ಕವಿ, ಕಾವ್ಯ, ಓದುಗ ಹಾಗೂ ಜೀವನ ಈ ಎಲ್ಲವೂ ಒಂದು ನಾಣ್ಯದ ಬೇರೆ ಬೇರೆ ಮುಖ ಗಳು ಅಷ್ಟೇ.ಒಂದನ್ನು ಉಳಿದು ಮತ್ತೊಂದಿಲ್ಲ. ಹಾಗಾಗಿಯೇ ಜೀವನ ಕಂಡ ಕವಿ ಅದನ್ನು    ಪದಗಳಲ್ಲಿ ದಾಖಲಿಸುತ್ತಾನೆ; ಪಡೆದ ಅನುಭವಗಳನ್ನು ಹಂಚಿಕೊಳ್ಳುತ್ತಾನೆ; ಹೊಸ ಕಲ್ಪನೆ ಕನಸುಗಳನ್ನು ಶಬ್ದಗಳಾಗಿ ಮಾರ್ಪಡಿ ಸುತ್ತಾನೆ. ಸಂಜೆ ಹಾಡು ಕವನ ಸಂಗ್ರಹದ “ಕವಿತೆ ಮತ್ತು ಬದುಕು” ಈ ಕವನದಲ್ಲಿ ಬದುಕಿನ ವೈವಿಧ್ಯಗಳನ್ನು ವೈರುಧ್ಯಗಳನ್ನು ಹಿಡಿದಿಡುತ್ತಾ ಹೋಗುತ್ತಾರೆ ಕವಿ.

ಅನಂತವಾಗಿ ಹಬ್ಬುತ್ತಿರುವ ಅನಾದಿ ಆಗಸದ ಅಂಚಿನಲ್ಲಿ ದಿಗಂತದ ಕೊನೆಯಲ್ಲಿ ಕಾಮನ ಬಿಲ್ಲು ಸಹ ಕಾಣುತ್ತಲೇ ಇರುತ್ತದೆ. ಋತುಗಳ ಚಕ್ರ ಸುತ್ತುತ್ತಲೇ ಇರುತ್ತದೆ; ಮೊಗ್ಗು ಅರಳು ತ್ತದೆ, ಬಾನು ಬಣ್ಣಗಳನ್ನು ತಳೆಯುತ್ತದೆ. ಅದನ್ನೆಲ್ಲ ನೋಡುತ್ತಾ ಕವಿ ಮಂತ್ರಮುಗ್ದ- ರಾಗುತ್ತಾರೆ. ಬದುಕಿನ ಅನುಭವದ ಮೂಟೆ ಯಲ್ಲಿ ಒಂದೊಂದೇ ಸರಕುಗಳು ಸೇರಿಕೊಳ್ಳು ತ್ತವೆ. ಮಕ್ಕಳನ್ನು ಆಕರ್ಷಿಸುವ ಸಕ್ಕರೆ ಮಿಠಾಯಿಯ ಗಾಡಿಯಂತೆ ನಮ್ಮನ್ನು ಕನಸು ಗಳು ಸೆಳೆಯು ತ್ತವೆ.ದುಡಿಯದವರನ್ನು ದುಡಿಯಲು ಹಚ್ಚುವ ವಾಸ್ತವತೆಯ ಚಾಟಿ, ಹಾಗೆಯೇ ಇಲ್ಲದ ಅನುಕಂಪದ ಮನಃತಂತು ವನ್ನು ಮೀಟಿ ಬಿಕ್ಷೆ ಪಡೆಯುವ ಕುರುಡ ಭಿಕ್ಷುಕ ಇವು ನಿರಂತರ ಹಾದು ಹೋಗುವ ಬಾಳಿನ ಪಾತ್ರಗಳು. ದೇವರ ಗುಡಿಯಲ್ಲೇ ಇಸ್ಪೀಟ್ ಆಡುವ ಜನರಿರುತ್ತಾರೆ ಬುದ್ಧಿ ಹೇಳಿದರೂ ಕೇಳದ ಭಂಡರಿರುತ್ತಾರೆ. ಹೆಣ್ಣು ಮಕ್ಕಳನ್ನು ಗೌರವಿಸದ ಬೀದಿಯ ಕಾಮಣ್ಣರು ಇರುತ್ತಾರೆ. ಹೂವನೊಡನಿನ ಮುಳ್ಳುಗಳಂತೆ.

