ಕಲ್ಯಾಣ ಚಾಲುಕ್ಯರ ಹಲವು ಸುಂದರ ದೇವಾಲಯಗಳಲ್ಲಿ ಪ್ರಮುಖವಾದದ್ದು ಅಮರಗೊಳದ (ಪ್ರಸ್ತುತ ಹುಬ್ಬಳಿಯ ಭಾಗವಾಗಿ ನವನಗರದಲ್ಲಿರುವ) ಬನಶಂಕರಿ ದೇವಾಲಯ.
ಇತಿಹಾಸ ಪುಟದಲ್ಲಿ ಪ್ರಮುಖವಾಗಿ ಈ ಗ್ರಾಮ ಗುರುತಿಸಿಕೊಂಡಿತ್ತು. ಶಾಸನಗಳಲ್ಲಿ ಅಂಬರ ಗೊಳ ಎಂದೇ ಕರೆದಿರುವ ಈ ಭಾಗ ಹಲಸಿಗೆ ನಾಡಿನ ಉಣಕಲ್ಲ–30 ಕ್ಕೆ ಸೇರಿತ್ತು. 1120 ರ ಶಾಸನದಲ್ಲಿ ಆರನೇ ವಿಕ್ರಮಾದಿತ್ಯನ ಕಾಲದಲ್ಲಿ ಸಾಧೋರಿ ಜಕ್ಕರಸನು ಅಂಬರಗೊಳದಲ್ಲಿ ಕೇಶವ ಮಗ್ಗು ಭೈರವ ದೇವರನ್ನು ಪ್ರತಿಷ್ಟಾಪಿಸಿ ಭೂದಾನ ಮಾಡಿದ ಉಲ್ಲೇಖವಿದೆ. ಸಮೀಪದ ಅನೇಕ ಶಾಸನಗಳಲ್ಲಿ ಅಂಬರಗಳದ ಉಲ್ಲೇಖವಿದೆ.
ಬನಶಂಕರಿ ದೇವಾಲಯ

ಮೂಲತ: ಸುಮಾರು 13 ನೇ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯ ಮೂಲತ: ದ್ವಿಕುಟಾಚಲ ದೇವಾಲಯ.ದೇವಾಲಯ ಎರಡು ಗರ್ಭಗುಡಿ, ಎರಡು ಅರ್ಧಮಂಟಪ, ಹಾಗೂ ಒಂದು ನವರಂಗ ಹೊಂದಿದೆ. ಗರ್ಭಗುಡಿ ಪೂರ್ವ ಮತ್ತು ದಕ್ಷಿಣಾಭಿಮುಖ ವಾಗಿದ್ದು, ಶಾಸನಗಳಲ್ಲಿ ಉಲ್ಲೇಖಗೊಂಡಂತೆ ಮೊದಲು ಇಲ್ಲಿ ಕೇಶವ ಹಾಗೂ ಬೈರವನ ಶಿಲ್ಪಗಳು ಇದ್ದಿರಬೇಕು. ಕಾಲಾಂತರದಲ್ಲಿ ಎರಡು ಮೂರ್ತಿಗಳು ಕಾಣೆಯಾಗಿದ್ದು, ಪ್ರಸ್ತುತ ಒಂದು ಗರ್ಭಗುಡಿಯಲ್ಲಿ ಬನಶಂಕರಿ ಶಿಲ್ಪವಿದ್ದು, ಇನ್ನೊಂದು ಗರ್ಭಗುಡಿಯಲ್ಲಿ ಈಗ ಶಿವಲಿಂಗವನ್ನು ಇರಿಸಲಾಗಿದೆ. ಬನಶಂಕರಿಯ ಶಿಲ್ಪ ಅತ್ಯಂತ ಸುಂದರವಾಗಿದ್ದು ಕೈಯಲ್ಲಿರುವ ಡಮರುಗ ಹಾಗೂ ತ್ರಿಶೂಲದ ಕೆತ್ತನೆ ಸುಂದರವಾಗಿದೆ.
ದೇವಾಲಯದ ಗರ್ಭಗುಡಿಯ ಬಾಗಿಲುವಾಡ ಗಳು ಸುಂದರವಾಗಿ ಪಂಚಶಾಖೆಯಿಂದ ಅಲಂಕೄತಗೊಂಡಿದ್ದು ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆ ಇದೆ. ಇದರ ಮೇಲಿನ ಭಾಗದ ತೋರಣದಲ್ಲಿ ಐದು ಶಿಖರಗಳು ಇದೆ. ಇನ್ನೊಂದರಲ್ಲಿ ತ್ರೈಪುರುಷರಾದ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರ ಕೆತ್ತನೆ ಇದ್ದು ಜೊತೆಯಲ್ಲಿ ಗಣಪತಿಯ ಕೆತ್ತನೆ ಸಹ ಇದೆ.

