(೨೬ ಫೆಬ್ರವರಿ ೨೦೨೩ರ ರವಿವಾರದಂದು ಮಕ್ಕಳ ಸಾಹಿತ್ಯ ಚಂದಿರ ವೈ. ಜಿ. ಭಗವತಿ ಯವರ ಸಾರಥ್ಯದಲ್ಲಿ ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿಯಲ್ಲಿ ೦೮ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ತನ್ನಿಮಿತ್ತ ಶ್ರೀಯುತರ ಮಕ್ಕಳ ಸಾಹಿತ್ಯ (ವೃತ್ತಿ – ಪ್ರವೃತ್ತಿ) ಸೇವೆ ಕುರಿತೊಂದು ಕಿರು ಲೇಖನ)

ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜನೆಯಾದ ತೊಟ್ಟಿಲೂರಿನ ಮಕ್ಕಳ ಸಾಹಿತ್ಯ ಚಂದಿರ ಜನಮೆಚ್ಚಿದ ಶಿಕ್ಷಕ ವೈ. ಜಿ. ಭಗವತಿಯವರ ಬದುಕು ಬರಹ ಅನನ್ಯ. ಮಲೆನಾಡ ಸೆರಗಂಚಿನ ಊರು ಕಲಘಟಗಿ ವಿದ್ಯಾನಗರಿ ಧಾರವಾಡ ಜಿಲ್ಲೆಯ ಒಂದು ತಾಲ್ಲೂಕು. ಕೈ ಕುಸುರಿಯ ಕಟ್ಟಿಗೆ ತೊಟ್ಟಿಲು ಗಳ ತಯಾರಿಕೆ ಹಾಗೂ ಮಾರಾಟಕ್ಕೆ ವಿಶ್ವಖ್ಯಾತಿ ಪಡೆದ ಒಂದು ಪಟ್ಟಣ.ಇದು ಕಲೆ,ರಂಗಭೂಮಿ, ಕೃಷಿ, ಜನಪದ, ಸಾಹಿತ್ಯ, ಸಂಗೀತ, ಕ್ರೀಡೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಾಧನೆ ಮಾಡಿರುವ ಮಹನೀಯರ ತವರೂರಾ ಗಿದೆ. ತೊಟ್ಟಿಲೂರಿನ ಸಾಹಿತ್ಯ ಭೀಷ್ಮ ಎಂ. ಎಂ. ಪುರದನಗೌಡರ, ಸರೋಜಿನಿ ಶಿಂತ್ರಿ, ಕುಶಲ ಕರ್ಮಿ ಕಾಳಪ್ಪ ಬಡಗೇರ, ರಂಗನಟರಾದ ಅಶೋಕ ಅರ್ಕಸಾಲಿ, ಶಿವಣ್ಣ ಅರಳಿಹೊಂಡ, ಮಲ್ಲಯ್ಯಸ್ವಾಮಿ ಗುಡಿಮನಿ, ಎಂ. ಆರ್. ತೋಟಗಂಟಿ, ಸಿದ್ಧಾಶ್ರಮ, ಸಿದ್ಧಾರ್ಥ, ಬಿ. ಸಿ. ಪಾಟೀಲ, ವೈ. ಜಿ. ಭಗವತಿ, ಅಡವಯ್ಯ ಹಿರೇಮಠ, ಗಾಯತ್ರಿ ರವಿ, ಕೆ. ಎಫ್. ಜಾವುರ, ಪ್ರಭು ರಂಗಾಪುರ, ಸುಭಾಷ್ ಚವ್ಹಾಣ, ಜೋಷೇಫ್ ಮಲ್ಲಾಡಿ …. ಹೀಗೆ ಇದು ಕೆಲವರಿಗೆ ಜನ್ಮ ಕ್ಷೇತ್ರವಾಗಿ ಇನ್ನೂ ಕೆಲವರಿಗೆ ಕಾರ್ಯ ಕ್ಷೇತ್ರವಾಗಿ ಆಶ್ರಯವಿತ್ತ ಭತ್ತದ ನಾಡು.
ಬಾಗಲಕೋಟೆ ಜಿಲ್ಲೆ, ಬೀಳಗಿ ತಾಲೂಕಿನ ಗರಡ ದಿನ್ನಿ ಗ್ರಾಮದ ಅರಣ್ಯರ ಕ್ಷಕರಾಗಿದ್ದ ಗುಡದಪ್ಪ ಮತ್ತು ಚಂದ್ರಾಬಾಯಿ ದಂಪತಿಗಳ ಸುಪುತ್ರರಾಗಿ ೦1 ಜೂನ್ 1971ರಲ್ಲಿ ಜನಿಸಿದ ಯಮನಪ್ಪ ಭಗವತಿ ಯವರು ತಮ್ಮ ತಂದೆಯ ವರ ಸಾಹಿತ್ಯ ಅಧ್ಯಯನದಿಂದ ಪ್ರೇರಿತಾಗಿ ಸಾಹಿತ್ಯ ಅಭಿರುಚಿ ಬೆಳೆಸಿಕೊಂಡು; ಟಿ.ಸಿ.ಹೆಚ್, ಎಮ್.ಎ,ಎಮ್. ಇಡಿ. ಶೈಕ್ಷಣಿಕ ಕ್ಷೇತ್ರದ ಪದವಿ ಪಡೆದು 1991ನೇ ಇಸ್ವಿಯಿಂದ ಕಲಘಟಗಿ ಯಲ್ಲಿ ಶಿಕ್ಷಕ ವೃತ್ತಿಗೆ ನೇಮಕವಾದ ಬಹುಮುಖ ಪ್ರತಿಭೆಯ ಮಾನವೀಯ ಅಂತಃಕರಣವುಳ್ಳ ಈ ಸ್ನೇಹಜೀವಿ ತೊಟ್ಟಿಲೂರನ್ನು ತನ್ನ ಕಾರ್ಯಕ್ಷೇತ್ರವನ್ನಾಗಿಸಿ ಕೊಂಡು ಇಲ್ಲಿಯೇ ನೆಲೆನಿಂತು 33 ವರ್ಷ ಗಳಿಂದ ಕನ್ನಡ ಸಾರಸ್ವತ ಲೋಕದ ಮಕ್ಕಳ ಸಾಹಿತ್ಯ ರಂಗದಲ್ಲಿ ಹೊಸ ಛಾಪು ಮೂಡಿಸು ತ್ತಿರುವ ಶಿಕ್ಷಕ ಸಾಹಿತಿ ಗಳಾಗಿ ಸಂಚಲನ ಉಂಟು ಮಾಡುತ್ತ ‘ಮಕ್ಕಳ ಚಂದಿರ’ ಮತ್ತು ‘ಮಕ್ಕಳ ಮಂದಾರ‘ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಮಹನೀಯರಿಗೆ 26 ಫೆಬ್ರವರಿ 2೦23ರ ರವಿ ವಾರದಂದು ಮಿಶ್ರಿ ಕೋಟಿಯಲ್ಲಿ ನಡೆಯುವ ಕಲಘಟಗಿ ತಾಲ್ಲೂಕು ೦8ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷರಾದ ಡಾ.ಲಿಂಗರಾಜ ಅಂಗಡಿ, ತಾಲ್ಲೂಕು ಕಸಾಪ ಅಧ್ಯಕ್ಷರಾದ ಈಶ್ವರಪ್ಪ ಜವಳಿ ಹಾಗೂ ಸಾಹಿತ್ಯ ಆಸ್ವಾದಕರ ಸರ್ವಾನುಮತ ದಿಂದ ನಿಯೋಜನೆಯಾಗಿದ್ದು ಅಭಿನಂದನಾರ್ಹ.
