ಸಂಕ್ರಾಂತಿ ಹಬ್ಬ ಅಂದಕೂಡಲೇ ನೆನಪಾಗೋದು ಒಂದ ಮಾತ ನೋಡ್ರಿ.“ಎಳ್ಳು-ಬೆಲ್ಲ ತೊಗೊಂಡು ಒಳ್ಳೇ ಮಾತಾಡೋಣ” ಅಂತ ನಾವು ಅಚ್ಚ ಕನ್ನಡದಾಗ ಹೇಳಿದ್ರ, ಮರಾಠಿ ಮಂದಿ ಇದನ್ನೇ “ತಿಳ್-ಗುಢ್ ಘ್ಯಾ, ಗೋಡ್, ಗೋಡ್ ಬೋಲಾ” ಅಂತ ಹೇಳ್ತಾರ. ಇನ್ನು ನಾನು ಧಾರವಾಡದಾಗ ಕಾಲೇಜು ಕಲೀಬೇಕಾದ್ರ, ಜೆ.ಎಸ್.ಎಸ್. ಕಾಲೇಜಿನ ಕಟ್ಟಿ ಹತ್ತಿ ಭಾರಿ ಗುಡ್ಡ ಕಡಿದ ಹಾಕೇವಿ ಅಂತ ತಿಳ್ಕೊಂಡಿದ್ದ ಕೆಲವು ಹುಡುಗೂರು, ಹುಡಿಗೇರು “Take Sweet, Talk Sweet” ಅಂತ ಸೋಗು ಮಾಡಿಕೋತ ಇಂಗ್ಲೀಷಿನ್ಯಾಗ ಹೇಳ್ತಿದ್ರು ಅಂತ ನೆನಪಾಗ್ತದ. ಆದ್ರ ಭಾಷಾ ಯಾವುದ ಇದ್ರೂ, ಒಬ್ಬರಿ – ಗೊಬ್ಬರು ಎಳ್ಳು-ಬೆಲ್ಲ ಕೊಟ್ಟು ಒಳ್ಳೇ ಮಾತಾಡೋಣ ಅನ್ನೋ ಮಾತಂತೂ, ಈ ಎಳ್ಳು-ಬೆಲ್ಲ ಹೆಂಗ ಯಾವಾಗಲೂ ಜೊತಿ- ಜೊತಿಯಾಗಿ ಇರತಾವೋ ಹಂಗೇ ಸಂಕ್ರಾಂತಿ ಹಬ್ಬದ ಜೋಡಿ ಉಳಕೋತದ, ಹೌದಲ್ಲೋ?

ನಾನೊಂದು ಐದಾರು ವರ್ಷದಕಿ ಇದ್ದಾಗಿಂದ ಈ ಹಬ್ಬ-ಹುಣ್ಣವಿ, ಗುಡಿ-ಜಾತ್ರಿ ಅನ್ನೋದನ್ನ ಮತ್ತ ನಮ್ಮ ಊರಾಗ ಮಾಡೋ ಎಲ್ಲಾ ಹಬ್ಬಗಳನ್ನ ನಾವೂ ಭಾಳ ಛಂದಾಗಿ ಮಾಡಿಕೋತ ಬಂದಿದ್ದನ್ನ ನೋಡೀನಿ. ಇವತ್ತಿಗೂ ನಮ್ಮ ಮನ್ಯಾಗ ಎಲ್ಲ ಹಬ್ಬ, ಪೂಜಾ, ಸಂಪ್ರದಾಯ, ಪದ್ಧತಿಗಳನ್ನು ಮೊದಲಿನ ಹಂಗ ಪಾಲಿಸಿ ಕೊಂಡು ಬಂದದ ಅನ್ನೋ ಮಾತಂತೂ ಖರೇ ಅದ ನೋಡ್ರಿ. ಇದರ ಕ್ರೆಡಿಟ್ ಎಲ್ಲಾ ನಮ್ಮ ಅಜ್ಜಿಗೆ ಹೋಗ್ತದ. ಯಾಕಂದ್ರ ಆಕಿ ತನ್ನ ಸೊಸಿ, ಅಂದ್ರ ನಮ್ಮಮ್ಮಗ ಮತ್ತ ಮೊಮ್ಮಕ್ಕಳು, ಅಂದ್ರ ನನಗ ಮತ್ತು ನನ್ನ ಅಕ್ಕಂದಿರಿಗೆ ಅಂಥಾ ಟ್ರೇನಿಂಗ್ ಕೊಟ್ಟು ಹೋಗ್ಯಾಳ. ಪಂಚಾಂಗ ದಾಗ ತಿಥಿ-ನಕ್ಷತ್ರಗಳನ್ನ ಹೆಂಗ ನೋಡಬಕು ಅನ್ನೋದ ರಿಂದ ಹಿಡಿದು ಹಬ್ಬದ ದಿನ ಮಾಡೋ ಪೂಜಾ, ವಿಶೇಷವಾದ ಅಡಿಗಿ ಪದಾರ್ಥಗಳು, ಸಿಹಿ ಭಕ್ಷ ಗಳು, ಹೀಂಗ ಎಲ್ಲ ಹೇಳಿಕೊಡ್ತಿದ್ದಳು. ಇದನ್ನೆಲ್ಲ ಕಲೀಲಿಕ್ಕೆ ನಮಗೆಲ್ಲ ಎಲ್ಲಿ ಬೋರ್ ಆಗ್ತದೇನೋ ಅಂತ ಎಲ್ಲಾದಕ್ಕೂ ಒಂದೊಂದು ಕಥಿ ಕಟ್ಟಿ, ಭಾಳ ಛಂದಾಗಿ ಹೇಳ್ತಿದ್ದಳು. ಒಂದ್ಸಲ ಸಂಕ್ರಾಂತಿ ಹಬ್ಬ ಬಂದಾಗ ನಾನು, “ಅವ್ವ, ಸಂಕ್ರಮಣದ ದಿನ ಸಂಜೀಮುಂದ ಎಲ್ಲಾರೂ ಒಬ್ಬರಿಗೊಬ್ಬರು ಕುಸುರೆಳ್ಳು ಕೊಟ್ಟು, ಎಳ್ಳು- ಬೆಲ್ಲ ತೊಗೊಂಡು ಒಳ್ಳೇ ಮಾತಾಡೋಣ ಅಂತ ಯಾಕ ಹೇಳ್ತಾರ” ಅಂತ ಕೇಳಿದೆ. ಅದಕ್ಕ ನಮ್ಮಜ್ಜಿ, “ಮನುಷ್ಯರು ಅಂತ ಇರೋ ನಾವೆಲ್ಲ, ಒಂದಲ್ಲ ಒಂದ ಸಲ ಒಬ್ಬರ ಜತಿಗೆ ಒಬ್ಬರು ಜಗಳ ಆಡಿರ್ತೀವಿ, ಬೈಕೊಂಡಿರ್ತೀವಿ. ಒಬ್ಬರ ಮ್ಯಾಲೆ ಒಬ್ಬರು ಸಿಟ್ಟು ಮಾಡಿಕೊಂಡು ಮಾತಾಡೋದು ಬಿಟ್ಟಿರತೀವಿ… ಹೌದಲ್ಲೋ? ಆದರ ಜೀವನದಾಗ, ಈ ಸಮಾಜ ದಾಗ ಒಬ್ಬರಿ ಗೊಬ್ಬರು ಹೊಂದಿಕೊಂಡು ಹೋಗಬಕು, ಸಂತೋಷದಿಂದ ಇರಬಕು ಅಂತ, ಈ ಹಬ್ಬದ ಸಂಭ್ರಮದಾಗ ಎಲ್ಲಾರೂ ಮನಸ್ಸಿ ನ್ಯಾಗ ಹಳೇ ಸಿಟ್ಟು ಏನ ಇದ್ದರೂ ಮರತು ಒಳ್ಳೆಯವರಾಗಿರ ಬೇಕಂತ ಹಿಂದಿನ ಕಾಲದವರು ಈಥರದ ಒಂದು ರೂಢಿ ಪಾಲಿಸ್ಕೋತ ಬಂದಾರ, ಒಬ್ಬರ ಮನಿಗೆ ಒಬ್ಬರು ಹೋಗಿ ಕುಸುರೆಳ್ಳು ಕೊಟ್ಟು ಬರತಾರ. ಅವರ ಬಳಗದವರಿಗೆಲ್ಲ ಪೋಸ್ಟಿನ್ಯಾಗ ಎರಡು ಕಾಳು ಕುಸುರೆಳ್ಳೂ ಕಳಸ್ತಾರ,ನೀನೂ ನೋಡಿದಿ” ಅಂತ ಹೇಳಿದಳು. ಇದರ ಜೊತಿಗೆ ಒಂದು ಕಥಿನೂ ಸೇರಿಸಿದಳು.

