರಮ ನಡೆಯುತ್ತದೆ. ಬಂದ ಮೇಲೂ ಅಷ್ಟೇ ಗೌರವ ದೊರೆಯುತ್ತದೆ.ತಿರುಪತಿಗೆ ಹೋಗಿ ಬಂದವರು ಮನೆಯಲ್ಲಿ ಭಾರಿ ಪೂಜೆ ಏರ್ಪಾಡು ಮಾಡಿ ಸಾವಿರಾರು ಜನರಿಗೆ ಊಟ ಹಾಕಿಸುತ್ತಿದ್ದರು. ಅದಕ್ಕೆ ಹರಿದಿನ ಎಂದು ಕರೆಯುತ್ತಿದ್ದರು.ತಮ್ಮ ಊರು ಮಾತ್ರವಲ್ಲ, ಊಟಕ್ಕೆ ಬರುವಂತೆ ಅಕ್ಕಪಕ್ಕದ ಊರಿನವರಿಗೂ ಕರೆ ಕಳುಹಿಸು ತ್ತಿದ್ದರು. ಒಟ್ಟು ಐದು ದಿನ ಹರಿದಿನ ನಡೆಯು ತ್ತಿತ್ತು. ತಿರುಪತಿಗೆ ಹೋಗಿ ಬಂದ ವ್ಯಕ್ತಿಯು ಸತ್ತರೆ ಮೃತ ದೇಹವನ್ನು ಮೆರವಣಿಗೆಯಲ್ಲಿ ಸ್ಮಶಾನಕ್ಕೆ ಕೊಂಡೊಯ್ಯುತಿದ್ದರಂತೆ. ದೆವ್ವ, ಭೂತದ ವಿಚಾರದಲ್ಲೂ ಗೊಂಡರಿಗೆ ಭಾರಿ ನಂಬಿಕೆ ಇತ್ತು. ಹೀಗಾಗಿ ದೆವ್ವ, ಭೂತಗಳಿಗೆ ಆಗಾಗ ಕೋಳಿ ಬಲಿ ಕೊಡುತ್ತಿದ್ದರು. ದೆವ್ವ ಇಂತಹ ಜಾಗದಲ್ಲಿದೆ,ಇಂತಹ ಸ್ಥಳದಲ್ಲಿ ತಿರುಗುತ್ತಿದೆ ಎಂದು ಮಾಂತ್ರಿಕರು ಹೇಳುತ್ತಿದ್ದರಂತೆ. ಈ ದೆವ್ವ, ಭೂತದ ವಿಚಾರದಲ್ಲಿ ಗೊಂಡರು ಹಲವಾರು ಕಥೆಗಳನ್ನು ಹೇಳುತ್ತಿದ್ದರು. ಇದಲ್ಲದೆ ದೆವ್ವಗಳು ಮತ್ತು ದೇವರುಗಳಿಗಾಗಿ ಮಂಡಲ ಪೂಜೆ ಮಾಡುವ ಸಂಪ್ರದಾಯವೂ ಇತ್ತು. ಈ ಪೂಜೆಯ ಸಂದರ್ಭದಲ್ಲಿ ಅವರು ಡಮರುಗ ಬಾರಿಸುತ್ತಾ ಪದಗಳನ್ನು ಹೇಳುತ್ತಿದ್ದರು. ಇದು ದೆವ್ವಗಳನ್ನು ಕರೆಯುವ ವಿಧಾನವೂ.

ಗೊಂಡರ ಸುಗ್ಗಿ ಕುಣಿತವೂ ವಿಶಿಷ್ಟವಾದದ್ದು. ಅದು ಶಿವರಾತ್ರಿಯಂದು ಆರಂಭವಾಗುತ್ತದೆ. ಇದರಲ್ಲಿ ಗಂಡಸರು ಮಾತ್ರ ಪಾಲ್ಗೊಳ್ಳುತ್ತಾರೆ. ದೀಪಾವಳಿ, ಶಿವರಾತ್ರಿ, ಸುಗ್ಗಿ, ಆಷಾಡ, ಶ್ರಾವಣ, ಇವು ಗೊಂಡರು ಆಚರಿಸುವ ಪ್ರಮುಖವಾದ ಹಬ್ಬಗಳು.
ಸಮುದಾಯ ಯಾವುದೇ ಆದರೂ ಈ ಹಿಂದೆ ನ್ಯಾಯ ಪಂಚಾಯಿತಿ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತಿತ್ತು. ಗೊಂಡರೂ ಇದರಿಂದ ಹೊರತಾ ಗಿರಲಿಲ್ಲ. ಅವರಲ್ಲಿ ಪ್ರತಿ ಊರಿಗೂ ಒಬ್ಬ ಮುಖಂಡ ಇರುತ್ತಿದ್ದ. ಜಾತಿ ಜನರಲ್ಲಿ ಏನೇ ಸಮಸ್ಯೆ ಬಂದರೂ, ಜಗಳವಾದರೂ ಆದನ್ನು ಬಗೆಹರಿಸುವ ಕೆಲಸ ಆ ಮುಖಂಡನದ್ದು. ಒಂದು ವೇಳೆ ಯಾರಾದರೂ ಕಟ್ಟಳೆಗಳನ್ನು ಮೀರಿ ನಡೆದರೆ ಅವರನ್ನು ಸಮುದಾಯದಿಂದ ಅಥವಾ ಊರಿನಿಂದಲೇ ಹೊರಗೆ ಹಾಕುವ ಅಧಿಕಾರವೂ ಮುಖಂಡನಿಗೆ ಇತ್ತು. ಒಟ್ಟಾರೆ ಗೊಂಡ ಎಂಬುದು ವಿಶಿಷ್ಟ ಮತ್ತು ವಿಚಿತ್ರವಾದ ಆಚರಣೆ ಗಳಿಗೆ ಹೆಸರಾದ ಸಮುದಾಯ. ಗೊಂಡರು ಗೊಂಡಾರಣ್ಯದಲ್ಲಿ ವಾಸಿಸುತ್ತಿದ್ದರಿಂದ ಆರ್ಯ ರೊಡನೆ ಇವರಿಗೆ ಹೋರಾಡುವ ಸಂದರ್ಭ ಬರಲಿಲ್ಲ. ರಾಮಚಂದ್ರನ ವನವಾಸದಲ್ಲಿ ಹಾಗೂ ಸೀತೆಯನ್ನು ಹುಡುಕುತ್ತ ಅಲೆಯುವಾಗ, ಗೊಂಡರ ಜೊತೆಗೆ ರಾಮಚಂದ್ರನ ಗೆಳೆತನ- ವಾಯಿತು ಎಂಬ ಪ್ರತೀತಿ ಇದೆ.