ಬದುಕಿನ ಕರಾಳತೆಯನ್ನು ಎತ್ತಿ ಹಿಡಿಯುವ ಈ ಸಾಲುಗಳು ನಮ್ಮಲ್ಲಿ ಒಂದು ರೀತಿಯ ವಿಷಾದ ವನ್ನು ಮೂಡಿಸುವದರಲ್ಲಿ ಸಫಲವಾಗುತ್ತದೆ.

ಹಗಲಿನ ಇರುಳಿನ ಆಶಾ ಪಥದಲಿ
ನಡೆದಿದೆ ಹಸಿವಿನ ಮೆರವಣಿಗೆ
ಹಸಿದ ತಾಯಿ ಹಾಲಿಲ್ಲದ ಮೊಲೆಯನು ಹೊಂದಿಸುವಳು ಮಗುವಿನ ತುಟಿಗೆ

ಎಂದು ಹೇಳುವಲ್ಲಿ ಆ ತಾಯಿಯ ಅಸಹಾ- ಯಕತೆ ಹಾಗೂ ಹೊಟ್ಟೆಗೆ ಇಲ್ಲದೆ ನರಳುವ ಜನರ ಆಕ್ರಂದನ ಕಣ್ಣಿಗೆ ಕಟ್ಟುವಂತಾಗುತ್ತದೆ. ಬಲ್ಲಿದರು ಗೆಲ್ಲುತ್ತಾ ನಕ್ಕರೆ ಬಡವರು ಹೊಟ್ಟೆಗಿ ಲ್ಲದೆ ಮಲಗುವರು ಎನ್ನುತ್ತಾರೆ.ಆದರೆ ಬರೆದು ಬರೆದು ದಣಿದಿರುವ ಕವಿ ಕೋಗಿಲೆ ಮಾತ್ರ ಸುಮ್ಮನಾಗದೆ ಕಣ್ಣೀರಿನ ಕಥೆ ಹಾಡುತ್ತಲೇ ಇರುತ್ತಾನೆ ಎನ್ನುತ್ತಾರೆ.

ಅಂದಿಗೂ ಇಂದಿಗೂ ಹಾಗೆಯೇ ಇರುವ ಬರಹ ಗಾರರ ಬವಣೆ ಸಾರುವ ಈ ಸಾಲುಗಳನ್ನು ನೋಡಿ:

ಅಂಗಡಿ ತೆರೆದಿದೆ, ಬೇಕಾದ್ದಲ್ಲಿದೆ
ಕೊಳ್ಳಲು ಕಿಸೆಯಲ್ಲಿ ಹಣವಿಲ್ಲ
ಪಂಚತಾರಾ ಹೋಟೆಲ್ಲಿನ ಒಳಗಡೆ
ಕವಿ ಸಮ್ಮೇಳನ ತಪ್ಪಿಲ್ಲ.

