ಅಂಕೋಲೆ ಸ್ವಾತಂತ್ರ್ಯ ಸಂಗ್ರಾಮದ ಕಾಲದಿಂದ ಲೂ ದೇಶದ ಗಮನ ಸೆಳೆದಿತ್ತು. ಉಪ್ಪಿನ ಸತ್ಯಾ ಗ್ರಹ, ಕರ ನಿರಾಕರಣೆ ಚಳುವಳಿಗಳ ಮೂಲಕ ಕರ್ನಾಟಕದ “ಬಾರ್ಡೋಲಿ” ಎಂದು ಕರೆಸಿ ಕೊಂಡಿತ್ತು. ಸ್ವಾತಂತ್ರ್ಯದ ಸವಿನೆನಪಿಗಾಗಿ ಈ ಅಂಕೋಲೆ ಯಲ್ಲಿ ಜೈಹಿಂದ ಹೊಟೇಲ್, ಅಝಾದ ಹೊಟೇಲ್, ನೆಷನಲ್ ಹೊಟೇಲ್ ಮತ್ತು ಕಿಂಗ್ ಎಡ್ವರ್ಡ್ ಹೆಸರು ಬದಲಿಸಿದ ಜೈ ಹಿಂದ್ ಹೈಸ್ಕೂಲ್ ಅಸ್ಥಿತ್ವಕ್ಕೆ ಬಂದಿತು. ಇವುಗಳಲ್ಲಿ ಒಂದಾದ ನೆಷನಲ್ ಹೊಟೇಲ್ ನನ್ನ ಬದುಕನ್ನೇ ಬದಲಿಸಿತು.

ಡಾ.ದಿನಕರ ದೇಸಾಯಿ ಎಂಬ “ಜನಸೇವಕ” ಅಂಕೋಲೆಯಲ್ಲಿ ಡಿಗ್ರಿ ಕಾಲೇಜೊಂದು ಪ್ರಾರಂಭಿಸಿದ್ದರಿಂದ, ಪದವಿಯ ಮೊದಲನೆ ವರ್ಷವನ್ನು ಅಣ್ಣ ಜಗನ್ನಾಥನೊಡನೆ ಆರ್ಯ ದುರ್ಗಾ ದೇವಸ್ಥಾನದ ರೂಮಿನಲ್ಲಿಯೂ, ಎರಡನೇ ವರ್ಷವನ್ನು ಬಡಗೇರಿಯ ಅಜ್ಜೀ ಮನೆಯಿಂದಲೂ ಹಾಗೂ ಮೂರನೇ ಮತ್ತು ಅಂತಿಮ ವರ್ಷದಲ್ಲಿ ಅರ್ಧ ಭಾಗವನ್ನು , ದಿನವೂ ಗಂಗಾವಳಿ ದಾಟಿ ಹಾಗೂ ಉಳಿದ ಅರ್ಧ ಭಾಗ ವನ್ನು ಅಂಕೋಲೆಯ ಇದೇ ನೆಷನಲ್ ಹೊಟೇಲಿ ನ ಆಶ್ರಯದೊಂದಿಗೂ ಮುಗಿಸಿಕೊಂಡೆನು. ಈ ಸ್ನೇಹವೇ ಮುಂದೆ ಹೆಮ್ಮರವಾಗಿ ಬೆಳೆದು ನನ್ನ ಸರಕಾರೀ ನೌಕರಿಯ ಅಂಗಳದ ತನಕವೂ ಬಂದು ಬದುಕಲ್ಲಿ ಬೆಳಕಾ ಯಿತು.