ನಮ್ಮ ಹಳ್ಳಿಯಾದ ನವಲಿಯೊಳಗ ಬಂಡ್ಯಾ ಮತ್ತು ಗುಂಡ್ಯಾ ಅಂತ ಇಬ್ಬರು ಹುಡುಗರು ಇದ್ದರು. ಅವರದ ಈ ಕಥಿ. ಅವರಿಬ್ಬರೂ ಯಾವಾಗಲೂ ಚಿಣ್ಣಿ-ದಾಂಡು, ಗೋಲಿ-ಗುಂಡ, ಲಗೋರಿ ಅಂತ ಆಡ್ಕೋತ ಇರ್ತಿದ್ರು. ಹೀಂಗ ಒಮ್ಮೆ ಆಟದೊಳಗ ಇಬ್ಬರೂ ಝಗಳಾ ಆಡಕೊಂಡು, ಸಿಟ್ ಮಾಡಿಕೊಂಡು ತಮ್ಮ, ತಮ್ಮ ಮನೀಗೆ ಹೋದ್ರು. ಬಂಡ್ಯಾ ತನ್ನ ಮನ್ಯಾಗೂ ತಮ್ಮನ ಜೋಡಿ ಝಗಳಾ ಮುಂದು ವರೆಸಿ ಸಿಟ್ ಮಾಡಿಕೊಂಡು, ಊಟಾನೂ ಮಾಡಲಾರದೇ, ಯಾರ ಜೋಡಿನೂ ಮಾತ ಆಡಲಾರದೇ ಒಂದು ಮೂಲ್ಯಾಗ ಸೆಟಗೊಂಡು ಕೂತ. ಅವರ ಅವ್ವ, ಅಪ್ಪ ಎಷ್ಟು ಸಮಾಧಾನ ಮಾಡಿದ್ರೂ ಕೇಳಲಿಲ್ಲ. ಸಂಜಿ ಆಗಿ ಕತ್ಲಾಕೋತ ಬಂದ್ರೂ ಬಂಡ್ಯಾ ಮೂಲಿ ಬಿಟ್ಟು ಏಳಲಿಲ್ಲ. ನಮ್ಮ ಊರು ನವಲಿಯೊಳಗ ಆಗಿನ್ನೂ ಕರೆಂಟ್ ಬಂದಿರಲಿಲ್ಲ. ಖಂದೀಲಿನ ಬೆಳಕಿನ್ಯಾಗ ರಾತ್ರಿ ಕಳೀಬೇಕಾಗಿತ್ತು. ಅದ್ರ ಜೊತಿಗೆ ಬಯಲು ಸೀಮಿಯ ಒಣ ಪ್ರದೇಶ. ಮುಂಜಾನಿಂದ ಇರತಿದ್ದ ಬಿಸಲಿನ ಝಳ ಸಂಜೀಗೆ ಸ್ವಲ್ಪ ಕಡಿಮೆ ಯಾಗಿ ತಂಪು ಆಗಲಿಕ್ಕೆ ಸುರುವಾಗ ತಿತ್ತು. ಆಗ ಅಲ್ಲಿನ ಮಣ್ಣಿನ ಮನಿ ಮಾಳಿಗಿ ಯಿಂದ ಸಣ್ಣ, ಸಣ್ಣ ಕೆಂಪು ಚೋಳು ಕೆಳಗ ಉದುರತಿದ್ದವು. ಖಂದೀಲಿನ ಮಿಣಿ-ಮಿಣಿ ಬೆಳಕಿನ್ಯಾಗ ಕಣ್ಣಿಗೂ ಬೀಳ್ತಿರಲಿಲ್ಲ. ಅವತ್ತ ಊಟಾನೂ ಮಾಡಲಾರದೆ ಮೂಲ್ಯಾಗ ಸೆಟಗೊಂಡ ಕೂತಿದ್ದ ಬಂಡ್ಯಾಗ ಇಂಥದ್ದೇ ಒಂದು ಚೋಳು ನೆಲದ ಮ್ಯಾಲೆ ಹರ್ಕೋತ ಬಂದು ಸಣ್ಣಾಗಿ ಕುಟಿಕಿತ್ತು. “ಅವ್ವಾ” ಅಂತ ಆಗ ಬಂಡ್ಯಾ ಬಾಯಿ ಬಿಟ್ಟಿದ್ದ. ಇಷ್ಟು ಹೇಳಿದ ನಮ್ಮ ಅಜ್ಜಿ,“ಅದಕ ನಾವು ಝಗಳ ಎಲ್ಲಾ ಮರತು, ಒಬ್ಬರಿಗೊಬ್ಬರು ಹೊಂದಿ ಕೊಂಡು ಹೋಗಬೇಕು” ಅಂತ ತನ್ನ ಕಥಿ ಮುಗಿಸಿದಳು. ನಾನು ಅದಷ್ಟೋ ವರ್ಷ ಈ ಕಥಿ ನಂಬಿದ್ದೆ. ಅದನ್ನು ಪಾಲಿಸಿಕೊಂಡೂ ಬಂದಿದ್ದೆ.

ನಾನು ಸವಣೂರಿನ್ಯಾಗ ನಾಲ್ಕನೆತ್ತಿ ಕಲೀಬೇಕಾದ್ರ ಸಂಕ್ರಾಂತಿ ಹಬ್ಬ ಬಂತಲ್ಲ, ಅವತ್ತ ಸಾಲಿಗಂತೂ ಸೂಟಿ ಇತ್ತು. ಎಲ್ಲಾರ ಮನ್ಯಾಗೂ ಹಬ್ಬದ ಅಡಗಿ ಆಗಿ, ಊಟ ಮಾಡೋದು ತಡಾ ಆಗ್ತದಂತ ಗೊತ್ತೇ ಇದ್ದಿದ್ದರಿಂದ ನಾನು, ಮಗ್ಗಲ ಮನಿ ಪದ್ದಿ (ಪದ್ಮ), ಎದರಿನ ಮನಿ ಹೇಮಾ ಮತ್ತ ಆಕಿ ತಂಗಿ ಪಮ್ಮಿ(ಪ್ರೇಮಾ) ಎಲ್ಲರೂ ನಮ್ಮ ಓಣಿಯೊಳಗ ಒಂದು ಬಾಜು ಎಂಟು ಮನಿ ‘ಕುಂಟೆಲ್ಪಿ’(ಕುಂಟಬಿಲ್ಲೆ) ಆಡಲಿಕ್ಕಂತ ಮಣ್ಣಿನ್ಯಾಗ ಗೆರಿ ಬರಕೊಂಡು ಆಟ ಸುರು ಮಾಡಿದ್ವಿ. ಪದ್ದಿ ಮೊದಲು ಆಡಲಿಕ್ಕೆ ಸುರು ಮಾಡಿ, ಇನ್ನೇನು ಸೀತಿಮನಿಗೆ (ಆರನೇ ಮನಿ) ಕುಂಟಬಿಲ್ಲೆ ಒಗಿಲಿಕ್ಕ ಹೋದಳು. ಅದು ಅಲ್ಲೆಲ್ಲೋ ದೂರ ಉರುಳಿ ಹೋಗಿ ಬಿದ್ದು ಆಟದಿಂದ ಔಟ್ ಆದಳು. ಹೇಮಾ ಮತ್ತ ಪಮ್ಮಿನೂ ಲಗೂನೇ ಔಟ್ ಆಗಿ ನನ್ನ ಪಾಳಿ ಬಂತು. ಒಂದು ಸಲ ಕುಂಟಬಿಲ್ಲಿ ನನ್ನ ಕೈಗೆ ಬಂದರ ಅಷ್ಟು ಸುಲುಭ ಆಗಿ ಅವರ್ಯಾರಿಗೂ ಸಿಗಂಗಿಲ್ಲ ಅಂತ ಗೊತ್ತೇ ಇದ್ದಿದರಿಂದ ಪದ್ದಿ ಒಂದೊಂದ ಕುಂಟ ನೆಪ ತೆಗಿಲಿಕ್ಕೆ ಸುರು ಮಾಡಿದ್ಲು. ಆಟದಾಗ ಆಕಿ ‘ಝಗಳಗಂಟಿ’ ಅಂತ ನಮಗೆಲ್ಲಾರಿಗೂ ಗೊತ್ತೇ ಇತ್ತು. ನಾನು ಅವತ್ತ ಆಟದಾಗ ಆಗ್ಲೇ ಎರಡು ಮನಿ ಕಟ್ಟಿ, ಮೂರನೇ ಮನಿಗಂತ ಕಣ್ ಮುಚಗೊಂಡು, ತಲಿ ಮ್ಯಾಲಕ್ಕೆತ್ತಿ “ಅಮ್ಮಾಟಿ…’ (ಯ್ಯಾಮ್ ಐ ರೈಟ್?) ಅಂತ ಕೇಳಕೋತ ಹೊಂಟಿದ್ದೇ ತಡ ಪದ್ದಿ, “ಯೇ ನೀ ಔಟ್, ನೀ ಔಟ್. ಗೆರಿ ಮ್ಯಾಲೆ ಕಾಲ ಇಟ್ಟೀದಿ” ಅಂತ ಒದರಿ ನಾನು ಕಟಕೊಂಡಿದ್ದ ಮನಿಯ ಗೆರಿ ಎಲ್ಲ ಕಾಲಿನಿಂದ ಅಳಿಸಿ ಹಾಕಿ ಕುಣಿಲಿಕ್ಕೆ ಸುರುಮಾಡಿದಳು. ನನಗೂ ಸಿಟ್ಟು ಬಂದು ಪದ್ದೀನ ಬಾಯಿಗ ಬಂದಹಂಗ ಬೈದು, ಇನ್ನ ಮ್ಯಾಲೆ ಆಕಿ ಜೋಡಿ ಆಟ ಏನು, ಮಾತೂ ಆಡಂಗಿಲ್ಲಂತ ಹೇಳಿ ‘ಠೂ’ ಬಿಟ್ಟು ಮನಿಗೆ ಬಂದೆ. ಆಗಲೇ ನಮ್ಮ ಅಜ್ಜ ದೇವರ ಪೂಜಾ ಮುಗಿಸಿ, ನೈವೇದ್ಯ ಮಾಡಿ ಮಂಗಳಾರತಿ ಮಾಡ್ಲಿಕ್ಕೆ ತಯಾರಿ ನಡೆಸಿದ್ದ. ನಾನು “ಝಾಂಗಟಿ ಸಪ್ಪಳ ಕೇಳ್ಸಿದ್ರ, ಹೆಂಗಿದ್ರೂ ಆಟ ಬಿಟ್ ಬರಬೇಕಾಗುತಿತ್ತು. ಅಂತೂ ಸರಿಯಾದ ಹೊತ್ತಿಗೆ ಮನಿಗೆ ಬಂದೆ” ಅಂತ ಮನಸ್ಸಿನ್ಯಾಗ ಅನ್ಕೊಂಡ್ರೂ, ಪದ್ದಿ ಮ್ಯಾಲಿನ ಸಿಟ್ಟು ಮಾತ್ರ ಕಮ್ಮಿ ಆಗಲಿಲ್ಲ. ಅವತ್ತ ಸಂಜೀಗೆ ಎಳ್ಳು ಬೀರಲಿಕ್ಕೆ ಹೋಗಬಕಂತ ಹೊಸ ಬಟ್ಟಿ ಹಾಕ್ಕೊಂಡು ಅಕ್ಕಂದಿರ ಜೋಡಿ ತಯಾರಾದ್ರೂ, ಪದ್ದಿ ಮನಿಗೆ ಹೋಗಂಗಿಲ್ಲ ಅಂತ ಮತ್ತೆ ಸಿಟ್ಟಿಗೆದ್ದೆ. ಮುಂಜಾನೆ ಆಟದಾಗ ಆಕಿ ನನಗ ಮೋಸ ಮಾಡ್ಯಾಳ, ಅದಕ ಆಕಿ ಜೋಡಿ ‘ಠೂ’ ಬಿಟ್ಟೀನಿ ಅಂತ ಅಲ್ಲೇ ಚಾಪಿ ಮ್ಯಾಲೆ ಕೂತಿದ್ದೇ ತಡ ನಮ್ಮ ಅಜ್ಜಿ ಅಡಗಿ ಮನಿಯೊಳಗಿಂದ ತನ್ನ ಸೀರಿ ಸೆರಗಿಗೆ ಒದ್ದಿ ಕೈ ಒರಸ್ಕೋತ ಬಂದು “ಪಾಪು, ಹಬ್ಬದ ದಿವ್ಸ ಹಂಗೆಲ್ಲ ಝಗಳ ಆಡಿ, ಮಾತು ಬಿಟ್ಟು ಹಟಮಾಡಬಾರದು. ನಿನಗ ಗುಂಡ್ಯಾ-ಬಂಡ್ಯಾ ನ ಕಥಿ ನೆನಪದನೋ ಇಲ್ಲೋ?” ಅಂತ ಭಾರೀ ಸಮಾಧಾನದಿಂದ ಅಂದ್ಲು ನೋಡ್ರೀ, ಪಟಕ್ಕನೆ ಅಲ್ಲಿಂದ ಎದ್ದು ಓಡಿ ಆಗಲೇ ಗೇಟ್ ಧಾಟಿ ಹೋಗಿದ್ದ ಅಕ್ಕಂದಿರ ಜೋಡಿ ಪದ್ದಿ ಮನಿಗೆ ಹೋಗಿ ಎಳ್ಳು ಬೀರಿ, ಪದ್ದಿಗೆ ಕುಸುರೆಳ್ಳು ಕೊಟ್ಟು, “ಎಳ್ಳು-ಬೆಲ್ಲ ತೊಗೊಂಡು ಒಳ್ಳೇ ಮಾತಾಡೋಣು” ಅಂತ ಹೇಳಿ ಬಂದಿದ್ದೆ.

ನಾವು ಸಣ್ಣವರಿದ್ದಾಗ ಹೀಂಗ ಒಂದು ಏನಾರ ಅಂಜಿಕಿ ಹುಟ್ಟಿಸಿ ಹಿಂದಿನಿಂದ ಪಾಲಿಸಿಕೊಂಡ ಬಂದ ಪೂಜಾ ಪದ್ಧತಿ, ಸಂಪ್ರದಾಯ, ಜೀವನ ಮಾಡ್ಲಿಕ್ಕೆ ಬೇಕಾಗೋ ಒಳ್ಳೇ ಸಂಸ್ಕಾರಗಳನ್ನು ಕಲಿಸಿಕೊಡತಿದ್ರಲ್ಲ ಅದನ್ನು ದೊಡ್ಡವರೂ ಪಾಲಸ್ತಾರ ಅಂತ ತಿಳ್ಕೊಂಡಿದ್ದ ನನಗ ಆಶ್ಚರ್ಯ ಆಗೋವಂಥ ಘಟನಿ ಒಂದು ಇದೇ ಸಂಕ್ರಾಂತಿ ಹಬ್ಬದ ಹಿಂದಿನ ದಿನಾನೇ ನಡೀತು. ಜಡ್ಜ್ ಆಗಿ ಸರಕಾರಿ ಕೆಲಸದೊಳಗಿದ್ದು, ಭಾಳ ವರ್ಷದಿಂದ ನಮ್ಮ ಉತ್ತರ ಕರ್ನಾಟಕದ ಜಿಲ್ಲೆಗಳೊಳಗ ಕೆಲಸ ಮಾಡಿದ್ದ ನಮ್ಮ ತಂದಿಯವರಿಗೆ ಇದೇ ಮೊದಲನೆ ಸರ್ತಿ ಹಳೇ ಮೈಸೂರು ಪ್ರಾಂತದ ಹೊಳೆನರಸೀಪುರಕ್ಕ ಟ್ರಾನ್ಸಫ಼ರ್ ಆಗಿತ್ತು. ನಮಗೆಲ್ಲರಿಗೂ ಅಲ್ಲಿನ ವಾತಾವರಣ ಮತ್ತ ಅಲ್ಲಿನ ಮಂದಿ ಆಡೋ ಕನ್ನಡ ಭಾಷಾ ಶೈಲಿಯಿಂದ ಹಿಡಿದು ಎಲ್ಲಾ ಹೊಸಥರನ ಅನಿಸಿತ್ತು. ನಮ್ಮಪ್ಪನ ಆಫೀಸಿನ್ಯಾಗ ಕಾರಕೂನ ಆಗಿ ಕೆಲಸ ಮಾಡ್ತಿದ್ದ ಶ್ರೀಕಂಠಯ್ಯ ನಮಗೆಲ್ಲ ಆ ಹೊಸ ಊರಿನ ಸಾಲಿಗಳು, ಕಾಲೇಜು, ಅಂಗಡಿ ಗಳ ಮಾಹಿತಿ ಎಲ್ಲ ಹೇಳಿ ಕೊಟ್ಟು ನಮಗೆ ಸ್ವಲ್ಪ ಜಾಸ್ತಿನೇ ಪರಿಚಯ ಆಗಿದ್ದರು. ನಾವೆಲ್ಲ ಅಲ್ಲಿಗೆ ಹೊಂದಿಕೊಳ್ಳೋದ್ರೊಳಗ ದಸರಾ, ದೀಪಾವಳಿ ಎಲ್ಲ ಮುಗದಿದ್ದವು. ಆಗ ಒಂದ ದಿನ ಸಂಜಿ ಮುಂದ ಶ್ರೀಕಂಠಯ್ಯ ತವರು ಮನಿಯಿಂದ ಬಾಣಂತನ ಮುಗಿಸಿಕೊಂಡು ಹಿಂದಿನ ದಿನನೇ ಊರಿಗೆ ಬಂದಿದ್ದ ತನ್ನ ಹೆಂಡತಿ ಮತ್ತು ಸಣ್ಣ ಕೂಸಿನ್ನ ನಮ್ಮ ಮನಿಗೆ ಕರಕೊಂಡು ಬಂದು ನಮಗೆಲ್ಲ ಪರಿಚಯ ಮಾಡಿಸಿದ್ರು. ಕೂಸಂತೂ ಭಾಳ ಮುದ್ದಾಗಿತ್ತು. ಅವರ ಹೆಂಡತಿನೂ ಭಾರೀ ಲಕ್ಷಣ ಆಗಿದ್ದಳು. ನಿಟ್ಟಿಂಗ್, ಕಸೂತಿ ಎಲ್ಲ ಕಲ್ತಿದ್ದರ ಜೊತಿ, ಸಕ್ಕರಿ ಅಚ್ಚೂ ಭಾಳ ಛೊಲೋ ಮಾಡ್ತೀನಿ ಅಂತ ಆಕಿ ಹೇಳಿದ ಕೂಡ್ಲೆ ನಮ್ಮಮ್ಮ, “ನಾನು ಸಕ್ಕರಿ ಸಾಮಾನು, ಕುಸುರೆಳ್ಳು ಎಲ್ಲ ಮಾಡ್ತೀನಿ. ಆದ್ರ ನಮ್ಮ ಕಡೆ ಸಕ್ಕರಿ ಅಚ್ಚ ಮಾಡಿ ಗೊತ್ತಿಲ್ಲ. ಈ ಸಲ ಸಂಕ್ರಮಣ ಹಬ್ಬಕ್ಕ ನನಗ ಸಕ್ಕರಿಪಾಕ ಮಾಡಿ ಅಚ್ಚ ಮಾಡೋದನ್ನು ಕಲಿಸಿ ಕೊಡ್ರಿ” ಅಂತ ಆಕಿಗಿ ಹೇಳಿದ್ರು. ಹೂಂ ಅಂತ ಹೇಳಿ ಹೋದಕಿ ಸಂಕ್ರಾಂತಿ ಹಬ್ಬಕ್ಕ ಎರಡು ದಿನ ಇರಬಕಾದ್ರ ಒಂದು ದಿನ ಮಧ್ಯಾಹ್ನ ಮನ್ಯಾಗ ಕೂಸಿನ್ನ ಮಲಗಿಸಿ ಬಂದು ನಮ್ಮನಿ ಎದುರು ಇದ್ದ ಆಕಿ ಗೆಳತಿ ಮನ್ಯಾಗ ಸಕ್ಕರಿ ಅಚ್ಚ ಮಾಡೋದನ್ನು ಹೇಳಿಕೊಟ್ಟಳು. ತಟ್ಟಿತುಂಬಾ ಅಚ್ಚುಗಳನ್ನ ಜೋಡಿಸಿ ಇಡೋದ್ರಾಗ ಆಕಿ ನಾದಿನಿ ಬಂದು ಆಕಿಗೆ ಮನಿಗೆ ಬರಬಕಂತ ಅಂತ ಹೇಳಿದ್ಲು. ಕೂಸು ಎದ್ದು ಅಳ್ಳಿಕ್ ಹತ್ತ್ಯದ, ಮನಿಗೆ ಬರಬಕು ಅಂತ ಅವರತ್ತಿ ಹೇಳಿ ಕಳಿಸಿ ದ್ದಳು. ಪಾಪ, ಆಕಿ ಅವಸರದಿಂದ ಮನಿಗೆ ಹೋಗಿದ್ದಳು. ನಾವೆಲ್ಲರೂ ಸಂಜಿ ಮುಂದ ಸಾಲಿ ಯಿಂದ ಬಂದ ಮ್ಯಾಲೆ ಛಂದ, ಛಂದಾಗಿದ್ದ ಸಕ್ಕರಿ ಅಚ್ಚು ನೋಡಿ ಮುಂದಿನ ವರ್ಷದಿಂದ ನಾವೂ ಮನ್ಯಾಗ ಮಾಡಬಹುದು ಅಂತ ಖುಷಿ ಪಟ್ಟವಿ.

ಆದ್ರ ಮರುದಿನ ನಡೆದ ಘಟನಾ ಎಲ್ಲಾರಿಗೂ ಎಂಥಾ ಆಘಾತ ತಂದಿತ್ತು! ಶ್ರೀಕಂಠಯ್ಯನ ತಾಯಿ, ತಂಗಿ ಮತ್ತ ಹೆಂಡತಿ ಮನೀಮುಂದ ಬಂದಿದ್ದ ಗಂಟಿನ ಸೀರಿ ವ್ಯಾಪಾರಿನ ಹಬ್ಬಕ್ಕ ಸೀರಿ ತೊಗೋಬೇಕಂತ ಕರದಿದ್ರು. ಆ ಸೀರಿ ಹಂಗದ, ಈ ಸೀರಿ ಹೀಂಗದ ಅಂತ ಅನಕೋತ ಆ ಅತ್ತಿ, ನಾದಿನಿ ಇಬ್ಬರೂ ಸೇರಿ ಆ ಸೊಸಿ ಮನಸಿಗೆ ತ್ರಾಸ ಆಗೋ ಅದೆಂಥಾ ಮಾತಾಡಿದ್ರೋ ಏನೋ ಆಕಿ ಅಲ್ಲಿಂದೆದ್ದು ಹೋಗಿ ಒಳಗಿನ ರೂಂನ್ಯಾಗ ಉರಲು ಹಕ್ಕೊಂಡು ಆತ್ಮಹತ್ಯಾ ಮಾಡಿಕೊಂಡು ಬಿಟ್ಟಳು! ಇನ್ನು ಓಣ್ಯಾಗಿನ ಮಂದಿ, ನಮ್ಮನ್ಯಾಗ ಎಲ್ಲಾರೂ ಎಂಥಾ ಅನ್ಯಾಯ ಆಯಿತು ಅಂತ ಗೋಳಾಡಿದರು. ಆಗಲೇ ಏಳನೆತ್ತಿ ಓದ್ತಿದ್ದ ನಾನು ಇದ್ಯಾಕ ಹೀಂಗಾತು ಅಂತು ಯೋಚನಿ ಮಾಡ್ಲಿಕ್ಕೆ ಸುರು ಮಾಡಿದೆ. ಸಂಕ್ರಾಂತಿ ಹಬ್ಬ ಅಂದರ ಮನಸ್ಸಿ ನ್ಯಾಗ ಹಳೇ ಸಿಟ್ಟು ಏನ ಇದ್ದರೂ ಮರತು ಒಳ್ಳೇಯವರಾ ಗಿರಬೇಕು, ಒಬ್ಬರಿಗೊ ಬ್ಬರು ಹೊಂದಿಕೊಂಡು ಹೋಗಬಕು ಅಂತಾನೇ ಒಬ್ಬರಿಗೊಬ್ಬರು ಎಳ್ಳು-ಬೆಲ್ಲ ಕೊಟ್ಟು, ಒಳ್ಳೇ ಮಾತಾಡೋಣ ಅಂತ ಹೇಳ್ತಾರ ಅಂತೆಲ್ಲ ಅನಕೊಂಡಿದ್ದ ನನಗ ಶ್ರೀಕಂಠಯ್ಯನ ತಾಯಿ ಇದನ್ನ ತಿಳ್ಕೊಂಡಿದ್ರ, ಪಾಪ, ಸೂಕ್ಷ್ಮ ಮನಸ್ಸಿನ ಆ ಸೊಸಿ ಸಣ್ಣ ಕೂಸಿನ್ನ ಬಿಟ್ಟು ಜೀವ ಕಳಕೋತಿ ರಲಿಲ್ಲ ಅನ್ಸಿತ್ತು. ನಮ್ಮಮ್ಮ, “ನಮಗ ಯಾಕೋ ಸಕ್ಕರಿ ಅಚ್ಚು ಅಚ್ಚ ಬರಲಿಲ್ಲ…..” ಅಂತ ಅಂದ ಕೊಂಡು ಮತ್ತ ಸಕ್ಕರಿ ಅಚ್ಚು ಮಾಡ್ಲಿಕ್ಕೆ ಹೋಗಲಿಲ್ಲ. ಆದ್ರ ಕುಸುರೆಳ್ಳು ಬೀರಲಿಕ್ಕೆ ಅಂತ ಸಕ್ಕರಿ ಬಟ್ಟಲ ಮಾಡಿ ಅದರ ಮ್ಯಾಲೆ ಬಣ್ಣ-ಬಣ್ಣದ ಚಿತ್ರ ಬರೀತಿದ್ದಳು.

ಪ್ರತಿವರ್ಷ ಸಂಕ್ರಾಂತಿ ಹಬ್ಬದ ಮರುದಿವ್ಸ ನಾವೆಲ್ಲ ಸಣ್ಣ ಹುಡುಗೂರು ಒಂದು ಸಣ್ಣ ಡಬ್ಬಿಯೊಳಗ ಕುಸುರೆಳ್ಳು ಹಾಕ್ಕೊಂಡು ಸಾಲಿ, ಕಾಲೇಜಿಗೆ ತೊಗೊಂಡು ಹೋದ್ರ, ದೊಡ್ಡೋರೆಲ್ಲ ಆಫೀಸಿಗೆ ಒಂದು ಪೇಪರ್ ಕವರಿನ್ಯಾಗ ಕುಸುರೆಳ್ಳು ತೊಗೊಂಡು ಹೋಗ್ತಿದ್ರು. ಸಾಲಿ ಹುಡುಗರೆಲ್ಲ ಮಾಸ್ತರರಿಗೆ, ಟೀಚರರಿಗೆ ಕುಸುರೆಳ್ಳು ಕೊಟ್ಟು ನಮಸ್ಕಾರ ಮಾಡಿದಾಗ ಅವರು ಎಲ್ಲಾರಿಗೂ ಒಳ್ಳೇದಾಗಲಿ ಅಂತ ಆಶೀರ್ವಾದ ಮಾಡ್ತಿದ್ರು. ಸಂಕ್ರಾಂತಿ ಮರದಿನ ಸಾಲಿಯೊಳಗೂ ಒಂದು ಸಂಭ್ರಮ ಇರ್ತಿತ್ತು. ಹುಡಿಗೇರ ಮಾರಿ ಮ್ಯಾಲೆ ಎಳ್ಳು-ಬೆಲ್ಲದ ಖುಷಿಗಿಂತ, ಅವತ್ತಿನ ದಿನ ಸಾಲಿ ಸಮವಸ್ತ್ರ ಬಿಟ್ಟು, ಬಣ್ಣ-ಬಣ್ಣದ ಹೊಸ ಬಟ್ಟಿ ಹಾಕ್ಕೊಂಡು ಬಂದಿದ್ದ ಖುಷೀನೇ ಎದ್ದು ಕಾಣಿಸುತಿತ್ತು. ಇನ್ನು ಹುಡುಗರಿಗೆ ಮಿಡಿ, ಮ್ಯಾಕ್ಸಿ ಅಂತ ಬಣ್ಣದ ಬಟ್ಟಿ ಹಾಕ್ಕೊಂಡು ಸಾಲಿಗೆ ಬಂದಿದ್ದ ಹುಡಿಗೇರನ್ನ ಸೊಟ್ಟ ಕಣ್ಣಿನಿಂದ ನೋಡೋದೇ ಖುಷಿ ಆಗಿರತಿತ್ತು. ಯಾಕಂದ್ರ ಅವುಕ್ಕೆಲ್ಲ ದಿನಾ ಈ ಹೆಣ್ಮಕ್ಕಳು ಸಾಲಿ ಯೂನಿಫಾರಮ್ಮಿನ ಅದೇ ನೀಲಿ ಸ್ಕರ್ಟು, ಬಿಳಿ ಬ್ಲೌಸ್ ಹಾಕ್ಕೊಂಡು, ತಲಿಗೆ ತೆಪ-ತೆಪ ಎಣ್ಣಿ ಹಚ್ಚಿ, ಬಿಗಿಯಾಗಿ ಎರಡು ಹೆರಳು ಹಾಕಿ, ಬಿಳಿ ರಿಬ್ಬನ್ ಕಟ್ತಿದದ್ದು ನೋಡಿ, ನೋಡಿ ಸಾಕಾಗಿರ್ತಿತ್ತೇನೋ! ಇವೆಲ್ಲ ಹೈಸ್ಕೂಲ್ ಹುಡುಗರ ಲಕ್ಷಣಗಳು ಅಂತ ಗೊತ್ತಾಯ್ತಲ್ಲಾ?

ಇಂಥಾ ಹುಡುಗರೊಳಗ ನಮ್ಮ ಕ್ಲಾಸಿನ್ಯಾಗೂ ಒಬ್ಬ ಹುಡುಗ ಇದ್ದ. ಅದ ಸ್ವಲ್ಪ ವರ್ಷದ ಮೊದಲು ಶಿವಣ್ಣ ಅವರ ‘ಆನಂದ’ ಸಿನೆಮಾ ಬಂದಿತ್ತು. ಈ ಹುಡುಗ ತನ್ನನ್ನು ತಾನು ಶಿವರಾಜ ಕುಮಾರ್ ಅಂತ ತಿಳ್ಕೊಂಡು ಧಿಮಾಕ ಮಾಡ್ಕೋತ ಓಡಾಡುತಿದ್ದ. ಅಷ್ಟಕ್ಕ ಸುಮ್ಮನಾಗಿದ್ರ ಛೊಲೋ ಇರ್ತಿತ್ತು. ಕ್ಲಾಸಿನ ಹುಡುಗೀರನ್ನ ನೋಡಿ ಹಲ್ಲು ಕಿಸಿಯೋದು, ಕಮೆಂಟ್ ಪಾಸ್ ಮಾಡೋದು ಅಲ್ಲದೇ ಹುಡುಗರದೊಂದು ಗುಂಪು ಕಟಗೊಂಡು ಹುಚ್ಚಾಟ ಮಾಡ್ತಿದ್ದ. ನಮ್ಮ ಕ್ಲಾಸಿನ ಹುಡುಗಿ ಯರೆಲ್ಲ ಸೇರಿ ಅವನಿಗೊಂದು ಗತಿ ಕಾಣಿಸ ಬೇಕಂತ ಅನ್ಕೊಂಡಾಗನೇ ಈ ಸಂಕ್ರಾಂತಿ ಹಬ್ಬ ಬಂದಿತ್ತು. ನಾವೆಲ್ಲ ಓದಿದ್ದ ‘ಉತ್ತರಭೂಪ’ ನಾಟಕದ ಒಂದಿಷ್ಟು ಡೈಲಾಗಗಳನ್ನು ಘಟ್ಟಿ ಮಾಡಿಕೊಂಡು, ಅದಕ್ಕ ನಮ್ಮ ಮಾತುಗಳನ್ನೂ ಸೇರಿಸಿಕೊಂಡು ತಯಾರಾಗಿ ಹಬ್ಬದ ಮಾರನೇ ದಿನ ಅವನು ಸಾಲಿಗೆ ಬಂದಿದ್ದೇ ತಡ, ಕೈಯಾಗ ಕುಸುರೆಳ್ಳು ಹಿಡಕೊಂಡು ನಾವು ಇಪ್ಪತ್ತು ಹುಡುಗಿಯರು ಅವನ ಮ್ಯಾಲೆ ಮಾತಿನ ಅಟ್ಯಾಕ್ ಸುರು ಮಾಡಿದ್ವಿ. “ಎಲವೋ ಉತ್ತರ ಕುಮಾರ, ಕರಿಎಳ್ಳಿನಂತಿರುವ ನಿನ್ನ ಮುಖವ ನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಂಡು ನಮ್ಮಿಂದ ಈ ಎಳ್ಳು-ಬೆಲ್ಲವನ್ನು ಸ್ವೀಕರಿಸು. ‘ಉತ್ತರನ ಪೌರುಷವೆಲ್ಲ ಒಲೆಯ ಮುಂದೆ’ ಎನ್ನುವಂತೆ ನಿನ್ನ ಈ ಹುಚ್ಚಾಟವನ್ನು ಮನೆಯಲ್ಲಿ ತೋರಿಸು. ಕೆನ್ನೆಗೆರಡು ಬಿಗಿದು ಬುದ್ಧಿ ಹೇಳುತ್ತಾರೆ. ಇಲ್ಲದಿದ್ದಲ್ಲಿ ನಿನಗೆ ಬುದ್ಧಿ ಕಲಿಸುವ ವಿದ್ಯೆ ನಮಗೆ ಗೊತ್ತಿದೆ.” ಅಂತ ನಾಗರತ್ನ ಹೇಳಿದ್ರ, ರೇಣುಕಾ, “ಸಹೋದರ, ನೀನು ಉತ್ತರಕುಮಾರನಾದರೆ ನಾನು ನಿನ್ನ ಸಹೋದರಿ ಉತ್ತರೆ. ವೀರ ಅಭಿಮನ್ಯುವನ್ನು ಮದುವೆಯಾ ಗಲು ನನ್ನ ಒಪ್ಪಿಗೆಯಿದೆ. ಇದೇ ಸಂತೋಷದಲ್ಲಿ ಈ ಎಳ್ಳು-ಬೆಲ್ಲವನ್ನು ತೆಗೆದು ಕೊಂಡು, ಒಳ್ಳೆಯ ಮಾತುಗಳನ್ನಾಡಲು ಕಲಿ” ಅಂದಳು. ಅಂತೂ ಅವತ್ತು ಎಲ್ಲಾರೂ ಸೇರಿ ಎಳ್ಳು-ಬೆಲ್ಲ ಕೊಟ್ಟು ಅವನ ಮಾರಿ ಮ್ಯಾಲೆ ನೀರಿಳಿಸಿಬಿಟ್ಟವಿ.

