ಇತ್ತೀಚೆಗೆ
ಹೃದಯ ನೀಡುವುದು
ತುಂಬಾ ಸುಲಭ!
ಬೆರಳಂಚಿನ ಸ್ಪರ್ಶ ಸಾಕು!
ಪ್ರೀತಿಗೂ, ಆತ್ಮೀಯತೆಗೂ
ಇಷ್ಟಕ್ಕೂ, ಮೆಚ್ಚುಗೆಗೂ
ಕೊನೆಗೆ ತೋರಿಕೆಗೂ!

ಹೃದಯವಿಂದು ಅಗ್ಗ!
ಭಾವ ಬತ್ತಿದ ಪಳೆಯುಳಿಕೆ!
ಹೃದಯ
ಅಷ್ಟು ಹಗುರವಾಯಿತೇ?!
ಅದರ ಬೆಲೆ ಈಗ
ಕೇವಲ ಒಂದು ಎಮೋಜಿ!

ನಕಲಿ ಹೃದಯಗಳಿವೆ
ಎಚ್ಚರಿಕೆ!!
ಕೊಟ್ಟವರಿಗೆ ಪುಳಕವಿಲ್ಲ;
ಪಡೆದವರಿಗೆ ಧನ್ಯತೆ ಇಲ್ಲ!
ಅದರೊಳಗೆ
ಆಸೆ ಕನಸುಗಳ ಸುಳಿವಿಲ್ಲ!
ಕೇವಲ ತೋರಿಕೆ; ಪ್ರತಿಷ್ಠೆ..!

ಅದೊಂದು ಕಾಲವಿತ್ತು…
ಹೃದಯ
ಪಡೆಯುವುದೆಂದರೆ ತಪಸ್ಸು!
ಕೊಡುವುದೆಂದರೆ ವರ!
ಅದೊಂದು
ಇಬ್ಬರ ನಡುವಿನ ಗುಟ್ಟು!
ನಕಲಿಗಳಿಲ್ಲದ ಕಾಲ!

ಕಾಲೇಜು ಗೋಡೆಯ ಮೇಲೆ
ಹೃದಯದ ಮಾರ್ಕಿನೊಡನೆ
ಬರೆದ ಹೆಸರು
ಒಂದು ಕಳಂಕದ ಸಂಕೇತ!
ಕರ್ತೃ ಅಪಾಪೋಲಿ!
ಸೇಡಿಗೆ ಅದೊಂದು ಅಸ್ತ್ರ!

ಇಂದು
ಒಂದು ಹಾರ್ಟಿಗೆ
ಕ್ಯಾರೇ ಅನ್ನುವವರಿಲ್ಲ..!
ಅದು ವಿರಳವಲ್ಲ;
ಬಣ್ಣ ಬಣ್ಣದ ಹಾರ್ಟುಗಳಿಗೆ
ಕೊರತೆಯಿಲ್ಲ!
ಊಸರವಳ್ಳಿಯಂತೆ!

ಬಡಿತ ಕಂಡರೂ
ಆಳ ಅಗಲ ಕಾಣದು;
ಲಬ್ ಡಬ್ ಕಂಡರೂ
ಕೂಗು ಕೇಳದು..
ಅಂಗೈಯಲ್ಲಿದ್ದರೂ
ಮನಸಿಗೆ ಹತ್ತದು..
ಪ್ರೀತಿಯಲ್ಲಿ
ಮುಳುಗದು; ತೇಲದು…
ಕೈ ಹಿಡಿಯದು!

✍️ಸೌಮ್ಯ ದಯಾನಂದ
ಡಾವಣಗೆರೆ