ಗಂಟಲಾರಿ ಬಾಯಿ ಒಣಗಿದ ನೀರಿಲ್ಲದ ನಲ್ಲಿಗೆ ತುಟಿಯಿಟ್ಟ ಮಗುವಿನ ಪ್ರತಿಮೆ ಬದಲಾಗದ ಬದುಕಿನ ಚಿತ್ರಣ ಬಾಳಿನ ಭೀಕರತೆಯ ದರ್ಶನ ಮಾಡಿಸುತ್ತದೆ. ಆಕಾಶವೇ ಮನೆ ನೆಲವೇ ಹಾಸಿಗೆ ಎನ್ನುವ ಬಡವರ ಮಗು, ಶ್ರೀಮಂತರು ಎಸೆಯುವ ಪುಡಿ ಕಾಸಿಗೆ ಕಾಯುತ್ತದೆ ಎನ್ನು ವಲ್ಲಿನ ಸಮಾಜದ ವರ್ಗ ವ್ಯತ್ಯಾಸ ಢಾಳಾಗಿ ಕಣ್ಣಿಗೆ ಬಡಿಯುತ್ತದೆ. ಕವಿತೆಯ ಈ ಕಡೆಯ ಸಾಲುಗಳು ನಿಜಕ್ಕೂ ಅಂದಿಗೂ ಇಂದಿಗೂ ಬದಲಾಗದ ಮನುಜನ ಪರಿಸ್ಥಿತಿಗೆ ಮನಃಸ್ಥಿತಿಗೆ ಬರೆದ ಭಾಷ್ಯವೋ ಎಂಬಂತೆ ಅನಿಸಿ ನಮ್ಮದೇ ಮನಸ್ಸಿನ ಭಾವಗಳನ್ನು ಕವಿ ಆಡುತ್ತಿದ್ದಾನೆ ಎಂದೆನಿಸಿ ನಮ್ಮಲ್ಲಿಯೇ ಕವಿ ಪರಕಾಯ ಪ್ರವೇಶ ಮಾಡಿರುವಂತೆ ಭಾಸವಾಗುತ್ತದೆ.

ಪ್ರಾಸಗಳಿಲ್ಲದ ಬದುಕಿನ ಕವಿತೆಗೆ
ಈ ದಿನ ಹಾಡದ ಒಂದು ಪುಟ
ಏನೋ ಆಗಿದೆ ಎಲ್ಲೋ ಹೋಗಿದೆ
ನಾವು ಬದುಕಿರುವುದಂತು ದಿಟ

ಕವಿ ಇತಿಹಾಸದ ದರ್ಶನ  ಮಾಡಿಸುವ      ದಾರ್ಶನಿಕನೂ ಹೌದು,ವರ್ತಮಾನದ ವಾಸ್ತವತೆ ಅರುಹುವ ಬಾತ್ಮೀದಾರನೂ ಹೌದು ಹಾಗೂ ಭವಿಷ್ಯದ ಬುನಾದಿ ಹಾಕುವ ಪ್ರವಾದಿಯೂ ಹೌದು. ಇವುಗಳನ್ನು ಸಾರಿ ಹೇಳುವಂತಿರುವ ಈ ಕವನ ಸರಳ ಸುಂದರ ಪದಗಳಲ್ಲಿ ಮಾರ್ಮಿಕ ವಾಗಿ ಮನಮುಟ್ಟು ತ್ತದೆ.

“ರವಿ ಕಾಣದ್ದನು ಕವಿ ಕಾಣಬಲ್ಲ” ಎಂಬುದು ಒಂದು ಲೋಕೋಕ್ತಿ. ಅಂತೆಯೇ ಕವಿ ತಾನು ಏನೇನೆಲ್ಲ ಮಾಡಬಲ್ಲೆನೆಂದು “ಕೈಮರದ ನೆರಳಲ್ಲಿ” ಕವನ ಸಂಕಲನದ “ಕವಿ” ಎಂಬ ಕವಿತೆಯಲ್ಲಿ ಹೇಳುತ್ತಾ ಹೋಗುತ್ತಾರೆ ಕೆ.ಎಸ್.ಎನ್  ಅವರು.

ಹತ್ತು ಮಂದಿಯ ನಡುವೆ ನಾನೊಂಟಿಯಿರಬಲ್ಲೆ
ಹಸಿದಾಗ ನೀರ್ಕುಡಿದು ಬದುಕಬಲ್ಲೆ ಸಮುದಾಯ ದನಿಗಳಲಿ ನನ್ನ ದನಿಯನು ಬೆರೆಸಿ
ಇಂಪಾದ ಹಾಡುಗಳ ಕಟ್ಟಬಲ್ಲೆ

ಕವಿ ತನ್ನ ಮನೋಭೂಮಿಕೆಯಲ್ಲಿ ಬೇಕಾದ ಏಕಾಂತವನ್ನು ಸೃಷ್ಟಿಸಿಕೊಳ್ಳಬಲ್ಲ ಹಾಗೆಯೇ ಸಮಾಜದ ಮುಖ್ಯ ವಾಹಿನಿಯಲ್ಲಿ ಒಂದಾಗಿ ಹೋಗಿ ಸಮರಸದ ಇಂಪಾದ ಹಾಡುಗಳನ್ನು ಕಟ್ಟಲೂ ಬಲ್ಲ. ಅವನಿಗೆ ಬಡತನ ಒಂದು ಸಮಸ್ಯೆ ಅಲ್ಲವೇ ಅಲ್ಲ. ನೀರು ಕುಡಿದೆ ಹಸಿವು ಇಂಗಿಸಿಕೊಳ್ಳಬಲ್ಲಂತಹವನು ಅವನು. ಅಂದರೆ ಭಾವ ಸಾಮ್ರಾಜ್ಯದಲ್ಲಿ ವಿಹರಿಸುವ ಕವಿ ವಾಸ್ತವ ದಲ್ಲೂ ಒಂದಾಗಿ ನಡೆಯಬಲ್ಲ ಎಂದು ಅರ್ಥ.

ಹಾಗೆಯೇ ಬೆಟ್ಟಗಳನ್ನು ಬೇಕಾದರೂ ಹತ್ತಬಲ್ಲೆ ಕಾಲು ಸೋಲುವವರೆಗೂ ನಡೆಯಬಲ್ಲೆ ದೋಣಿ ನಡೆಸಿ ಹೊಳೆ ದಾಟಬಲ್ಲೆ ಎಂದೆಲ್ಲ ಶ್ರಮಪಡಲು ಸಿದ್ದ ಎಂದು ಹೇಳುವ ಕವಿ ಕಾಡು ಹೂಗಳನ್ನು ಮುಡಿದು ಸಹ ಸಂಭ್ರಮಿಸಿ ಕುಣಿಯಬಲ್ಲೆ ಎಂದು ಎಲ್ಲದಕ್ಕೂ ಸಿದ್ಧವಿರುವ ತನ್ನ ಸ್ಥಿತಿಯನ್ನು ವರ್ಣಿಸುತ್ತಾನೆ.

ಬರಡು ಬಿದಿರನ್ನು ಕೊಳಲು ಮಾಡಿಕೊಂಡು ಬೇಕಾದ ರಾಗಗಳನ್ನು ಸೃಜಿಸಬಲ್ಲಂತಹ ಶಕ್ತಿ ಕವಿಗಿದೆ .”ಹೆಂಡತಿಯೊಬ್ಬಳು ಜೊತೆಯಲ್ಲಿದ್ದರೆ ನನಗದೆ ಕೋಟಿ ರೂಪಾಯಿ” ಎಂದು ಹಾಡಿದವರು ಇವರು. ಈ ಸಾಲುಗಳಲ್ಲಿ ಅದೇ ಅರ್ಥ ಹೊರಹೊಮ್ಮಿ ದಾಂಪತ್ಯದ ಸಫಲತೆ ಯನ್ನು ಪ್ರಾಮುಖ್ಯತೆಯನ್ನು ಸಾರುತ್ತದೆ.