ಅಸಹಾಯಕ ಅಪ್ಪನದು ಒಬ್ಬನದೇ ದುಡಿತ ; ಒಂಬತ್ತು ಹೊಟ್ಟೆಗಳ ಬಡಿತ. ಇದರಿಂದಾಗಿ ನನ್ನ ಇಪ್ಪತ್ತನೆಯ ವಯಸ್ಸಿಗೇ ಹೊಟ್ಟೆ ತುಂಬಿಸಿ ಕೊಳ್ಳಲು ಅನಿವಾರ್ಯವಾಗಿ ಮನೆಯಿಂದ ಹೊರ ಬೀಳಲೇಬೇಕಾಯಿತು. ಇಂತಹ ಸಂದರ್ಭದಲ್ಲಿ ನನಗೆ ಅಂಕೋಲೆ ಯಲ್ಲಿ ಆಶ್ರಯ ನೀಡಿದವರು ನೆಷನಲ್ ಹೊಟೇಲಿನ ಒಡೆಯ. ಅವನು ನನಗೆ ಒಡಲಾಗಿದ್ದ; ಮಡಿಲಾಗಿದ್ದ ; ನನ್ನೆದೆಗೆ ಕಡಲಾಗಿದ್ದ.
ಪ್ರೀತಿ ವಿಶ್ವಾಸ ದೊಡ್ಡದು. ನನ್ನ ಕುರಿತು ಏನೂ ಅರಿಯದ ಶ್ರೀಕಾಂತ ತನ್ನ ಭಂಡಾರದ ಮೇಲೆ ಕೂಡ್ರಿಸಿ ಅನೇಕರ ಕೆಂಗಣ್ಣಿಗೂ ಗುರಿಯಾದ. ಹಸಿದ ನನ್ನ ಹೊಟ್ಟೆಗೆ ಅನ್ನವಾದ, ಕುಡಿಯುವ ನೀರಾದ, ಓದುವ ಅಕ್ಷರಗಳಿಗೆ ಕಣ್ಣಾದ. ನಾನೂ ಜವಾಬ್ಧಾರಿಗಳ ನಿಭಾಯಿಸಿದೆ. ಮೇಲು- ಕೀಳಿಲ್ಲ ದ ಎಲ್ಲಾ ಕೆಲಸವನೂ ಅಲ್ಲಿ ನಿರ್ವಹಿಸಿದೆ. ಈ ಅವಧಿಯಲ್ಲೇ ಹೊಟ್ಟೆ ತುಂಬಾ ಉಂಡೆ, ತಿಂದೆ ಮತ್ತು ಕುಡಿದೆ. ಶ್ರೀಕಾಂತ ಎಂದರೆ ನನಗೆ ಮೊದಲು ನೆನಪಾಗು ವದು ಅವನ ಸಮಾನ ಮನೋಭಾವನೆ. ತನ್ನಂತೆಯೇ ಇತರರು ಎಂಬ ಭಾವನೆ ಅವನಲ್ಲಿ ಮನೆ ಮಾಡಿದ್ದರಿಂದಲೇ ಎಷ್ಟೋ ಜನ ಇಂದಿಗೂ ಅವನ ನನೆಯುವರು. ಸಂಶಯದ ಪಿಶಾಚಿ ಎಂದೂ ಅವನ ಮನ ಕಾಡುತ್ತಿರಲಿಲ್ಲವಾದ್ದರಿಂದಲೇ ಸರಕಾರೀ ನೌಕರಿಗೆ ಸೇರುವ ತನಕ ನಾ ಅವನ ನೌಕರ ನಾಗಿಯೇ ಮುಂದುವರಿದೆ.

