ನಾನು ಎಲ್ಲರ ಹಾಗೆ ಪದ್ಯ ಬರೆಯುವುದಿಲ್ಲ; ಪ್ರಾಸಕ್ಕಾಗಿ ಪದಗಳನ್ನು ಹುಡುಕುವುದಿಲ್ಲ:
ಇಂಧನಕ್ಕಾಗಿ ಚಂದನವ ಬಳಸುವುದಿಲ್ಲ ಸಹ್ಯಾದ್ರಿಯವರಂತೆ.

ಮುಂದಿನ ಭಾಗದಲ್ಲಿ ಕವಿಗಳು ಕವಿತೆ ಹೇಗಿರ ಬೇಕು ಅಥವಾ ತಮ್ಮ ಕವಿತೆಯ ಲಕ್ಷಣವನ್ನು ಈ ಕವನದಲ್ಲಿ ಹೇಳುತ್ತಾರೆ. ದುಂಡು ಮಲ್ಲಿಗೆ ಕವನ ಸಂಕಲನದ ಕಡೆಯ ಕವನ ರಾಸ ವಿಲ್ಲದ ಕವಿತೆ ಇದರಲ್ಲಿ ತಮ್ಮ ಕವಿತೆಯ ಗುಣವನ್ನು ತಮ್ಮ ಸಹಜ ಪ್ರಾಸದ ಸ್ವಭಾವ ಗಳಿಲ್ಲದ ವಿಭಿನ್ನ ಕವಿತೆಯ ರೂಪದಲ್ಲಿ ಹೇಳುತ್ತಾರೆ.

ಪ್ರಾಸ ಪದಗಳು ಸಹಜವಾಗಿ ಹೊರಹೊಮ್ಮ ಬೇಕೆೇ ವಿನಹ ತ್ರಾಸದಿಂದ ಎಳೆದು ತಂದು ಕೂಡಿಸಿದ ಹಾಗೆ ಇರಬಾರದು. ಹಾಗೆ ತಾವು ಪ್ರಾಸಕ್ಕಾಗಿ ಪದಗಳನ್ನು ಹುಡುಕುವುದಿಲ್ಲ ಎನ್ನುತ್ತಾರೆ ಕವಿಗಳು. ಅಲ್ಲದೆ ಪದಗಳ ಆಯ್ಕೆ ಹಾಗೂ ಬಳಕೆ ವಿಶಿಷ್ಟವಾಗಿ ಇರಬೇಕು, ಪದಗಳ ನ್ನು ತುಪ್ಪದ ಹಾಗೆ ಬಳಸಬೇಕು, ನೀರಿನ ಹಾಗೆ ಅಲ್ಲ. ಅಂದರೆ ನಿರ್ದಿಷ್ಟವಾದ ಒಂದು ಬಿಗಿ ಪದ ಗಳ ಬಳಕೆಗೆ ಬರಬೇಕು ಅದನ್ನು ಈ ಹೋಲಿಕೆ ಯ ಮೂಲಕ ಹೇಳುತ್ತಾರೆ : ಇಂಧನಕ್ಕಾಗಿ ಚಂದನವ ಬಳಸುವುದಿಲ್ಲ, ಸಹ್ಯಾದ್ರಿ ಅವರಂತೆ. ತೋಟದಲ್ಲಿ ಬೇಕಾದಷ್ಟು ಗಂಧದ ಮರಗಳು ಇರುವಾಗ ಅದರ ಬೆಲೆ ಗೊತ್ತಾಗುವುದಿಲ್ಲ, ಹಾಗಾಗಿ ಒಲೆ ಉರಿಗೂ ಅದನ್ನೇ ಬಳಸುತ್ತಾರೆ, ಹಾಗೆಂದು ತಾವು ಪದಗಳನ್ನು ಬೇಕಾಬಿಟ್ಟಿ ಧಾರಾಳ ಬಳಸುವುದಿಲ್ಲ ಎಂಬುದು ಇದರ ಅರ್ಥ. ನಿಜಕ್ಕೂ ಕವಿಗಳು ಗಮನದಲ್ಲಿ ಇಟ್ಟು ಕೊಳ್ಳಬೇಕಾದ ವಿಷಯ ಇದು.