ಬಿದಿರು ಕೊಳಲಲ್ಲಿ ಹೊಸ ದನಿಯ ಜೀವವ ತುಂಬಿ
ಸಹೃದಯರನ್ನು ನಾನು ತಣಿಸಬಲ್ಲೆ
ಪಕ್ಕದಲಿ ನನ್ನವಳು ನಗುತ ನಿಂತಿರುವಾಗ
ಲೋಕತ್ರಯವ ನಾನು ಜಯಿಸಬಲ್ಲೆ

ಇಷ್ಟೆಲ್ಲಾ ಸೃಜನಾತ್ಮಕ ಶಕ್ತಿ ಹೊಂದಿರುವ ಕವಿ ಹೊಸ ರಂಗಸ್ಥಳದ ಮೇಲೆ ಹೊಸ ನಾಟಕ ಗಳನ್ನು ಸೃಷ್ಟಿಸಲಾರನೆ? ಹಾಗೆಯೇ ರಕ್ತದ  ತುಂಬಾ ಹೊಸ ಪಲ್ಲವಿಗಳನ್ನು ತಂದು ಬೇಕಾದಾಗ ವಸಂತನನ್ನು ಕರೆತರುವ ಶಕ್ತಿಯೂ ಕವಿಗಿದೆ.ಹಾಗೆಯೇ ತನ್ನ ಸಾಮರ್ಥ್ಯ ವನ್ನು, ದೇವರನ್ನು ಕಾಣುವಂತಹ ಆರಾಧನೆ ಭಕ್ತಿಯನ್ನು ತುಂಬಿ ಕೊಂಡಿರುವ ತನ್ನ ಈ ಸಾತ್ವಿಕ ಶಕ್ತಿಯನ್ನು ವಿನಮ್ರನಾಗಿಯೇ ಹೇಳಿಕೊಳ್ಳುವ ಕವಿಯ ಕವಿತೆಯ ಕಡೆಯ ಸಾಲುಗಳ ಭಾವಗಳನ್ನು ನೋಡಿ:

ಪಯಣದುದ್ಧಕು ನಾನು ಕಂಡ ಕನಸುಗಳನ್ನು
ಅಚ್ಚು ಮಾಡಿಸಬಲ್ಲೆ ಬಯಸಿದಾಗ
ನಾ ಕಂಡ ದೇವರನು ಬಳಿಗೆ ಕರೆಯಲು ಬಲ್ಲೆ ಪಶ್ಚಿಮಾದ್ರಿಯ ನೇರ ಮಸ್ತಕದಲಿ

ತನ್ನ ಶಕ್ತಿ ಸಾಮರ್ಥ್ಯಗಳನ್ನು ಕವನದುದ್ದಕ್ಕೂ ಹೇಳಿಕೊಳ್ಳುವ ಕವಿಯದು ಎಲ್ಲೂ ಬಡಿವಾರ ಎಂದು ಅನಿಸುವುದಿಲ್ಲ. ತನ್ನದೇ ತುತ್ತೂರಿ ಊದುತ್ತಿದ್ದಾನೆ ಎಂದೆಸುವುದಿಲ್ಲ. ಇದು ತನ್ನ ಶಕ್ತಿಯ ಮೇಲೆ ಭರವಸೆ ಅಭಿಮಾನ ಹೊಂದಿರುವ ಮಾತುಗಳು. ಅಂತೆಯೇ ತನ್ನದೇ ಲೋಕದಲ್ಲಿ ತನ್ನದೇ ಪರಿಧಿಯಲ್ಲಿ ಸಾಧಿಸಲು ಹೊರಟಿರುವ ಕವಿಯ ಮನದ ಅಂತರಾಳದ ನುಡಿಗಳು. ಹಣಕಾಸಿನ ಬಡತನ ಎಷ್ಟೇ ಹಿಂಸೆ ಕೊಟ್ಟರು ಕವಿಯ ಅಂತಃಸತ್ವ ವನ್ನು ಅದು ಎಂದಿಗೂ ಬತ್ತಿಸಲಾರದು. ಅದರೊಂದಿಗೆ ಅವನ ಹೋರಾಟದಲ್ಲಿ ಕವಿಯೇ ಎಂದಿಗೂ ವಿಜಯಿ.

✍️ಸುಜಾತಾ ರವೀಶ್ 
ಮೈಸೂರು