ಇನ್ನು ಕಾಲೇಜಿನ್ಯಾಗ ಈ ಉತ್ತರಕುಮಾರ ನನ್ನೂ ಮೀರ್ಸಿದ್ದ ಒಂದು ‘ಹುಚ್ಚಪ್ಯಾಲಿ’ ಇತ್ತು. ಹೀಂಗ ಸಂಕ್ರಾಂತಿ ಹಬ್ಬದ ಮರುದಿವ್ಸ ನಾವೆಲ್ಲ ಗೆಳತೇರು ಕಾಲೇಜಿಗೆ ಸೀರಿ ಉಟಗೊಂಡು ಹೋಗೋದು ಅಂತ ಪ್ಲ್ಯಾನ್ ಮಾಡಿದ್ವಿ. ನಮಗೆಲ್ಲ ಅವತ್ತ Zoology Practical ಇತ್ತು. Dissection Box ಜೋಡಿ ಕುಸುರೆಳ್ಳು ಡಬ್ಬೀನೂ ತೊಗೊಂಡು ಲ್ಯಾಬೊರೇಟರಿಗೆ ಹೋದ್ವಿ. ಅಷ್ಟೊತ್ತಿಗಾಗ್ಲೇ ಸುನ್ಯಾ (ಸುನಿಲ್), ಸಂಜ್ಯಾ (ಸಂಜಯ), ಗಿರೀಶ, ಸಮೀರ ಎಲ್ಲಾರೂ ಬಂದು ಲ್ಯಾಬಿನ್ಯಾಗ ಕೂತಿದ್ರು. ಕೃಷ್ಣಮೂರ್ತಿ ಸರ್ ಬಂದು ಕಪ್ಪಿ ಡಿಸೆಕ್ಷನ್ ಮಾಡಿ ತೋರಿಸೋರಿದ್ರು. ನಾವು ಎಂಟು ಮಂದಿ ಹುಡುಗೀರು ಸೀರಿ ಉಟಗೊಂಡು ಹೋಗಿದ್ದು ನೋಡಿ ಸುನ್ಯಾ ತನ್ನ ಚಾಷ್ಟಿ ಸುರುಮಾಡಿದ. ತಾನು ತಂದಿದ್ದ ಕುಸುರೆಳ್ಳಿನ ಪ್ಯಾಕೇಟಿನಿಂದ ಒಂದು ಮುಷ್ಠಿತುಂಬ ತೊಗೊಂಡು,ಒಂದೊಂದೇ ಕಾಳನ್ನ ಮ್ಯಾಲೆ ಒಗದು ಸೀದಾ ಬಾಯಾಗ ಕ್ಯಾಚ್ ಹಿಡಿದು ತನ್ನ ಬಹದ್ದೂರಗಿರಿನ ನಾವೆಲ್ಲ ನೋಡಬಕು ಅಂತ ಬಯಸಿದ್ದ. ಒಂದು ನಾಲ್ಕೈದು ಕಾಳು ಬಾಯಿಗೆ ಹಾಕಿಕೊಂಡು ಏನೋ ಸಾಧಿಸಿದೆ ಅಂತ ಅನಕೊಂಡು ಆರನೇ ಕಾಳು ಮ್ಯಾಲೆ ಒಗದು ಬಾಯಾಗ ಹಿಡಿಯ ಬೇಕನ್ನೊಷ್ಟ ರೊಳಗ ಅದು ಸೀದಾ ಗಂಟಲ ದೊಳಗ ಸಿಗಿಬಿತ್ತು! ಜೋರಾಗಿ ಖೆಮ್ಮು ಹತ್ತಿತು. ಉಸುರುಗಟ್ಟಿಸಿಕೊಂಡ ಸುನ್ಯಾ ಕಣ್ಣಗುಡ್ಡಿ ತಿರಗಿಸಲಿಕ್ಕೆ ಸುರುಮಾಡಿದ ಕೂಡಲೇ ಎಲ್ಲಾರಿಗೂ ಘಾಬರಿ ಆತು. ಹುಡುಗೇರಿಗೆ ಕಾಳು ಹಾಕಲಿಕ್ಕೆ ಹೋಗಿ ತನ್ನ ಬಾಯಾಗೇ ಅಕ್ಕಿಕಾಳು ಹಾಕಿಸಿಕೊಳ್ಳೋಷ್ಟು ಅವಸ್ಥಿ ಪಡತಿದ್ದ ಸುನ್ಯಾನ್ನ ನೋಡಿದ ಸಂಜ್ಯಾ, ಭಡಕ್ಕನ ಅವನ್ನ ಎಳಕೊಂಡು ಹೋಗಿ ಲ್ಯಾಬಿನ ಸಿಂಕಿನ್ಯಾಗ ಬಗ್ಗಿಸಿ ಅವನ ಬೆನ್ನಿನ ಮ್ಯಾಲೆ ದಬ-ದಬ ಅಂತ ಗುದ್ದಿದ ಕೂಡ್ಲೆ ಸುನ್ಯಾ ಬಕ-ಬಕ ಅಂತ ಎಲ್ಲಾ ವಾಂತಿ ಮಾಡಿದ. ಆಮ್ಯಾಲೆ ಉಸುರು ತಿರುಗಿತು. ಸುಸ್ತಾಗಿ ಲ್ಯಾಬಿನ ಸ್ಟೂಲ್ ಮ್ಯಾಲೆ ಕೂತಿದ್ದ ಸುನ್ಯಾನ ಹತ್ರ ಈ ಸೀರಿ ಉಟಗೊಂಡು ಬಂದಿದ್ದ ನಾರಿಮಣಿಗಳಿಲ್ಲ ಹೋಗಿ ಅವನ ಕೈ ಯಾಗ ಕುಸುರೆಳ್ಳು ಕೊಟ್ಟು, “Take Sweet, Talk Sweet” ಅಂತ ಹೇಳಿದಕೂಡ್ಲೆ,ಮೊದಲೇ ಖೆಮ್ಮಿ-ಖೆಮ್ಮಿ ವಾಂತಿ ಮಾಡಕೊಂಡು ಕೆಂಪಗಾಗಿದ್ದ ಮಾರಿ ಇನ್ನೂ ಕೆಂಪಾಗಿ ಥೇಟ್ ಮಂಗ್ಯಾನ ಹಂಗ ಕಂಡಿದ್ದ!

ಈ ಎಳ್ಳು-ಬೆಲ್ಲ ತಿಂದು ಒಳ್ಳೇ ಮಾತಾಡಿಕೋತ ನಾವು ಕರ್ನಾಟಕ ಯೂನಿವರ್ಸಿಟಿ ಮೆಟ್ಟಿಲು ಹತ್ತಿದ್ವಿ. ಎಲ್ಲಾರಿಗೂ ಓದಿನ ಬಗ್ಗೆ, ತಮ್ಮ-ತಮ್ಮ ಭವಿಷ್ಯದ ಬಗ್ಗೆ ಸ್ವಲ್ಪ ಸೀರಿಯೆಸನೆಸ್ ಬಂದಿತ್ತು. ಯಾವಾಗಲೂ ಲೈಬ್ರೆರಿ, ಲ್ಯಾಬ್, ನೋಟ್ಸ್ ಮಾಡ್ಕೊಳ್ಳೋದು ಅಂತ ಓಡ್ಯಾಡತಿದ್ವಿ. ಡಿಗ್ರಿ ಕಾಲೇಜಿನ್ಯಾಗ ಒಟ್ಟಿಗೆ ಓದಿದ್ದ ನಾವು ನಾಲ್ಕು ಮಂದಿ ಗೆಳತೇರು ಈಗ ಲೇಡಿಸ್ ಹಾಸ್ಟೆಲ್ನ್ಯಾ ಗೂ ಒಟ್ಟಿಗೆ ಇದ್ವಿ. ಓದಿನ ಜೊತಿಗೆ ನಮಗ ತಿಳದ್ಹಂಗ ಯೂನಿವರ್ಸಿಟಿನ್ಯಾಗಿನ ಮಂದಿಗೆಲ್ಲ ಭಾರಿ, ಭಾರಿ ‘ನಾಮಕರಣ’ನೂ ಮಾಡಿದ್ವಿ! ಚಿರಕುಟ್, ಪಾರ್ಥೇನಿಯಂ, ಜವಾನಿ, ಉಶ್-ಕುಮಾರಿ, ಬಾಡಿಹೋಗಿದ್ದ ಬಳ್ಳಿ…ಹೀಂಗ. ಆದ್ರ ಈ ಹೆಸರುಗಳನ್ನೆಲ್ಲ ಅವರ ಲುಕ್ಸ್ ನೋಡಿ ಅಲ್ಲ, ಅವರ ಸ್ವಭಾವ ನೋಡಿ ಇಟ್ಟಿದ್ವಿ. ಎಷ್ಟೋ ಮಂದಿಗೆ ನಾವಿಟ್ಟ ಹೆಸರುಗಳ ತಲೀ-ಬುಡನೂ ಗೊತ್ತಿರಲಿಲ್ಲ. ಇಂಥದ್ರೊಳಗ ನಾವಿಟ್ಟಿದ್ದ ಒಂದು ಹೆಸರಿಗೆ ಇದೇ ಸಂಕ್ರಾಂತಿ ಹಬ್ಬದ ಎಳ್ಳು-ಬೆಲ್ಲನೇ ಕಾರಣ ಆಗಿತ್ತು. ಅದೇನಾಯ್ತಂದ್ರ, ಪ್ರತಿವರ್ಷದ ಹಂಗ ನಾವು ಕ್ಲಾಸಿಗೆ ಕುಸುರೆಳ್ಳು ತೊಗೊಂಡು ಹೋಗಿ ಫ್ರೆಂಡ್ಸಿಗೆಲ್ಲ ಕೊಡೋವಾಗ, ನಮ್ಮ ಸೀನಿಯರ್ ಒಬ್ಬ ಅಲ್ಲಿಗೆ ಬಂದ. ಅವ ಆಗಲೇ ಜೆನಿಟಿಕ್ಸ ಸಬ್ಜೆಕ್ಟಿನ್ಯಾಗ ಪಿ.ಎಚ್.ಡಿ. ಮಾಡ್ತಾ ಇದ್ದ. ಭಾಳ ಒಳ್ಳೇ ಹುಡುಗ, ಭಾರೀ ಶ್ಯಾಣೇ ಇದ್ದಾನ ಅಂತ ಡಿಪಾರ್ಟಮೆಂಟಿನ್ಯಾಗ ಎಲ್ಲಾರೂ ಹೇಳ್ತಿದ್ದರು. ನಾವೆಲ್ಲರೂ ಕುಸುರೆಳ್ಳು ಕೊಟ್ಟು ಸಂಕ್ರಾಂತಿ ಶುಭಾಶಯ ಹೇಳಿದ್ವಿ. ಅವ, ತನ್ನ ಬಲಗೈನ ಮೂರು ಬೆರಳಿನ್ಯಾಗ ಎರಡು ಕಾಳು ಕುಸುರೆಳ್ಳು ಹಿಡಕೊಂಡು ಎಲ್ಲಾರ ಕೈಮ್ಯಾಲೆ ಕುಟುಕಿ, ಕುಟಕಿ “Take Sweet, Talk Sweet” ಅಂತ ಹೇಳಿ ತನ್ನ ರಿಸರ್ಚ ಲ್ಯಾಬಿಗೆ ಓಡಿಹೋದಕೂಡ್ಲೇ ನಾವೆಲ್ಲ ಸೇರಿ ಅವನಿಗೆ ‘ನಾಮಕರಣ’ ಮಾಡಿದ್ವಿ. “ಕಾಗಿ”! ಅವನು ಕುಸುರೆಳ್ಳನ್ನ ನಮ್ಮ ಕೈಯಾಗ ಹಾಕಿದ್ದು ಥೇಟ್ ಆ ಕಾಗಿಗೊಳು ತಮ್ಮ ತಲಿ ಸೊಟ್ಟ ಮಾಡಿ ನೆಲಕ್ಕ ಕೊಕ್ಕನ್ನು ಕುಟಕಿ, ಕುಟುಕಿ ಕಾಳು ತಿಂದಪರಕ್ಕನೇ ಹಾರಿ ಹೋಗ್ತಾವಲ್ಲ, ಹಂಗೇ ಇತ್ತು! ಯಾವಗ್ಲೂ ಲ್ಯಾಬಿನ್ಯಾಗ, ಲೈಬ್ರರಿನ್ಯಾಗ ಕಾಣಿಸಿಕೊಳ್ಳತ್ತಿದ್ದ ಈ ‘ಕಾಗಿ’ ಮುಂದೊಂದಿನ ಪಿ.ಎಚ್.ಡಿ. ಮುಗಿಸಿ “ಡಾ. ಕಾಗಿ” ಆಗಿತ್ತು.

ನಾನು ಯುನಿವರ್ಸಿಟಿ ಓದು ಮುಗಿಸಿ ಕಂಪ್ಯೂಟರ್ ಕೋರ್ಸಗಳನ್ನು ಮಾಡ್ಕೊಂಡು ಬೆಂಗಳೂರಿನ್ಯಾಗ ಒಂದು ಕಡೆ ಕೆಲಸಕ್ಕೆ ಸೇರಿದೆ. ಅಲ್ಲೇ ನನಗ ಶ್ರೀವಾಣಿಯ ಪರಿಚಯ ಆಗಿತ್ತು. ಶ್ರೀವಾಣಿಗೆ ಆಗಲೆ ಮದುವಿ ಆಗಿ ಒಂದು ಮಗಳಿದ್ದಳು. ಮನ್ಯಾಗ ಸಣ್ಣ ಮಕ್ಕಳಿದ್ದಾರಂದ್ರ ಈ ಸಂಕ್ರಾಂತಿ ಹಬ್ಬದ ದಿನ ಅವುಕ್ಕ ದೃಷ್ಟಿ ಪರಿಹಾರಂತ ಹೇಳಿ ಹಣ್ಣು ಎರಿಯೋದು ಒಂದು ಸಂಪ್ರದಾಯ. ಆದ್ರ ಆ ವರ್ಷ ಶ್ರೀವಾಣಿ ಮನಿಯೊಳಗ ಹಬ್ಬದ ದಿನ ಹಣ್ಣು ಎರೀಲಿಕ್ಕೆ ಕೂಸಿಗೆ ಯಾವ ಬಣ್ಣದ ಅಂಗಿ ಹಾಕಬಕು ಅನ್ನೋದು, ಕೂಸಿನ ದೃಷ್ಟಿಪರಿಹಾರಕ್ಕಿಂತ ಹೆಚ್ಚು ಆದಂಗಿತ್ತು ಅಂತ ಆಕಿ ಹೇಳಿದ ಮಾತಿನಿಂದ ಗೊತ್ತಾಯ್ತು. ಶ್ರೀವಾಣಿಯವರ ಅಮ್ಮ ಹೈದ್ರಾಬಾದಿನಕಿ. ಅಲ್ಲೆಲ್ಲ ಹಳದಿ ಬಣ್ಣದ ಅಂಗಿ ಹಾಕ್ತಾರಂತ ಆಕಿ ತನ್ನ ಮಗಳಿಗೆ ಹೇಳಿದ್ಲು. ಇನ್ನು ಅತ್ತಿ ಮುಂಬಯಿನಕಿ. ಅಲ್ಲೆಲ್ಲ ಕರಿ-ಬಿಳಿ ಬಣ್ಣದ ಅಂಗಿ ಹಾಕ್ತಾರ ಅಂತ ತನ್ನ ಮಗ, ಅದೇ ಶ್ರೀವಾಣಿ ಗಂಡಗ ಹೇಳಿದ್ಲು. ಸಾಕಷ್ಟು ಓದಿ, ಒಳ್ಳೇ ಕೆಲಸ ಮಾಡ್ತಿದ್ದ ಇವರಿಬ್ರೂ ಒಂದೊಂದು ಅಂಗಿ ತಂದು, ತಮ್ಮ ಕೂಸಿನ್ನ ಬಿಟ್ಟು ಅಂಗಿ ಬಣ್ಣದ ಸಲುವಾಗಿ ಹಬ್ಬದ ದಿನ ಎಲ್ಲ ಲಟಾಪಟಿ ನಡಿಸಿದ್ರಂತ. ಇಕಿ ಮರದಿನ ಬ್ಯಾಸರ ಮಾಡ್ಕೊಂಡು ಆಫೀಸಿಗೆ ಬಂದಿದ್ಲು. ಇದನ್ನೆಲ್ಲ ನೋಡಿದ ನನಗ, ನಾ ಸಣ್ಣಕಿದ್ದಾ ಗಿಂದ ಸಂಕ್ರಾಂತಿ ಹಬ್ಬದ ಹಿಂದಿನ ಮಹತ್ವ ಏನಂತ ಕಲ್ತಿದ್ದೆ, ಅದನ್ನಿವರು ಮರೆತು ಹೋಗ್ಯಾರಲ್ಲ ಅನ್ನೋ ಯೋಚನಿ ಬಂದಿತ್ತು.