ಹಾಗೆಯೇ ತಾವು ಎಂದೋ ಎಲ್ಲೋ ಕಂಡ ಯಾವುದೋ ಅನುಭವದ ಹಿಂದೆ ಹೊರಡುವು ದಿಲ್ಲ, ಅಮೂರ್ತ ಭಾವಗಳ ವರ್ಣನೆಗೆ ತೊಡಗು ವುದಿಲ್ಲ ಎನ್ನುವುದು ಮುಂದಿನ ಸಾಲುಗಳಲ್ಲಿ ಸ್ಪಷ್ಟಗೊಳಿಸುತ್ತಾರೆ, ನಂತರದಲ್ಲಿ ಅವರು ತಾವು ನಾನಂತೂ ಕವಿಯಲ್ಲ ಎನ್ನುತ್ತಾರೆ, ಆದರೆ ತಮ್ಮ ಭಾವಗಳನ್ನು ಸುಂದರ ಪದ ಪುಂಜಗಳಲ್ಲಿ ಓದುಗನ ಹೃದಯ ತೀರಕ್ಕೆ ತಂದು ನಿಲ್ಲಿಸುತ್ತಾರೆ.

ನಾನಂತೂ ಕವಿಯಲ್ಲ; ಕವಿತೆಯಾಚೆಗೆ ನಿಂತ
ನೆರಳು, ಹೆಣ್ಣಿನ ಹೆರಳ ಹೂಗಳಲಿ ತೇಲಿ ಬಹ
ಪರಿಮಳದ ಕನಸು, ಕಾಮನ ಬಿಲ್ಲ
ತೊಟ್ಟಿಲಲಿ
ಸುಳಿಯುವೆಳ ಬಿಸಿಲು, ಪೊಂಗಳಲ ಕಣ್ಣುಗಳಿಂದ
ಹೊರಬಂದ, ಸಪ್ತಸ್ವರಂಗಳಲಿ ಕದ ತೆರೆದ
ಯಕ್ಷಭವನದ ಹೊರಗೆ ಅರಳಿದುದ್ಯಾನದಲಿ
ಕಾಮಧೇನುವಿನ ಕೆಚ್ಚಲಿಗೆ ಚೆಂದುಟಿಯಿಟ್ಟ ನಂದಿನಿಯ ಗೆಜ್ಜೆದನಿ, ದೂರ ಪರ್ವತಗಳಲಿ ಹೋಮ ಧೂಮ!

ಕವಿ ಕೊಡುವ ಈ ಸುಂದರ ಉಪಮೆ ಉದಾಹರ ಣೆಗಳ ನವಿರು ಭಾವವನ್ನು ಇಲ್ಲಿ ಗಮನಿಸಲೇ ಬೇಕು. ಕವಿ ಅಲ್ಲ ಎಂದರೂ ಕವಿತೆಯಾಚೆಗೆ ನಿಂತ ನೆರಳು ಎನ್ನುತ್ತಾರೆ. ಹೆಣ್ಣು ಮುಡಿದ ಹೂವಿನ ಪರಿಮಳದ ಕನಸು ತಮ್ಮ ಕವಿತೆ ಎಂದು ಬಣ್ಣಿಸುವ ಕವಿಗಳು ಕಾಮನಬಿಲ್ಲ ತೊಟ್ಟಿಲಿನಲ್ಲಿ ಎಳೆ ಬಿಸಿಲು ಸುಳಿದಂತಿನ ಭಾವಕ್ಕೆ ಕವಿತೆಯ ಉಪಮಾನ ನೀಡುತ್ತಾರೆ. ಪೊಂಗಳಲ ಕೊರಳ ಕಣ್ಣುಗಳಿಂದ ಹೊರಬಂದ ಸಪ್ತಸ್ವರ ಗಳಲ್ಲಿ, ಕಾಮಧೇನುವಿನ ಕೆಚ್ಚಲಿಗೆ ಚೆಂದುಟಿ ಯಿಟ್ಟ ನಂದಿನಿಯ ಗೆಜ್ಜೆ ದನಿಯಂತೆ ಎನ್ನುತ್ತಾರೆ. ತಮ್ಮ ಕವಿತೆಯನ್ನು ದೂರ ಪರ್ವತಗಳ ಮೇಲಿಂದ ಹೊರ ಹೊಮ್ಮುತ್ತಿರುವ ಹೋಮದ ಧೂಮಕ್ಕೆ ಹೋಲಿಸುತ್ತಾರೆ. ಮನಸ್ಸಿನಲ್ಲಿ ದೈವಿಕ ಭಾವವನ್ನು ಸಾತ್ವಿಕ ಆನಂದವನ್ನು ಮೂಡಿಸುವ ಕವಿತೆಯ ಲಕ್ಷಣವಲ್ಲವೇ ಇದು? ಹೀಗಿರಬೇಕು ತಾನೆ ಕವಿತೆ? ತಾನಾಗಿ ತಾನು ಹುಟ್ಟಬೇಕು ಅಲ್ಲದೇ ಪ್ರಯತ್ನ ಪಟ್ಟು ಕಟ್ಟಬಾರದು. ಪ್ರಕೃತಿ ಸಹಜದಂತಿರಬೇಕೇ ವಿನಹ ವಿಕೃತಿಗೆಡೆ ಕೊಡ ಬಾರದು.

ಸಂಜೆ ಹಾಡು ಕವನ ಸಂಕಲನದ “ಕವಿತೆ ಎಂದರೆ ಏನು”ಎಂಬ ಕವಿತೆಯಲ್ಲಿ ವಿವರ ವಾಗಿ ಕವಿತೆಯ ಬಗ್ಗೆ ತಮ್ಮ ಮನದಾಳದ ಮಾತುಗ ಳನ್ನು ತೆರೆದಿಟ್ಟಿದ್ದಾರೆ. ಕವಿತೆ ಎಂಬುದರ ಬಗೆಗಿನ ವಿವರಣೆ ಅಲ್ಲದೆ ಕವಿತೆಯ ಭಾವಗಳ ಅದು ಉಂಟು ಮಾಡುವ ಪರಿಣಾಮದ ಬಗೆಗಿನ ಜಿಜ್ಞಾಸೆಯನ್ನು ಮಾಡಿದ್ದಾರೆ. ಓದುಗನ ಮನ ದಲ್ಲಿ ಮೂಡುವ ಪ್ರಶ್ನೆಗಳನ್ನು ಸಹ ಇಲ್ಲಿ ಉತ್ತರಿ ಸುವ ಪ್ರಯತ್ನ ಮಾಡಿದ್ದಾರೆ.ಜೀವನದ ಮುಸ್ಸಂಜೆಯಲ್ಲಿ ದೈಹಿಕ ತೊಂದರೆಗಳ ನಡುವೆ ಏಳುವುದು ಕಷ್ಟ, ಎದ್ದರೂ ಕಷ್ಟ ಇಂತಿರುವ ಜೀವನದ ದಿನಚರಿ ಯಲ್ಲಿ ನಡೆಯುವ ಘಟನೆ ಗಳನ್ನೆಲ್ಲ ಪದವಾಗಿಸುವ ಚಪಲ ತಮ್ಮದು ಎಂದು ಹೇಳಿಕೊಳ್ಳುತ್ತಾರೆ. ಆ ಮಾಗಿಯ ಬಿಸಿಲಿ ನಲ್ಲಿ ಅವರ ನೆರಳೇ ಅವರಿಗಿಂತಲೂ ಉದ್ದ ಎಣಿಸುತ್ತದೆ. ಉಳಿದಿರುವ ಇನ್ನು ಸ್ವಲ್ಪವೇ ಸಮಯದಲ್ಲಿ ಏನಾದರೂ ಮಾಡಬೇಕು ಎಂಬ ತುಡಿತವು ಕವಿಗಳನ್ನು ಕಾಡುತ್ತಿದೆ. ಅದನ್ನೇ ಅವರು ಈ ಸಾಲುಗಳಲ್ಲಿ ಬರೆಯುತ್ತಾರೆ.

ನನಗಿರುವ ಅಲ್ಪ ಅವಕಾಶದಲಿ ಏನಾದರೂ ಮಾಡಬೇಕು. ಕಿಟಕಿಯ ತೆರೆದೆ. ದಿನಪತ್ರಿಕೆಯ
ತುಂಬ ನನ್ನ ಕಥೆಯೇ ಕಥೆ. ಕಂಬಗಳ ನೆರಳಿನಲಿ
ಅಕ್ಷರವ ಬರೆಯುತಿದೆ ನನ್ನ ಲೇಖನಿ.