ಮುಂಜಾನೆಯಿಂದ ಸಂಜೆ ತನಕ ಅಂಗಡಿಯ
ಗಲ್ಲೆಯ ಮೇಲೇ ನಾನು ಹಣಕಾಸಿನ ವ್ಯವಹಾರ ವನ್ನು ಮಾಡುತ್ತಲೇ ಇರಬೇಕಾದ್ದ ರಿಂದ ಇದನ್ನು ಸಹಿಸದ ಜನ ಗಲ್ಲೆಯಿಂದ ಬದಲಿಸುವ ಪ್ರಯತ್ನ ವನ್ನೂ ಮಾಡಿದ್ದು ನನ್ನ ಕಿವಿಗೂ ಉದ್ದೇಶ ಪೂರ್ವಕವಾಗಿ ಬೀಳುವಂತೆ ಮಾಡಿದರು. ಮನಸ್ಸಿಗೆ ನೋವಾಗಿ, ಸಾಕು ಇಲ್ಲಿಯ ಈ ಚಹದ ಅಂಗಡಿಯ ಸಹವಾಸ ಮುಂದಿನ ದಾರಿ ಮುಂದೆ ಎಂದು ಯೋಚಿಸು ತ್ತಿರುವಾಗಲೇ, ದೇವರಾಜ್ ಅರಸ್ ಜಾರಿಗೆ ತಂದ ಸ್ಪೈಪಂಡರಿ ಯೋಜನೆಗೆ ಸೇರಿಕೊಂಡು ಅರೆ ಸರಕಾರೀ ನೌಕರನಾದೆ. ಅಂದರೆ ದಿನದ ಒಂದುಹೊತ್ತು ಅರೆಸರಕಾರಿ ನೌಕರನಾಗಿಯು ಊಟ ವಸತಿಗಾಗಿ ಉಳಿದ ತಾಸುಗಳನ್ನು ತಮ್ಮಲ್ಲೇ ಕಳೆಯುವಂತೆ ಹೇಳಿದ ಒಡೆಯನ ಆದೇಶವನ್ನು ಪಾಲಿಸಿ ಎಂಟು ವರ್ಷಗಳ ಕಾಲ ಇಲ್ಲೇ ಮುಂದುವರಿದು ಬದುಕು ಕಟ್ಟಿಕೊಳ್ಳಲು ಹೆಣಗಾಡಿದೆ.
ಕಪ್ಪು ಬಸಿ ತೊಳೆದೆ, ಟೇಬಲ್ ಒರೆಸಿದೆ, ನೆಲ ಗುಡಿಸಿದೆ, “ಎರಡ್ ಸೀಟ್ ಆರೂ ಐವತ್ತು” ಅಂದೆ.ಕೌಂಟರಿನಲ್ಲಿ ಕುಳಿತು ಕ್ಯಾಷಿಯರ್ ನೂ ಆದೆ. ನನಗೆ ಯಾವುದೇ ಕೆಲಸದ ಬಗ್ಗೆ ಮೇಲು ಕೀಳೆಂಬ ಭಾವನೆ ಇಲ್ಲವಾಗಿತ್ತು;ಇಂದಿಗೂ ಇಲ್ಲ . ಆ ಕೆಲಸಗಳೇ ಹೊಟ್ಟೆಗಿಲ್ಲದ ನನಗೆ ಅನ್ನ ನೀಡಿತು. ಜನಸಾಮಾನ್ಯರಲ್ಲಿ ಒಂದಾಗುವ ಅವಕಾಶ ದೊರಕಿಸಿತು. ಸಮಾನತೆಯ ಪಾಠ ಕಲಿಸಿತು, ಮನುಷ್ಯತ್ವದ ಕಣ್ಣು ತೆರೆಯಿಸಿತು. ಆ ಕೆಲಸಗಾರರ ಮನದಾಳದ ಅಂತರಂಗವ ಹೊಕ್ಕಿ, ಅವರ ಭಾವನೆಗಳ ಹೆಕ್ಕಿ ಅವರಲಿ ಒಂದಾಗುವ ಬಾಂಧವ್ಯದ ಬೆಸುಗೆಯಾಯಿತು.
ಚಹದಂಗಡಿಯ ನೌಕರನ ಬದುಕೇ ಹೀಗೆ.
ಹೊತ್ತೇರಿದಂತೆ ಎಷ್ಟೋ
ಗತಿಕ – ನಿರ್ಗತಿಕರಿಗೆ
ನಾವೇ
ಪಾಲಕರು – ಪೋಷಕರು.
ನಮಗೆ
ಯಕ್ಷಗಾನದ ರಾಜನಂತೆ
ಎಲ್ಲಿಲ್ಲದ ಹೆಮ್ಮೆ.