ಒಟ್ಟಾರೆಯಾಗಿ ಈ ಗೊಂಡ ಜನಾಂಗದವರು ಆರ್ಥಿಕವಾಗಿ ಬಡವರಾದರೂ, ಸಾಂಸ್ಕೃತಿಕ ವಾಗಿ ಶ್ರೀಮಂತರಾಗಿದ್ದಾರೆ. ಅವರ ಜೀವನ ಶೈಲಿ ಸರಳವಾಗಿದ್ದು, ತಮ್ಮ ಸಮುದಾಯದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಹಂಬಲ ಮೆಚ್ಚುವಂತಹುದು. ಆಧುನಿಕತೆಯ ಸ್ಪರ್ಶದಿಂದಾಗಿ ಬುಡಕಟ್ಟು ಜನಾಂಗದ ಜನಪದ ಆಚರಣೆಗಳು ಇತಿಹಾಸ ಸೇರದೆ ಎಲ್ಲರಿಗೂ ಜೀವಂತಿಕೆಯ ಸಾರುವಂತಿರಲಿ… ನಮ್ಮ ಜಿಲ್ಲೆ ನಮ್ಮ ಹೆಮ್ಮೆ.
✍️ ಶ್ರೀಮತಿ. ಶಿವಲೀಲಾ ಹುಣಸಗಿ
ಶಿಕ್ಷಕಿ, ಯಲ್ಲಾಪೂರ

ವಿವರವಾಗಿ,ಚಿಕ್ಕದಾಗಿ, ಚೊಕ್ಕದಾಗಿ, ಸುಂದರವಾಗಿ ಗೊಂಡರ ಬಗ್ಗೆ ತಿಳಿಸಿದ್ದೀರಿ.ಧನ್ಯವಾದಗಳು.ಲಾಲಗೊಂಡರ ಬಗ್ಗೆ ವಿವರಣೆ ಬೇಕಿತ್ತು.
LikeLiked by 1 person
ಅಕ್ಕಾ ಬಳ್ಳಾರಿ ಮತ್ತು ರಾಯಚೂರು ಕೆಲವು ತಾಲೂಕುಗಳಲ್ಲಿ ಗೊಂಡ ಸಮುದಾಯದ ಲಾಲ್ ಗೊಂಡ ಸಮುದಾಯವು ಇದೆ ಈ ಸಮುದಾಯವು ರಾಜ್ಯ ಸರಕಾರದ ಯಾವ ಜಾತಿ ಕಾಲಂ ನಲ್ಲಿ ಸಹ ಸೇರಿಲ್ಲ ಹಾಗಾದರೆ ಲಾಲ್ ಗೊಂಡ ಸಮುದಾಯವು ಯಾವ ಸಮುದಾಯಕ್ಕೆ ಮತ್ತು ಯಾವ ಜಾತಿಗೆ ಸೇರುತ್ತದೆ ಎಂಬ ಮಾಹಿತಿ ನಮ್ಮ ಸಮುದಾಯದ ಯಾರಿಗೂ ಇಲ್ಲ ನನಗೆ ಅನಿಸಿದ ಪ್ರಕಾರ ನಿಮ್ಮ ಗೊಂಡ ಜಾತಿಗೆ ಸೇರಬಹುದೇನೋ
LikeLike
ಗೊಂಡ ಜನಾಂಗದ ಕುರಿತು ವಿಸ್ತೃತ ಮಾಹಿತಿವುಳ್ಳ ಚಿತ್ರಣ. ಶಿವಲೀಲಾ ಅವರ ಅಧ್ಯಯನಪೂರ್ಣ ಲೇಖನ. ಲಘು ಬರಹಗಳ ನಡುವೆ ಗಂಭೀರ ಬರಹದ ಆಶಾಕಿರಣ!
D.s.NAIK sirsi
LikeLiked by 1 person
ನಮ್ಮ ಬುಡಕಟ್ಟು ಸಮುದಾಯದ ಕುರಿತು ವಿಸ್ತಾರವಾಗಿ ಬರೆದಿದ್ದಕ್ಕೆ ಆತ್ಮೀಯ ಧನ್ಯವಾದಗಳು. ಗೊಂಡರ ಮೂಲ ಮತ್ತು ಕರ್ನಾಟಕದಾದ್ಯಂತ ಇರುವ ಗೊಂಡ ಸಮುದಾಯದ ಕುರಿತು ಸಂಕ್ಷಿಪ್ತವಾಗಿ ಬರಿದ್ದೀರಾ. ಚೆನ್ನಾಗಿದೆ ಲೇಖನ. 💐💐
ತಿಲೋತ್ತಮೆ
LikeLiked by 1 person