ದೇವಾಲಯದ ಅತ್ಯಂತ ಕಲಾತ್ಮಕವಾದ ಭಾಗ ವೆಂದರೆ ಇಲ್ಲಿನ ನವರಂಗದ ಭಾಗ. ಇಲ್ಲಿ ಮದ್ಯದಲ್ಲಿ ಚಾಲುಕ್ಯ ಶೈಲಿಯ ನಾಲ್ಕು ಕಂಭ ಗಳು ಸೇರಿದಂತೆ 16 ಕಂಭಗಳು ಇದ್ದು, ಇದರಲ್ಲಿನ ಕೆತ್ತನೆ ಭಾಗಗಳು ಕಲಾತ್ಮಕವಾಗಿದೆ. ಇಲ್ಲಿ ಕಾಣ ಬರುವ ನರಸಿಂಹ, ಗಣಪತಿ, ಬ್ರಹ್ಮ, ಶಿವ, ಸೂರ್ಯ, ಸರಸ್ವತಿ, ಕೇಶವ, ಚಾಮುಂಡಿ, ವರಾಹ ಮುಂತಾದ ಶಿಲ್ಪಗಳ ಅದ್ಭುತ ಕೆತ್ತನೆ ನೋಡಬಹುದು. ವಿತಾನದಲ್ಲಿ ಕಮಲದ ಕೆತ್ತನೆ ಇದ್ದು ನವರಂಗಕ್ಕೆ ಎರಡು ಪ್ರವೇಶದ್ವಾರ ಗಳಿವೆ. ನವರಂಗದಲ್ಲಿ ಈ ದೇವಾಲಯಕ್ಕೆ ಸಂಬಂಧಿಸಿದ ಶಾಸನವನ್ನು ಇಡಲಾಗಿದೆ.
ದೇವಾಲಯದ ಹೊರಭಿತ್ತಿಯಲ್ಲಿ ಚಾಲುಕ್ಯರ ದೇವಾಲಯಗಳಲ್ಲಿ ಕಾಣುವಂತೆ ಕಿರು ಶಿಖರದ ಮಾದರಿಗಳು ಇದ್ದು ಇಲ್ಲಿ ವೇಸರ, ಔತ್ತರೇಯ ಹಾಗೂ ಡ್ರಾವಿಡ ಮಾದರಿಗಳು ಇದೆ. ಇಲ್ಲಿನ ದೇವಕೋಷ್ಟಕಗಳಲ್ಲಿ ನಟರಾಜ, ಕೇಶವ ಮುಂತಾದ ಕೆತ್ತನೆಗಳಿವೆ. ದೇವಾಲಯಕ್ಕೆ ಹಿಂದೆ ಇದ್ದಿರಬಹುದಾದ ಶಿಖರದ ಭಾಗ ನಾಶವಾಗಿದೆ. ಅದರ ಕೆಲ ಭಾಗಗಳು ಮಾತ್ರ ಹಾಗೆಯೇ ಉಳಿದುಕೊಂಡಿದೆ.

ಇಲ್ಲಿ ವೀರಭದ್ರ, ಅಂಜನೇಯ, ಕಲ್ಮೇಶ್ವರ, ದೊಂಡಿ ಬಸವೇಶ್ವರ, ಬಿರೇಶ್ವರ ಮುಂತಾದ ದೇವಾಲಯಗಳನ್ನು ನೋಡಬಹುದು.
ತಲುಪುವ ಬಗ್ಗೆ : ಅಮರಗೊಳವು ಹುಬ್ಬಳ್ಳಿ ಯಿಂದ ಕೇವಲ 06 ಕಿ.ಮೀ ದೂರದಲ್ಲಿದ್ದು, ಹುಬ್ಬಳ್ಳಿಯ ನವನಗರದ ಸಮೀಪದಲ್ಲಿದೆ. ಈ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿಯೇ ಉಣಕಲ್ಲಿನ ಕಲಾತ್ಮಕ ಚಂದ್ರಮೌಳೀಶ್ವರ ದೇವಾಲಯವಿದೆ.
ಶ್ರೀನಿವಾಸಮೂರ್ತಿ ಎನ್.ಎಸ್.
ಬೆಂಗಳೂರು