ಒಡೆಯನ ಬೈಗುಳ
ತಿಂದು ತೇಗುವ ಜೊತೆಗೆ
ಐವತ್ತು ಪೈಸೆಯ ಗಿರಾಯಕಿಯಿಂದಲೂ
” ಬೋಳಿಮಗ ” ಪ್ರಶಸ್ತಿ !!!
ಆ ಹುಡುಗರೊಡನೇ ಎಷ್ಟೋರಾತ್ರಿ ಕೊತ್ತಲ ಚೀಲದೊಳಗೆ ಹೊಕ್ಕಿ ನಿದ್ರಿಸಿರುವೆ ; ದಿವಾಕರ ನೊಡನೆ ಅವನ ಮನೆಯಲ್ಲಿ ಆ ಕಮಟು ವಾಸನೆ ಯ ಚಾದರದೊಳಗೂ ಸಹ ; ಅವರಮ್ಮನ ‘ಸಿದ್ದೆಕೌಳಗಿಯ’ ಚಹದ ಪ್ರೀತಿಗಾಗಿ.

ಈ ಎರಡು ಕೆಲಸಗಳ ನಡುವಿನ ಅವಧಿಯಲ್ಲಿ ಬಿಡುವು ಸಿಕ್ಕಾಗ, ದೊಡ್ಡ ಜನರೆನಿಸಿಕೊಳ್ಳುವ ಮನಸ್ಸಿನೊಂದಿಗೆ ಅವರ ಸೈಕಲ್ ಹಿಂದೆ ತಿರುಗಿ ಸಾಹಿತ್ಯ, ಸಂಘಟನೆ, ಸಾಂಸ್ಕೃತಿಕ ಲೋಕದ ಭಾಗವಾದೆ.ಬದುಕಿನಲಿ ನಾಟಕ ಮಾಡದಿದ್ದರೂ ಎಷ್ಟೋ ನಾಟಕಗಳ ಪಾತ್ರಧಾರಿಯಾದೆ. ಇದರಿಂದಾಗಿ ನನ್ನ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಧ್ಯವಾಯಿತು. ತಮ್ಮಲ್ಲಿ ಇದ್ದವ ಕೇವಲ ಒಬ್ಬ ಕೆಲಸಗಾರನಲ್ಲ, ಅವನಲ್ಲೂ ಒಂದು ಪ್ರತಿಭೆಯಿದೆ ಎಂದು ಆಶ್ರಯದಾತರಿಗೆ ಮನವರಿಕೆಯಾದ್ದರಿಂದ ನಾನೂ ನಿರಾಳವಾದೆ. ನಾಟಕದ ಹುಚ್ಚಿನಿಂದ ಅಂದಿನ ತಹಶೀಲ್ದಾರ ರಾದ ಮಾನ್ಯ ವ್ಯಾಸ ದೇಶಪಾಂಡೆಯವರ ಕೈ ಕೈ ಹಿಡಿದು ಇದೇ ಅಂಗಡಿಗೆ ಚಹ ಕುಡಿಯಲು ಬಂದಾಗ ಎಷ್ಟೋ ಕೆಂಗಣ್ಣುಗಳು ಶಾಂತವಾಗಿ ಕಿರುನಗೆ ಚೆಲ್ಲಿದವು.

ಇದೇ ಸಂದರ್ಭದಲ್ಲಿ ಅಂಕೋಲೆಯ ಕರ್ನಾಟಕ ಸಂಘದ ಬೆಳ್ಳಿಹಬ್ಬದ ಕಾರ್ಯಕ್ರಮ ಗಳು ನಡೆದಾಗ ಬಂದ ಎಷ್ಟೋ ಸಾಹಿತ್ಯಾಸಕ್ತರು ನಾನು ನಿರ್ವಹಿಸುತ್ತಿರುವ, ಕರ್ನಾಟಕ ಸಂಘದ ಕಾರ್ಯದರ್ಶಿ ಮತ್ತು ಹೊಟೇಲ್ ಕೆಲಸಗಾರ ಈ ದ್ವಿಪಾತ್ರವನ್ನು ನೋಡಿ ಬೆರಗಾದದ್ದೂ ಇದೆ.

