ಕಾಣದ ಕಂದಕದಲಿ ಬಿದ್ದವರಿಗೆ ನೀಡಿ ಸಾಂತ್ವನತೆಯ ಮೀಸಲಾತಿ /
ಅಸಮಾನತೆ ಸಾಲಲಿ ನಿಂತವರಿಗೆ ನೀಡಿ ಸಮಾನತೆಯ ಮೀಸಲಾತಿ //

ದ್ವೇಷದ ಕಡಲಲಿ ಕಚ್ಚಾಡುವವರಿಗೆ ನೀಡಿ ಸೌಹಾರ್ಧತೆಯ ಮೀಸಲಾತಿ/
ನಾ ನೀ ಮೇಲಾಟದಲಿ ತೊಡಗುವವರಿಗೆ ನೀಡಿ ಸಹನತೆಯ ಮೀಸಲಾತಿ //

ಆಡಂಬರದ ಅಬ್ಬರದಲಿ ಎಗರಾಡುವವರಿಗೆ ನೀಡಿ ಸರಳತೆಯ ಮೀಸಲಾತಿ /
ಸ್ವಾರ್ಥ ಸಾಧನೆಯಲಿ ನಿರತರಾದವರಿಗೆ ನೀಡಿ ನಿಸ್ವಾರ್ಥತೆಯ ಮೀಸಲಾತಿ //

ಗಲಭೆ ಗೊಂದಲದಲಿ ತೊಡಗಿದ್ದವರಿಗೆ ನೀಡಿ ಶಾಂತತೆಯ ಮೀಸಲಾತಿ/
ಸಿರಿವಂತರ ಮಧ್ಯದಲಿ ಬಡವರಿಗೆ ನೀಡಿ ಮಮತೆಯ ಮೀಸಲಾತಿ//

ತಾಯಿ ಕೊಟ್ಟ ಸಲಹೆಯಲಿ ಬದುಕಿಗೆ ನೀಡಿ ಮಹತ್ವತೆಯ ಮೀಸಲಾತಿ
ಅಸೂಯೆಯ ಪರಾಕಾಷ್ಠೆಯಲಿ ಇದ್ದವರಿಗೆ ನೀಡಿ ಕಕ್ಕುಲಾತೆಯ ಮೀಸಲಾತಿ//

✍️ರೇಮಾಸಂ
(ಡಾ.ರೇಣುಕಾತಾಯಿ.ಸಂತಬಾ)
ಹುಬ್ಬಳ್ಳಿ