ಭಗವತಿಯವರ ಶಿಕ್ಷಕ ವೃತ್ತಿಯ ಕ್ರಿಯಾಶೀಲ ಸೇವಾ ಮಾಹಿತಿ
04 ಜೂನ್ 1990 ರಲ್ಲಿ ಕಲಘಟಗಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಟಕಿನಾಳ ಗ್ರಾಮದಲ್ಲಿ ಸಹ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿ, ಕುಗ್ರಾಮವನ್ನು ತಮ್ಮ ವೃತ್ತಿ ನೈಪುಣ್ಯದಿಂದ ಸಾಕ್ಷರ ಗ್ರಾಮವಾಗು ವಂತೆ ಪರಿಶ್ರಮಿಸಿ 2013ರ ವರೆಗೆ ವೃತ್ತಿ ನಿರತ ರಾಗಿ ಜನಮೆಚ್ಚಿದ ಶಿಕ್ಷಕ, ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಯಿಂದ ಪುರಸ್ಕೃತರಾದರು.2013 ರಿಂದ ಮಡಕಿ ಹೊನ್ನಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯ ರಾಗಿ ಪದನ್ನೋತಿ ಪಡೆದು 2011ರವರೆಗೆ ಶಾಲೆ ಯಲ್ಲಿ ಉನ್ನತ ಪ್ರಗತಿ ತಂದು ವಿದ್ಯಾರ್ಥಿಗಳ ಮತ್ತು ಪಾಲಕರ ಪ್ರೀತಿಗೆ ಪಾತ್ರರಾದರು. 2018 ರಿಂದ 2020ರ ವರೆಗೆ ತಬಕದ ಹೊನ್ನಳ್ಳಿ ಯಲ್ಲಿ ಸರಕಾರಿ ಮಾದರಿ ಕೇಂದ್ರ ಪ್ರಾಥಮಿಕ ಶಾಲೆ ಯಲ್ಲಿ ಹಿರಿಯ ಮುಖ್ಯೋಪಾಧ್ಯಾಯರಾಗಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ 19 ಸಪ್ಟೆಂಬರ್ 2020 ರಿಂದ ಸರ್ಕಾರಿ ಮಾದರಿ ಕೇಂದ್ರ ಪ್ರಾಥಮಿಕ ಶಾಲೆ ಬೆಲವಂತರದಲ್ಲಿ ಹಿರಿಯ ಶ್ರೇಣಿಯ ಮುಖ್ಯೋಪಾಧ್ಯಾಯರಾಗಿ ಪದೋನ್ನತಿಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿ ದ್ದಾರೆ.
ಭಗವತಿಯವರ ಸಾಹಿತ್ಯಿಕ ಸೇವೆ
ಶಿಕ್ಷಕ ಮತ್ತು ಪ್ರಧಾನ ಗುರುಗಳ ಹುದ್ದೆಯೊಂದಿಗೆ ಶೈಕ್ಷಣಿಕ ಪರ ಅನೇಕ ಸಂಘಟನೆಗಳಲ್ಲಿ ಕಾರ್ಯ ದರ್ಶಿ, ಅಧ್ಯಕ್ಷ ಸ್ಥಾನಗಳಿಗೆ ನ್ಯಾಯಯುತರಾಗಿ ದುಡಿದು ಸೈ ಎನಿಸಿಕೊಂಡ ನಿಷ್ಠಾವಂತ ಕಾಯಕ ಜೀವಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಬರೆದಿರುವ ಸಮಾಜ ಮತ್ತು ಮಕ್ಕಳ ಕಲ್ಯಾಣಕ್ಕೆ ಸಂಬಂಧಿಸಿದ ಮಕ್ಕಳ ಕಥೆ, ಕವನ, ಸಣ್ಣ ಕಥೆ, ಪ್ರಬಂಧ, ಲೇಖನ, ಕಾದಂಬರಿ ಹಾಗೂ ಆಧುನಿಕ ವಚನಗಳ ರಚನೆ, ಮಕ್ಕಳ ಸಾಹಿತ್ಯ ಕೃತಿಗಳ ಪರಿಚಯ ಲೇಖನಗಳು, ಗುಬ್ಬಚ್ಚಿ ಗೂಡು, ನೈರುತ್ಯ, ಶಿಕ್ಷಣ ಶಿಲ್ಪಿ, ಟೀಚರ್, ಜೀವನ ಶಿಕ್ಷಣ ಮಾಸ ಪತ್ರಿಕೆ, ನವೀನ ಚಂದ್ರ ತ್ರೈಮಾಸಿಕ ಪತ್ರಿಕೆ, ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ವಿಜಯ ಕರ್ನಾಟಕ, ಹೊಸದಿಗಂತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 2013 ರಿಂದ 2016 ವರೆಗೆ ಕಲಘಟಗಿ ತಾಲೂಕ ಮಟ್ಟದ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಸೇವೆ, ಬಾಲವಿಕಾಸ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಕಥಾ ಕಮ್ಮಟ ದಲ್ಲಿ ಪಾಲ್ಗೊಂಡಿದ್ದು, ತಾಲೂಕ ಮಟ್ಟ, ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಗಳಲ್ಲಿ ಸ್ವರಚಿತ ಕವನ ನಿವೇದನೆ ಜೊತೆ ಜೊತೆಗೆ ಅನೇಕ ಉದಯೋನ್ಮುಖ ಬರಹ ಗಾರರ ಕೃತಿ ಗಳಿಗೆ ಬೆನ್ನುಡಿ, ಮುನ್ನುಡಿ ಬರೆದು ಪ್ರೋತ್ಸಾಹಿಸಿ ದ್ದಾರೆ. ಹೇಮಶ್ರೀ ಮ್ಯೂಸಿಕ್ ಚಾನಲ್, ಗಣಕ ರಂಗ ಮುಂತಾದ ಸಂಘಟನೆ ಗಳು ಏರ್ಪಡಿಸುವ ಸಾಹಿತ್ಯಿಕ ಸ್ಪರ್ಧೆಗಳ ನಿರ್ಣಾಯಕರಾಗಿ ಮಾರ್ಗ ದರ್ಶನ ನೀಡಿದ್ದಾರೆ.
ಭಗವತಿಯವರ ಪ್ರಕಟಿತ ಮಕ್ಕಳ ಸಾಹಿತ್ಯದ ಅಮೂಲ್ಯ ಕೃತಿ ರತ್ನಗಳು

ಭಗವತಿಯವರು ಮಕ್ಕಳಲೋಕಕ್ಕೆ ಹೊಸ ದಿಂಗತ ತೋರಿದವರು ಎಂಬುದಕ್ಕೆ ಅವರ ಕೃತಿ ತಾರೆಗಳೆ ಜೀವಂತ ಸಾಕ್ಷಿ. 2016ರಲ್ಲಿ ‘ದೇವಮ್ಮನ ಲೋಟ’ ಮಕ್ಕಳ ಕಥಾ ಸಂಕಲನ ಪ್ರಕಟಣೆ. 2019 ರಲ್ಲಿ ‘ಸುಂದ್ರಮ್ಮಜ್ಜಿಯ ಮೊಮ್ಮಗನಂತೆ’ ಮಕ್ಕಳ ಕಥಾ ಸಂಕಲನ ಪ್ರಕಟಣೆ. 2018ರಲ್ಲಿ ‘ಬದುಕಿನ ಸುತ್ತಮುತ್ತ’ ಲೇಖನ ಸಾಹಿತ್ಯ ಪ್ರಕಟಣೆ. 