ಇಳೆಯನ್ನು ತನ್ನ ಸೊತ್ತಾಗಿಸಿ
ಜೀವಿಗಳ ನೆಲವನ್ನು ಕಬಳಿಸಿದೆ
ಗುಡ್ಡ ಕಡಿದು ಬೆಟ್ಟ ಕೊರೆದು
ನದಿ ತೊರೆ ಕೆರೆಗಳನ್ನಾಕ್ರಮಿಸಿದೆ
ಮನುಜ …….ನೀನು
ಜೀವಿಗಳಿಗೆ ಮಾರಕವೆಂದೆಂದು

ಸಾಧನೆಯ ವೇಗದಲ್ಲಿ
ಪ್ರಾಣಿಸಂಕುಲವ ಅವುಗಳ
ತವರಿಂದ ದೂರ ಕಳಿಸಿದೆ
ಮನುಜ ……..ನೀನು
ಸಹಜ ಜೀವನವ ಮರೆತೆ ಇಂದು

ನಿನ್ನಾರ್ಭಟಕ್ಕೆ, ಸ್ವಾರ್ಥಕ್ಕೆ
ಜೀವ ಜಗತ್ತನ್ನೇ ಕಬಳಿಸುತ್ತಿಹೆ
ಕೆರೆ ಕಟ್ಟೆಗಳ ಮುಚ್ಚಿ
ಜೀವ ಜಲವನೂ ನಾಶಮಾಡುತ್ತಿಹೆ
ಮನುಜ….. ಇನ್ನಾದರೂ ಅರಿ
ಪ್ರಕೃತಿಯೇ ದೈವವೆಂದು

ಅಗಾಧ ಶಕ್ತಿಯೆದುರು
ನಿಂತಾಗಲೇ ತಿಳಿವುದು
ನಾವೆಷ್ಟು ಕುಬ್ಜರೆಂದು
ಮನುಜ……ಅವಲೋಕಿಸು
ನಿನ್ನನ್ನು ನೀ ನಿನಗೆಂದು

ಪಕೃತಿ ರೌದ್ರ ರೂಪ ತಾಳಿದರೆ
ವಿನಾಶದ ಕಿಡಿ ಹತ್ತಿ ಇರುವುದು
ನಮ್ಮಿರುವು ಕ್ಷಣಮಾತ್ರದಲಿ
ಗುರುತಿಲ್ಲದ ಹಾಗೆ ಅಳಿವುದು
ಮನುಜ….ಇನ್ನಾದರೂ ತಿಳಿ
ನೇಸರನ ಮುಂದೆ ಕಣ ನಾವೆಂದು

✍️ನಂದಿನಿ ರಾಜಶೇಖರ್
ಹಾಸನ