ಸುರಲೋಕದಿ ಮಿಂದು
ನವಸಂವತ್ಸರ ಜನ್ಮತಾಳಿದೆ ಇಂದು
ಕರೆಯುತಿದೆ ಕೈ ಬೀಸಿ
ಜನ ಜೀವನ ಸಾರ ತಿಳಿಸಿ.
ಋತುಗಳ ಗಣನಾಯಕ
ಹೊತ್ತು ತರುತಿಹ ಶುಭದಾಯಕ
ಹೊಸ ಜೀವನದ ಬಂಧುರ
ಬಾನೆತ್ತರದಿ ಭಾವ ಸುಮಧುರ.
ನವ ಪಲ್ಲವಿ ಋತುಗಾನ
ಯುಗಯುಗಾಂತರದ ವರದಾನ
ಬೃಂಗದ ಸಂಗೀತ ಉಲಿ
ಜೀವ ಕಳೆಯ ಉಳಿಸುತಲಿ.
ಬೇವು ಬೆಲ್ಲದಂಗ
ಈ ಜೀವನ ಸಂಗ
ಬೆವರು ಹುರಿ ಬೆಳೆದು ನಿಂತು
ಸತ್ವಯುತದ ಜನಿತದಲಿ ನಾವಿಂದು.
ಸಭರಸಕೆ ನಾಂದಿ
ಮರುಹುಟ್ಟಿನ ಸಂಬಂಧಿ
ಹೊನ್ನ ಬಯಕೆ ಚಿಗುರು
ಜೀವನ್ಮುಖಿಯ ತವರು.
ಗತಕಾಲದ ನೆನಪಲಿ
ಸತ್ಯ ಜ್ಯೋತಿ ಉರಿಯಲಿ
ಉಳಿವ ಬಂಜೆ ನೆಲದಲಿ
ಪುಟಿದು ಬೆಳೆವ ಛಲದಲಿ.
ಬೇವಿನ ಕುಡಿ
ಮಾವಿನ ಮಿಡಿ
ಸೊಬಗು ಚೈತ್ರದಲಿ
ನೋವು ನಲಿವು ಮೈತ್ರಿಯಲಿ.
ಹಸಿರು ಉಸಿರಿನ ಯುಗಾದಿ
ಬನಸಿರಿಯ ಹಬ್ಬದ ಬುನಾದಿ
ಸಹನೆ ಶಾಂತಿ ನೆಲೆಸಲಿ
ಸುಸ್ಥಿರದ ಬದುಕಾಗಲಿ.
ಜೀವ ಪ್ರೇಮದ ಉಡುಗೊರೆ
ಸುಖ ಸಮೃದ್ಧಿಯ ಧಾರೆ
ಬಾಳ ಬೆಳಕ ಕಿರಣ
ಮುಗಿಲೇರಲಿ ಅಂತಃಕರಣ.
ಬೃಂಗದ ಸಂಗೀತ ಉಲಿ
ಜೀವಕಳೆಯ ಉಳಿಸುತಲಿ
ನವಪಲ್ಲವಿಯ ಶೃತಿ
ಇರಲಿ ಮಾನವೀಯ ಧೃತಿ.
ನಿಸರ್ಗ ಸಿರಿಯ ಕಾಲ
ಯುಗದ ಆದಿಯ ಮೂಲ
ಪ್ರೇಮ ಸಹನೆಗೆ ಮೀಸಲು
ನೆಮ್ಮದಿ ಸುಖಕೆ ಅಹವಾಲು.

✍️ರೇಷ್ಮಾ ಕಂದಕೂರ
ಶಿಕ್ಷಕಿ, ಸಿಂಧನೂರ