2019ರಲ್ಲಿ ನೈರುತ್ಯ ಕನ್ನಡ ಮಾಸಪತ್ರಿಕೆಯಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟಣೆಯಾದ ‘ಮತ್ತೆ ಹೊಸ ಗೆಳೆಯರು’ ಮಕ್ಕಳ ಕಾದಂಬರಿ 2020 ನೇ ಇಸ್ವಿಯಲ್ಲಿ ಪ್ರಕಟವಾದರೆ; ‘ಜಿ. ಪಿ. ರಾಜರತ್ನಂ’ ಸಾಹಿತ್ಯ ಕೃತಿಗಳ ಅವಲೋಕನ ಮತ್ತು ಜೀವನ ಪರಿಚಯ ಕೃತಿ ಹೊರಬಂದಿದೆ. 2021 ರಲ್ಲಿ ‘ಮಕ್ಕಳು ಓದಿದ ಟೀಚರ್ ಡೈರಿ’ ಮಕ್ಕಳ ಕಾದಂಬರಿ ಪ್ರಕಟಣೆಗೊಂಡು ಕರುನಾಡಿನಲ್ಲಿ ಮಕ್ಕಳ ಕ್ಷೇತ್ರದಲ್ಲಿ ಹೊಸ ಮನ್ವಂತರಕ್ಕೆ ಕನ್ನಡಿ ಹಿಡಿದಿದೆ ಎಂಬುದು ಈ ಕೃತಿಗಳಿಗೆ ಸಂದಿರುವ ಪ್ರಶಸ್ತಿಗಳು ಮತ್ತು ಅಭಿಪ್ರಾಯ ಬರಹಗಳು ಸಂಕೇತಿಸುತ್ತವೆ.
ಭಗವತಿಯವರ ಕ್ರಿಯಾಶೀಲ ವೃತ್ತಿ ದಕ್ಷತೆಗೆ ಸಂದ ಪುರಸ್ಕಾರಗಳು
ಹಿಡಿದ ಕಾಯಕವನ್ನು ಬಹು ಮುತುವರ್ಜಿ ಮತ್ತು ನಿಷ್ಠೆಯಿಂದ ವಿಭಿನ್ನವಾಗಿ ನಿರ್ವಹಿಸುವ ಇವರ ಕ್ರಿಯಾಶೀಲ ಶಿಕ್ಷಕ ವೃತ್ತಿ ಸೇವಾದಕ್ಷತೆಗೆ 2೦೦3 ನೇ ಇಸ್ವಿಯಲ್ಲಿ ‘ಜನ ಮೆಚ್ಚಿದ ಶಿಕ್ಷಕ’ ಪ್ರಶಸ್ತಿ, 2005ರಲ್ಲಿ ‘ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿ, 2006ರಲ್ಲಿ ‘ರಾಜ್ಯಮಟ್ಟದ ಗುಬ್ಬಚ್ಚಿ ಗೂಡು ಪತ್ರಿಕೆ ಶಿಕ್ಷಣ ಸಿರಿ’ ಪುರಸ್ಕಾರ, 2011 ರಲ್ಲಿ ಶಿಕ್ಷಣ ಫೌಂಡೇಶನ್ ಬೆಂಗಳೂರು ಇವರು ನೀಡಿರುವ ‘ಗುರು ಪುರಸ್ಕಾರ’ ಗೌರವ, 2012ರಲ್ಲಿ ಚುನಾವಣಾ ಆಯೋಗದ ‘ಉತ್ತಮ ಮತಗಟ್ಟೆ ಅಧಿಕಾರಿ’ 2016 ರಲ್ಲಿ ತಾಲೂಕ ಆಡಳಿತ ಕಲಘಟಗಿ ಯಿಂದ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಿಂದ ಕಾರ್ಯ ನಿರ್ವಹಣೆ ಗಾಗಿ ‘ಅಭಿನಂದನಾ ಸನ್ಮಾನ’ 202೦ರಲ್ಲಿ ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ ಧಾರವಾಡ ಘಟಕದಿಂದ ಮಕ್ಕಳ ಸಾಹಿತ್ಯ ಸೇವೆಗಾಗಿ ಸನ್ಮಾನ.