ಆದರೆ ಕವಿತೆ ಓದಿದ ಜನಸಾಮಾನ್ಯರು ಅಂದರೆ ಕೊಳದ ಮೆಟ್ಟಿಲ ಮೇಲೆ ಬಟ್ಟೆಯೊಗೆಯುವ ಹುಡುಗಿ, ಹೂ ಮುಡಿದು ಗುಡ್ಡದ ಗುಡಿಯ ದೇವರಿಗೆ ಕೈಮುಗಿದು ನಗುನಗುತ ಮನೆಗೆ ಬರುವ ಹುಡುಗಿ, ಕಡೆಯ ಹಂತದ ಜಗಲಿಯ ಮೇಲೆ ಕುಳಿತು ಪತ್ರಿಕೆಯನ್ನೋದುವ ಮುದುಕ ಮತ್ತು ಮಾತು ಬಾರದ ಕಂದ ಇವರೆಲ್ಲ “ಕವಿತೆ ಯ ಅರ್ಥವೇನು” “ಕವಿತೆ ಎಂದರೆ ಏನು” ಎಂದು ಕೇಳುತ್ತಾರೆ ಎನ್ನುವ ಭಾವನೆ ಕವಿಗೆ. ಆದರೆ ಸೋತ ಕವಿಗಳು “ಅರ್ಥ ಬೇಕಿಲ್ಲ ಕವಿತೆಗೆ” ಎಂದು ಹೇಳುವರು ಎನ್ನುವುದೂ ಕವಿಗೆ ತಿಳಿದಿದೆ. ಈ ದ್ವಂದ್ವ ಜಿಜ್ಞಾಸೆಯಲ್ಲಿ ಬರೆ ಯುವ ಕವಿ ಕಡೆಗೂ ಈ ಸಾಲುಗಳಲ್ಲಿ ತಮಗೆ ಅರ್ಥ ಸಿಗದಿದ್ದನ್ನು ಆದರೆ ಕವಿತೆಯ ಭಾವದ ಹೊಳಹು ದೂರದಲ್ಲಿ ಕಡಲ ತೆರೆಯ ಮೇಲೆ ಹೊಳೆಯುವ ಪೂರ್ಣ ಚಂದ್ರನಂತೆ ಎಂದು ಈ ಸಾಲುಗಳಲ್ಲಿ ಹೇಳುತ್ತಾರೆ.

ದೂರದಲಿ ಕಡಲ ತೆರೆಗಳ ಮೇಲೆ ಪೂರ್ಣ ಚಂದ್ರ.
‘ಪುಸ್ತಕದ ಪುಟಗಳಲ್ಲಿ ಉತ್ತರ ಸಿಕ್ಕುವುದಿಲ್ಲ’ ಎಂದು ಹೇಳುತ್ತಾನೆ. ಪ್ರಶ್ನೆ ಉಳಿದಿದೆ ಕಡೆಗೆ;
“ಕವಿತೆ ಎಂದರೆ ಏನು”

ಅಂದರೆ ಕವಿತೆಯ ಸುಳಿವು ಒಳ ಹೊಳಹು ಬುದ್ದಿಗೆ ಗ್ರಾಹ್ಯವಲ್ಲ, ಅನುಭಾವ ಮನೋಜನ್ಯ ಮನೋಗ್ರಾಹ್ಯ ಎಂಬುದೂ ಕವಿಯ ಮನದ ಭಾವವಾಗಿರಬಹುದು. ಹಾಗಾಗಿ ಪುಸ್ತಕದಲ್ಲಿ ಅರ್ಥ ಸಿಗುವುದಿಲ್ಲ ಎನ್ನುತ್ತಾರೆ.

ಸಾಮಾನ್ಯವಾಗಿ ಗೇಯವಾಗಿರುವ ಸರಳ ಅರ್ಥ ವನ್ನು ಹೊಮ್ಮಿಸುವ ಸುಂದರ ಅನುಭವದ ಮೆಲುಕು ಪಲುಕುಗಳಂತಿರುವ ಕವಿತೆಗಳಿಗಿಂತ ಭಿನ್ನವಾದ ಈ ಕವಿತೆ ಪದ್ಯ ಗದ್ಯದಂತೆ ತೋರು ತ್ತದೆ. ಆದರೆ ಕ್ಲಿಷ್ಟಕರ ವಿಷಯವನ್ನು ಹೊಂದಿದ್ದು ಕಡೆಗೂ ಉತ್ತರ ಸಿಗದೆ “ಕವಿತೆ ಎಂದರೆ ಏನು” ಎಂಬ ಭಾವವನ್ನು, ಪ್ರಶ್ನೆಯನ್ನು ಸಹೃದಯೀ ಓದುಗನ ಕಲ್ಪನೆಗೇ ಬಿಟ್ಟುಬಿಡುತ್ತದೆ. ಮನಸಿಗೆ ತುಂಬಾ ಆಪ್ತವಾದ ಕವಿತೆ ಇದು.

✍️ಸುಜಾತಾ ರವೀಶ್
ಮೈಸೂರು