ಅಂಕೋಲೆ ನನ್ನ ಬದುಕಿನ ಭಾಗವಾಗಿತ್ತು. ಇಲ್ಲಿ ಸುಖ ಸಂತೋಷಗಳನ್ನೂ ಕಂಡೆ; ನೋವು ದುರಂತಗಳನ್ನೂ ಸಹ. ಗೆಳೆತನ ಬೆಳೆಯಿತು. ಶೈಕ್ಷಣಿಕವಾಗಿ ಅರ್ಥಶಾಸ್ತ್ರ ಪದವಿ ಪಡೆದುದ ಕಿಂತ ಹೆಚ್ಚಾಗಿ ಇಲ್ಲಿ ಇದೇ ನೇಷನಲ್ ಹೋಟೆಲ್ ನಲ್ಲಿ ನನ್ನ ಬದುಕು ಕಟ್ಟಿಕೊಳ್ಳಲು ಅಡಿಪಾಯ ಹಾಕಿದೆ. ಆರೋಪ-ಪ್ರತ್ಯಾರೋಪ ಗಳೂ ‘ಗುಸು ಗುಸು’ ಮಾಡತೊಡಗಿದವು. ‘ಪೇಪರ್ ಪ್ರಭು’ ಯಾರದೋ ಆದೇಶದಂತೆ ಕಣ್ಗಾವಲು ಮಾಡತೊಡಗಿದ; ಕೊನೆಗೆ ನೊಂದು ತಾನೇ ಬಾಯ್ಬಿಟ್ಟ! ನಾನೇನು ಮಹಾ ಸಾಚಾ ಎಂದು ಹೇಳಿಕೊಳ್ಳಲಾರೆ. ಒಡೆದು ಮುಳುಗ ಲೆತ್ನಿಸಿದ ಹಡಗಕ್ಕೆ ದಡಸೇರಿಸಲು ಪ್ರಾಮಾಣಿಕತೆ ಯ ಅರ್ಥ ಸಡಿಲಿಸಿಕೊಳ್ಳ ಬೇಕಾಯಿತು. ಆದರೀಗ ಬಡ್ಡಿ ಕೊಡಲಾಗ ದಿದ್ದರೂ ಅಸಲನ್ನು ಎಲ್ಲಿ ಮುಟ್ಟಿಸಬೇಕೋ ಅಲ್ಲಿಗೆ ತಲುಪಿಸಿದ ಧನ್ಯತೆಯಿದೆ ನನ್ನುಸಿರಿಗೆ.

ಈ ಮೂರೂವರೆ ದಶಕದ ಅವಧಿಯಲ್ಲಿ
ಎಷ್ಟೆಲ್ಲಾ ಬದಲಾವಣೆಗಳಾಗಿವೆ. ಬದುಕಿಗೆ “ನೆಲೆ” ಕೊಟ್ಟ ಆಶ್ರಯತಾಣ ಸಂಪೂರ್ಣವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ; ನೆಲೆ ನೀಡಿ ದವನೂ ಸಹ.ಅಂಕೋಲೆ,ನಂದೂ-ನಿಂದು ಬಿಡಿಸಲಾಗದ ಸಂಕೋಲೆ.ಕೊನೆಯ ಉಸಿರಿನ ತನಕ ನನ್ನ ಬದುಕಿನ ವಿಶ್ವವಿದ್ಯಾಲಯವನ್ನು ನಾನೆಂದೂ ಮರೆಯಲಾರೆನು.
✍️ಪ್ರಕಾಶ ಕಡಮೆ
ನಾಗಸುಧೆ, ಹುಬ್ಬಳ್ಳಿ.