ಭಗವತಿಯವರ ಮಕ್ಕಳ ಸಾಹಿತ್ಯ ಕೃಷಿಗೆ ಒಲಿದು ಬಂದ ಪ್ರಶಸ್ತಿಗಳು

ಮಕ್ಕಳ ಬಾಳಿನಲ್ಲಿ ಹೊಸ ಭರವಸೆಯ ಬೆಳಕನ್ನು ಹೊತ್ತು ತಂದಿರುವ ಭಗವತಿಯವರ ‘ದೇವಮ್ಮನ ಲೋಟ’ ಮಕ್ಕಳ ಚೊಚ್ಚಲ ಕಥಾ ಸಂಕಲನಕ್ಕೆ 2016ರಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಯಿಂದ ‘ಮಕ್ಕಳ ಚಂದಿರ’ ಪುರಸ್ಕಾರ ಸಂದಿದೆ. ಕೊಪ್ಪಳದ ಕಂಬಳಿ ಸಾಹಿತ್ಯ ಪ್ರತಿಷ್ಠಾನದಿಂದ ‘ಸುಂದರಮಜ್ಜಿಯ ಮೊಮ್ಮಗನಂತೆ‘ ಮಕ್ಕಳ ಕಥಾ ಸಂಕಲನಕ್ಕೆ 2019ನೇ ಸಾಲಿನ ‘ಶಿಶು ಮಾಣಿಕ್ಯ’ ಪುರಸ್ಕಾರ, ‘ಮತ್ತೇ ಹೊಸ ಗೆಳೆಯರು’ ಮಕ್ಕಳ ಕಾದಂಬರಿಗೆ 2020ನೇ ಸಾಲಿನ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ’ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ರಾಯಚೂರು ಜಿಲ್ಲೆ ಯಿಂದ ‘ಚೆಲುವ ಚಿಣ್ಣರು’ ಪುರಸ್ಕಾರ ದೊರೆತಿದೆ.

‘ಮಕ್ಕಳು ಓದಿದ ಟೀಚರ್ ಡೈರಿ’ ಕಾದಂಬರಿಗೆ 2021 ನೇ ಸಾಲಿನ ರಾಜ್ಯಮಟ್ಟದ ‘ಜಿ.ಬಿ. ಹೊಂಬಳ ಮಕ್ಕಳ ಪುಸ್ತಕ ಪುರಸ್ಕಾರ’, ಶಿವಮೊಗ್ಗ ಮಕ್ಕಳಸಾಹಿತ್ಯ ಪರಿಷತ್ತಿನ‘ಮಕ್ಕಳ ಮಂದಾರ’ ಪುಸ್ತಕ ಪುರಸ್ಕಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ‘ವಸುದೇವ ಭೂಪಾಲಂ’ ದತ್ತಿನಿಧಿ ಪುರಸ್ಕಾರ ಗಳಿಂದ ಪುರಸ್ಕೃತರಾಗಿ ರುವ ಭಗವತಿಯವರು ಬರೆದಿರುವ ಮಕ್ಕಳ 05 ಕೃತಿ ರತ್ನಗಳು ವಿವಿಧ ಪ್ರಶಸ್ತಿಗಳಿಗೆ ಭಾಜನ ವಾಗಿದ್ದು ಅವರ ಬರವಣಿಗೆಯ ಸತ್ವಕ್ಕೆ ಕಳಶ ವಿಟ್ಟಂತಾಗಿದೆ ಮತ್ತು ಮಕ್ಕಳ ಬಾಳಿನಲ್ಲಿ ಹೊಸ ಸಂಶೋಧನೆಯ ಹರವು ವಿಸ್ತಾರವಾಗಿದೆ. ಭಗವತಿಯವರ ‘ದೇವಮ್ಮನ ಲೋಟ‘ ಮಕ್ಕಳ ಚೊಚ್ಚಲ ಕಥಾ ಸಂಕಲನ ವನ್ನು ಮೈಸೂರಿನ ಹಿರಿಯ ಲೇಖಕಿ ದೇವರ ಕೊಂಡ ಪ್ರಭಾವತಿ ಪ್ರಭಾಶಾಸ್ರ್ತೀ ಜೋಶ್ಯಾಲ್ ಅವರು ತೆಲಗು ಭಾಷೆಗೆ ಅನುವಾದಿಸಿರು ವುದು ಕೃತಿಯ ಹಿರಿಮೆ ಮತ್ತು ಮಹತ್ವವನ್ನು ಎತ್ತಿ ತೋರುತ್ತದೆ. ಅಲ್ಲದೆ ಇನ್ನಷ್ಟು ಪರಿಷ್ಕರಣೆಯೊಂದಿಗೆ 2022ನೇ ಸಾಲಿನಲ್ಲಿ ಎರಡನೆಯ ಮುದ್ರಣವನ್ನು ಸಹ ಕಂಡಿರುವ ಈ ಕೃತಿ ಅದರ ಜನಪ್ರಿಯತೆಗೆ ಹೆಗ್ಗುರುತಾಗಿದೆ. ಮಕ್ಕಳ ಸಾಹಿತ್ಯ ದೀವಿಗೆ ಯಾಗಿದೆ ಎಂದರೆ ತಪ್ಪಾಗಲಾರದು.
ಆಕಾಶವಾಣಿ ನಿರ್ದೇಶಕರು ಹಿರಿಯ ಮಕ್ಕಳ ಸಾಹಿತಿ ಬಸು ಬೇವಿನಗಿಡದ, ಶಂಕರ ಹಲಗತ್ತಿ, ಆನಂದ ಪಾಟೀಲ,ಎಂ.ಎಂ.ಪುರದನಗೌಡರ, ಗಣೇಶ, ಸುನಂದಾ ಕಡಮೆ, ತಮ್ಮಣ್ಣಾ ಬೀಗಾರ, ತೋಟಗಂಟಿ, ಸಿದ್ದರಾಮ ಹಿಪ್ಪರಗಿ, ಮುಂತಾದ ವರೊಂದಿಗಿನ ನಿರಂತರ ಸಾಹಿತ್ಯ ಚರ್ಚೆ, ಒಡನಾಟ ಹಾಗೂ ತಮ್ಮ ತಂದೆಯವರು ಬಾಲ್ಯ ದಲ್ಲಿ ತರುತ್ತಿದ್ದ ಚಂದಾಮಾಮ, ತುಷಾರ, ಬಾಲಬೋಧ ಸಾಹಿತ್ಯ ಪತ್ರಿಕೆಗಳ ಅಧ್ಯಯನ ತಮ್ಮ ಸಾಹಿತ್ಯ ಕೃಷಿಗೆ ಸೇತುವೆಯಾಗಿದೆ ಎಂದು ಕೃತಜ್ಞತಾ ನುಡಿಯನ್ನು ಅರ್ಪಿಸುವ ಇವರ ಹಿರಿಗುಣಕೆ ಯಾರಾದರೂ ಸೈ ಎನ್ನದಿರರು. ಭಗವತಿಯವರು ಟಿವಿ 9 ರಲ್ಲಿ ಮೂಡಿಬಂದ ‘ಯಾವುದೋ ಭೂತ’ ಕಿರು ಚಿತ್ರದಲ್ಲಿ ನಟನೆ, ಶಿಕ್ಷಣ ಫೌಂಡೇಶನ್ ಸಂಘಟಿಸಿದರೆ ಶೈಕ್ಷಣಿಕ ವಿಚಾರ ಸಂಕೀರ್ಣದಲ್ಲಿ ಪಾಲ್ಗೊಂಡು ಮಕ್ಕಳ ದೆಹಲಿ ಪ್ರವಾಸಕ್ಕೆ ಮಾರ್ಗದರ್ಶಿ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ವಿಶಿಷ್ಟ ಶಿಕ್ಷಕರಾಗಿದ್ದಾರೆ. ಆಕಾಶವಾಣಿ ಕಾರವಾರ ಹಾಗೂ ಧಾರವಾಡ ಕೇಂದ್ರದಿಂದ ಚಿಂತನ, ಸಾಂದರ್ಭಿಕ ವಿಷಯ ಭಾಷಣಗಳು, ಪುಸ್ತಕ ಪರಿಚಯ, ವಚನ ವಿಶ್ಲೇಷಣೆ, ಮಕ್ಕಳ ಕಥೆ ಓದು, ವಾಚನ, ಸಂದರ್ಶನಗಳು ಪ್ರಸಾರಗೊಂಡಿವೆ.

