ಕನಸು ಮಾರುವ
ಹುಡುಗನಿವನು..!
ಕೈಯಲ್ಲಿ ನೋಡು
ಬಣ್ಣಬಣ್ಣದ ಕನಸುಗಳು
ನಭಕ್ಕೆ ಜಿಗಿಯಲು
ಕಾದಿವೆ..!

ಎಳೆದೆಳೆದು
ಸೆಳೆದು ಕಾದಿವೆ
ಕೊಳ್ಳುವ ಕಣ್ಣುಗಳನ್ನು!
ಕಂಡ ಗಳಿಗೆಯೇ
ಕಣ್ಣಲ್ಲಿ ನೂರೆಂಟು ಬಣ್ಣ…

ಕನಸಲ್ಲಿ ಕಾಮನೆಗಳಿಲ್ಲ
ಅವನ
ಮಾಸಲು ಅಂಗಿಯ
ತೂತುಗಳಿಂದ
ಬಣ್ಣ ಸೋರುವುದಿಲ್ಲ;
ಹೊಲಿಗೆಯೊಳಗೆ
ನಲುಗುವುದಿಲ್ಲ..

ನೋವ
ಸುಳಿವಿಲ್ಲ!
ಕಣ್ಣ ಹೊಳಪಿದೆ;
ಕೈಯ ಕಸುವಿದೆ;
ಬಸಿದ ಉಸಿರಿದೆ…

ಕೊಟ್ಟ ಕಾಸಿಗೂ
ಬಣ್ಣ ಮೆತ್ತಿ
ಝಿಲ್ಲನೆ ಜೇಬಲ್ಲಿ
ಕುಣಿಯುತ್ತದೆ!
ಅವನ ನಗುವಿಗೆ
ನಲಿಯುತ್ತದೆ…

ನೋಡು..!
ಅವನ ಒಂದೊಂದು
ಕನಸಿಗೂ ಭಿನ್ನ ಬಣ್ಣ…
ಅದು ಒಯ್ಯುವ
ದೂರವೆಷ್ಟೋ..?!
ಸೇರಿಸುವ
ತಾವು ಯಾವುದೋ?!

ಅವನೆಂದೂ
ದುಂಬಾಲು ಬೀಳುವುದಿಲ್ಲ,
ತನ್ನ ಪಾಡಿಗೆ
ಬೀದಿಯಲ್ಲಿ ನಡೆಯುವನು..
ಬಯಸಿದೆದೆ
ಬೆನ್ನುಹತ್ತುವುದು..
ಬೇಕಾದ ಕನಸ
ಕೊಳ್ಳುವುದು…

ಕನಸು ಮಾರುವ
ಹುಡುಗನಿವನು!
ಮನಸುಕೊಡಬೇಡ;
ಕನಸ ಕಸಿಯಬೇಡ… -

ಸೌಮ್ಯ ದಯಾನಂದ

✍️ಸೌಮ್ಯ ದಯಾನಂದ
ಡಾವಣಗೆರೆ