ನನ್ನ ಮದುವಿ ಆದ ಮೊದಲನೆ ವರ್ಷ ಸಂಕ್ರಾಂತಿ ಹಬ್ಬದಾಗ ಬೆಂಗಳೂರಿನವರಾದ ನಮ್ಮತ್ತಿ ಒಂದು ಲಿಸ್ಟ್ ಕೊಟ್ಟು, ಈ ಎಲ್ಲ ಮನಿಗೊಳಿಗೆ ಈ ವರ್ಷ ದಿಂದ ಎಳ್ಳು ಬೀರೋದು ಸುರುಮಾಡಿ, ಮುಂದಿನ ಐದು ವರ್ಷದ ತನಕ ಎಳ್ಳು ಬೀರೋ ತಟ್ಟಿಯೊಳಗ ಇಡುವ ಎಲ್ಲ ಸಾಮಾನುಗಳನ್ನು ಹೆಚ್ಚಿಸುತ್ತ ಈ ಎಲ್ಲ ಮನಿಗೊಳಿಗೆ ಬೀರಬೇಕು ಅಂತ ಹೇಳಿದ್ರು. ನಾವು ಮುಂದ ಅಮೇರಿಕಾಗ ಬಂದ ಮ್ಯಾಲೆ ಹೆಚ್ಚಿಸಿ-ಹೆಚ್ಚಿಸಿ ಎಳ್ಳು ಬೀರೋ ಪದ್ಧತಿ ಬಿಟ್ಟೇ ಹೋಗಿಬಿಡ್ತು. ಹಂಗಂತ ಇಲ್ಲೆ ಯಾರೂ ಎಳ್ಳು ಬೀರೋದಿಲ್ಲ ಅಂತಂಲ್ಲ…. ಯಾವ ದೇಶದೊಳಗಿದ್ದರೇನು… ನಮ್ಮ ಸಂಪ್ರದಾಯವನ್ನು ನಮಗ ಆದಷ್ಟು ಮಟ್ಟಿಗೆ ಪಾಲಿಸಬೇಕು ಅನ್ನೋದು ಇಲ್ಲಿ ಇರೋ ಭಾಳ ಮಂದಿಯ ಮನಸ್ಸಿನ್ಯಾಗ ಅದ. ಮನ್ಯಾಗ ಎಳ್ಳು-ಬೆಲ್ಲ ಮಾಡೋದು, ಕಟ್ಟಿಗೆ ಅಚ್ಚು ಇರಲಿಕ್ಕರೂ, ‘ಕುಕ್ಕಿಕಟ್ಟರ್’ ಉಪಯೋಗಿಸಿ ಸಕ್ಕರಿ ಅಚ್ಚು ಮಾಡೋದು, ಮಕ್ಕಳಿಗೆ ಹಣ್ಣು ಎರಿಯೋದು, ಮನಿ-ಮನಿ ಹೋಗಿ ಎಳ್ಳು ಬೀರೋದು, ಇಂಡಿಯನ್ ಗುಡಿಯೊಳಗ ಸೀಗೋ ನಮ್ಮ ಮಂದಿಗೆ ಎಳ್ಳು-ಬೆಲ್ಲ ಕೊಡೋದು… ಎಲ್ಲ ಮಾಡ್ತಾರ. ಹೀಂಗ ಒಂದ ವರ್ಷ ಸಂಕ್ರಾಂತಿಗೆ ಗುಡಿಗೆ ಹೋಗಿದ್ದ ನನಗ ಗುಡಿಗೆ ಬಂದಿದ್ದ ಒಂದು ಹುಡುಗಿ ಅರಿಶಿನ- ಕುಂಕುಮ ಕೊಟ್ಟು ಎಳ್ಳು-ಬೆಲ್ಲ ಬೀರ್ತೀನಿ ಅಂತ ಹೇಳಿದಳು. ಆಯ್ತವಾ ಹಂಗೇ ಆಗಲಿ ಅಂತ ಅಂದ ನನಗ ಆಕಿ ಅರಿಶಿನ- ಕುಂಕುಮ ಕೊಟ್ಟು, ನನ್ನ ಮುಂದ ದೊಡ್ಡ ಚೀಲ ಇಟ್ಟಳು. ಸಂಕ್ರಾಂತಿ ಅಂದ್ರ ಏನೋ ಒಂದು ತಟ್ಟ್ಯಾಗ ವೀಳ್ಯದೆಲಿ, ಅಡಕಿ, ಎರಡು ಬಾಳೆ ಹಣ್ಣು, ಒಂದು ಕಬ್ಬಿನ ತುಂಡು, ಒಂದು ಸಕ್ಕರಿ ಅಚ್ಚು ಇಡತಾರಲ್ಲ ಅಂತ ಅಂದುಕೊಂಡಿದ್ದ ನನಗ ನನ್ನ ಮುಂದ ಇಟ್ಟಿದ್ದ ಚೀಲ ನೋಡಿ ಆಶ್ಚರ್ಯ ಆಗಿತ್ತು. ಅಲ್ಲೇ ಬಾಜುದಾಗ ನಿಂತಿದ್ದ ಆ ಹುಡುಗಿ ತಾಯಿ, “ಮಗಳ ಮದುವೆ ಆದ ಮೇಲೆ ಇದು ಐದನೇ ವರ್ಷದ ಸಂಕ್ರಾಂತಿ, ಬೀರಿದ ಸಾಮಾನುಗಳನ್ನೆಲ್ಲ ನೀವೇ ಉಪಯೋಗಿಸ ಬೇಕು…” ಅಂದರು. ಅವರು ಮಾತು ಕೇಳಿ ನನಗ ನಮ್ಮತ್ತಿ ಹೇಳಿದ ಮಾತು ನೆನಪಾತು, “ಮುಂದಿನ ಐದು ವರ್ಷದ ತನಕ ಎಳ್ಳು ಬೀರೋ ತಟ್ಟಿಯೊಳಗ ಇಡುವ ಎಲ್ಲ ಸಾಮಾನುಗಳನ್ನು ಹೆಚ್ಚಿಸ್ತಾ-ಹೆಚ್ಚಿಸ್ತಾ ಈ ಎಲ್ಲ ಮನೆಗಳಿಗೆ ಬೀರಬೇಕು”!! ಕಾರಿನ ಡಿಕ್ಕಿಯೊಳಗ ಆ ದೊಡ್ಡ ಚೀಲ ಇಟ್ಟುಕೊಂಡೆ. ಗುಡಿಯಿಂದ ಮನಿ ಮುಟ್ಟೋತನಕ ಆ ಚೀಲ ದೊಳಗಿದ್ದ ಸಾಮಾನು ಗಳು ಕಣ್ಣು ಮುಂದ ಬರಲಿಕ್ಕೆ ಸುರು ಆದವು. ಒಂದು ಮಳದಷ್ಟು ಉದ್ದ ಇರೋ 25 ಬಾಳೆ ಹಣ್ಣು, 25 ಸಕ್ಕರಿ ಅಚ್ಚು, 5 ತೆಂಗಿನಕಾಯಿ, 25 ಕಬ್ಬಿನ ತುಂಡು ಗಳನ್ನು (5 ಕಬ್ಬಿನ ಗಳಗಳನ್ನು ತಂದು25 ತುಂಡು ಮಾಡಿದ್ದರು!!) ಮನ್ಯಾಗಿರೋ ನಾವಿಬ್ಬರು ಗಂಡ-ಹೆಂಡತಿ, ನಮ್ಮದೊಂದು ಕೂಸು ಹೆಂಗ ಖರ್ಚು ಮಾಡೋದು ಅಂತ ಅನ್ನೋ ಯೋಚನಿನ ಆ ಚೀಲಕ್ಕಿಂತ ದೊಡ್ಡದಾಗಿತ್ತು.

ನನಗೂ ಮದುವಿ-ಮಗ, ಸಂಸಾರ ಅಂತ ಆಗಿ ಇಷ್ಟ ವರ್ಷ ಆದಮ್ಯಾಲೆ ಈ ಹಬ್ಬ-ಹುಣ್ಣವಿ, ಪೂಜಾ-ಪದ್ಧತಿ ಅಂತ ಯೋಚನಿ ಮಾಡಿದಾಗ, ಜೀವನದಾಗ ಹಬ್ಬದ ಸಂಪ್ರದಾಯ ಮತ್ತ ಅದರ ಹಿಂದಿನ ಉದ್ದೇಶನ ಬಿಟ್ಟುಕೊಟ್ಟು ಬರೀ ತೋರಿಕಿಗೆ ಎರಡು ಒಳ್ಳೇ ಮಾತಾಡಿದ ಹಾಂಗ ಮಾಡಿ, ಏನೋ ಮಾಡಬಕಲ್ಲ ಅಂತ ಕಾಟಾಚಾರಕ್ಕ ಹಬ್ಬ ಮಾಡಿದ್ರ ಮನುಷ್ಯನ ಮನಸಿನ ಬೆಳವಣಿಗಿ ಹೆಂಗ ಆಗಬಕು, ಇದರಿಂದ ಮುಂದೊಂದಿನ ಲುಕ್ಸಾನ ಆಗೋದು ನಮಗ ಅಂತ ಅನಸ್ತದ. ಹಂಗೇನೇ ಈ ಜೀವನದಾಗ ನಮಗ ಆಗೋ ಅನುಭವ ಗಳಿಂದ ನಾವು ಭಾಳ ತಿಳ್ಕೊಳ್ಳೋದು ಇರ್ತದ ಅನ್ನೋ ಮಾತನ್ನು ನನ್ನ ಮನಸ್ಸು ಒಪ್ಪತದ. ಮಾರಿ ಮುಂದು ಒಂದು ಮಾತಾಡೋದು, ಮನಸಿನ್ಯಾಗ ಇನ್ನೊಂದು ಯೋಚನಿ ಮಾಡೋದನ್ನ ಬಿಟ್ಟು, ‘ಬಣ್ಣ- ಬಣ್ಣದ ಮಾತಿನ ಛಂದಕ್ಕಿಂತ ಮನುಷ್ಯಾನ ಮನಸ್ಸಿನ ಛಂದನೇ ಮುಖ್ಯ’ ಅನ್ನೋದನ್ನು ಅರ್ಥಮಾಡಿ ಕೊಂಡು ಈ ಸಂಕ್ರಾಂತಿ ಹಬ್ಬದಾಗ ಒಬ್ಬರಿಗೊ ಬ್ಬರು ಎಳ್ಳು- ಬೆಲ್ಲ ಕೊಟ್ಟು- ತೊಗೊಂಡು ಒಳ್ಳೇ ಮಾತಾಡೋಣ್ರಿ.

✍️ಸರಿತಾ ನವಲಿ
ನ್ಯೂಜರ್ಸಿ, ಅಮೇರಿಕಾ