ನನ್ನ ರಚನೆಯ‘ಜಗವೆಲ್ಲ ನಗುತಿರಲಿ’ ಚೊಚ್ಚಲ ಕವನ ಸಂಕಲನ ಕೃತಿಯ ಜನಾಪರ್ಣೆಯ ಕನ್ನಡ ಸಾಹಿತ್ಯ ಸೌರಭ ಕಾರ್ಯಕ್ರಮದ ತಿರುಳನ್ನು ಲೇಖನವಾಗಿಸಿ ಪ್ರಜಾವಾಣಿ ಮೇಟ್ರೋದಲ್ಲಿ ಪ್ರಕಟಿಸಿ ಚಿರಸ್ಥಾಯಿಯಾಗಿಸಿದ್ದು ಭಗವತಿ ಯವರು ಅನ್ನುವುದು ಧನ್ಯತೆಯ ಭಾವ. ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತಿನ ವರು ಕುವೆಂಪು ಜನ್ಮದಿನೋತ್ಸವ ನಿಮಿತ್ತ 29 ಡಿಸೆಂಬರ್2021 ರಂದು ಬೆಂಗಳೂರಿನ ಕಸಾಪ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಕೊಡಮಾಡಿದ ರಾಜ್ಯ ಮಟ್ಟದ ‘ಶತಶೃಂಗ‘ ಪ್ರಶಸ್ತಿಯನ್ನು ಭಗವತಿ ಯವರೊಂದಿಗೆ ನಾನು ಸ್ವೀಕರಿಸಿದ್ದು ನನ್ನ ಸೌಭಾಗ್ಯ ಎಂಬುದು ಅವಿಸ್ಮರಣೀಯ ಮಾತು.

ಶಿಕ್ಷಕ ಸಾಹಿತಿ ಭಗವತಿಯವರು ಇನ್ನಷ್ಟು ಮಕ್ಕಳ ಸಾಹಿತ್ಯ ಕೃತಿಗಳನ್ನು ಜನಾಪರ್ಣೆ ಮಾಡಿ ಹೊಸ ಇತಿಹಾಸ ನಿರ್ಮಿಸಲಿ. ಜಿಲ್ಲಾ, ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೆಳನದ ಸಾರಥ್ಯ ಗೌರವಾದರಗಳು ಸ್ನೇಹ ಜೀವಿಯಾದ ಭಗವತಿಯವರಿಗೆ ಹಂತ ಹಂತವಾಗಿ ಒಲಿದೊಲಿದು ಬರಲೆಂಬುದೇ ಈ ಲೇಖನದ ಸಹೃದಯ ಕಾಳಜಿ ಮತ್ತು ಸದಾಶಯ.

✍️ಸುಭಾಷ್ ಹೇಮಣ್ಣಾ ಚವ್ಹಾಣ
ಶಿಕ್ಷಕ ಸಾಹಿತಿಗಳು,
ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ, ಮಂಜುನಾಥ ನಗರ, ಹುಬ್ಬಳ್ಳಿ ಶಹರ