ಕೆಳದುಟಿ ಕಚ್ಚಿ ಸೂಸುವ
ಅವಳ ಮಾದಕ ನಗೆಯಿಂದ
ಮುದಗೊಂಡವರಿಗಿಂತಲೂ
ನಿತ್ಯ ನಿದ್ದೆ ಕಳೆದುಕೊಂಡು
ಚಡಪಡಿಸಿ ಸತ್ತವರೇ ಹೆಚ್ಚು!
ಅವಳ ಬಳುಕು ನಡಿಗೆಯ
ಸೊಂಟದ ಹೊಯ್ದಾಟದಿಂದ
ದಿಕ್ಕು ತಪ್ಪಿದವರಿಗಿಂತಲೂ
ಹೌಹಾರಿ ಉಸಿರು ಸಿಕ್ಕಿಕೊಂಡು
ಒದ್ದಾಡಿದವರೇ ಹೆಚ್ಚೆಚ್ಚು.!
ಅವಳ ಕಂಗಳ ಕೀಟಲೆಯ
ತುಂಟಾಟ ತುಡುಗಿನಿಂದ
ಹುಚ್ಚು ಹಿಡಿಸಿಕೊಂಡವಗಿಂತಲೂ
ಎದೆಯ ಲಯ ತಪ್ಪಿಸಿಕೊಂಡು
ಕಂಗಾಲಾದವರೇ ಹೆಚ್ಚು.!
ಅವಳ ಬೆಡಗು ಬಿನ್ನಾಣದ
ಬಿಂಕದಾಟ ಬೆಂಕಿಯಿಂದ
ಕಿಚ್ಚು ಹಚ್ಚಿಕೊಂಡವರಿಗಿಂತಲೂ
ಪೆಚ್ಚಾಗಿ ಪರಿತಪಿಸಿಕೊಂಡು
ಪರದಾಡಿದವರೇ ಹೆಚ್ಚೆಚ್ಚು.!
ಅವಳ ಮೋಹಕ ಮೋಡಿಯ
ಸಮ್ಮೋಹನ ಗಾರುಡಿಯಿಂದ
ಮಾತು ಮೈಮರೆತವರಿಗಿಂತಲೂ
ಮರುಳಾಗಿ ಮತಿಕೆಡೆಸಿಕೊಂಡು
ಕವಿಯಾದವರೇ ಹೆಚ್ಚೆಚ್ಚು,!
ಚಡಪಡಿಸುತ ಒದ್ದಾಡಿದರೂ
ಕಂಗಾಲಾಗುತ ಪರದಾಡಿದರೂ
ಎಲ್ಲರಿಗೂ ಅವಳೇ ಅಚ್ಚುಮೆಚ್ಚು
ಅವಳು ಕಾಲಿಟ್ಟ ಕೂಡಲೇ
ಅವರ ತನುಮನದಿ ಕಾಳ್ಗಿಚ್ಚು.!

✍️ಎ.ಎನ್.ರಮೇಶ್.ಗುಬ್ಬಿ.